ಹೊಸ ವರ್ಷದಲ್ಲಿ ಹೂಡಿಕೆ ಮಾಡಲು ಹೊರಟಿರೋರಿಗೆ ಇಲ್ಲಿದೆ 8 ಟಿಪ್ಸ್
ಇಲ್ಲಿಯ ತನಕ ಹೂಡಿಕೆ ಮಾಡದ ನೀವು 2023ರಲ್ಲಿ ಮೊದಲ ಬಾರಿಗೆ ಹೂಡಿಕೆ ಮಾಡಲು ಬಯಸಿದ್ದೀರಾ? ಹಾಗಾದ್ರೆ ಹೂಡಿಕೆ ಮಾಡುವಾಗ ಯಾವೆಲ್ಲ ವಿಚಾರಗಳಿಗೆ ಮಹತ್ವ ನೀಡಬೇಕು? ಹೂಡಿಕೆ ಪ್ಲ್ಯಾನ್ ಹೇಗಿರಬೇಕು? ಇಲ್ಲಿದೆ ಟಿಪ್ಸ್.
Business Desk:ಉದ್ಯೋಗ ದೊರೆತು ಸಂಪಾದನೆ ಪ್ರಾರಂಭವಾದ ಕ್ಷಣದಿಂದಲೇ ವ್ಯಕ್ತಿ ಉಳಿತಾಯ ಹಾಗೂ ಹೂಡಿಕೆ ಮಾಡಲು ಪ್ರಾರಂಭಿಸಬೇಕು. ಜೀವನದ ಗುರಿಗಳನ್ನು ಹೆಚ್ಚಿನ ಕಷ್ಟವಿಲ್ಲದೆ ತಲುಪಲು ಯೋಜಿತ ವಿಧಾನದಲ್ಲಿ ಹೂಡಿಕೆ ಮಾಡೋದು ಅಗತ್ಯ. ಹೂಡಿಕೆ ಮಾಡಿದ ಹಣದ ರಿಟರ್ನ್ ಸಮಯದ ಮೇಲೆ ಆಧಾರಿತವಾಗಿರುವ ಕಾರಣ ಒಬ್ಬ ವ್ಯಕ್ತಿ ಎಷ್ಟು ಬೇಗ ಹೂಡಿಕೆ ಆರಂಭಿಸುತ್ತಾನೆ ಎನ್ನುವುದರ ಮೇಲೆ ಆತನ ಸಂಪತ್ತಿನ ಸಂಗ್ರಹಣೆ ನಿರ್ಧರಿತವಾಗುತ್ತದೆ. ಹೀಗಾಗಿ ಹೂಡಿಕೆಯ ಪ್ರಯಾಣ ಪ್ರಾರಂಭಿಸುವಾಗ ಸರಿಯಾದ ಯೋಜನೆ ಅಗತ್ಯ. ಆಗ ಮಾತ್ರ ಹೂಡಿಕೆ ಸರಿಯಾದ ಹಾದಿಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲು ಸಾಧ್ಯ. ಆದಾಯದ ಎಷ್ಟು ಭಾಗವನ್ನು ಹೂಡಿಕೆ ಮಾಡಬೇಕು ಎಂಬುದರಿಂದ ಹಿಡಿದು ಯಾವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂಬ ತನಕ ಪ್ರತಿಯೊಂದನ್ನೂ ಸಮರ್ಪಕವಾಗಿ ಪ್ಲ್ಯಾನ್ ಮಾಡೋದು ಅಗತ್ಯ. ಈ ವರ್ಷ ಹೂಡಿಕೆ ಮಾಡಿಲ್ಲದವರು ಹೊಸ ವರ್ಷ ಅಂದ್ರೆ 2023ರಲ್ಲಿ ಹೂಡಿಕೆ ಮಾಡುವ ಬಗ್ಗೆ ಈಗಲೇ ಆಲೋಚಿಸಿ. ಹೊಸ ವರ್ಷದಲ್ಲಿ ಹೂಡಿಕೆ ಪ್ರಾರಂಭಿಸಲು ಆಲೋಚಿಸುತ್ತಿರೋರಿಗೆ ಇಲ್ಲಿವೆ ಎಂಟು ಟಿಪ್ಸ್.
1.ಎಷ್ಟು, ಎಲ್ಲಿ ಹೂಡಿಕೆ ಮಾಡ್ಬೇಕು?
