ಅಟಲ್ ಪಿಂಚಣಿ ಯೋಜನೆ ನೋಂದಣಿಯಲ್ಲಿ ಶೇ.20ರಷ್ಟು ಏರಿಕೆ; 5.2 ಕೋಟಿಗಿಂತಲೂ ಅಧಿಕ ಜನರು ಸೇರ್ಪಡೆ
ಸಮಾಜದ ಆರ್ಥಿಕ ದುರ್ಬಲ ವರ್ಗಕ್ಕೆ ವೃದ್ಧಾಪ್ಯದಲ್ಲಿ ಆದಾಯ ಭದ್ರತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿದ ಅಟಲ್ ಪಿಂಚಣಿ ಯೋಜನೆಗೆ 2022-23ನೇ ಹಣಕಾಸು ಸಾಲಿನಲ್ಲಿ 5.2 ಕೋಟಿಗಿಂತಲೂ ಅಧಿಕ ಜನರು ಸೇರ್ಪಡೆಗೊಂಡಿದ್ದಾರೆ. 2021-22ನೇ ಸಾಲಿಗೆ ಹೋಲಿಸಿದರೆ 2022-23ನೇ ಸಾಲಿನ ಚಂದಾದಾರಿಕೆಯಲ್ಲಿ ಶೇ.20ರಷ್ಟು ಹೆಚ್ಚಳ ಕಂಡುಬಂದಿದೆ.
ನವದೆಹಲಿ (ಏ.29): ಅಟಲ್ ಪಿಂಚಣಿ ಯೋಜನೆಗೆ ನೋಂದಣಿ ಮಾಡಿಸಿದವರ ಸಂಖ್ಯೆ ಮಾ.31ಕ್ಕೆ 5.20 ಕೋಟಿ ದಾಟಿದೆ. ಇನ್ನು ಈ ಖಾತೆ ಅಡಿಯಲ್ಲಿ ಆಸ್ತಿ ಮೌಲ್ಯವು 27,200 ಕೋಟಿ ರೂ. ಆಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) ತಿಳಿಸಿದೆ. 2022-23ನೇ ಹಣಕಾಸು ಸಾಲಿನಲ್ಲಿ ಹೊಸ ಚಂದಾದಾರರ ನೋಂದಣಿ 2021-22ನೇ ಸಾಲಿಗೆ ಹೋಲಿಸಿದರೆ ಶೇ.20ರಷ್ಟು ಅಥವಾ 1.19 ಕೋಟಿ ರೂ. ಏರಿಕೆ ಕಂಡಿದೆ. 2021-22ನೇ ಸಾಲಿನಲ್ಲಿ 99 ಲಕ್ಷ ಹೊಸ ಚಂದಾದಾರರು ನೋಂದಣಿಯಾಗಿದ್ದಾರೆ. ಅಂದರೆ 2022-23ನೇ ಸಾಲಿನಲ್ಲಿ ಹೊಸ ಚಂದಾದಾರಿಕೆ ಶೇ.20ರಷ್ಟು ಏರಿಕೆ ಕಂಡಿದೆ ಎಂದು ಪಿಎಫ್ ಆರ್ ಡಿಎ ತಿಳಿಸಿದೆ. ಅಟಲ್ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ 2015-16ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರದ ಈ ಯೋಜನೆ ಸಮಾಜದ ಆರ್ಥಿಕ ದುರ್ಬಲ ವರ್ಗಕ್ಕೆ ವೃದ್ಧಾಪ್ಯದಲ್ಲಿ ಆದಾಯ ಭದ್ರತೆ ನೀಡುವ ಜೊತೆಗೆ ಅಸಂಘಟಿತ ವಲಯದ ಎಲ್ಲ ನಾಗರಿಕರನ್ನು ಕೇಂದ್ರೀಕರಿಸಿತ್ತು. ಈ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಮೂಲಕ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ನಿರ್ವಹಣೆ ಮಾಡುತ್ತಿದೆ.
'ಅಟಲ್ ಪಿಂಚಣಿ ಯೋಜನೆ ನಿರ್ವಹಣೆ ಅಡಿಯಲ್ಲಿ ಒಟ್ಟು ಆಸ್ತಿಗಳು (ಎಯುಎಂ) 27,200 ಕೋಟಿ ರೂ.ಗಿಂತ ಅಧಿಕವಿದೆ. ಈ ಯೋಜನೆ ಪ್ರಾರಂಭವಾದ ದಿನಾಂಕದಿಂದ ಇಲ್ಲಿಯ ತನಕ ಶೇ.8.69ರಷ್ಟು ಹೂಡಿಕೆ ರಿಟರ್ನ್ ಗಳಿಸಿದೆ' ಎಂದು ಪಿಎಫ್ ಆರ್ ಡಿಎ (PFRDA) ಹೇಳಿಕೆಯಲ್ಲಿ ತಿಳಿಸಿದೆ.
