Asianet Suvarna News Asianet Suvarna News

ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ? ಹೀಗಾದ್ರೆ ಪೆಟ್ರೋಲ್ ದರ 60ರು. ಗೆ ಇಳಿಕೆ?

* ಪೆಟ್ರೋಲ್‌, ಡೀಸೆಲ್‌ ಜಿಎಸ್‌ಟಿ ವ್ಯಾಪ್ತಿಗೆ?

* ನಾಡಿದ್ದು ಜಿಎಸ್‌ಟಿ ಸಭೆಯಲ್ಲಿ ಮಹತ್ವದ ಚರ್ಚೆ ಸಾಧ್ಯತೆ

* ಜಿಎಸ್ಟಿವ್ಯಾಪ್ತಿಗೆ ತರಲು 3ನೇ 2 ರಾಜ್ಯಗಳ ಬೆಂಬಲ ಬೇಕು

GST Council may discuss proposal to include diesel petrol on Friday pod
Author
Bangalore, First Published Sep 15, 2021, 8:38 AM IST
  • Facebook
  • Twitter
  • Whatsapp

ನವದೆಹಲಿ(ಸೆ.15): ಪೆಟ್ರೋಲ್‌ ಬೆಲೆ ದೇಶದಲ್ಲಿ 100 ರು. ದಾಟಿರುವ ಹಾಗೂ ಡೀಸೆಲ್‌ ಬೆಲೆ ಶತಕದ ಅಂಚಿಗೆ ತಲುಪುತ್ತಿರುವ ನಡುವೆಯೇ, ತೈಲೋತ್ಪನ್ನಗಳನ್ನು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಅಡಿ ತರುವ ಮಹತ್ವದ ಪ್ರಸ್ತಾಪವು ಜಿಎಸ್‌ಟಿ ಮಂಡಳಿಯ ಮುಂದೆ ಬಂದಿದೆ. ಸೆಪ್ಟೆಂಬರ್‌ 17ರ ಶುಕ್ರವಾರ ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ.

ಕಳೆದ ಜೂನ್‌ನಲ್ಲಿ ಕೇರಳ ಹೈಕೋರ್ಟ್‌, ಪೆಟ್ರೋಲ್‌, ಡೀಸೆಲ್‌ ದರಗಳನ್ನು ಜಿಎಸ್‌ಟಿ ಅಡಿ ತರುವ ಬಗ್ಗೆ ಪರಿಶೀಲಿಸಿ ಎಂದು ಸೂಚಿಸಿತ್ತು. ಏಕೆಂದರೆ ಇವುಗಳ ದರಗಳ ಮೇಲೆ ರಾಜ್ಯಗಳು ಹಾಗೂ ಕೇಂದ್ರವು ಪ್ರತ್ಯೇಕ ತೆರಿಗೆ ಹಾಕುತ್ತಿದ್ದು, ದರ ಏರಿಕೆಗೆ ಇದೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈ ಸಭೆಯಲ್ಲಿ ತೆಗೆದುಕೊಳ್ಳಬಹುದಾದ ನಿರ್ಣಯದ ಬಗ್ಗೆ ಕುತೂಹಲ ಮೂಡಿದೆ. ಒಂದು ವೇಳೆ ಪೆಟ್ರೋಲ್‌, ಡೀಸೆಲ್‌ ಜಿಎಸ್‌ಟಿ ಅಡಿ ಬಂದರೆ ಅವುಗಳ ಮೇಲಿನ ತೆರಿಗೆ ಏಕರೂಪಗೊಂಡು, ದರ ಇಳಿಕೆ ಆಗುವ ಸಾಧ್ಯತೆ ಇದೆ.

