ಇನ್ಮುಂದೆ ಬ್ಯಾಂಕ್ ಖಾತೆ ತೆರೆಯೋದು, ಸಿಮ್ ಕಾರ್ಡ್ ಪಡೆಯೋದು ಅಷ್ಟು ಸುಲಭವಲ್ಲ!
*ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರದ ಕಠಿಣ ಕ್ರಮ
*ಬ್ಯಾಂಕ್ ಖಾತೆ ತೆರೆಯುವ ನಿಯಮ ಬಿಗಿ
*ಹೊಸ ಸಿಮ್ ನೀಡಲು 21 ಅಲ್ಲ, ಬರೀ 5 ದಾಖಲೆಗಳನ್ನಷ್ಟೇ ಪರಿಗಣಿಸಲು ಚಿಂತನೆ
ನವದೆಹಲಿ (ನ.03): ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಇ- ಬ್ಯಾಂಕಿಂಗ್ ಹಾಗೂ ಆನ್ ಲೈನ್ ಪಾವತಿ ಬಳಕೆ ಹೆಚ್ಚಿರೋದ್ರಿಂದ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವವರ ಸಂಖ್ಯೆ ಹೆಚ್ಚಿದೆ. ಇದರ ಜೊತೆಗೆ ನಕಲಿ ದಾಖಲೆಗಳನ್ನು ಬಳಸಿಕೊಂಡು ಇನ್ನೊಬ್ಬರ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆಯುವವರ ಸಂಖ್ಯೆ ಕೂಡ ಹೆಚ್ಚಿದೆ. ಇಂಥ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ಬ್ಯಾಂಕ್ ಖಾತೆ ತೆರೆಯೋದು ಹಾಗೂ ಮೊಬೈಲ್ ಸಿಮ್ ಖರೀದಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಲು ನಿರ್ಧರಿಸಿದೆ. ಈ ಮೂಲಕ ಮೊಬೈಲ್ ಸಿಮ್ ಖರೀದಿಸುವ ಹಾಗೂ ಬ್ಯಾಂಕ್ ಖಾತೆ ತೆರೆಯುವ ವ್ಯಕ್ತಿಯ ಸಂಪೂರ್ಣ ಮಾಹಿತಿಯನ್ನು ತನಿಖೆ ಮಾಡಲು ಸಾಧ್ಯವಾಗಲಿದೆ ಎಂಬುದು ಸರ್ಕಾರದ ಯೋಚನೆ. ಇಂಥ ಕಠಿಣ ನಿಯಮಗಳಿಂದ ಇನ್ನೊಬ್ಬರ ದಾಖಲೆಗಳನ್ನು ಬಳಸಿಕೊಂಡು ಸಿಮ್ ಕಾರ್ಡ್ ಖರೀದಿಸುವ ಹಾಗೂ ಬ್ಯಾಂಕಿಂಗ್ ವ್ಯವಹಾರಗಳಿಗೆ ಸಂಬಂಧಿಸಿದ ವಂಚನೆಗಳನ್ನು ನಡೆಸಲು ಸಾಧ್ಯವಾಗೋದಿಲ್ಲ. ಸಿಎನ್ ಬಿಸಿ ವರದಿ ಪ್ರಕಾರ ಮುಂದಿನ ದಿನಗಳಲ್ಲಿ ಟೆಲಿಕಾಮ್ ಆಪರೇಟರ್ ಗಳು ಹಾಗೂ ಬ್ಯಾಂಕ್ ಗಳು ಗ್ರಾಹಕರ ಭೌತಿಕ ಪರಿಶೀಲನೆ ನಡೆಸೋದು ಕಡ್ಡಾಯವಾಗುವ ಸಾಧ್ಯತೆಯಿದೆ. ಆದ, ಪ್ರಸ್ತುತ ಯಾವದೇ ಒಬ್ಬ ವ್ಯಕ್ತಿ ಬ್ಯಾಂಕ್ ಖಾತೆ ಅಥವಾ ಸಿಮ್ ಖರೀದಿಸುವ ಸಂದರ್ಭದಲ್ಲಿ ಆನ್ ಲೈನ್ ಇ-ಕೆವೈಸಿ ಮೂಲಕ ಆಧಾರ್ ಮಾಹಿತಿಗಳನ್ನು ಪಡೆದು ಪರಿಶೀಲಿಸಲಾಗುತ್ತದಷ್ಟೇ.
