ನವದೆಹಲಿ(ಆ.02): ಭಾರತವನ್ನು 2024ರ ವೇಳೆಗೆ 5 ಟ್ರಿಲಿಯನ್ ಆರ್ಥಿಕತೆ ಹೊಂದಿರುವ ರಾಷ್ಟ್ರವನ್ನಾಗಿ ಮಾಡುವ ಪ್ರಧಾನಿ ಮೋದಿ ಕನಸಿಗೆ ಆಘಾತಕಾರಿ ಸುದ್ದಿಯೊಂದು ಎದುರಾಗಿದೆ.

ಮಹತ್ವದ ಬೆಳವಣಿಗೆಯೊಂದರಲ್ಲಿ 2018 ನೇ ಸಾಲಿನಲ್ಲಿ ವಿಶ್ವದ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 7 ನೇ ಸ್ಥಾನಕ್ಕೆ ಕುಸಿತ ಕಂಡಿದೆ. 

2017 ರಲ್ಲಿ ಭಾರತ ಫ್ರಾನ್ಸ್’ನ್ನು ಹಿಂದಿಕ್ಕಿ 6 ನೇ ಸ್ಥಾನ ಗಳಿಸಿತ್ತು. ಇದೀಗ ಬ್ರಿಟನ್ ಮತ್ತು ಫ್ರಾನ್ಸ್ ಬಹುತೇಕ ಒಂದೇ ಸಮನಾದ ಆರ್ಥಿಕ ಬೆಳವಣಿಗೆ ಹೊಂದಿದ್ದು, ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿವೆ. 

ವಿಶ್ವಬ್ಯಾಂಕ್ ವರದಿಯ ಪ್ರಕಾರ ಜಿಡಿಪಿ ಶ್ರೇಣಿಯಲ್ಲಿ ಭಾರತ ಈ ವರ್ಷ ಕುಸಿತ ಕಂಡಿದ್ದು, 2018 ರಲ್ಲಿ 2.7 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆ. ಬ್ರಿಟನ್ ಹಾಗೂ ಫ್ರಾನ್ಸ್ ಸಮನಾಗಿ 2.8 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿವೆ.

 2018 ರಲ್ಲಿ ಅಮೆರಿಕ ಜಿಡಿಪಿ 20.5 ಟ್ರಿಲಿಯನ್ ಡಾಲರ್ ನಷ್ಟಿದ್ದರೆ, ಚೀನಾದ ಆರ್ಥಿಕತೆ 13.6 ಟ್ರಿಲಿಯನ್ ಡಾಲರ್ ಇದೆ. ಅದರಂತೆ ಜಪಾನ್ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದೆ. 

2018 ರಲ್ಲಿ ಭಾರತ ಜಿಡಿಪಿ ಕುಸಿದಿರುವುದಕ್ಕೆ ಕರೆನ್ಸಿ ಏರಿಳಿತ ಹಾಗೂ ಬೆಳವಣಿಗೆ ನಿಧಾನಗತಿ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.