"

ಜಿಎಸ್‌ಟಿ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಎಂದರೆ ಅದಕ್ಕೆ ಮಂಡಳಿ ಸದಸ್ಯ ರಾಜ್ಯಗಳ ಮೂರನೇ ಎರಡರಷ್ಟುಬಹುಮತದ ಒಪ್ಪಿಗೆ ಬೇಕು. ಆದರೆ ಪೆಟ್ರೋಲ್‌, ಡೀಸೆಲ್‌ ದರಗಳೇ ತಮ್ಮ ತೆರಿಗೆ ಆದಾಯದ ಮೂಲವಾಗಿದ್ದು, ಅದನ್ನು ಜಿಎಸ್‌ಟಿ ಅಡಿ ತರಲು ಬಿಡುವುದಿಲ್ಲ ಎಂದು ಹಲವು ರಾಜ್ಯಗಳು ಈ ಹಿಂದೆಯೇ ಸ್ಪಷ್ಟಪಡಿಸಿದ್ದವು. ಮತ್ತೊಂದೆಡೆ ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಕೇಂದ್ರದ ಆದಾಯಕ್ಕೂ ಭಾರೀ ಹೊಡೆತ ಬೀಳಲಿದೆ. ಹೀಗಾಗಿ ಶುಕ್ರವಾರದ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವ್ಯಕ್ತಪಡಿಸಿರುವ ಅಭಿಪ್ರಾಯಗಳ ಕುರಿತು ಕುತೂಹಲ ಇದೆ.

ಇದೇ ವೇಳೆ, ಕೋವಿಡ್‌ ಚಿಕಿತ್ಸಾ ಉಪಕರಣ ಹಾಗೂ ಔಷಧದ ಮೇಲಿನ ಜಿಎಸ್‌ಟಿ ವಿನಾಯ್ತಿಯನ್ನು ಮುಂದುವರಿಸಲು ಸಭೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಕೆಲವು ಮರುಬಳಕೆ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ.5ರಿಂದ 12ಕ್ಕೆ ಹಾಗೂ ತಾಮ್ರ, ಕಬ್ಬಿಣ ಹಾಗೂ ಇತರ ಕೆಲವು ಲೋಹಗಳ ಮೇಲಿನ ಜಿಎಸ್‌ಟಿಯನ್ನು ಶೇ.18ಕ್ಕೆ ಏರಿಸುವ ಪ್ರಸ್ತಾ್ತಪ ಇದ್ದು, ಆ ಬಗ್ಗೆಯೂ ಚರ್ಚೆ ನಡೆಯಲಿದೆ.

ಜಿಎಸ್ಟಿವ್ಯಾಪ್ತಿಗೆ ತರಲು ವಿರೋಧ ಏಕೆ?

ಜಿಎಸ್‌ಟಿ ವ್ಯಾಪ್ತಿಯಲ್ಲಿ ಗರಿಷ್ಠ ತೆರಿಗೆ ದರ ಶೇ.28. ಆದರೆ ತೈಲೋತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರುವ ಕಾರಣ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವುಗಳ ಮೇಲೆ ಭಾರೀ ಪ್ರಮಾಣದ ತೆರಿಗೆ, ಅಧಿಬಾರ ತೆರಿಗೆ ವಿಧಿಸುತ್ತಿವೆ. ಕೇಂದ್ರ ಮತ್ತು ರಾಜ್ಯ ಎರಡಕ್ಕೂ ತೈಲೋತ್ಪನ್ನಗಳು ದೊಡ್ಡ ಆದಾಯದ ಮೂಲ. ಜಿಎಸ್‌ಟಿ ವ್ಯಾಪ್ತಿಗೆ ಇದು ಸೇರಿದರೆ ಕೇಂದ್ರ, ರಾಜ್ಯ ಎರಡರ ಬೊಕ್ಕಸಕ್ಕೂ ನಷ್ಟ ಖಚಿತ.

ಪೆಟ್ರೋಲ್‌ ದರ ಲೆಕ್ಕಾಚಾರ

ಕಚ್ಚಾತೈಲ, ಸಂಸ್ಕಾರಣಾ ಶುಲ್ಕ 40 ರು.

ಕೇಂದ್ರದ ಅಬಕಾರಿ ಸುಂಕ, ಸೆಸ್‌ 33 ರು.

ಡೀಲರ್‌ ಕಮೀಷನ್‌ 04 ರು.

ರಾಜ್ಯಗಳ ವ್ಯಾಟ್‌, ಸೆಸ್‌ 23ರು.

ಒಟ್ಟು 100 ರು.

Follow Us:
Download App:
  • android
  • ios