ದುಡ್ಡು ಮಾಡೋದು ಹೇಗೆ? ಇಲ್ಲಿವೆ ನೋಡಿ ಸಿಂಪಲ್ ಟ್ರಿಕ್ಸ್
ಹಣ ಮಾಡ್ಬೇಕು ಎಂಬ ಬಯಕೆ ಯಾರಿಗೆ ತಾನೇ ಇಲ್ಲ? ಆದ್ರೆ ಹಣ ಮಾಡೋ ದಾರಿಗಳು ಎಲ್ಲರಿಗೂ ಗೊತ್ತಿರೋದಿಲ್ಲ.ಕೆಲವು ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ ಸಾಕು, ಜೀವನವನ್ನು ನೆಮ್ಮದಿಯಿಂದ ಕಳೆಯುವಷ್ಟು ಹಣ ನಿಮ್ಮ ಬಳಿಯಿರುತ್ತೆ.
ದುಡ್ಡು ಯಾರಿಗೆ ತಾನೇ ಬೇಡ ಹೇಳಿ? ಅದ್ರಲ್ಲೂ ದುಡ್ಡು ಮಾಡೋದು ಹೇಗೆ ಎಂಬುದು ಅನೇಕರಿಗೆ ನಿಗೂಢ ರಹಸ್ಯವಾದ್ರೆ,ಕೆಲವರಿಗೆ ಅದೊಂದು ಟ್ರಿಕ್ ಅಷ್ಟೇ. ನಿಮಗೂ ಹಣ ಮಾಡೋದು ಕಷ್ಟದ ಕೆಲ್ಸ ಅನಿಸ್ಬಹುದು.ಅದೂ ಈ ಸಂಕಷ್ಟದ ಸಮಯದಲ್ಲಿ ದುಡ್ಡು ಉಳಿಸೋದೆ ದೊಡ್ಡ ಸವಾಲು. ಹೀಗಿರೋವಾಗ ಹಣ ಮಾಡೋದು ಹೇಗೆ ಎಂಬ ಪ್ರಶ್ನೆ ಕಾಡೋದು ಸಹಜ.
ಎಷ್ಟು ಹಣ ಮಾಡ್ಬೇಕು ಎಂಬುದು ಕೂಡ ವ್ಯಕ್ತಿಗತ ವಿಷಯ.ಅವರವರ ಅವಶ್ಯಕತೆ, ಜೀವನಶೈಲಿ, ಬಯಕೆಗಳಿಗೆ ಅನುಗುಣವಾಗಿ ಹಣದ ಮೊತ್ತವೂ ಬದಲಾಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಅನ್ವಯಿಸುವಂತೆ ಹೇಳೋದಾದ್ರೆ ನಿತ್ಯದ ಅವಶ್ಯಕತೆಗಳನ್ನು ಪೂರೈಸೋ ಜೊತೆ ಸಾಲವಿರದೆ ವೃದ್ಧಾಪ್ಯವನ್ನು ನೆಮ್ಮದಿಯಿಂದ ಕಳೆಯುವಷ್ಟು ಹಣವಿದ್ರೆ ಸಾಕು.ಆದ್ರೆ ಇಷ್ಟು ಹಣ ಸಂಪಾದಿಸೋದು ಹೇಗೆ?
ಮಿತವ್ಯಯವೇ ಹಿತ: ವಿದ್ಯುತ್ ಬಿಲ್ ತಗ್ಗಿಸಲು ಏನ್ ಮಾಡ್ಬಹುದು?
ಹಣವನ್ನು ಎಚ್ಚರದಿಂದ ಬಳಸಿ
ಕೆಲವರಿಗೆ ಲಕ್ಷಗಟ್ಟಲೆ ಸಂಬಳ ಬಂದ್ರೂ ತಿಂಗಳ ಕೊನೆಯಲ್ಲಿ ಅವರ ಬಳಿ ಪುಡಿಗಾಸೂ ಉಳಿಯಲ್ಲ. ಅದೇ ಕೆಲವರಿಗೆ ಕಡಿಮೆ ವೇತನವಿದ್ರೂ ಎಲ್ಲ ಜವಾಬ್ದಾರಿಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಿ ಪ್ರತಿ ತಿಂಗಳು ಒಂದಿಷ್ಟು ಹಣ ಉಳಿತಾಯ ಮಾಡುತ್ತಾರೆ. ಇದಕ್ಕೇ ಹೇಳೋದು ವ್ಯಕ್ತಿ ಎಷ್ಟು ದುಡಿಯುತ್ತಾನೆ ಅನ್ನೋದು ಮುಖ್ಯವಲ್ಲ, ಆತ ಎಷ್ಟು ಉಳಿತಾಯ ಮಾಡುತ್ತಾನೆ ಅನ್ನೋದು ಮುಖ್ಯ ಎಂದು.
