*ವಿಮಾ ಯೋಜನೆಗಳು ಪ್ರಾರಂಭಗೊಂಡ 7 ವರ್ಷಗಳ ಬಳಿಕ ಮೊದಲ ಬಾರಿಗೆ ಪ್ರೀಮಿಯಂ ಹೆಚ್ಚಳ*ಪಿಎಂಜೆಜೆಬಿವೈ ಪ್ರೀಮಿಯಂ 330ರೂ.ನಿಂದ 436ರೂ.ಗೆ ಏರಿಕೆ*ಪಿಎಂಎಸ್ ಬಿವೈ ಪ್ರೀಮಿಯಂ 12ರೂ.ನಿಂದ 20ರೂ.ಗೆ ಹೆಚ್ಚಳ*ಪರಿಷ್ಕೃತ ಪ್ರೀಮಿಯಂ ದರಗಳು 2022ರ ಜೂನ್ 1ರಿಂದಲೇ ಜಾರಿಗೆ
ನವದೆಹಲಿ (ಜೂ.1): ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಪ್ರೀಮಿಯಂ ದರಗಳನ್ನು (premium rates) ಸರ್ಕಾರ ಪರಿಷ್ಕರಿಸಿದೆ. ಈ ಎರಡೂ ಯೋಜನೆಗಳ ಪ್ರೀಮಿಯಂ ಅನ್ನು ಪ್ರತಿ ದಿನಕ್ಕೆ 1.25ರೂ.ಗೆ ನಿಗದಿಪಡಿಸಿದೆ. ಪಿಎಂಜೆಜೆಬಿವೈ ಪ್ರೀಮಿಯಂ 330ರೂ.ನಿಂದ 436ರೂ.ಗೆ ಹಾಗೂ ಪಿಎಂಎಸ್ ಬಿವೈ ಪ್ರೀಮಿಯಂ ಅನ್ನು 12ರೂ.ನಿಂದ 20ರೂ.ಗೆ ಹೆಚ್ಚಿಸಲಾಗಿದೆ. ಈ ಯೋಜನೆಗಳು ಪ್ರಾರಂಭಗೊಂಡ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪರಿಷ್ಕರಣೆ (Revise) ಮಾಡಲಾಗಿದೆ. ಇನ್ನು ಪರಿಷ್ಕೃತ ಪ್ರೀಮಿಯಂ ದರಗಳು 2022ರ ಜೂನ್ 1ರಿಂದಲೇ ಜಾರಿಗೆ ಬಂದಿವೆ.
ಹಣಕಾಸು ಸಚಿವಾಲಯದ (Finance Ministry) ಮಾಹಿತಿ ಅನ್ವಯ ಕ್ಲೇಮ್ಸ್ (Claims) ಅನುಭವಗಳ ಆಧಾರದಲ್ಲಿ ಪ್ರೀಮಿಯಂ (Premium) ಮೊತ್ತದ ವಾರ್ಷಿಕ ಪರಿಷ್ಕರಣೆ 2015 ರಲ್ಲಿ ಯೋಜನೆಗಳ ಜಾರಿ ಸಮಯದಲ್ಲಿ ಮಾಡಲಾಗಿತ್ತು.ಆಗ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಪ್ರೀಮಿಯಂ ಮೊತ್ತ 12ರೂ. ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಪ್ರೀಮಿಯಂ ಮೊತ್ತ 330ರೂ. ಆಗಿತ್ತು. ಆದರೆ, ಕಳೆದ 7 ವರ್ಷಗಳಲ್ಲಿ ಪ್ರೀಮಿಯಂ ದರಗಳಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ಯೋಜನೆಗಳ ಕ್ಲೇಮ್ (Claim) ಅನುಭವಗಳನ್ನು ಪರಿಶೀಲಿಸಿದ ಬಳಿಕ ಪಿಎಂಜೆಜೆಬಿವೈ ಹಾಗೂ ಪಿಎಂಎಸ್ ಬಿವೈ ಕ್ಲೇಮ್ಸ್ ಪ್ರಮಾಣ 2022ರ ಮಾರ್ಚ್ 31ರ ತನಕ ಕ್ರಮವಾಗಿ 145.24 % ಹಾಗೂ 221.61%. ಎಂದು ಐಆರ್ ಡಿಎಐ (IRDAI) ತಿಳಿಸಿದೆ.
