ಚೀನಾದಲ್ಲಿ ಮನೆ ಖರೀದಿ ಡೌನ್ ಪೇಮೆಂಟ್ ಗೆ ಹಣ ಬೇಕಿಲ್ಲ, ಬೆಳ್ಳುಳ್ಳಿ, ಕಲ್ಲಂಗಡಿ, ಪೀಚ್ ಹಣ್ಣುಗಳಿದ್ರೆ ಸಾಕು!
ಸ್ವಂತ ಸೂರು ಹೊಂದುವ ಕನಸು ಪ್ರತಿಯೊಬ್ಬರಿಗೂ ಇರುತ್ತದೆ.ಆದ್ರೆ ಬಹುತೇಕರಿಗೆ ಡೌನ್ ಪೇಮೆಂಟ್ ಗೆ ಹಣ ಹೊಂದಿಸೋದೆ ಕಷ್ಟದ ಕೆಲಸ. ಆದ್ರೆ ಚೀನಾದ ಜನರಿಗೆ ಸದ್ಯ ಅಂಥ ಚಿಂತಿಯಿಲ್ಲ.ಡೌನ್ ಪೇಮೆಂಟ್ ಗೆ ಹಣ ಬೇಕಾಗಿಲ್ಲ. ಬದಲಿಗೆ ಬೆಳ್ಳುಳ್ಳಿ, ಕಲ್ಲಂಗಡಿ ಹಾಗೂ ಪೀಚ್ ಹಣ್ಣುಗಳನ್ನು ನೀಡಿದ್ರೆ ಸಾಕು. ಅರೇ,ಇದೇನಿದು ಎಂದು ಅಚ್ಚರಿಪಡೋ ಮುನ್ನ ಮುಂದೆ ಓದಿ ನೋಡಿ.
ಬೀಜಿಂಗ್ (ಜು.5): ಗ್ರಾಹಕರನ್ನು (Customers) ಸೆಳೆಯಲು ಮಾರಾಟಗಾರರು ಎಂತೆಂಥ ತಂತ್ರಗಳನ್ನು ಬಳಸುತ್ತಾರೆ ಎಂಬುದಕ್ಕೆ ನೆರೆಯ ರಾಷ್ಟ್ರ ಚೀನಾದ (China) ರಿಯಲ್ ಎಸ್ಟೇಟ್ ಸಂಸ್ಥೆಗಳೇ ಉತ್ತಮ ನಿದರ್ಶನ. ಚೀನಾದಲ್ಲಿ (China) ಮನೆ ಖರೀದಿಸಲು ಈಗ ಡೌನ್ ಪೇಮೆಂಟ್ ಗೆ (Down Payment) ದುಡ್ಡು ನೀಡಬೇಕಾಗಿಲ್ಲ. ಬದಲಿಗೆ ಬೆಳ್ಳುಳ್ಳಿ (garlic),ಕಲ್ಲಂಗಡಿ (watermelons) ಹಾಗೂ ಪೀಚ್ (peaches) ಹಣ್ಣುಗಳನ್ನು ನೀಡಿದ್ರೆ ಸಾಕು! ಅರೇ ಇದೇನಿದು ಅಂತೀರಾ? ಹೌದು, ಹೊಸ ಮನೆಗಳ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯಲು ಚೀನಾದ (China) ಕಂಪನಿಗಳು (Companies) ಈಗ ಈ ಹೊಸ ವಿನೂತನ ತಂತ್ರವನ್ನು ಬಳಸುತ್ತಿವೆ.
ಸ್ವಂತ ಸೂರು ಬೇಕೆಂಬ ಬಯಕೆ ಯಾರಿಗೆ ಇರಲ್ಲ ಹೇಳಿ? ಆದ್ರೆ ಬಹುತೇಕ ಜನರಿಗೆ ಮನೆ ಖರೀದಿಗೆ ಅಡ್ಡಿಯಾಗೋದೇ ಡೌನ್ ಪೇಮೆಂಟ್ ಗೆ (Down payment) ನೀಡಬೇಕಾಗಿರುವ ಹಣದ ಕೊರತೆ. ಹೌದು, ಮನೆ ಖರೀದಿಗೆ ಬ್ಯಾಂಕ್ (Bank) ಸಾಲ (Loan) ನೀಡಿದ್ರೂ ಡೌನ್ ಪೇಮೆಂಟ್ ಗಾಗಿ ಖರೀದಿದಾರನ ಕೈಯಲ್ಲಿ ಒಂದಿಷ್ಟು ಹಣ ಇರೋದು ಅಗತ್ಯ. ಡೌನ್ ಪೇಮೆಂಟ್ ಗೆ ಹಣ ಇಲ್ಲ ಎಂಬ ಕಾರಣಕ್ಕೇ ಬಹುತೇಕರು ಮನೆ ಖರೀದಿ ಮುಂದೆ ಹಾಕ್ತಾರೆ. ಅದ್ರಲ್ಲೂ ಚೀನಾದಲ್ಲಿ (China) ಕಳೆದ ಒಂದು ವರ್ಷದಿಂದ ಮನೆ ಖರೀದಿಸುವವರ ಸಂಖ್ಯೆಯಲ್ಲಿ ಬಹಳಷ್ಟು ಇಳಿಕೆಯಾಗಿದೆ. ಇದು ಅಲ್ಲಿನ ರಿಯಲ್ ಎಸ್ಟೇಟ್ (Real Estate) ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಇದೇ ಕಾರಣಕ್ಕೆ ಮತ್ತೆ ಗ್ರಾಹಕರನ್ನು ಸೆಳೆದು ಗೃಹ ಮಾರಾಟದ ಸಂಖ್ಯೆ ಹೆಚ್ಚಿಸಿಕೊಳ್ಳಲು ಕೆಲವು ಗೃಹ ಮಾರಾಟ ಕಂಪನಿಗಳು ಡೌನ್ ಪೇಮೆಂಟ್ ಗೆ ಸಂಬಂಧಿಸಿ ಇಂಥ ವಿನೂತನ ಪ್ರಯೋಗಕ್ಕೆ ಮುಂದಾಗಿವೆ.
