ಚಿನ್ನವಿಟ್ಟು ಸಾಲ ಪಡೆಯುವವರಿಗೆ ಇನ್ನುಮುಂದೆ ಹೊಸ ನಿಯಮ ಜಾರಿಗೆ ಬರಲಿದೆ. ಎಲ್ಲಾ ಚಿನ್ನಕ್ಕೂ ಇನ್ನು ಸಾಲ ಸಿಗಲ್ಲ. ಆದರೆ ಬೆಳ್ಳಿ ಇಟ್ಟು ಕೂಡ ಸಾಲ ಪಡೆಯಬಹುದು. ಕಡಿಮೆ ಸಾಲ ಪಡೆಯುವವರಿಗೆ ಗುಡ್​ ನ್ಯೂಸ್​ ಕೂಡ ಇದೆ. ಏನದು?

ಕೆಲವರಿಗೆ ಚಿನ್ನ ಶೋಕಿಯ ಸಂಕೇತವಾದರೆ, ಬಹುತೇಕ ಮಂದಿಗೆ ಇದು ಭವಿಷ್ಯಕ್ಕೆ ಭದ್ರ ಬುನಾದಿಯಾಗಿದೆ. ಇದೇ ಕಾರಣಕ್ಕೆ ಒಂದಿಷ್ಟು ಚಿನ್ನಾಭರಣಗಳನ್ನು ಮಾಡಿಸಿಕೊಂಡು ಇಟ್ಟುಕೊಂಡಿರುತ್ತಾರೆ. ಕಷ್ಟಕಾಲದಲ್ಲಿ ಚಿನ್ನವೇ ಒಂದಿಷ್ಟು ಆಧಾರವಾಗುತ್ತದೆ ಎನ್ನುವ ಕಾರಣದಿಂದಾಗಿಯೇ ಚಿನ್ನ, ಬೆಳ್ಳಿ, ವಜ್ರಕ್ಕೆ ಅಷ್ಟು ಬೆಲೆ ಬಂದಿದೆ. ಒಂದು ವರದಿಯ ಪ್ರಕಾರ, ಭಾರತದಲ್ಲಿ ಶೇಕಡಾ 47ಕ್ಕಿಂತ ಹೆಚ್ಚು ಮಂದಿ 30 ಸಾವಿರ ರೂಪಾಯಿಗಿಂತಲೂ ಕಡಿಮೆ ಮೊತ್ತದ ಸಾಲಕ್ಕಾಗಿ ಚಿನ್ನವನ್ನು ಅಡುವು ಇಡುವುದು ಇದೆ. ಇದು ಚಿನ್ನದ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ. ಇದೇ ಕಾರಣಕ್ಕೆ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಆಗಾಗ್ಗೆ ಈ ಸಾಲದ ಕುರಿತು ನಿಯಮಗಳನ್ನು ಬದಲಿಸುತ್ತಲೇ ಇರುತ್ತದೆ. ಕಳೆದ ಏಪ್ರಿಲ್​ನಲ್ಲಿ ಆರ್​ಬಿಐ ಚಿನ್ನದ ಮೇಲಿನ ಸಾಲಕ್ಕೆ ಕೆಲವೊಂದು ಕರಡು ನಿಯಮಗಳನ್ನು ರೂಪಿಸಿದ್ದು, ಅದಿನ್ನೂ ಚಾಲ್ತಿಯಲ್ಲಿ ಬರಬೇಕಿದೆ. ಅದರ ನಡುವೆಯೇ ಇದೀಗ ಆ ನಿಮಯಕ್ಕೆ ಒಂದು ತಿದ್ದುಪಡಿ ಮಾಡುವ ಮೂಲಕ ಕಡಿಮೆ ಮೊತ್ತದ ಸಾಲ ಪಡೆಯುವವರಿಗೆ ಗುಡ್​ನ್ಯೂಸ್ ನೀಡಿದೆ.

ಮೊದಲಿಗೆ ಈ ಕರಡು ನಿಯಮದಲ್ಲಿ ಏನಿದೆ ಎಂದು ನೋಡುವುದಾದರೆ, ಆರ್​ಬಿಐ ಚಿನ್ನದ ಸಾಲವನ್ನು ಪಡೆದುಕೊಳ್ಳುವವರಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಅಷ್ಟಕ್ಕೂ ಚಿನ್ನದ ಮೇಲೆ ಸಾಲ ಪಡೆಯುವವರಿಗೆ ತಿಳಿದಿರುವಂತೆ ನೀವು ಇಟ್ಟಿರುವ ಸಂಪೂರ್ಣ ಚಿನ್ನದ ಬೆಲೆಗೆ ಅನುಗುಣವಾಗಿ ಸಂಪೂರ್ಣ ಮೊತ್ತ ಸಿಗುವುದಿಲ್ಲ. ಇದರ ಅರ್ಥ 1 ಲಕ್ಷ ರೂ ಮೌಲ್ಯದ ಚಿನ್ನ ಅಡುವಿಟ್ಟರೆ, ನಿಮಗೆ ಸಿಗುವುದು 80 ಸಾವಿರ ರೂಪಾಯಿ ಮಾತ್ರ. ಕೋವಿಡ್​ಗಿಂತಲೂ ಮುಂಚೆ ಇದರ ಮೌಲ್ಯ ಇನ್ನೂ ಕಡಿಮೆ ಇತ್ತು. ಕೋವಿಡ್​ ಸಮಯದಲ್ಲಿ ಜನರಿಗೆ ಹಣದ ಅಗತ್ಯ ಕಂಡು ಅದನ್ನು ಶೇಕಡಾ 80ಕ್ಕೆ ಏರಿಕೆ ಮಾಡಲಾಗಿತ್ತು. ಈಗ ಅದನ್ನು ಶೇಕಡಾ 75ಕ್ಕೆ ಇಳಿಸಲಾಗಿದೆ. ಇದರ ಅರ್ಥ ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನ ಇಟ್ಟರೆ ನಿಮಗೆ ಸಿಗುವುದು 75 ಸಾವಿರ ರೂ. ಸಾಲ ಮಾತ್ರ.

