ಹಣದುಬ್ಬರ ಏರಿಕೆ ಭಾರತದ ಆರ್ಥಿಕತೆಯನ್ನು ಮಾತ್ರ ತಲ್ಲಣಿಸುತ್ತಿಲ್ಲ,ಬದಲಿಗೆ ಅಮೆರಿಕವನ್ನೂ ನಡುಗಿಸುತ್ತಿದೆ. ಇದೇ ಕಾರಣಕ್ಕೆ ಆರ್ ಬಿಐ ಮಾಡಿದಂತೆ ಅಮೆರಿಕದ ಫೆಡರಲ್ ಬ್ಯಾಂಕ್ ಕೂಡ ಬಡ್ಡಿದರ ಹೆಚ್ಚಳ ಮಾಡಿದೆ. ಅಮೆರಿಕದಲ್ಲಿ ಬಡ್ಡಿದರ ಹೆಚ್ಚಳವಾದ್ರೆ ನಮಗೇನು ಅನ್ನುತ್ತೀರಾ? ನಮಗೂ ಸಂಬಂಧವಿದೆ, ಹೇಗೆ?
ನವದೆಹಲಿ (ಜೂ.17): ಅಮೆರಿಕದಲ್ಲಿ (America) ಕಳೆದ ನಾಲ್ಕು ದಶಕಗಳಲ್ಲಿ ಹಣದುಬ್ಬರ (Inflation) 40 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಫೆಡರಲ್ ರಿಸರ್ವ್ (Federal Reserve) ಬಡ್ಡಿದರವನ್ನು (Interest rate) ಶೇ.75 ಬೇಸಿಸ್ ಪಾಯಿಂಟ್ ಗಳಷ್ಟು ಏರಿಕೆ ಮಾಡಿದೆ. 1994ರ ಬಳಿಕ ಇದು ಅತೀಹೆಚ್ಚಿನ ಪ್ರಮಾಣದ ಬಡ್ಡಿದರ ಏರಿಕೆಯಾಗಿದೆ.
ಫೆಡರಲ್ ಬ್ಯಾಂಕ್ ಮಾರ್ಚ್ ಬಳಿಕ ಬಡ್ಡಿದರ ಏರಿಕೆ ಮಾಡುತ್ತಿರೋದು ಇದು ಮೂರನೇ ಬಾರಿಯಾಗಿದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ ಜುಲೈನಲ್ಲಿ ಮತ್ತೆ ಶೇ.0.75ರಷ್ಟು ಏರಿಕೆ ಮಾಡಲಾಗೋದು ಎಂದು ಫೆಡರಲ್ ರಿಸರ್ವ್‌ನ ಅಧ್ಯಕ್ಷ ಜೆರೋಮ್ ಪೋವೆಲ್ ತಿಳಿಸಿದ್ದಾರೆ. ಅಮರಿಕದಲ್ಲಿ ಮೇನಲ್ಲಿ ಹಣದುಬ್ಬರ ಶೇ.8.6ಕ್ಕೆ ಏರಿಕೆಯಾಗೋ ಮೂಲಕ ಆತಂಕ ಸೃಷ್ಟಿಸಿತ್ತು. ಹೀಗಾಗಿ ನಾಗಲೋಟದಲ್ಲಿ ಏರಿಕೆಯಾಗುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಬಡ್ಡಿದರ ಏರಿಕೆ ಮಾಡೋದು ಅನಿವಾರ್ಯವಾಗಿತ್ತು. ಕೋವಿಡ್ ಹಾಗೂ ರಷ್ಯಾ (Russia) -ಉಕ್ರೇನ್ (Ukraine) ಯುದ್ಧ (War) ಜಗತ್ತಿನ ಇತರ ಎಲ್ಲ ರಾಷ್ಟ್ರಗಳಂತೆ ಅಮೆರಿಕ ಆರ್ಥಿಕತೆಗೂ ಪೆಟ್ಟು ನೀಡಿದೆ. ಹಣದುಬ್ಬರ ಹಾಗೂ ಬಡ್ಡಿದರ ಹೆಚ್ಚಳದಿಂದ ಅಮೆರಿಕದ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲ, ಅಮೆರಿಕದಲ್ಲಿನ ಹಣದುಬ್ಬರ ಏರಿಕೆ ಹಾಗೂ ಬಡ್ಡಿದರ ಹೆಚ್ಚಳ ಭಾರತ (India) ಸೇರಿದಂತೆ ಜಾಗತಿಕ ಆರ್ಥಿಕತೆ (Global economy) ಮೇಲೆ ಕೂಡ ಪರಿಣಾಮ ಬೀರಲಿದೆ.
ದತ್ತಾಂಶ ಸಂಗ್ರಹಣೆಯಲ್ಲಿ ನಿಯಮ ಪಾಲನೆ; ಮಾಸ್ಟರ್ ಕಾರ್ಡ್ ಮೇಲಿನ ನಿರ್ಬಂಧ ತೆರವುಗೊಳಿಸಿದ ಆರ್ ಬಿಐ
ಭಾರತದ ಆರ್ಥಿಕತೆ ಮೇಲೆ ಹೇಗೆ ಪರಿಣಾಮ ಬೀರಲಿದೆ?