Service Charge: ಹೋಟೆಲ್ ನಲ್ಲಿ ಸರ್ವಿಸ್ ಚಾರ್ಜ್ ಕೇಳಿದ್ರೆ ದೂರು ನೀಡಿ; ಹೊಸ ಮಾರ್ಗಸೂಚಿ ಹೊರಡಿಸಿದ ಸಿಸಿಪಿಎ
ಪೀಚಸ್ ಪಾವತಿಸಿ ಆಸ್ತಿ ಖರೀದಿಸಿ
22ಲಕ್ಷ ರೂ. (188,888 ಯುವಾನ್) ಮೊತ್ತದ ಡೌನ್ ಪೇಮೆಂಟ್ ಅನ್ನು ಪೀಚಸ್ ರೂಪದಲ್ಲಿ ಪಾವತಿಸುವ ಅವಕಾಶವನ್ನು ಚೀನಾದ ವುಕ್ಸಿ (Wuxi) ನಗರದ ಡೆವಲಪರ್ಸ್ ಕಳೆದ ವಾರ ಘೋಷಿಸಿದ್ದಾರೆ.
ಇನ್ನು ಸೆಂಟ್ರಲ್ ಚೀನಾ ಮ್ಯಾನೇಜ್ ಮೆಂಟ್ ಚೀನಾದ ಪ್ರಮುಖ ಬೆಳ್ಳುಳ್ಳಿ ಬೆಳೆಯುವ ಪ್ರದೇಶವಾದ ಕ್ವಿ ಕೌಂಟಿಯಲ್ಲಿ ಮನೆ ಖರೀದಿಗೆ ಬೆಳ್ಳುಳ್ಳಿ ರೂಪದಲ್ಲಿ ಡೌನ್ ಪೇಮೆಂಟ್ ಮಾಡುವ 16 ದಿನಗಳ ಆಂದೋಲನವನ್ನು ಮೇನಲ್ಲಿ ಆಯೋಜಿಸಿತ್ತು. ಈ ಕಂಪನಿಯು ಬೆಳ್ಳುಳ್ಳಿಗೆ ಮಾರ್ಕೆಟ್ ಬೆಲೆಯ ಮೂರು ಪಟ್ಟು ಮೌಲ್ಯವನ್ನು ನೀಡಿತ್ತು.
ನಂಜಿಂಗ್ (Nanjing) ನಗರದ ಇನ್ನೊಬ್ಬ ಡೆವಲಪರ್ ಗೆ ಮನೆಗಳ ಖರೀದಿಗೆ ಡೌನ್ ಪೇಮಂಟ್ ಆಗಿ ರೈತರು 5,000ಕೆಜಿ ಕಲ್ಲಂಗಡಿ ಹಣ್ಣು ಪೂರೈಕೆ ಮಾಡಿದ್ದರು. 100,000 ಚೈನೀಸ್ ಯುವಾನ್ ಮೌಲ್ಯವನ್ನು ಕಂಪನಿ 5,000ಕೆಜಿ ಕಲ್ಲಂಗಡಿ ಹಣ್ಣಿಗೆ ನೀಡಿತ್ತು. ಇದು ಸ್ಥಳೀಯ ಮಾರುಕಟ್ಟೆಗಳ ಮೌಲ್ಯಕ್ಕಿಂತ ಅನೇಕ ಪಟ್ಟು ಹೆಚ್ಚಿತ್ತು.ಆದ್ರೆ ಕಂಪನಿಯು ನಿಗದಿತ ಅವಧಿಗಿಂತ ಮುನ್ನವೇ ಈ ಆಫರ್ ಅನ್ನು ಹಿಂದೆ ಪಡೆದಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. 'ಸಾಮಾಜಿಕ ಮಾಧ್ಯಮಗಳಲ್ಲಿನ ಎಲ್ಲ ಪ್ರಚಾರ ಪೋಸ್ಟರ್ ಗಳನ್ನು ಅಳಿಸಿ ಹಾಕುವಂತೆ ನಮಗೆ ಹೇಳಲಾಗಿದೆ' ಎಂದು ನಂಜಿಂಗ್ ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.
Business Ideas: ಮನೆಯಲ್ಲೇ ಕುಳಿತು ಹಣ ಗಳಿಸಲು ಇಲ್ಲಿದೆ ಉಪಾಯ
ಕೊರೋನಾ ಮಹಾಮಾರಿಯಿಂದ ಜಗತ್ತಿನ ಬಹುತೇಕ ಆರ್ಥಿಕತೆಗಳು ನಲುಗಿವೆ. ವ್ಯಾಪಾರ-ವ್ಯವಹಾರಗಳಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ಚೀನಾ ಕೂಡ ಇದಕ್ಕೆ ಹೊರತಾಗಿಲ್ಲ. ಅದರಲ್ಲೂ ಚೀನಾದ ರಿಯಲ್ ಎಸ್ಟೇಟ್ ಉದ್ಯಮ ಸಾಕಷ್ಟು ಹೊಡೆತ ಅನುಭವಿಸಿತ್ತು. ಮತ್ತೆ ಉದ್ಯಮವನ್ನು ಹಳಿಗೆ ತರಲು ಇಂಥ ವಿನೂತನ ಪ್ರಯೋಗಗಳಿಗೆ ಅಲ್ಲಿನ ಕಂಪನಿಗಳು ತೆರೆದುಕೊಂಡಿವೆ.