ಆರೋಗ್ಯ ಮತ್ತು ಜೀವ ವಿಮೆ ಪ್ರೀಮಿಯಂಗೆ ಪ್ರಸ್ತುತ ಇರುವ ಶೇ.18ರಷ್ಟು ಜಿಎಸ್ಟಿಯನ್ನು ಶೂನ್ಯಕ್ಕೆ ಇಳಿಸುವ ಕುರಿತು ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿದೆ.

ನವದೆಹಲಿ: ಆರೋಗ್ಯ ಮತ್ತು ಜೀವ ವಿಮೆ ಪ್ರೀಮಿಯಂಗೆ ಪ್ರಸ್ತುತ ಇರುವ ಶೇ.18ರಷ್ಟು ಜಿಎಸ್ಟಿಯನ್ನು ಶೂನ್ಯಕ್ಕೆ ಇಳಿಸುವ ಕುರಿತು ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿದೆ. ಬುಧವಾರ ಇಲ್ಲಿ ನಡೆದ ವಿಮೆ ಕುರಿತ ರಾಜ್ಯಗಳ ಸಚಿವರ ಮಟ್ಟದ ಸಭೆಯಲ್ಲಿ, ಸಭೆಯ ಸಮನ್ವಯಕಾರ ಸಾಮ್ರಾಟ್‌ ಚೌಧರಿ ಈ ವಿಷಯದ ತಿಳಿಸಿದ್ದಾರೆ.

ಈ ನಡುವೆ ಜಿಎಸ್ಟಿ ತೆರಿಗೆ ಇಳಿಕೆಯ ಲಾಭ ಕಂಪನಿಗಳ ಬದಲಾಗಿ ಗ್ರಾಹಕರಿಗೆ ತಲುಪುವುದನ್ನು ಖಚಿತಪಡಿಸಲು ಸೂಕ್ತ ವ್ಯವಸ್ಥೆ ಜಾರಿಯ ಬಗ್ಗೆ ಸಭೆಯಲ್ಲಿ ಭಾಗಿಯಾಗಿದ್ದ ರಾಜ್ಯಗಳು ಸಲಹೆ ನೀಡಿವೆ.

ಇದಕ್ಕೂ ಮುನ್ನ ಜಿಎಸ್ಟಿ ಮಂಡಳಿ ಸಭೆ ಉದ್ದೇಶಿಸಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರದ ಹೊಸ ಜಿಎಸ್ಟಿ ನೀತಿ ಜಾರಿಯ ಅಗತ್ಯ, ಅದರ ಲಾಭ, ನಷ್ಟದ, ವಿಮೆಗೆ ಜಿಎಸ್ಟಿ ವಿನಾಯ್ತಿ ಕುರಿತು ಮಾಹಿತಿ ಹಂಚಿಕೊಂಡರು. ಗುಂಪಿನ ಹೆಚ್ಚಿನ ಸದಸ್ಯರು ಈ ಪ್ರಸ್ತಾಪವನ್ನು ಬೆಂಬಲಿಸಿದರೂ, ಕೆಲವು ರಾಜ್ಯಗಳು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿವೆ

ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಭಯ

ಹಾಲಿ 4 ಸ್ತರದಲ್ಲಿರುವ ಜಿಎಸ್ಟಿ ದರವನ್ನು ಕೇವಲ 2ಕ್ಕೆ ಇಳಿಸುವ ಪ್ರಸ್ತಾಪದಿಂದ ಆದಾಯ ಕುಸಿತದ ಆತಂಕದಲ್ಲಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಭಯ ನೀಡಿದೆ. ಜಿಎಸ್ಟಿಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡೂ ಸಮ ಪಾಲುದಾರರು. ಮುಂದಿನ ದಿನಗಳಲ್ಲಿ ಹೊಸ ಜಿಎಸ್ಟಿ ನೀತಿಯಿಂದ ಬಳಕೆ ಹೆಚ್ಚಾಗಿ ಹೆಚ್ಚಿನ ತೆರಿಗೆ ಆದಾಯ ಹರಿದುಬರಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ವಿಶ್ವಾಸ ವ್ಯಕ್ತಪಡಿಸಿದೆ.

ತೆರಿಗೆ ಸ್ತರ ಬದಲಾವಣೆಯಿಂದ ಆರಂಭಿಕ ಹಂತದಲ್ಲಿ ಒಟ್ಟಾರೆ 50000 ಕೋಟಿ ರು.ನಷ್ಟು ತೆರಿಗೆ ಸಂಗ್ರಹ ಕಡಿತವಾಗಬಹುದಾದರೂ, ಅದನ್ನು ಸುಲಭವಾಗಿ ನಿರ್ವಹಿಸಬಹುದು ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರ ಎನ್ನಲಾಗಿದೆ.

ಹಾಲಿ ನಿಯಮಗಳ ಅನ್ವಯ ಒಟ್ಟು ತೆರಿಗೆ ಸಂಗ್ರಹದಲ್ಲಿ ಕೇಂದ್ರ ಮತ್ತು ರಾಜ್ಯಗಳು ಸಮಪಾಲು ಹೊಂದಿವೆ. ಜೊತೆಗೆ ಕೇಂದ್ರದ ಹಂಚಿಕೆ ಮಾಡಬಹುದಾದ ಆದಾಯದಲ್ಲಿ ಶೆ.41ರಷ್ಟು ರಾಜ್ಯಗಳಿಗೆ ನೀಡಲಾಗುತ್ತದೆ. ಆದರೆ ಹೊಸ ಸ್ತರದಿಂದ ಒಟ್ಟಾರೆ ಆದಾಯ ಕುಂಠಿತವಾಗಿ ತಮ್ಮ ಮೇಲೂ ಪರಿಣಾಮ ಬೀರಬಹುದು ಎಂಬುದು ರಾಜ್ಯಗಳ ಆತಂಕ