*ದೀರ್ಘ ಸಮಯದಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಹೆಚ್ಚಿಸದ ಸರ್ಕಾರ*ಆರ್ ಬಿಐ ರೆಪೋ ದರ ಹೆಚ್ಚಳ ಮಾಡಿರೋ ಹಿನ್ನೆಲೆಯಲ್ಲಿ ಬಡ್ಡಿದರ ಏರಿಕೆ ಸಾಧ್ಯತೆ*ಜೂನ್ 30ರೊಳಗೆ ಬಡ್ಡಿ ಹೆಚ್ಚಳದ ತೀರ್ಮಾನ *ಜುಲೈನಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಏರಿಕೆಯಾಗೋ ನಿರೀಕ್ಷೆ
ನವದೆಹಲಿ (ಜೂ.2): ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC), ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಅಥವಾ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (PPF) ಹೂಡಿಕೆ ಮಾಡಿದವರಿಗೆ ಈ ತಿಂಗಳ ಕೊನೆಯೊಳಗೆ ಶುಭ ಸುದ್ದಿ ಸಿಗುವ ಸಾಧ್ಯತೆಯಿದೆ. ಸರ್ಕಾರ ಈ ಎಲ್ಲ ಸಣ್ಣ ಉಳಿತಾಯ ಯೋಜನೆಗಳ (Small Savings Schemes) ಮೇಲಿನ ಬಡ್ಡಿದರವನ್ನು (Interest rate) ಜೂನ್ ಅಂತ್ಯದೊಳಗೆ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ದೀರ್ಘ ಸಮಯದಿಂದ ಏರಿಕೆಯಾಗದ ಬಡ್ಡಿದರ
ಸಣ್ಣ ಉಳಿತಾಯ ಯೋಜನೆಗಳು ಹಾಗೂ ಅಂಚೆ ಕಚೇರಿ ಯೋಜನೆಗಳ (Post office Schemes) ಬಡ್ಡಿದರವನ್ನು (Interest rate) ಕೇಂದ್ರ ಸರ್ಕಾರ (Central Government) ದೀರ್ಘ ಸಮಯದಿಂದ ಏರಿಕೆ ಮಾಡಿಲ್ಲ.ಅದರಲ್ಲೂ ಕೋವಿಡ್ -19 ಬಳಿಕ ಸರ್ಕಾರ ಬಡ್ಡಿದರ ಹೆಚ್ಚಳ ಮಾಡಿಯೇ ಇಲ್ಲ. ಇದಕ್ಕೆ ಮುಖ್ಯಕಾರಣ ಕೋವಿಡ್ ನಿಂದ ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿರೋದು. ಈ ವರ್ಷದ ಮೊದಲ ತ್ರೈಮಾಸಿಕ (ಏಪ್ರಿಲ್ ನಿಂದ ಜೂನ್ ) ಪರಿಶೀಲನಾ ಸಭೆಯಲ್ಲಿ ಕೇಂದ್ರ ಸರ್ಕಾರ ಪಿಪಿಎಫ್ ಹಾಗೂ ಸುಕನ್ಯಾ ಸಮೃದ್ಧಿಯಂತಹ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿರಿಸುವ ತೀರ್ಮಾನ ಕೈಗೊಂಡಿತ್ತು. ನಿಯಮಗಳ ಪ್ರಕಾರ ಸರ್ಕಾರದ ತಜ್ಞರ ಸಮಿತಿ ಶೀಘ್ರದಲ್ಲೇ ಸಭೆ ಸೇರಿ ಜೂನ್ 30ರೊಳಗೆ 2022ರ ಜುಲೈನಿಂದ ಪ್ರಾರಂಭವಾಗುವ ತ್ರೈಮಾಸಿಕಕ್ಕೆ ಹೊಸ ದರಗಳನ್ನು ಪ್ರಕಟಿಸಬೇಕಿದೆ. ಜೂನ್ 30 ಕ್ಕೆ ಈ ವರ್ಷದ ಮೊದಲ ತ್ರೈಮಾಸಿಕ ಅಂತ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ತಿಂಗಳ ಅಂತ್ಯದೊಳಗೆ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಹೆಚ್ಚಿಸುವ ನಿರೀಕ್ಷೆಯಿದೆ.