ನಿಮ್ಮ ತಿಂಗಳ ಆದಾಯ, ವೆಚ್ಚ, ಉಳಿತಾಯ ಎಲ್ಲವನ್ನೂ ಸರಿಯಾಗಿ ಲೆಕ್ಕ ಹಾಕಿ. ಆಗ ಎಷ್ಟು ಹಣವನ್ನು ಹೂಡಿಕೆ ಮಾಡಬಹುದು ಎಂಬ ಅಂದಾಜು ಸಿಗುತ್ತದೆ. ಎಷ್ಟು ಹಣವನ್ನು ಹೂಡಿಕೆ ಮಾಡಬೇಕು ಎಂಬ ಲೆಕ್ಕಾಚಾರದ ಬಳಿಕ ಯಾವ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು ಎಂಬ ಬಗ್ಗೆ ಯೋಚಿಸಿ.
2.ಬೇಗ ಪ್ರಾರಂಭಿಸಿ
2023ರಿಂದ ಹೂಡಿಕೆ ಮಾಡಬೇಕು ಎಂದು ಆಲೋಚಿಸಿದ್ದೇನೆ, ಹೀಗಾಗಿ 2023ರ ಡಿಸೆಂಬರ್ ಒಳಗೆ ಯಾವತ್ತಾದ್ರೂ ಹೂಡಿಕೆ ಪ್ರಾರಂಭಿಸೋಣ ಎಂಬ ಮನಸ್ಥಿತಿ ನಿಮ್ಮದಾಗಿದ್ರೆ, ತಕ್ಷಣ ಬದಲಾಯಿಸಿಕೊಳ್ಳಿ. ನೀವು ಎಷ್ಟು ಬೇಗ ಹೂಡಿಕೆ ಮಾಡುತ್ತಿರೋ ಅಷ್ಟು ಉತ್ತಮ ರಿಟರ್ನ್ ಸಿಗುತ್ತದೆ. ಹೀಗಾಗಿ 2023ರ ಜನವರಿಯಿಂದಲೇ ಹೂಡಿಕೆ ಪ್ರಾರಂಭಿಸಿ.
ಕೆವೈಸಿ ನವೀಕರಿಸದ ಪಾಲಿಸಿದಾರರಿಗೆ ಎಲ್ಐಸಿ ದಂಡ ವಿಧಿಸಿದೆಯಾ? ಈ ಬಗ್ಗೆ ಎಲ್ಐಸಿ ಏನ್ ಹೇಳಿದೆ?
3.ತುರ್ತು ನಿಧಿ
ಕನಿಷ್ಠ ಆರು ತಿಂಗಳಿಗೆ ನಿಮ್ಮ ಖರ್ಚಿಗೆ ಸಾಕಾಗುವಷ್ಟು ಹಣವನ್ನು ಉಳಿತಾಯ ಖಾತೆ, ಲಿಕ್ವಿಡ್ ಮ್ಯೂಚುವಲ್ ಫಂಡ್ ಹಾಗೂ ಬ್ಯಾಂಕ್ ಠೇವಣಿಗಳಲ್ಲಿಟ್ಟಿರಿ. ಇದ್ರಿಂದ ತುರ್ತು ಸಂದರ್ಭಗಳಲ್ಲಿ ಹಣಕಾಸಿನ ಅಡಚಣೆ ಉಂಟಾಗೋದಿಲ್ಲ.
4.ಇಡೀ ವರ್ಷದ ತೆರಿಗೆ ಪ್ಲ್ಯಾನ್ ಇರಲಿ
ಕೆಲವೊಂದು ಯೋಜನೆಗಳಲ್ಲಿ ಹೂಡಿಕೆ ಮಾಡೋದ್ರಿಂದ ತೆರಿಗೆ ಉಳಿತಾಯ ಮಾಡಬಹುದು. ಹೀಗಾಗಿ ಹೂಡಿಕೆ ಮಾಡುವ ಸಮಯದಲ್ಲಿ ತೆರಿಗೆ ಉಳಿತಾಯದ ಪ್ರಯೋಜನ ನೀಡಬಲ್ಲ ಯೋಜನೆಗಳಿಗೆ ಮಹತ್ವ ನೀಡಿ. ಮ್ಯೂಚುವಲ್ ಫಂಡ್ ಗಳ ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ಸ್ ನಲ್ಲಿ(ELSS) ಹೂಡಿಕೆ ಮಾಡಿದ್ರೆ ವಾರ್ಷಿಕ 1.5ಲಕ್ಷ ರೂ. ತನಕ ತೆರಿಗೆ ಪ್ರಯೋಜನ ಪಡೆಯಬಹುದು. ನೀವು ಶೇ.30ರಷ್ಟು ತೆರಿಗೆ ಪಾವತಿ ಮಾಡುವ ಲಿಸ್ಟ್ ನಲ್ಲಿದ್ರೆ ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ 45,000ರೂ. ತೆರಿಗೆ ಉಳಿತಾಯ ಮಾಡಬಹುದು.