EPF ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆಗೆ ಮೇ 3 ಅಂತಿಮ ಗಡುವು; ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ?
ಪಿಎಫ್ ಆರ್ ಡಿಎ ಪ್ರಕಾರ ಸಾರ್ವಜನಿಕ ವಲಯದ 9 ಬ್ಯಾಂಕ್ ಗಳು ವಾರ್ಷಿಕ ಗುರಿಯನ್ನು ತಲುಪಿವೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಪ್ರತಿ ಶಾಖೆಗೆ 100ಕ್ಕೂ ಹೆಚ್ಚು ಎಪಿವೈ ಖಾತೆಗಳನ್ನು ಹೊಂದಿವೆ. ಪ್ರಾದೇಶಿಕ ಬ್ಯಾಂಕ್ ಗಳ ವರ್ಗದಲ್ಲಿ 32 ಬ್ಯಾಂಕ್ ಗಳು ವಾರ್ಷಿಕ ಗುರಿ ಸಾಧಿಸಿವೆ. ಜಾರ್ಖಂಡ ರಾಜ್ಯ ಗ್ರಾಮೀಣ ಬ್ಯಾಂಕ್, ವಿದರ್ಭ ಕೊಂಕಣ ಗ್ರಾಮೀಣ ಬ್ಯಾಂಕ್, ತ್ರಿಪುರ ಗ್ರಾಮೀಣ ಬ್ಯಾಂಕ್ ಹಾಗೂ ಬರೋಡಾ ಉತ್ತರ ಪ್ರದೇಶ ಗ್ರಾಮೀಣ ಬ್ಯಾಂಕ್ ಪ್ರತಿ ಶಾಖೆಗೆ 160ಕ್ಕೂ ಹೆಚ್ಚು ಎಪಿವೈ ಖಾತೆಗಳನ್ನು ಹೊಂದಿವೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಅಟಲ್ ಪಿಂಚಣಿ ಯೋಜನೆ ಖಾತೆಯನ್ನು 29 ಬ್ಯಾಂಕ್ ಗಳಲ್ಲಿ ತೆರೆಯಬಹುದಾಗಿದೆ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಖಾತೆ ತೆರೆದ ಸಚಿವೆ ಸ್ಮೃತಿ ಇರಾನಿ; ಈ ಖಾತೆ ತೆರೆಯಲು ಹೀಗೆ ಮಾಡಿ
ಎಪಿವೈಯಲ್ಲಿ ಯಾರು ಹೂಡಿಕೆ ಮಾಡಬಹುದು?
18 ಹಾಗೂ 40 ವರ್ಷಗಳ ನಡುವಿನ ತೆರಿಗೆ ಪಾವತಿ ಮಾಡದ ಯಾರು ಬೇಕಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ನೀವು ಅಟಲ್ ಪಿಂಚಣಿ ಯೋಜನೆಗೆ ನೋಂದಣಿ ಮಾಡಿಸಬಹುದು. 60 ವರ್ಷದಿಂದ ಪಿಂಚಣಿ ಬರಲು ಪ್ರಾರಂಭವಾಗುತ್ತದೆ. ಇನ್ನು ಪ್ರತಿ ತಿಂಗಳು ನಿಮಗೆ ಎಷ್ಟು ಪಿಂಚಣಿ ಸಿಗುತ್ತದೆ ಎಂಬುದು ನಿಮ್ಮ ಹೂಡಿಕೆಯನ್ನು ಆಧರಿಸಿರುತ್ತದೆ. ಇನ್ನು ತಿಂಗಳ ಹೂಡಿಕೆ ಮೊತ್ತ ಕೂಡ ನೀವು ತಿಂಗಳಿಗೆ 1,000 ರೂ. ಹಾಗೂ 5,000 ರೂ. ನಡುವೆ ಎಷ್ಟು ಪಿಂಚಣಿ ಪಡೆಯುತ್ತೀರಿ ಎಂಬುದನ್ನು ಆಧರಿಸಿ ಬದಲಾಗುತ್ತದೆ. ಪಿಂಚಣಿ ಪಡೆಯಲು ಈ ಯೋಜನೆಯಲ್ಲಿ ಕನಿಷ್ಠ 20 ವರ್ಷಗಳ ತನಕ ಹೂಡಿಕೆ ಮಾಡಬೇಕು. ಉದಾಹರಣೆಗೆ ಯಾರಾದರೂ 18 ನೇ ವಯಸ್ಸಿನಲ್ಲಿ 5,000ರೂ. ತಿಂಗಳ ಪಿಂಚಣಿ ಪಡೆಯಲು ಹೂಡಿಕೆ ಮಾಡಲು ಪ್ರಾರಂಭಿಸಿದ್ರೆ ಆತ ತಿಂಗಳಿಗೆ 210 ರೂ. ಪಾವತಿಸಬೇಕು.