ಅಂಚೆ ಕಚೇರಿ ಯೋಜನೆಗಳ ಸದ್ಯದ ಬಡ್ಡಿದರ
ಏಪ್ರಿಲ್ 1ರಿಂದ ಪ್ರಾರಂಭವಾಗಿರುವ ಈ ಹಣಕಾಸು ಸಾಲಿನಲ್ಲಿ ಅಂಚೆ ಕಚೇರಿ ಉಳಿತಾಯ ಯೋಜನೆಗಳ ಮೇಲಿನ ಪ್ರಸಕ್ತ ಬಡ್ಡಿದರ ಈ ಕೆಳಗಿನಂತಿದೆ.
*ಸಾರ್ವಜನಿಕ ಭವಿಷ್ಯ ನಿಧಿ (PPF):ಶೇ.7.1
*ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC): ಶೇ. 6.8
*ಸುಕನ್ಯಾ ಸಮೃದ್ಧಿ ಯೋಜನೆ: ಶೇ.7.6
*ಕಿಸಾನ್ ವಿಕಾಸ್ ಪತ್ರ: ಶೇ.6.9
*ಉಳಿತಾಯ ಠೇವಣಿ: ಶೇ.4
*1 ವರ್ಷ ಅವಧಿಯ ಠೇವಣಿ: ಶೇ. 5.5
* 2 ವರ್ಷ ಅವಧಿಯ ಠೇವಣಿ: ಶೇ. 5.5
* 3 ವರ್ಷ ಅವಧಿಯ ಠೇವಣಿ: ಶೇ. 5.5
*5 ವರ್ಷ ಅವಧಿಯ ಠೇವಣಿ: ಶೇ.6.7
*5 ವರ್ಷ ರಿಕರಿಂಗ್ ಡೆಫಾಸಿಟ್ (RD):ಶೇ.5.8
*5 ವರ್ಷ ಹಿರಿಯ ನಾಗರಿಕರ ಉಳಿತಾಯ ಯೋಜನೆ: ಶೇ.7.4
*5 ವರ್ಷ ಮಾಸಿಕ ಆದಾಯ ಖಾತೆ: ಶೇ.6.6
Business Ideas : 8ನೇ ತರಗತಿ ಪಾಸಾದ್ರೆ ಸಾಕು, ಲಕ್ಷಾಂತರ ರೂ. ಗಳಿಸ್ಬಹುದು
ಬಡ್ಡಿ ಏರಿಕೆ ಯಾಕೆ?
ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆಗಳ ಬಡ್ಡಿದರವನ್ನು ಸರ್ಕಾರ ಈ ಬಾರಿ ಏಕೆ ಏರಿಕೆ ಮಾಡುತ್ತದೆ? ಈ ಹಿಂದಿನಂತೆ ಈ ಸಾಲವೂ ಹೆಚ್ಚಳ ಮಾಡದೆ ಇರಬಹುದಲ್ವಾ? ಎಂಬ ಅನುಮಾನ ಅನೇಕರನ್ನು ಕಾಡಬಹುದು. ಆದ್ರೆ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಹೆಚ್ಚಿಸಲು ಈ ಬಾರಿ ಕಾರಣವಿದೆ. ಕಳೆದ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು 40 ಬೇಸಿಸ್ ಪಾಯಿಂಟ್ ಗಳಷ್ಟು ಏರಿಕೆ ಮಾಡಿದೆ. ಹೀಗಾಗಿ ಬ್ಯಾಂಕುಗಳು ಈಗಾಗಲೇ ಸಾಲಗಳ ಮೇಲಿನ ಬಡ್ಡಿದರ ಏರಿಕೆ ಮಾಡಿವೆ. ಇನ್ನೊಂದೆಡೆ ಕೆಲವು ಬ್ಯಾಂಕುಗಳು ಈಗಾಗಲೇ ಸ್ಥಿರ ಠೇವಣಿ (FD) ಹಾಗೂ ರಿಕರಿಂಗ್ ಡೆಫಾಸಿಟ್ (RD) ಮೇಲಿನ ಬಡ್ಡಿದರವನ್ನು ಹೆಚ್ಚಿಸಿವೆ. ಹೀಗಾಗಿ ಸರ್ಕಾರ ಮುಂದಿನ ತಿಂಗಳು ಪಿಪಿಎಫ್ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡೋದು ಬಹುತೇಕ ಖಚಿತ.