ಹೀಗಾಗಿ ನಿಮ್ಮ ಆದಾಯ ಅದೆಷ್ಟೇ ಇರಲಿ, ಖರ್ಚು ಮಾಡೋವಾಗ ಪ್ರತಿ ಪೈಸೆಯನ್ನೂ ಲೆಕ್ಕಯಿಡಿ. ಹೀಗೆ ಮಾಡೋದ್ರಿಂದ ಹಣ ಎಲ್ಲೆಲ್ಲ ಖರ್ಚಾಯಿತು ಎಂಬ ಲೆಕ್ಕ ಸಿಗುತ್ತದೆ. ಜೊತೆಗೆ ಅನಗತ್ಯ ವೆಚ್ಚ ಎಲ್ಲಿ ಆಗುತ್ತಿದೆ ಮತ್ತು ಅದನ್ನು ತಪ್ಪಿಸೋದು ಹೇಗೆ ಎಂಬ ಬಗ್ಗೆ ನೀವು ಪ್ಲ್ಯಾನ್ ಮಾಡ್ಬಹುದು. ಇದ್ರಿಂದ ಪ್ರತಿ ತಿಂಗಳು ಉಳಿತಾಯ ಮಾಡಲು ಸಾಧ್ಯವಾಗೋದಷ್ಟೇ ಅಲ್ಲ, ಭವಿಷ್ಯದ ಆರ್ಥಿಕ ಸವಾಲುಗಳನ್ನು ಕೂಡ ಧೈರ್ಯದಿಂದ ಎದುರಿಸಬಹುದು.
ಖರ್ಚು ಆದಾಯವನ್ನು ಮೀರದಿರಲಿ
ಕೈಯಲ್ಲಿ ನಾಲ್ಕು ಕಾಸು ಆಡುತ್ತೆ ಎಂದಾಗ ಕೆಲವರು ಐಷಾರಾಮಿ ಜೀವನಶೈಲಿಗೆ ಹಾತೊರೆಯುತ್ತಾರೆ. ಹಿಂದೆ ಮುಂದೆ ಯೋಚಿಸದೆ ಇರೋ ಹಣವನ್ನೆಲ್ಲ ಅನಗತ್ಯ ವಿಷಯಗಳಿಗೆ ಖರ್ಚು ಮಾಡುತ್ತಾರೆ. ಆದ್ರೆ ಮುಂದೆ ಅನಿರೀಕ್ಷಿತ ಘಟನೆ ಎದುರಾದಾಗ ಕೈಯಲ್ಲಿ ಕಾಸಿಲ್ಲದೆ ತೊಂದರೆ ಅನುಭವಿಸುತ್ತಾರೆ. ಲೆಕ್ಕವಿಲ್ಲದೆ ಖರ್ಚು ಮಾಡಿದ ಪರಿಣಾಮ ಕೊನೆಗೆ ಬೀದಿಗೆ ಬಿದ್ದ ಸೆಲೆಬ್ರಿಟಿಗಳು ಅನೇಕರಿದ್ದಾರೆ. ಇದಕ್ಕೆ ಮದ್ಯ ದೊರೆ ವಿಜಯ್ ಮಲ್ಯ, ಅನಿಲ್ ಅಂಬಾನಿ ಮುಂತಾದ ಉದ್ಯಮ ದಿಗ್ಗಜರೇ ನಿದರ್ಶನ. ಆದಾಯ ಚೆನ್ನಾಗಿದೆ ಎಂದು ಲೆಕ್ಕವಿಡದೆ ಖರ್ಚು ಮಾಡಿದರೆ ಆಪತ್ತು ಗ್ಯಾರಂಟಿ. ಆದಾಯವನ್ನೂ ಮೀರಿದ ಖರ್ಚು ಹಾಗೂ ನಿಮ್ಮ ಹಣವನ್ನು ಹೆಚ್ಚುಗೊಳಿಸದ ಹೂಡಿಕೆ ಎರಡೂ ಭವಿಷ್ಯದಲ್ಲಿ ನಿಮ್ಮನ್ನು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಸುತ್ತವೆ ಎಂಬ ಸರಳ ಹಣಕಾಸಿನ ನಿಯಮವನ್ನು ಸದಾ ನೆನಪಿಟ್ಟುಕೊಳ್ಳಿ.