5.ಭಾವನೆಗಳನ್ನು ನಿಯಂತ್ರಿಸಿ
ಹೂಡಿಕೆದಾರರು ಭಯ ಹಾಗೂ ದುರಾಸೆಯಂತಹ ಭಾವನೆಗಳಿಂದ ಹೂಡಿಕೆಗೆ ಸಂಬಂಧಿಸಿ ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಈಕ್ವಿಟಿಗಳ ಬೆಲೆ ಇಳಿಕೆಯಾದಾಗ ಮಾರಾಟ ಮಾಡಿ, ಬೆಲೆ ಏರಿಕೆಯಾದಾಗ ಖರೀದಿ ಮಾಡುತ್ತಾರೆ. ಇದ್ರಿಂದ ನಷ್ಟವಾಗುವ ಸಾಧ್ಯತೆ ಅಧಿಕ. ಹೀಗಾಗಿ ಷೇರು ಮಾರುಕಟ್ಟೆಗಳಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡಲು ಪ್ರಯತ್ನಿಸಬೇಕು.
6.ಗುರಿಗಳಿಗೆ ಅನುಗುಣವಾಗಿ ಹೂಡಿಕೆ
ನಿಮ್ಮ ಗುರಿಗಳಿಗೆ ಅನುಗುಣವಾಗಿ ಹೂಡಿಕೆ ಮಾಡಿ. ಐದು ವರ್ಷಗಳಿಗಿಂತ ಕಡಿಮೆ ಅವಧಿಗೆ ಹೈಬ್ರೀಡ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು. ಹಾಗೆಯೇ ಐದು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಈಕ್ವಿಟಿ ಫಂಡ್ ಗಳಲ್ಲಿ ಹೂಡಿಕೆ ಮಾಡೋದು ಉತ್ತಮ.
ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಮಾಡ್ತಿದ್ದೀರಾ? ಸಾವರಿನ್ ಗೋಲ್ಡ್ ಬಾಂಡ್ ಅಥವಾ ಚಿನ್ನದ ಇಟಿಎಫ್, ಯಾವುದು ಉತ್ತಮ?
7.ವಿವಿಧ ಕಡೆ ಹೂಡಿಕೆ ಮಾಡಿ
ಈಕ್ವಿಟಿ, ಚಿನ್ನ, ರಿಯಲ್ ಎಸ್ಟೇಟ್, ಗ್ಲೋಬಲ್ ಎಸೆಟ್ಸ್ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಹೂಡಿಕೆ ಮಾಡಿ. ಇದ್ರಿಂದ ಅಪಾಯ ತಗ್ಗುತ್ತದೆ. ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್ಸ್, ಹೈಬ್ರೀಡ್ ಫಂಡ್ಸ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಮ್ಯೂಚುವಲ್ ಫಂಡ್ಸ್ ನಿಮ್ಮ ಹೂಡಿಕೆಯನ್ನು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸುತ್ತದೆ. ಹೀಗಾಗಿ ಮ್ಯೂಚುವಲ್ ಫಂಡ್ ಗಳಲ್ಲಿ ಕೂಡ ಹೂಡಿಕೆ ಮಾಡಬಹುದು.
8. ವಿಮೆ ಮಾಡಿಸಿ
ಮರೆಯದೆ ಟರ್ಮ್ ಇನ್ಯೂರೆನ್ಸ್ ಹಾಗೂ ಆರೋಗ್ಯ ವಿಮೆ ಮಾಡಿಸಿ. ಇದ್ರಿಂದ ನಿಮ್ಮ ಹಾಗೂ ಕುಟುಂಬದ ಭವಿಷ್ಯಕ್ಕೆ ಭದ್ರತೆ ಸಿಗುವ ಜೊತೆಗೆ ನಿಮ್ಮ ಕುಟುಂಬದ ಆರೋಗ್ಯಕ್ಕೂ ಸುರಕ್ಷತೆ ಸಿಗುತ್ತದೆ.