ಎಸ್ಎಂಎಸ್ ಬಂದಾಗ ಅದು ನಕಲಿಯೋ, ಅಸಲಿಯೋ ಎಂದು ತಿಳಿಯದೇ ಬಂದಿರುವ ಲಿಂಕ್ ಓಪನ್ ಮಾಡಿ ಹಣ ಕಳೆದುಕೊಂಡವರು, ಮೋಸ ಹೋದವರು ಅನೇಕ ಮಂದಿ. ಆದರೆ ಇನ್ಮುಂದೆ ಮೋಸ ಹೋಗೋ ಚಾನ್ಸೇ ಇಲ್ಲ. ಅದು ಹೇಗೆ ನೋಡಿ.
ಇದು ವಾಟ್ಸ್ಆ್ಯಪ್ ಯುಗವಾದರೂ ಎಷ್ಟೋ ವ್ಯವಹಾರಗಳು ಇಂದಿಗೂ ಎಸ್ಎಂಎಸ್ ಮೂಲಕವೇ ನಡೆಯುತ್ತದೆ. ಬ್ಯಾಂಕ್, ಅಂಚೆ ಕಚೇರಿ, ಫೋನ್ ಸರ್ವಿಸ್, ಅಮೆಜಾನ್, ಫ್ಲಿಪ್ಕಾರ್ಟ್ನಂಥ ಇ-ಮಾರುಕಟ್ಟೆ ಸೇರಿದಂತೆ ಸರ್ಕಾರ ಮತ್ತು ಕಂಪೆನಿಗಳ ಸಂದೇಶಗಳು ಎಸ್ಎಂಎಸ್ನಲ್ಲಿ ಬರುತ್ತವೆ. ಆದರೆ ಇದರಲ್ಲಿ ನಕಲಿ ಯಾವುದು, ಅಸಲಿ ಯಾವುದು ಎಂದು ತಿಳಿಯುವುದು ಇಷ್ಟು ವರ್ಷ ಬಲು ಕಷ್ಟದ ಕೆಲಸವಾಗಿತ್ತು. ನಕಲಿ ಮಾಡುವವರು ಥೇಟ್ ಅಸಲಿಯದ್ದನ್ನೇ ಕಾಪಿ ಮಾಡಿ ಕಳುಹಿಸುತ್ತಿದ್ದುದರಿಂದ ನಿಜವಾದದ್ದು ಎಂದು ತಿಳಿದು ಲಿಂಕ್ ಮೇಲೆ ಕ್ಲಿಕ್ ಮಾಡಿ ಮೋಸ ಹೋದವರು ಹಲವರು. ಬ್ಯಾಂಕ್ ಅಥವಾ ಇನ್ನಿತರ ಕಂಪೆನಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅದೇ ಮಾದರಿಯಲ್ಲಿ ಎಸ್ಎಂಎಸ್ ಕಳುಹಿಸಿ ಹೆಚ್ಚಾಗಿ ಲಿಂಕ್ ಮೇಲೆ ಒತ್ತುವಂತೆ ಹೇಳಲಾಗುತ್ತಿತ್ತು. ಇದು ಬ್ಯಾಂಕ್ನವರೇ ಕಳುಹಿಸಿರಬಹುದು ಎಂದುಕೊಂಡು ಆ ಲಿಂಕ್ ಮೇಲೆ ಒತ್ತಿ ಹಣ ಕಳೆದುಕೊಂಡವರೂ ಅದೆಷ್ಟೋ ಮಂದಿ.
ಈಗ ಇದಕ್ಕೆಲ್ಲಾ ಫುಲ್ಸ್ಟಾಪ್ ಇಟ್ಟಿರುವ TRAI (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ), ಜನರಿಗೆ ಸುಲಭದಲ್ಲಿ ಅಸಲಿಯದ್ದನ್ನು ಗುರುತಿಸುವಂತೆ ಮಾಡಿದೆ. ಯಾವುದೇ ಎಸ್ಎಂಎಸ್ ಬಂದರೂ ನೀವು ಮೊದಲು ನೋಡಬೇಕಾದದ್ದು ಏನೆಂದರೆ, ಆ ಎಸ್ಎಂಎಸ್ ಕಳುಹಿಸಿದವರ ಎದುರು S ಅಥವಾ P ಅಥವಾ T ಅಥವಾ G ಎನ್ನುವ ಅಕ್ಷರ ಇದೆಯೇ ಎನ್ನುವುದನ್ನು. ಉದಾಹರಣೆಗೆ ಎಸ್ಬಿಐ ನಿಂದ ನಿಮಗೆ ಸಂದೇಶ ಬಂದಿದ್ದರೆ SBI-S ಎಂದು ಇರುತ್ತದೆ. ಅದೇ ಯಾವುದಾದರೂ ಕಂಪೆನಿಯಿಂದ ಬಂದಿದ್ದರೆ ಆ ಕಂಪೆನಿಯ ಹೆಸರಿನ ಮುಂದೆ P ಎಂದು ಉಲ್ಲೇಖವಾಗಿರುತ್ತದೆ. ಹೀಗೆ ಆಗಿದ್ದರೆ ಮಾತ್ರ ಅದು ನಿಜವಾದದ್ದು, ಇಲ್ಲದಿದ್ದರೆ ಅದು ಫೇಕ್ ಎನ್ನುವುದನ್ನು ನೆನಪಿಟ್ಟುಕೊಳ್ಳಿ.