1.ಹಣಕಾಸಿನ ಸ್ಥಿತಿ ಬಿಗಿಗೊಳ್ಳಲಿದೆ
ಹೆಚ್ಚಿನ ಬಡ್ಡಿದರ ಅಮೆರಿಕದಿಂದ ಭಾರತದಂತಹ ರಾಷ್ಟ್ರಗಳ ಷೇರು ಮಾರುಕಟ್ಟೆಗೆ ಅಪಾಯಕಾರಿ ಬಂಡವಾಳ ಹರಿವನ್ನುತಗ್ಗಿಸುತ್ತದೆ. ಇದ್ರಿಂದ ಭಾರತದ ಮಾರುಕಟ್ಟೆಗೆ ವಿದೇಶಿ ಹಣದ ಹರಿವು ತಗ್ಗಬಹುದು. ಇದು ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯೂ ಇದೆ.
2.ವ್ಯಾಪಾರ ಕೊರತೆ, ರೂಪಾಯಿ ಮೌಲ್ಯ ಕುಸಿತ
ಭಾರತದ ಮಾರುಕಟ್ಟೆಗಳ ಮೇಲೆ ವಿದೇಶಿ ಹೂಡಿಕೆದಾರರು ಆಸಕ್ತಿ ಕಳೆದುಕೊಳ್ಳಬಹುದು. ಆಮದಿನಲ್ಲಿ ಹೆಚ್ಚಳ ಹಾಗೂ ರಫ್ತಿನಲ್ಲಿ ಇಳಿಕೆಯಿಂದ ಭಾರತದ ವ್ಯಾಪಾರ ಕೊರತೆ ಹೆಚ್ಚುತ್ತಿದೆ. ಇನ್ನೊಂದೆಡೆ ಹಲವಾರು ಕಾರಣಗಳಿಂದ ಭಾರತದ ರೂಪಾಯಿ ಮೌಲ್ಯ ಅಮೆರಿಕನ್ ಡಾಲರ್ ಎದುರು ಕುಸಿತ ಕಾಣುತ್ತಿದೆ. ಆರ್ಥಿಕ ತಜ್ಞರ ಪ್ರಕಾರ ಫೆಡರಲ್ ಬ್ಯಾಂಕ್ ಬಡ್ಡಿದರ ಹೆಚ್ಚಳ ಮಾಡಿರೋದ್ರಿಂದ ಅಮೆರಿಕದಲ್ಲಿನ ಹೂಡಿಕೆಗಳಿಗೆ ಉತ್ತಮ ಗಳಿಕೆ ನೀಡಲಿದೆ. ಅಲ್ಲದೆ, ರೂಪಾಯಿ ಎದುರು ಡಾಲರ್ ಮೌಲ್ಯ ಇನ್ನಷ್ಟು ಬಲಗೊಳ್ಳುವ ಸಾಧ್ಯತೆಯಿದೆ.
3.ಗ್ರಾಹಕರ ಮೇಲೆ ಹೆಚ್ಚಿದ ಹೊರೆ
ಭಾರತದ ಗ್ರಾಹಕರ (Customers) ಮೇಲೂ ಅಮೆರಿದ ಫೆಡರಲ್ ಬ್ಯಾಂಕ್ ಬಡ್ಡಿದರ ಹೆಚ್ಚಳ ಮಾಡಿರುವುದು ಪರಿಣಾಮ ಬೀರಲಿದೆ. ಇದು ಜಾಗತಿಕ ಮಟ್ಟದಲ್ಲಿ ವಸ್ತುಗಳ ಬೆಲೆಯೇರಿಕೆಗೆ ಕಾರಣವಾಗುವ ಕಾರಣ ಭಾರತದ ಗ್ರಾಹಕರು ಕೂಡ ಈ ಬಿಸಿಯನ್ನು ಅನುಭವಿಸಬೇಕಾಗುತ್ತದೆ. ಈಗಾಗಲೇ ಭಾರತದಲ್ಲಿ ಪೆಟ್ರೋಲ್, ಡೀಸೆಲ್, ಖಾದ್ಯ ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಆಮದಾಗುವ ಇಂಥ ಸರಕುಗಳ ಬೆಲೆ ಇನ್ನಷ್ಟು ಹೆಚ್ಚಿ ಚಿಲ್ಲರೆ ಹಣದುಬ್ಬರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ.
LPG Cylinder:ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಬಿಡಿ, ಹೊಸ ಕನೆಕ್ಷನ್ ಪಡೆಯೋದು ಕೂಡ ದುಬಾರಿ ಆಗೋಯ್ತು ಈಗ!
4.ಹಣದುಬ್ಬರ ಹೆಚ್ಚಳ
ಫೆಡರಲ್ ಬ್ಯಾಂಕಿನ ದರ ಏರಿಕೆಯಿಂದ ಭಾರತದ ಹಣದುಬ್ಬರ ದರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಚ್ಚಾ ತೈಲ (Crude oil), ಕೆಮಿಕಲ್ಸ್ (Chemicals) ಹಾಗೂ ರಸಗೊಬ್ಬರ (Fertilizers) ಮುಂತಾದ ಸರಕುಗಳ (Goods) ಆಮದು (Import) ವೆಚ್ಚ ಹೆಚ್ಚಿಸಲಿದೆ. ಇದ್ರಿಂದ ಆಮದಾಗುವ ಸರಕುಗಳ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ.