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ವಂಚನೆ (Bank Fraud) ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಇದಕ್ಕೆ ಬಹುದೊಡ್ಡ ಕಾರಣ ಸಿಮ್ ಕಾರ್ಡ್ ಗಳು (SIM cards) ಸುಲಭವಾಗಿ ಸಿಗುತ್ತಿರೋದು ಹಾಗೂ ಬ್ಯಾಂಕ್ ಖಾತೆಯನ್ನು (Bank account) ಸುಲಭವಾಗಿ ತೆರೆಯಲು ಸಾಧ್ಯವಾಗುತ್ತಿರೋದು. ಭಾರತೀಯ ರಿಸರ್ವ್ ಬ್ಯಾಂಕಿನ (RBI) ಇತ್ತೀಚಿನ ವರದಿಯೊಂದರ ಪ್ರಕಾರ 2021-22ನೇ ಸಾಲಿನಲ್ಲಿ 41,000 ಕೋಟಿ ರೂ. ಮೊತ್ತದ ಬ್ಯಾಂಕ್ ವಂಚನೆ ಪ್ರಕರಣಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ನಿಯಮಗಳನ್ನು ಕಠಿಣಗೊಳಿಸಲು ಗೃಹ ವ್ಯವಹಾರಗಳ ಸಚಿವಾಲಯವು (Home affairs ministry) ಹಣಕಾಸು (Finance) ಹಾಗೂ ದೂರ ಸಂಪರ್ಕ (Telecom) ಸಚಿವಾಲಯದೊಂದಿಗೆ ಪರಿಶೀಲನಾ ಸಭೆ ನಡೆಸಿದೆ. ವಂಚನೆ ತಡೆಗೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಟಿಡಿಎಸ್ 26Q ಫಾರ್ಮ್ ಸಲ್ಲಿಕೆ ಗಡುವು ವಿಸ್ತರಣೆ; ನ.30ರ ತನಕ ಕಾಲಾವಕಾಶ
ಸಿಮ್ ಕಾರ್ಡ್ ನಿಯಮ ಬಿಗಿ
ಪ್ರಸ್ತುತ ಗ್ರಾಹಕರು 21 ರೀತಿಯ ದಾಖಲೆಗಳ ಮೂಲಕ ಸಿಮ್ ಕಾರ್ಡ್ ಪಡೆಯಬಹುದು. ಆದರೆ, ಸರ್ಕಾರ ಈ ದಾಖಲೆಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ನಿರ್ಧರಿಸಿದೆ. 21 ದಾಖಲೆಗಳ ಬದಲು ಕೇವಲ 5 ದಾಖಲೆಗಳ ಮೂಲಕ ಸಿಮ್ ನೀಡುವ ನಿಯಮ ರೂಪಿಸಲು ಸರ್ಕಾರ ಮುಂದಾಗಿದೆ. ಇನ್ನು ನಕಲಿ ಸಿಮ್ ಗಳನ್ನ ಪಡೆಯುವ ಪ್ರಕ್ರಿಯೆಗೆ ಕಡಿವಾಣ ಹಾಕಲು ಕೂಡ ಸರ್ಕಾರ ನಿರ್ಧರಿಸಿದೆ. ದಾಖಲೆಗಳ ಸಂಖ್ಯೆಯನ್ನು ಕಡಿಮೆ ಮಾಡೋದ್ರಿಂದ ನಕಲಿ ದಾಖಲೆಗಳನ್ನು ಬಳಸಿ ಸಿಮ್ ಕಾರ್ಡ್ ಖರೀದಿ ಸ್ವಲ್ಪ ಮಟ್ಟಿಗೆ ಕಷ್ಟವಾಗಲಿದೆ.
ಒಂದೇ ಐಟಿಆರ್ ಅರ್ಜಿ ನಮೂನೆ ಭರ್ತಿ ಮಾಡಿದ್ರೆ ಸಾಕು; ಏಕರೂಪದ ಫಾರ್ಮ್ ಗೆ ಐಟಿ ಇಲಾಖೆ ಪ್ರಸ್ತಾವನೆ
ಸಿಮ್ ಕಾರ್ಡ್ ಖರೀದಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಸರ್ಕಾರ ಈಗಾಗಲೇ ಬಿಗಿಗೊಳಿಸಿದೆ. ದೂರ ಸಂಪರ್ಕ ಇಲಾಖೆ ಹೊಸ ನಿಯಮಗಳ ಪ್ರಕಾರ 18 ವರ್ಷ ಕೆಳಗಿನವರಿಗೆ ಈಗ ಕಂಪನಿಗಳು ಸಿಮ್ ಕಾರ್ಡ್ ವಿತರಿಸುವಂತಿಲ್ಲ. ಹಾಗೆಯೇ ಯಾವುದೇ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದರೆ ಅಂಥವನಿಗೆ ಕೂಡ ಹೊಸ ಸಿಮ ಕಾರ್ಡ್ ನೀಡುವಂತಿಲ್ಲ. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿ ಸಿಮ್ ಕಾರ್ಡ್ ಮಾರಾಟ ಮಾಡಿದ್ರೆ ಸಂಬಂಧಪಟ್ಟ ಟೆಲಿಕಾಮ್ ಕಂಪನಿಯನ್ನು ತಪ್ಪಿತಸ್ಥನೆಂದು ಪರಿಗಣಿಸಲಾಗುತ್ತದೆ.