ಬ್ಯಾಂಕ್‌ನಲ್ಲಿ ಚಿನ್ನವಿಟ್ಟು ಬಡ್ಡಿ ಗಳಿಸಿ, ಹೇಗೆ ಅಂತೀರಾ?
ವೃದ್ಧಾಪ್ಯದಲ್ಲಿ ರಿಸ್ಕ್ ತೆಗೆದುಕೊಳ್ಳಬೇಡಿ
ನಿವೃತ್ತಿ ಬಳಿಕ ಹಣಕಾಸಿಗೆ ಸಂಬಂಧಿಸಿ ರಿಸ್ಕ್ ತೆಗೆದುಕೊಳ್ಳೋದು ಒಳ್ಲೆಯದ್ದಲ್ಲ. ಅಮಿತಾಭ್ ಬಚ್ಚನ್ ಸಿನಿಮಾ ನಿರ್ಮಾಣ ಹಾಗೂ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಸ್ಥಾಪಿಸಿದಾಗ ಅವರಾಗಲೇ ನಿವೃತ್ತಿ ವಯಸ್ಸು ತಲುಪಿದ್ದರು. ಕಂಪನಿಗಾಗಿ ಕೈಯಲ್ಲಿದ್ದ ಹಣವನ್ನೆಲ್ಲ ಕಳೆದುಕೊಂಡರು, ಬ್ಯಾಂಕ್ ಸಾಲಗಳನ್ನು ಪಡೆದುಕೊಂಡರು, ಕೊನೆಯಲ್ಲಿ ಸಾಲ ತೀರಿಸಲಾಗದೆ ದಿವಾಳಿಯಾದರು. ಈ ಸಮಯದಲ್ಲಿ ಅವರಿಗೆ 57 ವರ್ಷ, ಕೈಯಲ್ಲಿ ಕಾಸೂ ಇಲ್ಲ, ಯಾವುದೇ ಸಿನಿಮಾಗಳು ಇಲ್ಲ. ಆಗ ಅವರು ಮತ್ತೆ ತಮ್ಮ ಸಿನಿಮಾಗಳು ಹಾಗೂ ಜಾಹೀರಾತುಗಳಿಗೆ ವಾಪಸ್ ಆದರು.
ಮತ್ತೆ ವೃತ್ತಿ ಬದುಕನ್ನು ಹೊಸದಾಗಿ ಕಟ್ಟಿಕೊಂಡರು, ಎಲ್ಲ ಸಾಲಗಳನ್ನು ಪಾವತಿಸಿದರು. ಇಂದು ಅವರ ಆಸ್ತಿ ಮೌಲ್ಯ ಸುಮಾರು 2,866 ಕೋಟಿ ರೂ. ನಿವೃತ್ತಿ ವಯಸ್ಸಿನಲ್ಲಿ ಹಣಕಾಸಿನ ವಿಚಾರದಲ್ಲಿ ಅನಗತ್ಯ ರಿಸ್ಕ್ ತೆಗೆದುಕೊಳ್ಳಬಾರದು. ಹಾಗೆಯೇ ಆರ್ಥಿಕ ಭದ್ರತೆಯಿಲ್ಲದೆ, ತಜ್ಞರ ಸಲಹೆ ಪಡೆದುಕೊಳ್ಳದೆ ಯಾವುದೇ ಹೂಡಿಕೆಗೆ ಮುಂದಾಗಬಾರದು ಎಂಬುದಕ್ಕೆ ಅಮಿತಾಭ್ ಬದುಕಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಹಾಗಂತ ನಿವೃತ್ತಿ ಬಳಿಕ ಹೂಡಿಕೆ ಮಾಡಬಾರದು ಅಂದೇನಿಲ್ಲ, ಉತ್ತಮ ರಿಟರ್ನ್ಸ್ ನೀಡೋ ಯೋಜನೆಗಳನ್ನು ತಜ್ಞರ ಸಲಹೆ ಮೇರೆಗೆ ಆರಿಸಿಕೊಂಡು ಹೂಡಿಕೆ ಮಾಡೋದು ಉತ್ತಮ.
