ಕ್ರೆಡಿಟ್, ಡೆಬಿಟ್ ಕಾರ್ಡ್ ಗೆ ಸಂಬಂಧಿಸಿದ ನಿಯಮಗಳಲ್ಲಿ ಅಕ್ಟೋಬರ್ 1ರಿಂದ ಬದಲಾವಣೆಗಳಾಗಿವೆ. ಹೊಸ ಡೆಬಿಟ್, ಕ್ರೆಡಿಟ್ ಅಥವಾ ಪ್ರೀಪೇಯ್ಡ್ ಕಾರ್ಡ್ ಗಳನ್ನು ಕೊಳ್ಳುವವರಿಗೆ ಕಾರ್ಡ್ ನೆಟ್ ವರ್ಕ್ ಗಳನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗಿದೆ.
ನವದೆಹಲಿ (ಅ.2): ಕ್ರೆಡಿಟ್, ಡೆಬಿಟ್ ಕಾರ್ಡ್ ಗೆ ಸಂಬಂಧಿಸಿದ ನಿಯಮಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಅಕ್ಟೋಬರ್ 1, 2023ರಿಂದ ಬದಲಾವಣೆಗಳನ್ನು ತಂದಿದೆ. ಹೊಸ ಡೆಬಿಟ್, ಕ್ರೆಡಿಟ್ ಅಥವಾ ಪ್ರೀಪೇಯ್ಡ್ ಕಾರ್ಡ್ ಗಳನ್ನು ಕೊಳ್ಳುವವರಿಗೆ ಕಾರ್ಡ್ ನೆಟ್ ವರ್ಕ್ ಗಳನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗಿದೆ. ಈ ಹಿಂದೆ ಗ್ರಾಹಕರು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಕಾರ್ಡ್ ವಿತರಿಸುವ ಸಂಸ್ಥೆ ನೆಟ್ ವರ್ಕ್ ಆಯ್ಕೆಯನ್ನು ಮಾಡುತ್ತಿತ್ತು. ಅಂದರೆ ಕಾರ್ಡ್ ಗೆ ಅರ್ಜಿ ಸಲ್ಲಿಸೋರಿಗೆ ತಮ್ಮ ಕಾರ್ಡ್ ನೆಟ್ ವರ್ಕ್ ಆಯ್ಕೆ ಮಾಡುವ ಅವಕಾಶವಿರಲಿಲ್ಲ. ಬಹುತೇಕ ಬ್ಯಾಂಕ್ ಗಳು ವೀಸಾ, ಮಾಸ್ಟರ್ ಕಾರ್ಡ್, ರುಪೇ ಇತ್ಯಾದಿ ಕಾರ್ಡ್ ನೆಟ್ ವರ್ಕ್ ಗಳ ಜೊತೆಗೆ ಒಪ್ಪಂದಗಳನ್ನು ಹೊಂದಿವೆ. ಹಾಗೆಯೇ ಈ ಒಪ್ಪಂದಗಳ ಆಧಾರದಲ್ಲಿ ಕಾರ್ಡ್ ಗಳನ್ನು ನೀಡುತ್ತವೆ ಕೂಡ. ಭಾರತ ಪ್ರಸ್ತುತ 5ಕಾರ್ಡ್ ನೆಟ್ ವರ್ಕ್ ಗಳನ್ನು ಹೊಂದಿದೆ. ಅವುಗಳೆಂದರೆ ಅಮೆರಿಕನ್ ಬ್ಯಾಂಕಿಂಗ್ ಕಾರ್ಪೋರೇಷನ್, ಡಿನರ್ಸ್ ಕ್ಲಬ್ ಇಂಟರ್ ನ್ಯಾಷನಲ್ ಲಿಮಿಟೆಡ್, ಮಾಸ್ಟರ್ ಕಾರ್ಡ್ ಏಷ್ಯಾ/ಪೆಸಿಫಿಕ್ ಪ್ರೈವೇಟ್ ಲಿಮಿಟೆಡ್, ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ-ರುಪೇ ಹಾಗೂ ವೀಸಾ ವರ್ಲ್ಡ್ ವೈಡ್ ಲಿಮಿಟೆಡ್.
ಎರಡು ಹೊಸ ನಿಯಮಳು ಹೀಗಿವೆ:
1.2023ರ ಅಕ್ಟೋಬರ್ 1ರಿಂದ ಕಾರ್ಡ್ ವಿತರಕರು ಒಂದಕ್ಕಿಂತ ಹೆಚ್ಚಿನ ಕಾರ್ಡ್ ನೆಟ್ ವರ್ಕ್ ಗಳ ಮೂಲಕ ಕಾರ್ಡ್ ಗಳನ್ನು ವಿತರಿಸಬೇಕು.
2. ಅರ್ಹ ಗ್ರಾಹಕರಿಗೆ ತಮ್ಮ ಆಯ್ಕೆಯ ಕಾರ್ಡ್ ನೆಟ್ ವರ್ಕ್ ಆರಿಸಿಕೊಳ್ಳಲು ಕಾರ್ಡ್ ವಿತರಿಸುವಾಗ ಅಥವಾ ನಂತರದ ದಿನಗಳಲ್ಲಿ ಅವಕಾಶ ನೀಡಲಾಗುತ್ತದೆ.
