ಕ್ರೆಡಿಟ್ ಸ್ಯೂಸ್ ಎಟಿ-1 ಬಾಂಡ್‌ಗಳ ಮಾರಾಟದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ HDFC ಬ್ಯಾಂಕ್ ತನ್ನ 3 ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಿದೆ. ಎನ್‌ಆರ್‌ಐ ಗ್ರಾಹಕರಿಗೆ ಶಾಶ್ವತ ಬಾಂಡ್‌ಗಳನ್ನು 'ಫಿಕ್ಸೆಡ್ ಮೆಚ್ಯೂರಿಟಿ' ಎಂದು ಸುಳ್ಳು ಹೇಳಿ ಮಾರಾಟ ಮಾಡಿರುವ ಆರೋಪ ಅವರ ಮೇಲಿದೆ.

ಮುಂಬೈ (ಮಾ.20): ದೇಶದ ಅತಿದೊಡ್ಡ ಖಾಸಗಿ ವಲಯದ ಸಾಲದಾತ ಸಂಸ್ಥೆಯಾದ ಎಚ್‌ಡಿಎಫ್‌ಸಿ (HDFC) ಬ್ಯಾಂಕ್, 'ಕ್ರೆಡಿಟ್ ಸ್ಯೂಸ್' (Credit Suisse) ಸಂಸ್ಥೆಯ ಎಟಿ-1 (AT1) ಬಾಂಡ್‌ಗಳ ಮಾರಾಟದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನ್ನ ಮೂವರು ಹಿರಿಯ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿದೆ. ಬ್ಯಾಂಕಿನ ಆಂತರಿಕ ತನಿಖೆಯ ನಂತರ ಬ್ರ್ಯಾಂಚ್‌ ಬ್ಯಾಂಕಿಂಗ್ ವಿಭಾಗದ ಗ್ರೂಪ್ ಹೆಡ್ ಸಂಪತ್ ಕುಮಾರ್, ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ (ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಎನ್‌ಆರ್‌ಐ ಆನ್‌ಶೋರ್ ಬಿಸಿನೆಸ್) ಹರ್ಷ್ ಗುಪ್ತಾ ಹಾಗೂ ಸೀನಿಯರ್ ವೈಸ್ ಪ್ರೆಸಿಡೆಂಟ್ ಪಾಯಲ್ ಮಂಧ್ಯನ್ ಅವರನ್ನು ಕೆಲಸದಿಂದ ಕಿತ್ತುಹಾಕಿದೆ.

ದುಬೈ ಶಾಖೆಯಲ್ಲಿ ನಡೆದ ಈ ಹೂಡಿಕೆ ವಂಚನೆಯ ತನಿಖೆಯ ವರದಿ ಬರುವವರೆಗೆ ಹರ್ಷ್ ಗುಪ್ತಾ ಮತ್ತು ಪಾಯಲ್ ಮಂಧ್ಯನ್ ಅವರನ್ನು ಕಳೆದ ವರ್ಷದ ಜನವರಿಯಲ್ಲೇ ಅಮಾನತುಗೊಳಿಸಲಾಗಿತ್ತು.

ಬ್ಯಾಂಕ್ ಮೂಲಗಳು ಹೇಳುವುದೇನು?

ಹೆಸರು ಹೇಳಲಿಚ್ಛಿಸದ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, "ಮೂಲತಃ ಅಲ್ಲಿ ಏನೇ ನಡೆದಿದ್ದರೂ ಅದು ಸಂಪತ್ ಕುಮಾರ್ ಅವರ ಉಸ್ತುವಾರಿಯಲ್ಲಿ ನಡೆದಿತ್ತು. ಅವರು ನೇರವಾಗಿ ವಂಚನೆಯಲ್ಲಿ ಭಾಗಿಯಾಗದಿದ್ದರೂ, ಅವರ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು. ಇನ್ನು ಹರ್ಷ್ ಮತ್ತು ಪಾಯಲ್ ಈ ವಂಚನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು," ಎಂದು ತಿಳಿಸಿದ್ದಾರೆ.

ವಂಚನೆ ನಡೆದಿದ್ದು ಹೇಗೆ?

