ಆಯ್ದ ಬ್ಯಾಂಕಿಂಗ್ ಸೇವೆಗಳ ಮೇಲೆ ಶೂನ್ಯ ಶುಲ್ಕ ಘೋಷಿಸಿದ ಐಡಿಎಫ್ ಸಿ ಫಸ್ಟ್ ಬ್ಯಾಂಕ್; ಯಾವೆಲ್ಲ ಸೇವೆಗಳಿಗೆ ಅನ್ವಯ?
ವಿವಿಧ ಸೇವೆಗಳಿಗೆ ಬ್ಯಾಂಕುಗಳು ಗ್ರಾಹಕರಿಗೆ ಶುಲ್ಕಗಳನ್ನು ವಿಧಿಸೋದು ಸಾಮಾನ್ಯ. ಇದೀಗ ಐಡಿಎಫ್ ಸಿ ಫಸ್ಟ್ ಬ್ಯಾಂಕ್ 25 ಅಗತ್ಯ ಸೇವೆಗಳ ಮೇಲಿನ ಶುಲ್ಕವನ್ನು ಮನ್ನಾ ಮಾಡುವ ಮೂಲಕ ಗ್ರಾಹಕರಿಗೆ ಅನುಕೂಲ ಒದಗಿಸಿದೆ. ಹಾಗಾದ್ರೆ ಯಾವೆಲ್ಲ ಸೇವೆಗಳಿಗೆ ಶೂನ್ಯ ಶುಲ್ಕ ಘೋಷಿಸಲಾಗಿದೆ?
ಮುಂಬೈ (ಡಿ.22): ಉಳಿತಾಯ ಖಾತೆಗಳ ಮೇಲೆ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಶೂನ್ಯ ಶುಲ್ಕ ಬ್ಯಾಂಕಿಂಗ್ ಸೇವೆಗಳನ್ನು ಘೋಷಿಸಿದೆ. ಹಾಗೆಯೇ 25 ಸಾಮಾನ್ಯ ಬಳಕೆಯ ಬ್ಯಾಂಕಿಂಗ್ ಸೇವೆಗಳ ಮೇಲಿನ ಶುಲ್ಕವನ್ನು ಮನ್ನಾ ಮಾಡಿದೆ. ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಶಾಖೆಗಳಲ್ಲಿ ಉಳಿತಾಯ ಖಾತೆಗೆ ನಗದು ಜಮೆ ಹಾಗೂ ವಿತ್ ಡ್ರಾ, ಥರ್ಡ್ ಪಾರ್ಟಿ ನಗದು ವಹಿವಾಟುಗಳು, ಡಿಮ್ಯಾಂಡ್ ಡ್ರಾಫ್ಟ್ ಗಳು, ನಿಫ್ಟ್, ಆರ್ ಟಿಜಿಎಸ್, ಚೆಕ್ ಬುಕ್, ಎಸ್ ಎಂಎಸ್ ಅಲರ್ಟ್, ಅಂತಾರಾಷ್ಟ್ರೀಯ ಎಟಿಎಂ ಬಳಕೆ ಮುಂತಾದ ಬ್ಯಾಂಕಿಂಗ್ ಸೇವೆಗಳು ಶೂನ್ಯ ಶುಲ್ಕ ಬ್ಯಾಂಕಿಂಗ್ ಸೇವೆಗಳಲ್ಲಿ ಸೇರಿವೆ. ಡಿಸೆಂಬರ್ 18 ಐಡಿಎಫ್ ಸಿ ಬ್ಯಾಂಕ್ ಸಂಸ್ಥಾಪನ ದಿನವಾಗಿದ್ದು, ಅದರ ಅಂಗವಾಗಿ ಈ ಸೌಲಭ್ಯವನ್ನು ಬ್ಯಾಂಕ್ ಘೋಷಿಸಿದೆ. ಹೊಸ ಸೌಲಭ್ಯದ ಪ್ರಯೋಜನ ಎಲ್ಲ ಗ್ರಾಹಕರಿಗೂ ದೊರೆಯಲಿದೆ. ಅದರಲ್ಲೂ ಶುಲ್ಕ ಹಾಗೂ ದಂಡಗಳನ್ನು ಲೆಕ್ಕ ಹಾಕಲು ಕಷ್ಟವಾಗುವ ಹಣಕಾಸಿನ ಶಿಕ್ಷಣ ಕಡಿಮೆ ಇರುವ ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಐಡಿಎಫ್ ಸಿ ಬ್ಯಾಂಕ್ ತಿಳಿಸಿದೆ.
ಬ್ಯಾಂಕ್ ವಿಧಿಸುವ ದಂಡ ಅಥವಾ ಶುಲ್ಕವನ್ನು ಲೆಕ್ಕ ಸಂಕೀರ್ಣವಾಗಿದೆ. ಹೀಗಾಗಿ ಅನೇಕ ಗ್ರಾಹಕರಿಗೆ ತಮಗೆ ವಿಧಿಸಿರುವ ದಂಡದ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಇನ್ನು ಗ್ರಾಹಕರಿಗೆ ನೀಡುವ ಸ್ಟೇಟ್ ಮೆಂಟ್ ನಲ್ಲಿ ವಹಿವಾಟಿನ ಮಾಹಿತಿಗಳ ನಡುವೆ ಶುಲ್ಕ ಅಥವಾ ದಂಡದ ಮಾಹಿತಿ ಕೆಲವೊಮ್ಮೆ ಅವರ ಗಮನಕ್ಕೆ ಬರುವುದೇ ಇಲ್ಲ ಎಮದು ಐಡಿಎಫ್ ಸಿ ತಿಳಿಸಿದೆ. ಇದೇ ಕಾರಣಕ್ಕೆ 25 ಅಗತ್ಯ ಸೇವೆಗಳನ್ನು ಶೂನ್ಯ ಶುಲ್ಕದಲ್ಲಿ ನೀಡುತ್ತಿರೋದಾಗಿ ತಿಳಿಸಿದೆ.