2,000ರೂ. ನೋಟು ಬದಲಾವಣೆ ಗಡುವು ಅಕ್ಟೋಬರ್ 7ರ ತನಕ ವಿಸ್ತರಣೆ;ಆ ಬಳಿಕ ಏನಾಗುತ್ತದೆ? ಆರ್ ಬಿಐ ಮಾಹಿತಿ ಇಲ್ಲಿದೆ
ಈ ಕಾರ್ಡ್ ನೆಟ್ ವರ್ಕ್ ಆಯ್ಕೆಯನ್ನು ಹೊಸ ಹಾಗೂ ಈಗಾಗಲೇ ಇರುವ ಗ್ರಾಹಕರು ಬಳಸಿಕೊಳ್ಳಬಹುದು. ಪ್ರಸ್ತುತವಿರುವ ಗ್ರಾಹಕರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನವೀಕರಿಸುವಾಗ ತಮ್ಮ ನೆಚ್ಚಿನ ನೆಟ್ ವರ್ಕ್ ಆಯ್ಕೆ ಮಾಡಬಹುದು. ಆರ್ ಬಿಐ ಈ ಕರಡು ಪ್ರಸ್ತಾವನೆ ಬಗ್ಗೆ ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು ಸೇರಿದಂತೆ ಕಾರ್ಡ್ ವಿತರಕರಿಗೆ 2023ರ ಜುಲೈ 5ರಂದು ಹೊರಡಿಸಿರುವ ಸುತ್ತೋಲೆ ಮೂಲಕ ಮಾಹಿತಿ ನೀಡಿತ್ತು.
ಈ ಕರಡು ಪ್ರತಿಯಲ್ಲಿ ಕಾರ್ಡ್ ನೆಟ್ ವರ್ಕ್ ಆಯ್ಕೆಯನ್ನು ಗ್ರಾಹಕರಿಗೆ ಏಕೆ ನೀಡಲಾಗುತ್ತಿದೆ ಎಂಬ ಬಗ್ಗೆ ಆರ್ ಬಿಐ ಸ್ಪಷ್ಟನೆ ನೀಡಿತ್ತು. ಕಾರ್ಡ್ ನೆಟ್ ವರ್ಕ್ ಆಯ್ಕೆಯನ್ನು ಪ್ರಸ್ತುತ ಕಾರ್ಡ್ ವಿತರಕರು ಮಾಡುತ್ತಾರೆ. ಈ ಸಂಬಂಧ ವಿತರಕರು ಹಾಗೂ ಕಾರ್ಡ್ ನೆಟ್ ವರ್ಕ್ ಗಳ ನಡುವೆ ದ್ವಿಪಕ್ಷೀಯ ಒಪ್ಪಂದ ಕೂಡ ಆಗಿರುತ್ತದೆ ಎಂದು ಆರ್ ಬಿಐ ತಿಳಿಸಿತ್ತು. ಅಲ್ಲದೆ, ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ಉದ್ದೇಶದಿಂದ ಇಂಥ ನಿರ್ಧಾರ ಕೈಗೊಂಡಿರೋದಾಗಿ ಕೂಡ ಆರ್ ಬಿಐ ತಿಳಿಸಿತ್ತು.
ಈ ಒಂದು ಕೆಲಸ ಮಾಡದಿದ್ರೆ ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆ ಸಾಧ್ಯವಿಲ್ಲ!
ತಗ್ಗಿದ ಡೆಬಿಟ್ ಕಾರ್ಡ್ ಬಳಕೆ
2023ರ ಮೊದಲಾರ್ಧ ಅವಧಿಯಲ್ಲಿ ಡೆಬಿಟ್ ಕಾರ್ಡ್ ವಹಿವಾಟುಗಳ ಪ್ರಮಾಣದಲ್ಲಿ ಇಳಿಕೆಯಾಗಿದ್ದರೆ, ಕ್ರೆಡಿಟ್ ಕಾರ್ಡ್ ವಹಿವಾಟುಗಳಲ್ಲಿ ಏರಿಕೆ ಕಂಡುಬಂದಿದೆ. ಈ ಅವಧಿಯಲ್ಲಿ ಡೆಬಿಟ್ ಕಾರ್ಡ್ ವಹಿವಾಟುಗಳು 1.379 ಬಿಲಿಯನ್ ಗೆ ಇಳಿಕೆಯಾಗಿವೆ. ಇದು 2022ರ ಇದೇ ಅವಧಿಗೆ ಹೋಲಿಸಿದರೆ ಶೇ.28ರಷ್ಟು ಇಳಿಕೆಯಾಗಿದೆ. ಇನ್ನೊಂದೆಡೆ ವರ್ಲ್ಡ್ ಲೈನ್ ನೀಡಿರುವ ವರದಿ ಅನ್ವಯ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಪ್ರಮಾಣದಲ್ಲಿ 1.550 ಬಿಲಿಯನ್ ಏರಿಕೆ ಕಂಡುಬಂದಿದೆ. ಇದು 2022ರ ಮೊದಲಾರ್ಧಕ್ಕೆ ಹೋಲಿಸಿದರೆ ಶೇ.19.6ರಷ್ಟು ಏರಿಕೆಯಾಗಿದೆ.
