Asianet Suvarna News Asianet Suvarna News

ಆದಾಯ 7 ಲಕ್ಷ ದಾಟಿದರೆ 3 ಲಕ್ಷದಿಂದಲೇ ತೆರಿಗೆ

ಈ ಬಾರಿಯ ಬಜೆಟ್‌ನಲ್ಲಿ ಮೂಲ ತೆರಿಗೆ ವಿನಾಯ್ತಿ ಮಿತಿಯನ್ನು ಈಗಿರುವ ವಾರ್ಷಿಕ 2.5 ಲಕ್ಷ ರೂ.ನಿಂದ 3 ಲಕ್ಷ ರು.ಗೆ ಏರಿಕೆ ಮಾಡಲಾಗಿದೆ.

If the income exceeds 7 lakhs, should pay tax from 3 lakhs akb
Author
First Published Feb 2, 2023, 9:20 AM IST

ಈ ಬಾರಿಯ ಬಜೆಟ್‌ನಲ್ಲಿ ಮೂಲ ತೆರಿಗೆ ವಿನಾಯ್ತಿ ಮಿತಿಯನ್ನು ಈಗಿರುವ ವಾರ್ಷಿಕ 2.5 ಲಕ್ಷ ರೂ.ನಿಂದ 3 ಲಕ್ಷ ರು.ಗೆ ಏರಿಕೆ ಮಾಡಲಾಗಿದೆ. ಅಂದರೆ, ಜನರ ವಾರ್ಷಿಕ ಆದಾಯ 7 ಲಕ್ಷ ರು.ಗಿಂತ ಕಡಿಮೆ ಇದ್ದರೆ ಅದಕ್ಕೆ ಯಾವುದೇ ತೆರಿಗೆ ಇಲ್ಲ. ಆದಾಯ 7 ಲಕ್ಷ ರು. ದಾಟಿದರೆ ಆಗ 3 ಲಕ್ಷ ರು.ನಿಂದಲೇ ತೆರಿಗೆ ಪಾವತಿಸಬೇಕಾಗುತ್ತದೆ. 3ರಿಂದ 6 ಲಕ್ಷ ರು.ಗೆ ಶೇ.5ರಷ್ಟು, 6ರಿಂದ 9 ಲಕ್ಷ ರು.ಗೆ ಶೇ.10 ಹೀಗೆ ತೆರಿಗೆ ಪಾವತಿಸಬೇಕಾಗುತ್ತದೆ.

ಮಧ್ಯಮ ವರ್ಗದವರಿಗೆ ಬಂಪರ್‌ ಬಜೆಟ್‌ ಘೋಷಣೆ

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಅತಿದೊಡ್ಡ ಕೊಡುಗೆ ಲಭಿಸಿರುವುದು ಮಧ್ಯಮ ವರ್ಗದ ತೆರಿಗೆದಾರರಿಗೆ. ‘ಕಷ್ಟಪಟ್ಟು ದುಡಿಯುವ ಮಧ್ಯಮ ವರ್ಗದವರಿಗೆ’ ಆದಾಯ ತೆರಿಗೆ ಪಾವತಿಯಲ್ಲಿ ಅನುಕೂಲ ಮಾಡಿಕೊಡುವುದಾಗಿ ಘೋಷಿಸಿದ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌, ಆದಾಯ ತೆರಿಗೆಗೆ ಸಂಬಂಧಿಸಿದಂತೆ ಐದು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.

ಮೊದಲನೆಯದಾಗಿ, 7 ಲಕ್ಷ ರು.ವರೆಗೆ ವಾರ್ಷಿಕ ಆದಾಯವಿರುವವರು ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಘೋಷಿದ್ದಾರೆ. ಈವರೆಗೆ ಸಂಪೂರ್ಣ ತೆರಿಗೆ ವಿನಾಯ್ತಿ ಮಿತಿ 5 ಲಕ್ಷ ರು. ಇತ್ತು. ಅದನ್ನು ಈ ಬಾರಿಯ ಬಜೆಟ್‌ನಲ್ಲಿ 7 ಲಕ್ಷ ರು.ಗೆ ಏರಿಸಲಾಗಿದೆ.