ನೀವು ಚಿನ್ನವನ್ನು ಬೇಕಾಬಿಟ್ಟೆ ಅಡುವು ಇಡುವಂತಿಲ್ಲ. ಸಾಲ ಪಡೆದುಕೊಳ್ಳುವಾಗ ಆ ಚಿನ್ನ ನಿಮ್ಮದೇ ಎನ್ನುವುದನ್ನು ಸಾಬೀತು ಮಾಡಬೇಕಿದೆ. ಒಂದು ವೇಳೆ ಚಿನ್ನ ಪಡೆದ ರಸೀತಿ ಇತ್ಯಾದಿಗಳು ಇಲ್ಲದ ಪಕ್ಷದಲ್ಲಿ ಅದು ನಿಮ್ಮದೇ ಎಂದು ಸಾಬೀತು ಮಾಡಲು ಅದರ ಬಗ್ಗೆ ಬರೆದು ಸಹಿಯನ್ನು ಹಾಕಿ ಸಾಲ ಪಡೆಯಬೇಕು. ಮಾತ್ರವಲ್ಲದೇ ನೀವು ಸಾಲಕ್ಕೆ ಇಟ್ಟಿರುವ ಚಿನ್ನದ ಶುದ್ಧತೆಯ ಪ್ರಮಾಣ ಪತ್ರವನ್ನು ನೀಡಬೇಕು. ಅದರ ತೂಕ ಇತ್ಯಾದಿಗಳ ಸಂಪೂರ್ಣ ವಿವರದ ಜೊತೆಗೆ ಆ ಚಿನ್ನದ ಫೋಟೋಗಳನ್ನೂ ನೀಡುವುದು ಕಡ್ಡಾಯ. ಅದಕ್ಕಿಂತಲೂ ಮುಖ್ಯವಾಗಿ ಇರುವುದು ಏನೆಂದರೆ, ಇನ್ಮುಂದೆ ನಿಮ್ಮಲ್ಲಿ ಇರುವ ಎಲ್ಲಾ ಚಿನ್ನಕ್ಕೂ ಸಾಲ ಸಿಗುವುದಿಲ್ಲ. ಅದು ಆಭರಣವಾಗಿರಬೇಕು, ಇಲ್ಲದೇ ಹೋದರೆ ಬ್ಯಾಂಕ್​ನಿಂದ​ ಮಾರಾಟವಾಗಿರುವ ಚಿನ್ನದ ನಾಣ್ಯವಾಗಿರಬೇಕು. ಅದು ಕೂಡ 22 ಕ್ಯಾರೆಟ್​ಗಳಿಗಿಂತಲೂ ಹೆಚ್ಚು ಶುದ್ಧ ಚಿನ್ನ ಆಗಿರಬೇಕು.

ಇನ್ನೊಂದು ಖುಷಿಯ ವಿಷಯ ಏನೆಂದರೆ, ಇನ್ನು ಮುಂದೆ ಬೆಳ್ಳಿಗೂ ಸಾಲ ಸಿಗುತ್ತೆ. ಬೆಳ್ಳಿಯ ಆಭರಗಣ ಮತ್ತು ಬ್ಯಾಂಕ್​ನಿಂದ ನೀಡಿರುವ ಬೆಳ್ಳಿಯ ಕಾಯಿನ್​ಗಳನ್ನು ಇಟ್ಟು ಸಾಲ ಪಡೆದುಕೊಳ್ಳಬಹುದು. 925 ಮೊತ್ತದ ಶುದ್ಧತೆ ಇರುವ ಬೆಳ್ಳಿಗೆ ಸಾಲ ಸೌಲಭ್ಯ ಸಿಗಲಿದೆ. ಇವಿಷ್ಟೂ ಕರಡು ನಿಯಮಗಳು ಕಠಿಣವಾಗಿದ್ದು, ಸಣ್ಣ ಪ್ರಮಾಣದ ಸಾಲ ಪಡೆಯುವವರಿಗೆ ಈ ನಿಯಮಗಳು ಭಾರವಾಗುತ್ತವೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೇಂದ್ರಕ್ಕೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಸದ್ಯ 2 ಲಕ್ಷ ರೂಪಾಯಿಗಿಂತ ಕಡಿಮೆ ಮೊತ್ತದ ಸಾಲ ಪಡೆಯುವವರಿಗೆ ಇಷ್ಟೊಂದು ಷರತ್ತು ವಿಧಿಸಲಾಗಿಲ್ಲ. ಈಗ ಚಾಲ್ತಿಯಲ್ಲಿ ಏನಿದೆಯೋ ಅದಷ್ಟೇ ಅನ್ವಯ ಆಗಲಿದೆ. ಅಂದಹಾಗೆ ಇವೆಲ್ಲಾ ಕರಡು ನಿಯಮ ಆಗಿದ್ದು, ಇನ್ನೂ ಕಾರ್ಯರೂಪಕ್ಕೆ ಬರಬೇಕಿದೆಯಷ್ಟೇ.