ಹೆಚ್ಚಾಗಿ ಅನಿವಾಸಿ ಭಾರತೀಯ (NRI) ಮೂಲದವರೇ ಆಗಿರುವ ಎಟಿ-1 ಬಾಂಡ್ ಖರೀದಿದಾರರು ಬ್ಯಾಂಕಿನ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಭಾರತದಲ್ಲಿದ್ದ ತಮ್ಮ ವಿದೇಶಿ ಕರೆನ್ಸಿ ಅನಿವಾಸಿ (FCNR) ಠೇವಣಿಗಳನ್ನು ಬಹ್ರೇನ್‌ಗೆ ವರ್ಗಾಯಿಸುವಂತೆ ಅಧಿಕಾರಿಗಳು ತಮ್ಮ ದಾರಿ ತಪ್ಪಿಸಿದ್ದರು. "ಬಹ್ರೇನ್ ಶಾಖೆಯಲ್ಲಿ ನಮಗೆ ಸ್ಥಿರ ಅವಧಿಯ (Fixed Maturity) ಮತ್ತು ಖಚಿತ ಲಾಭ ಬರುವ ಬಾಂಡ್‌ಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ನಂಬಿಸಿದರು. ನಮ್ಮಿಂದ ಖಾಲಿ ಪೇಪರ್‌ಗಳ ಮೇಲೆ ಸಹಿ ಪಡೆದಿದ್ದರು," ಎಂದು ಬಾಂಡ್ ಹೊಂದಿರುವವರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಕ್ರೆಡಿಟ್ ಸ್ಯೂಸ್‌ನ ಎಟಿ-1 ಬಾಂಡ್‌ಗಳು ಶಾಶ್ವತ (Perpetual) ಬಾಂಡ್‌ಗಳಾಗಿದ್ದರೂ, ಬ್ಯಾಂಕ್ ಅಧಿಕಾರಿಗಳು ಇವುಗಳನ್ನು 'ಫಿಕ್ಸೆಡ್ ಮೆಚ್ಯೂರಿಟಿ' ಬಾಂಡ್‌ಗಳೆಂದು ಹೇಳಿ ಸುಳ್ಳು ಮಾರಾಟ ಮಾಡಿದ್ದರು.

ಕ್ರೆಡಿಟ್ ಸ್ಯೂಸ್ ಬಿಕ್ಕಟ್ಟು

ಕ್ರೆಡಿಟ್ ಸ್ಯೂಸ್ ಸಂಸ್ಥೆಯ ರಕ್ಷಣಾ ಪ್ಯಾಕೇಜ್‌ನ ಭಾಗವಾಗಿ ಸುಮಾರು 20 ಬಿಲಿಯನ್ ಡಾಲರ್ ಮೌಲ್ಯದ ಎಟಿ-1 ಬಾಂಡ್‌ಗಳನ್ನು ಆರಂಭದಲ್ಲಿ ರೈಟ್‌ ಆಫ್‌ ಮಾಡಲಾಗಿತ್ತು. ಆದರೆ, ಸ್ವಿಸ್ ಫೆಡರಲ್ ಅಡ್ಮಿನಿಸ್ಟ್ರೇಟಿವ್ ಕೋರ್ಟ್ ಈ ಕ್ರಮವನ್ನು 'ಕಾನೂನುಬಾಹಿರ' ಎಂದು ತೀರ್ಪು ನೀಡಿದೆ. ಸದ್ಯ ಈ ತೀರ್ಪಿನ ವಿರುದ್ಧ ಫಿನ್ಮಾ (FINMA) ಮತ್ತು ಯುಬಿಎಸ್ (UBS) ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿವೆ. ಈ ಅವ್ಯವಹಾರದ ಹಿನ್ನೆಲೆಯಲ್ಲಿ ದುಬೈ ಹಣಕಾಸು ಸೇವೆಗಳ ಪ್ರಾಧಿಕಾರ (DFSA) ಎಚ್‌ಡಿಎಫ್‌ಸಿ ಬ್ಯಾಂಕ್‌ನ ದುಬೈ ಶಾಖೆಯಿಂದ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳದಂತೆ ನಿರ್ಬಂಧ ಹೇರಿದೆ. ಈ ಕುರಿತು ಪ್ರಾಧಿಕಾರವು ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.