ಭಾರೀ ಶ್ರೀಮಂತರ ಮೇಲಿನ ತೆರಿಗೆ ಶೇ.39ಕ್ಕೆ ಇಳಿಕೆ: ಮಹಿಳೆಯರಿಗೆ ಹೊಸ ಸೇವಿಂಗ್‌ ಸ್ಕೀಂ

ಎರಡನೆಯದಾಗಿ, ಆದಾಯ ತೆರಿಗೆ ಸ್ಲಾಬ್‌ಗಳ ಸಂಖ್ಯೆಯನ್ನು ಈಗ ಇರುವ 6ರಿಂದ 5ಕ್ಕೆ ಇಳಿಸಿದ್ದಾರೆ. ಅದರ ಜೊತೆಗೆ, ತೆರಿಗೆ ವಿನಾಯ್ತಿ ಮಿತಿಯನ್ನು 2.5 ಲಕ್ಷ ರು.ನಿಂದ 3 ಲಕ್ಷ ರು.ಗೆ ಏರಿಸಿದ್ದಾರೆ. ಅಂದರೆ, ಇನ್ನುಮುಂದೆ 3ರಿಂದ 6 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.5ರಷ್ಟು, 6ರಿಂದ 9 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.10ರಷ್ಟು, 9ರಿಂದ 12 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.15ರಷ್ಟು, 12ರಿಂದ 15 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.20ರಷ್ಟು ಹಾಗೂ 15 ಲಕ್ಷ ರು.ಗಿಂತ ಹೆಚ್ಚು ವಾರ್ಷಿಕ ಆದಾಯ ಇರುವವರಿಗೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಮೂರನೆಯ ಕೊಡುಗೆ ಸಂಬಳದಾರರು ಹಾಗೂ ಪಿಂಚಣಿದಾರರಿಗೆ ಸಂಬಂಧಿಸಿದೆ. ಅದರಡಿ, ಹೊಸ ತೆರಿಗೆ ವ್ಯವಸ್ಥೆಯಡಿ ತಮ್ಮ ಹೂಡಿಕೆಗಳ ಮೇಲೆ ಯಾವುದೇ ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿಲ್ಲದ ತೆರಿಗೆದಾರರಿಗೂ 50,000 ರು. ಸ್ಟಾಂಡರ್ಡ್‌ ಡಿಡಕ್ಷನ್‌ ಸೌಲಭ್ಯ ಕಲ್ಪಿಸಿದ್ದಾರೆ. ‘ಹೀಗಾಗಿ ವಾರ್ಷಿಕ 15.5 ಲಕ್ಷ ರು. ಅಥವಾ ಅದಕ್ಕಿಂತ ಹೆಚ್ಚು ವೇತನ ಪಡೆಯುವವರಿಗೆ 52,500 ರು. ಉಳಿತಾಯವಾಗಲಿದೆ’ ಎಂದು ನಿರ್ಮಲಾ ಹೇಳಿದ್ದಾರೆ.

ನಾಲ್ಕನೆಯದಾಗಿ, ಈವರೆಗೆ ದೇಶದಲ್ಲಿದ್ದ ಅತ್ಯಂತ ಗರಿಷ್ಠ ಆದಾಯ ತೆರಿಗೆ ದರ ಶೇ.42.74ನ್ನು ಶೇ.39ಕ್ಕೆ ಇಳಿಸಲಾಗಿದೆ. ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಹೊಸ ತೆರಿಗೆ ವ್ಯವಸ್ಥೆಯಡಿ ಗರಿಷ್ಠ ತೆರಿಗೆ ಪಾವತಿಸುವವರಿಗೆ ಇದ್ದ ಮೇಲ್ತೆರಿಗೆ ದರವನ್ನು ಶೇ.37ರಿಂದ ಶೇ.25ಕ್ಕೆ ಇಳಿಸಿದ್ದಾರೆ. ಅದರಿಂದಾಗಿ ಗರಿಷ್ಠ ತೆರಿಗೆ ದರ ಶೇ.39ಕ್ಕೆ ಇಳಿಕೆಯಾಗಲಿದೆ.

ಆನ್‌ಲೈನ್‌ ಗೇಮ್‌ನಲ್ಲಿ ಗೆದ್ದ ಹಣಕ್ಕೆ ಶೇ.30 ತೆರಿಗೆ: ವಿದೇಶಿ ಪ್ರವಾಸ ಇನ್ಮುಂದೆ ದುಬಾರಿ

ಐದನೆಯ ಘೋಷಣೆ ಸರ್ಕಾರೇತರ ಸಂಸ್ಥೆಗಳ ವೇತನದಾರರು ನಿವೃತ್ತಿಯ ವೇಳೆ ಪಡೆಯುತ್ತಿದ್ದ ರಜೆ ನಗದೀಕರಣ ಸೌಲಭ್ಯಕ್ಕೆ ಲಭ್ಯವಿರುವ ತೆರಿಗೆ ವಿನಾಯ್ತಿಗೆ ಸಂಬಂಧಿಸಿದೆ. 2002ರಲ್ಲಿ ಅದನ್ನು 3 ಲಕ್ಷ ರು.ಗೆ ನಿಗದಿಪಡಿಸಲಾಗಿತ್ತು. ಈಗ ಅದನ್ನು ಸರ್ಕಾರಿ ನೌಕರರ ಸಂಬಳಕ್ಕೆ ಸಮನಾಗಿ 25 ಲಕ್ಷ ರು.ಗೆ ಏರಿಸಲಾಗಿದೆ ಎಂದು ನಿರ್ಮಲಾ ಪ್ರಕಟಿಸಿದ್ದಾರೆ.

Follow Us:
Download App:
  • android
  • ios