ಸಾಲ ಬೆಳೆಯಲು ಬಿಡಬಿಡಿ, ಬೇಗ ತೀರಿಸಿ
ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಎಂಬ ಮಾತೇ ಇದೆ. ಹಾಗಂತ ಸಾಲ ಮಾಡಿ ತೀರಿಸೋದನ್ನು ಮರೆತು ಅನಗತ್ಯ ವಿಷಯಗಳಿಗೆ ಹಣ ಖರ್ಚು ಮಾಡಿದ್ರೆ, ಮುಂದೆ ಅದೇ ಸಾಲದ ಸೂಲ ನಿಮ್ಮ ಸಂಪತ್ತನ್ನು ನುಂಗಿ ನೀರು ಕುಡಿಯುತ್ತದೆ. ಸಾಲವನ್ನು ತೀರಿಸಲು ಹೆಚ್ಚು ಸಮಯ ತೆಗೆದುಕೊಂಡಷ್ಟೂ ಅದು ಬೆಳೆಯುತ್ತ ಹೋಗುತ್ತದೆ. ಬಡ್ಡಿ ಸೇರಿ ಸಾಲದ ಮೊತ್ತವನ್ನು ಹೆಚ್ಚಿಸುತ್ತದೆ. ಹೀಗಾಗಿ ಸಾಲ ತೀರಿಸಲು ನಿಧಾನ ಮಾಡಿದಷ್ಟೂ ಆರ್ಥಿಕ ಹೊರೆ ಹೆಚ್ಚುತ್ತದೆ.
ಆನ್‌ಲೈನ್‌ನಲ್ಲೇ ಪರ್ಸನಲ್ ಲೋನ್ ಸೌಲಭ್ಯ
ಚಟಗಳಿಗೆ ದಾಸರಾಗಿ ಸಂಪತ್ತು ಕಳೆದುಕೊಳ್ಳಬೇಡಿ
ಚಟ ಅನ್ನೋದು ಮನುಷ್ಯನನ್ನು ನಾನಾ ರೀತಿಯಲ್ಲಿ ನಾಶ ಮಾಡುತ್ತದೆ. ಆರ್ಥಿಕವಾಗಿಯೂ ಆತ ದಿವಾಳಿಯಾಗಲು ಇದೇ ಮೂಲವಾಗಬಹುದು. ವಿಪರೀತ ಮದ್ಯಪಾನ, ಡ್ರಗ್ಸ್‌ನಂತಹ ಚಟಗಳಷ್ಟೇ ಅಲ್ಲ, ಐಷಾರಾಮಿ ಜೀವನದ ಬಯಕೆ, ಕಾರ್ ಸೇರಿದಂತೆ ಯಾವುದೇ ರಿಟರ್ನ್ಸ್ ನೀಡದ ವಸ್ತುಗಳಿಗೆ ಖರ್ಚು ಮಾಡೋದ್ರಿಂದ ಸಂಪತ್ತು ಕರಗುತ್ತದೆ.
ನಷ್ಟವುಂಟು ಮಾಡೋ ಹೂಡಿಕೆ ಬೇಡ
ನೀವು ಯಾವುದೋ ಒಂದು ಉದ್ಯಮದಲ್ಲಿ ಹೂಡಿಕೆ ಮಾಡುತ್ತೀರಿ. ಆದ್ರೆ ಕ್ರಮೇಣ ನಿಮಗೆ ನಷ್ಟವುಂಟಾಗಲು ಪ್ರಾರಂಭವಾಗುತ್ತದೆ. ಇಂಥ ಸಮಯದಲ್ಲಿ ನೀವು ಜಾಣತನದಿಂದ ಆ ಉದ್ಯಮವನ್ನು ನಿಲ್ಲಿಸಬೇಕು ಇಲ್ಲವೆ ಅದ್ರಿಂದ ಹೊರಬರಬೇಕು. ನಷ್ಟವಾಗುತ್ತಿದೆ ಎಂಬುದು ತಿಳಿದ ಮೇಲೆಯೂ ಅಂಥ ಕ್ಷೇತ್ರ ಅಥವಾ ಉದ್ಯಮದ ಮೇಲೆ ಹೂಡಿಕೆ ಮಾಡಿದ್ರೆ ತೊಂದರೆ ಕಟ್ಟಿಟ್ಟಬುತ್ತಿ.