2022ರ ಮಾರ್ಚ್ 31ರ ತನಕ ಪಿಎಂಜೆಜೆಬಿವೈ ಹಾಗೂ ಪಿಎಂಎಸ್ ಬಿವೈ ಅಡಿಯಲ್ಲಿ ಕ್ರಮವಾಗಿ 6.4 ಕೋಟಿ ಹಾಗೂ 22 ಕೋಟಿ ಸಕ್ರಿಯ ಚಂದಾದಾರರಿದ್ದಾರೆ. ಪಿಎಂಎಸ್ ಬಿವೈ ಪ್ರಾರಂಭವಾದ ಬಳಿಕ ಸುಮಾರು 1,134 ಕೋಟಿ ರೂ. ಪ್ರೀಮಿಯಂ ಸಂಗ್ರಹಿಸಲಾಗಿದೆ. ಆದರೆ, ಇದೇ ಅವಧಿಯಲ್ಲಿ 2,513 ಕೋಟಿ ರೂ. ಕ್ಲೈಮ್ ಗಳನ್ನು ಪಾವತಿಸಲಾಗಿದೆ.
ಇನ್ನು 2022ರ ಮಾರ್ಚ್ 31ರ ತನಕ ಪಿಎಂಜೆಜೆಬಿವೈ ಅಡಿಯಲ್ಲಿ 9,737 ಕೋಟಿ ರೂ. ಪ್ರೀಮಿಯಂ ಸಂಗ್ರಹವಾಗಿದೆ. ಹಾಗೆಯೇ , 14,144 ಕೋಟಿ ರೂ. ಕ್ಲೈಮ್ ಗಳನ್ನು ಪಾವತಿಸಲಾಗಿದೆ. ಈ ಎರಡೂ ಯೋಜನೆಗಳ ಅಡಿಯಲ್ಲಿ ಮಾಡಿದ ಕ್ಲೇಮ್ಸ್ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ (Bank account) ಡಿಬಿಟಿ ಮಾರ್ಗದ (DBT route) ಮೂಲಕ ಜಮೆ ಮಾಡಲಾಗುತ್ತದೆ.ಕೇಂದ್ರ ಸರ್ಕಾರ ಮುಂದಿನ 5 ವರ್ಷಗಳಲ್ಲಿ ಪಿಎಂಜೆಜೆಬಿವೈ ಅಡಿಯಲ್ಲಿ ಚಂದಾದಾರರ ಸಂಖ್ಯೆಯನ್ನು 6.4 ಕೋಟಿಯಿಂದ 15 ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದೆ. ಇನ್ನು ಪಿಎಂಎಸ್ ಬಿವೈ ಅಡಿಯಲ್ಲಿ ಚಂದಾದಾರರ ಸಂಖ್ಯೆಯನ್ನು 22 ಕೋಟಿಯಿಂದ 37 ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದೆ.
ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಕೇಂದ್ರ ಸರ್ಕಾರದ (Central government) ಸುರಕ್ಷಾ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ 2 ಲಕ್ಷ ರೂ. ತನಕ ವಿಮೆ (Insurance) ಕವರೇಜ್ ಲಭಿಸುತ್ತದೆ. 18ರಿಂದ 50 ವರ್ಷದೊಳಗಿನವರು ಈ ಯೋಜನೆಯ ಫಲಾನುಭವಿಯಾಗಬಹುದು. ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಫಲಾನುಭವಿ ಅಪಘಾತದಲ್ಲಿ (accident) ಮೃತಪಟ್ಟರೆ ಅಥವಾ ಅಂಗವೈಕಲ್ಯಕ್ಕೆ ತುತ್ತಾದ್ರೆ ಆತನ ಕುಟುಂಬಕ್ಕೆ ಆರ್ಥಿಕ ನೆರವು ಸಿಗುತ್ತದೆ. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಗೆ ಸೇರ್ಪಡೆಗೊಳ್ಳಬಹುದು. ಆಕಸ್ಮಿಕವಾಗಿ ಮರಣ ಹೊಂದಿದ್ರೆ 2ಲಕ್ಷ ರೂ., ಭಾಗಶಃ ಅಂಗವೈಕಲ್ಯ ಹೊಂದಿದರೆ 1ಲಕ್ಷ ರೂ. ಆರ್ಥಿಕ ನೆರವನ್ನು ಆ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರ ಈ ಯೋಜನೆಯ ಮೂಲಕ ನೀಡುತ್ತದೆ.
ನೀವು ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಹಾಗೂ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಚಂದಾದಾರರಾಗಿದ್ದರೆ, ಈ ಎರಡೂ ಯೋಜನೆಗಳಿಗೆ ಪ್ರೀಮಿಯಂ ಅನ್ನು ನೀವು ಖುದ್ದಾಗಿ ಪಾವತಿಸಬೇಕಾದ ಅಗತ್ಯವಿಲ್ಲ. ಬದಲಿಗೆ ನಿಮ್ಮ ಬ್ಯಾಂಕ್ ಖಾತೆಯಿಂದ ಪ್ರೀಮಿಯಂ ಮೊತ್ತ ಆಟೋ ಡೆಬಿಟ್ (Auto debit) ಆಗುತ್ತದೆ.