ಇದರಲ್ಲಿ S, P, T ಮತ್ತು G ಏನು ಎಂದು ನೋಡುವುದಾದರೆ,
S ಎಂದರೆ Serviceಎಸ್ ಎಂದರೆ ಸರ್ವಿಸ್. ಈ ಸಂದೇಶಗಳು ಸಾಮಾನ್ಯವಾಗಿ ಬ್ಯಾಂಕ್ ಅಧಿಸೂಚನೆಗಳು ಅಥವಾ ಅಪಾಯಿಂಟ್‌ಮೆಂಟ್ ಜ್ಞಾಪನೆಗಳಂತಹ ವಿವಿಧ ಸೇವೆಗಳಿಂದ ವಹಿವಾಟು ಅಥವಾ ಮಾಹಿತಿಯ ಬಗ್ಗೆ ಬರುವ ಸಂದೇಶಗಳು. ಅದು ಸೇವೆಯನ್ನು ಒದಗಿಸುವ ಹಿನ್ನೆಲೆಯಲ್ಲಿ ಅದರ ಹೆಸರಿನ ಮುಂದೆ ಎಸ್ ಎಂದು ಇರುತ್ತದೆ.
P ಎಂದರೆ Promotional messages ಅರ್ಥಾತ್ ಪ್ರಚಾರ ಸಂದೇಶಗಳು. ಯಾವುದಾದರೂ ಅಧಿಕೃತ ಕಂಪೆನಿಗಳ ಜಾಹೀರಾತುಗಳು, ಕೊಡುಗೆಗಳು, ಇತ್ಯಾದಿ ಇದ್ದರೆ ಆ ಕಂಪೆನಿಗಳ ಹೆಸರಿನ ಮುಂದೆ ಪಿ ಎಂದು ಬರುತ್ತದೆ.
T ಎಂದರೆ Transactional messages ಅರ್ಥಾತ್ ವಹಿವಾಟು ಸಂದೇಶಗಳು- OTP ಗಳು, ಬ್ಯಾಂಕಿಂಗ್ ಎಚ್ಚರಿಕೆಗಳು, ಇತ್ಯಾದಿ)
G ಎಂದರೆ Government messages ಅರ್ಥಾತ್ ಸರ್ಕಾರಿ ಸಂದೇಶಗಳು. ಸರ್ಕಾರದ ಸಂಘ ಸಂಸ್ಥೆಗಳಿಂದ ಅಧಿಕೃತವಾಗಿ ಬರುವ ಸಂದೇಶದಗಲ್ಲಿ ಜಿ ಎಂದು ನಮೂದು ಮಾಡಿರಲಾಗುತ್ತದೆ.
ಈ ಪ್ರತ್ಯಯಗಳು ಬಳಕೆದಾರರಿಗೆ ವಿವಿಧ ರೀತಿಯ SMS ಸಂದೇಶಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಮತ್ತು ಸ್ಪ್ಯಾಮ್ ಅನ್ನು ತಪ್ಪಿಸಲು ಸಹಾಯ ಮಾಡಲು TRAI ಪರಿಚಯಿಸಿದ ವ್ಯವಸ್ಥೆಯ ಭಾಗವಾಗಿದೆ. ಇನ್ನು ಮುಂದೆ ಈ ನಾಲ್ಕು ಅಕ್ಷರಗಳು ಇದ್ದರಷ್ಟೇ ಅದು ಅಸಲಿಯದ್ದು ಎಂದು ತಿಳಿದು ಓಪನ್ ಮಾಡಬಹುದು. ಇಲ್ಲದೇ ಹೋದರೆ ಮೆಸೇಜ್ ಕ್ಲಿಕ್ ಮಾಡದೇ ಡಿಲೀಟ್ ಮಾಡಬಹುದಾಗಿದೆ. ಇವುಗಳನ್ನು ಯಾವುದೇ ನಕಲಿ ಸಂಸ್ಥೆಗಳು ಕಾಪಿ ಮಾಡಲು ಬರದ ರೀತಿಯಲ್ಲಿ ರೂಪಿಸಿರುವುದರಿಂದ ಗ್ರಾಹಕರು ಇನ್ನುಮುಂದೆ ನಿಶ್ಚಿಂತರಾಗಿರಬಹುದು.
