ಇನ್ಮುಂದೆ ಸಹಕಾರಿ ಬ್ಯಾಂಕ್ ಆರ್‌ಬಿಐ ಅಧೀನಕ್ಕೆ
ದೇಶಾದ್ಯಂತ ಇರುವ ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಹಾಗೂ ಬಹುರಾಜ್ಯ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಅಧೀನಕ್ಕೆ ತರುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶನಿವಾರ ಸಹಿ ಹಾಕಿದ್ದಾರೆ. ಅದರೊಂದಿಗೆ, 1482 ಪಟ್ಟಣ ಸಹಕಾರಿ ಬ್ಯಾಂಕ್ ಹಾಗೂ 58 ಬಹುರಾಜ್ಯ ಸಹಕಾರಿ ಬ್ಯಾಂಕ್‌ಗಳು ಇನ್ನುಮುಂದೆ ಆರ್‌ಬಿಐನ ನಿಯಂತ್ರಣಕ್ಕೆ ಒಳಪಡಲಿವೆ.
ನವದೆಹಲಿ (ಜೂ. 28): ದೇಶಾದ್ಯಂತ ಇರುವ ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಹಾಗೂ ಬಹುರಾಜ್ಯ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ)ನ ಅಧೀನಕ್ಕೆ ತರುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶನಿವಾರ ಸಹಿ ಹಾಕಿದ್ದಾರೆ. ಅದರೊಂದಿಗೆ, 1482 ಪಟ್ಟಣ ಸಹಕಾರಿ ಬ್ಯಾಂಕ್ ಹಾಗೂ 58 ಬಹುರಾಜ್ಯ ಸಹಕಾರಿ ಬ್ಯಾಂಕ್‌ಗಳು ಇನ್ನುಮುಂದೆ ಆರ್‌ಬಿಐನ ನಿಯಂತ್ರಣಕ್ಕೆ ಒಳಪಡಲಿವೆ.
ಕಾಯ್ದೆ ತಿದ್ದುಪಡಿಯಿಂದ ರಾಜ್ಯ ಸಹಕಾರಿ ಸಂಘಗಳ ರಿಜಿಸ್ಟ್ರಾರ್‌ಗೆ ಈ ಬ್ಯಾಂಕುಗಳ ಮೇಲಿರುವ ಅಧಿಕಾರ ಮೊಟಕಾಗುವುದಿಲ್ಲ ಹಾಗೂ ರಾಜ್ಯ ಸಹಕಾರಿ ಕಾಯ್ದೆಗೂ ಧಕ್ಕೆಯಾಗುವುದಿಲ್ಲ. ಹಾಗೆಯೇ ಈ ತಿದ್ದುಪಡಿ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅನ್ವಯಿಸುವುದಿಲ್ಲ. ಸರಳವಾಗಿ ಹೇಳುವುದಾದರೆ, ತಮ್ಮ ಹೆಸರಿನಲ್ಲಿ ಬ್ಯಾಂಕ್, ಬ್ಯಾಂಕರ್ ಅಥವಾ ಬ್ಯಾಂಕಿಂಗ್ ಎಂಬ ಪದ ಹೊಂದಿಲ್ಲದ ಸಹಕಾರಿ ಸಂಘಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ತಿದ್ದುಪಡಿಯಲ್ಲಿ ಹೇಳಲಾಗಿದೆ.
50 ಸಾವಿರ ರುಪಾಯಿ ದಾಟಿದ ಚಿನ್ನದ ಬೆಲೆ!
ಕಾಯ್ದೆ ತಿದ್ದುಪಡಿಯಿಂದ ಒಟ್ಟಾರೆ 8.6 ಕೋಟಿ ಠೇವಣಿದಾರರಿರುವ ಹಾಗೂ 4.85 ಲಕ್ಷ ಕೋಟಿ ರು. ಠೇವಣಿ ಹೊಂದಿರುವ ಸಹಕಾರಿ ಬ್ಯಾಂಕುಗಳು ಆರ್‌ಬಿಐನ ನಿಯಂತ್ರಣಕ್ಕೆ ಒಳಪಟ್ಟಂತಾಗುತ್ತದೆ. ಕಳೆದ ವರ್ಷ ನಡೆದ ಪಿಎಂಸಿ ಬ್ಯಾಂಕ್ ಹಗರಣ, ಈ ವರ್ಷ ಬೆಂಗಳೂರಿನ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್‌ನಿಂದ ಗ್ರಾಹಕರು ಠೇವಣಿ ಹಿಂಪಡೆಯದಂತೆ ಆರ್‌ಬಿಐ ವಿಧಿಸಿದ್ದ ನಿರ್ಬಂಧಗಳ ಹಿನ್ನೆಲೆಯಲ್ಲಿ ಕಾಯ್ದೆ ತಿದ್ದುಪಡಿ ಮಹತ್ವ ಪಡೆದಿದೆ.
ಸಹಕಾರಿ ಬ್ಯಾಂಕುಗಳಲ್ಲಿ ಹೆಚ್ಚುತ್ತಿರುವ ಅವ್ಯವಹಾರಗಳ ಹಿನ್ನೆಲೆಯಲ್ಲಿ ಗ್ರಾಹಕರ ಠೇವಣಿಗೆ ಸುರಕ್ಷತೆ ಒದಗಿಸಲು ಹಾಗೂ ಸಹಕಾರಿ ಬ್ಯಾಂಕುಗಳ ಆಡಳಿತವನ್ನು ಸುಧಾರಿಸಲು ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಸುಗ್ರೀವಾಜ್ಞೆ-2020 ಜಾರಿಗೊಳಿಸಲು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿತ್ತು. ಅದು ಈಗ ಜಾರಿಗೆ ಬಂದಿದೆ.