ನೀವು ಎಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಾ? ಅಪ್ಪಿತಪ್ಪಿಯೂ ಇಂಥ ಲಿಂಕ್ಸ್ ಮೇಲೆ ಕ್ಲಿಕ್ ಮಾಡ್ಬೇಡಿ!
ಎಚ್ ಡಿಎಫ್ ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ನಕಲಿ ಸಂದೇಶಗಳ ಬಗ್ಗೆ ಎಚ್ಚರಿಕೆ ನೀಡಿದೆ. ಎಚ್ ಡಿಎಫ್ ಸಿ ಬ್ಯಾಂಕ್ ನ ಅನೇಕ ಗ್ರಾಹಕರಿಗೆ ಕೆವೈಸಿ ಅಪ್ಡೇಟ್ ಮಾಡದಿದ್ರೆ ಖಾತೆ ಕ್ಲೋಸ್ ಮಾಡಲಾಗುವುದು ಎಂಬ ಸಂದೇಶ ಬಂದಿದ್ದು, ಇದು ನಕಲಿಯಾಗಿದ್ದು, ಎಚ್ಚರ ವಹಿಸುವಂತೆ ಬ್ಯಾಂಕ್ ತಿಳಿಸಿದೆ.
ನವದೆಹಲಿ (ಮಾ.7): ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಹೆಸರಿನಲ್ಲಿ ಕೆವೈಸಿ ಅಪ್ಡೇಟ್ ಮಾಡುವಂತೆ ಮೊಬೈಲ್ ಗಳಿಗೆ ಆಗಾಗ ಸಂದೇಶ ಬರುತ್ತಿರುತ್ತದೆ. ಈ ಸಂದೇಶದ ಜೊತೆಗೆ ಒಂದು ಲಿಂಕ್ ಕೂಡ ಇರುತ್ತದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ಬ್ಯಾಂಕ್ ವೆಬ್ ಸೈಟನ್ನೇ ಹೋಲುವ ನಕಲಿ ವೆಬ್ ಸೈಟ್ ತೆರೆದುಕೊಳ್ಳುತ್ತದೆ. ಇದರಲ್ಲಿ ಕೇಳಿರುವ ಮಾಹಿತಿಗಳನ್ನು ನೀವು ಭರ್ತಿ ಮಾಡಿದ ತಕ್ಷಣ ವಂಚಕರು ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ. ಹೀಗಾಗಲೇ ಎಸ್ ಬಿಐ ಸೇರಿದಂತೆ ಅನೇಕ ಬ್ಯಾಂಕ್ ಗ್ರಾಹಕರಿಗೆ ಇಂಥ ಸಂದೇಶಗಳು ಬಂದಿವೆ. ಈ ಬಗ್ಗೆ ಬ್ಯಾಂಕ್ ಗಳು ಕೂಡ ಆಗಾಗ ಎಚ್ಚರಿಕೆ ನೀಡುತ್ತಿವೆ. ಈಗ ಎಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಈ ನಕಲಿ ಸಂದೇಶಗಳ ಹಾವಳಿ ಹೆಚ್ಚಿದೆ. ಕೆವೈಸಿ ಅಪ್ಡೇಟ್ ಮಾಡದಿದ್ರೆ ಬ್ಯಾಂಕ್ ಖಾತೆ ಕ್ಲೋಸ್ ಮಾಡೋದಾಗಿ ಎಚ್ ಡಿಎಫ್ ಸಿ ಬ್ಯಾಂಕಿನ ಅನೇಕ ಗ್ರಾಹಕರ ಮೊಬೈಲ್ ಗೆ ಸಂದೇಶಗಳು ಬಂದಿವೆ. ಆದರೆ, ಈ ಸಂದೇಶಗಳು ನಕಲಿಯಾಗಿದ್ದು, ಈ ಬಗ್ಗೆ ಜಾಗ್ರತೆ ವಹಿಸುವಂತೆ ಎಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಕೆವೈಸಿ ಅಥವಾ ಪ್ಯಾನ್ ಅಪ್ಡೇಟ್ ಮಾಡುವಂತೆ ಎಚ್ ಡಿಎಫ್ ಸಿ ಬ್ಯಾಂಕ್ ಯಾವ ಗ್ರಾಹಕರಿಗೂ ಸಂದೇಶ ಕಳುಹಿಸಿಲ್ಲ ಎಂದು ಎಚ್ಚರಿಸಿದೆ.
ಎಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಈ ಸಂದೇಶದ ಜೊತೆಗೆ ಲಿಂಕ್ ಕೂಡ ಬಂದಿದ್ದು, ಈ ಲಿಂಕ್ ಕ್ಲಿಕಿಸುವ ಮೂಲಕ ವೆಬ್ ಸೈಟ್ ನಲ್ಲಿ ಮಾಹಿತಿ ಭರ್ತಿ ಮಾಡುವಂತೆ ಕೋರಲಾಗಿದೆ. ಈ ಲಿಂಕ್ ಮೇಲೆ ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಿ ವೆಬ್ ಸೈಟ್ ನಲ್ಲಿ ಮಾಹಿತಿ ಹಂಚಿಕೊಳ್ಳಬೇಡಿ ಎಂದು ತಿಳಿಸಲಾಗಿದೆ. ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುನ್ನ ಅದರ ಮೂಲವನ್ನು ಸೂಕ್ತವಾಗಿ ಚೆಕ್ ಮಾಡೋದು ಅಗತ್ಯ ಎಂದು ಎಚ್ ಡಿಎಫ್ ಸಿ ತಿಳಿಸಿದೆ. ಹಾಗೆಯೇ ಗ್ರಾಹಕರು ಅಡ್ರೆಸ್ ಬಾರ್ ನಲ್ಲಿ ಸಮರ್ಪಕವಾದ URL ಟೈಪ್ ಮಾಡುವ ಮೂಲಕ ಲಾಗಿನ್ ಆಗುವಂತೆ ಕೋರಿದೆ. ಇನ್ನು ಬ್ಯಾಂಕಿನ ಅಧಿಕೃತ ಲಾಗಿನ್ ಪೇಜ್ ನಲ್ಲಿ ಮಾತ್ರ ಬಳಕೆದಾರರ ಐಡಿ ಹಾಗೂ ಪಾಸ್ ವರ್ಡ್ ಬಳಸುವಂತೆ ತಿಳಿಸಿದೆ. ಲಾಗಿನ್ ಪೇಜ್ ನ ಯುಆರ್ ಎಲ್ ‘https://' ಪ್ರಾರಂಭವಾಗಿರೋದನ್ನು ಖಚಿತಪಡಿಸಿಕೊಳ್ಳುವಂತೆ ಗ್ರಾಹಕರಿಗೆ ತಿಳಿಸಿದೆ.
ಆನ್ ಲೈನ್ ವಂಚನೆಗಿದೆ ಬಹುಮುಖ; ವಂಚಕರು ನಿಮ್ಮನ್ನು ಹೇಗೆಲ್ಲ ವಂಚಿಸ್ಬಹುದು ಗೊತ್ತಾ?
ಗ್ರಾಹಕರು ಆಗಾಗ ಬ್ಯಾಂಕಿನ ಕ್ರೆಡಿಟ್, ಡೆಬಿಟ್ ಕಾರ್ಡ ಸ್ಟೇಟ್ಮೆಂಟ್ ಚೆಕ್ ಮಾಡುವಂತೆ ಎಚ್ ಡಿಎಫ್ ಸಿ ಕೋರಿದೆ. ಇದ್ರಿಂದ ಎಲ್ಲ ವಹಿವಾಟುಗಳು ಅಧಿಕೃತವಾಗಿ ನಡೆದಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ಕಾಯಂ ಖಾತೆ ಸಂಖ್ಯೆ ಅಥವಾ ಪ್ಯಾನ್ ಸಂಖ್ಯೆಯನ್ನು ಅಪ್ಡೇಟ್ ಮಾಡದಿದ್ರೆ ಖಾತೆಗಳನ್ನು ಬ್ಲಾಕ್ ಅಥವಾ ರದ್ದು ಮಾಡಲಾಗುವುದು ಎಂದು ಅನೇಕ ಗ್ರಾಹಕರಿಗೆ ಸಂದೇಶಗಳು ಬಂದಿರುವ ಬಗ್ಗೆ ಗ್ರಾಹಕರು ಬ್ಯಾಂಕಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಈ ಎಚ್ಚರಿಕೆಯನ್ನು ಗ್ರಾಹಕರಿಗೆ ನೀಡಿದೆ.
ಸಾವರಿನ್ ಗೋಲ್ಡ್ ಬಾಂಡ್ ನಾಲ್ಕನೇ ಸರಣಿ ಇಂದಿನಿಂದ ಪ್ರಾರಂಭ; ಖರೀದಿ ಹೇಗೆ? ಇಲ್ಲಿದೆ ಮಾಹಿತಿ
ಗ್ರಾಹಕರು ವಂಚಕರಿಂದ ತಮ್ಮನ್ನು ರಕ್ಷಿಸಿಕೊಳ್ಳುವಂತೆ ಎಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಲ್ಲಿ ಮನವಿ ಮಾಡಿದೆ. ಯಾವುದೇ ಸಂದೇಶಕ್ಕೆ ಪ್ರತಿಕ್ರಿಯಿಸುವ ಮುನ್ನ ಅದು ಎಚ್ ಡಿಎಫ್ ಸಿ ಬ್ಯಾಂಕಿನಿಂದ ಬಂದಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದೆ. ಎಚ್ ಡಿಎಫ್ ಸಿ ಬ್ಯಾಂಕಿನ ಅಧಿಕೃತ ಐಡಿ HDFCBK/HDFCBN ಹಾಗೂ ಲಿಂಕ್ಸ್ hdfcbk.io.ಪ್ರಾರಂಭವಾಗುತ್ತವೆ ಎಂದು ಬ್ಯಾಂಕ್ ತಿಳಿಸಿದೆ. ಇನ್ನು ಯಾವುದೇ ಅನುಮಾನಾಸ್ಪದ ಸಂದೇಶಗಳು ಬಂದರೆ ಅಥವಾ ವಹಿವಾಟುಗಳು ನಡೆದಿದ್ರೆ ತಕ್ಷಣ ಮಾಹಿತಿ ನೀಡುವಂತೆ ಎಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರನ್ನು ಕೋರಿದೆ.