ಸುಸ್ತಿದಾರರಿಂದ ಬ್ಯಾಂಕ್‌ಗಳಿಗೆ 92 ಸಾವಿರ ಕೋಟಿ ರು. ಬಾಕಿ
ಯಾವೆಲ್ಲ ಸೇವೆಗಳಿಗೆ ಅನ್ವಯ?
ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ ಒಟ್ಟು 25 ಅಗತ್ಯ ಸೇವೆಗಳಿಗೆ ಯಾವುದೇ ಶುಲ್ಕ ವಿಧಿಸಲಾಗೋದಿಲ್ಲ. ಶಾಖೆಗಳಲ್ಲಿ ಪ್ರತಿ ತಿಂಗಳು ನಡೆಯುವ ನಗದು ವಹಿವಾಟುಗಳು, ನಗದು ವಹಿವಾಟಿನ ಮೌಲ್ಯ (ಠೇವಣಿ ಹಾಗೂ ವಿತ್ ಡ್ರಾ), ಥರ್ಡ್ ಪಾರ್ಟಿ ನಗದು ವಹಿವಾಟಿನ ಶುಲ್ಕಗಳು, ಐಎಂಪಿಎಸ್ ಶುಲ್ಕ, ನೆಫ್ಟ್ ಶುಲ್ಕಗಳು, ಆರ್ ಟಿಜಿಎಸ್ ಶುಲ್ಕ, ಚೆಕ್ ಬುಕ್ ಹಾಗೂ ಎಸ್ ಎಂಎಸ್ ಶುಲ್ಕಗಳು, ಪಾಸ್ ಬುಕ್ ಶುಲ್ಕಗಳು, ಸ್ಟೇಟ್‌ಮೆಂಟ್ ನಕಲು ಪ್ರತಿಯ ಶುಲ್ಕ, ಬ್ಯಾಲೆನ್ಸ್ ಪ್ರಮಾಣಪತ್ರ ಶುಲ್ಕ, ಬಡ್ಡಿದರ ಪ್ರಮಾಣಪತ್ರ ಶುಲ್ಕ, ಖಾತೆ ಮುಚ್ಚುವಿಕೆ ಹಾಗೂ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸರ್ವೀಸ್ (ECS) ರಿಟರ್ನ್ ಶುಲ್ಕಗಳು ಸೇರಿವೆ.
ಹೊಸ ವರ್ಷದಲ್ಲಿ ಹೂಡಿಕೆ ಮಾಡಲು ಹೊರಟಿರೋರಿಗೆ ಇಲ್ಲಿದೆ 8 ಟಿಪ್ಸ್
ಸಾಮಾನ್ಯವಾಗಿ ಬ್ಯಾಂಕುಗಳು ಆನ್ ಲೈನ್ ಅಥವಾ ಆಪ್ ಲೈನ್ ನಲ್ಲಿ ಯಾವುದೇ ಬ್ಯಾಂಕಿಂಗ್ ಸೇವೆಗಳನ್ನು ಸಂಪೂರ್ಣ ಉಚಿತವಾಗಿ ನೀಡುವುದಿಲ್ಲ. ನೀವು ನಡೆಸಿದ ವಹಿವಾಟುಗಳ ಬಗ್ಗೆ ನಿಮ್ಮ ಮೊಬೈಲ್ ಗೆ ಬರುವ ಎಸ್ಎಂಎಸ್ ನಿಂದ ಹಿಡಿದು ಐಎಂಪಿಎಸ್ ಹಣ ವರ್ಗಾವಣೆ, ಚೆಕ್ ಕ್ಲಿಯರೆನ್ಸ್ ಅಥವಾ ಎಟಿಎಂ ವಿತ್ ಡ್ರಾ ಸೌಲಭ್ಯ ಇವೆಲ್ಲದಕ್ಕೂ ನಿರ್ದಿಷ್ಟ ಶುಲ್ಕವನ್ನು ಬ್ಯಾಂಕ್ ಗ್ರಾಹಕರಿಂದ ಒಂದಲ್ಲ ಒಂದು ವಿಧದಲ್ಲಿ ವಸೂಲಿ ಮಾಡುತ್ತದೆ. ಈ ಶುಲ್ಕಗಳು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತವೆ. ಅಲ್ಲದೆ, ಎಟಿಎಂ ವಿತ್ ಡ್ರಾನಂತಹ ಕೆಲವು ಸೇವೆಗಳಿಗೆ ನಿರ್ದಿಷ್ಟ ಮಿತಿಯನ್ನು ಮೀರಿದ್ರೆ ಮಾತ್ರ ಈ ಶುಲ್ಕಗಳು ಅನ್ವಯಿಸುತ್ತವೆ. ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ, ಐಎಂಪಿಎಸ್ ಶುಲ್ಕಗಳು, ಚೆಕ್ ಕ್ಲಿಯರೆನ್ಸ್ ಶುಲ್ಕ, ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಶುಲ್ಕ, ಎಟಿಎಂ ಹಣ ವಿತ್ ಡ್ರಾ ಶುಲ್ಕ ಹೀಗೆ ಇಂಥ ಅನೇಕ ಸೇವೆಗಳಿಗೆ ಬ್ಯಾಂಕ್ ನಿಮ್ಮ ಖಾತೆಯಿಂದ ಶುಲ್ಕವನ್ನು ಕಡಿತಗೊಳಿಸುತ್ತದೆ.