ಗುಜರಾತ್, ರಾಜಸ್ಥಾನ ಮಾದರಿ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ, ತುಮಕೂರು, ಧಾರವಾಡದಲ್ಲಿ ಮೊದಲು ಜಾರಿ
ಬೆಂಗಳೂರು(ನ.04): ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಭಾಗಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮಗಳನ್ನು ರಚಿಸಲು ಸರ್ಕಾರ ತೀರ್ಮಾನಿಸಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಗುಜರಾತ್ ಮತ್ತು ರಾಜಸ್ಥಾನ ರಾಜ್ಯದ ಮಾದರಿಯಲ್ಲಿ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮಗಳನ್ನು ರಚಿಸಲು ತೀರ್ಮಾನಿಸಲಾಗಿದೆ. ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆ ಅಂದರೆ, ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಈ ಅಧಿನಿಯಮ ಸಹಕಾರಿಯಾಗಲಿದೆ. ಆರಂಭದಲ್ಲಿ ಈ ಅಧಿನಿಯಮದಡಿ ತುಮಕೂರು ಮತ್ತು ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕೆ ಆರಂಭಿಸಲು ಅನುಮೋದನೆ ನೀಡಲಾಗಿದೆ.
Invest Karnataka 2022: ಏಷ್ಯಾದಲ್ಲೇ ಅತಿ ಹೆಚ್ಚು ಎಥೆನಾಲ್ ಉತ್ಪಾದನೆ ಮಾಡುವ ರಾಜ್ಯ ಕರ್ನಾಟಕ: ವಿಜಯ್ ನಿರಾಣಿ
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮಗಳನ್ನು ರಚಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಂದಿನ ಅಧಿವೇಶನದಲ್ಲಿ ಅಧಿನಿಯಮಗಳನ್ನು ಮಂಡಿಸುವ ಉದ್ದೇಶ ಇದೆ. ತುಮಕೂರು ಮತ್ತು ಧಾರವಾಡ ಜಿಲ್ಲೆಯಲ್ಲಿ ವಿಶೇಷ ಹೂಡಿಕೆ ಪ್ರದೇಶಗಳನ್ನು ರಚಿಸಲಾಗುವುದು. ಇದಕ್ಕಾಗಿ ರಾಜ್ಯ ಹೂಡಿಕೆ ಪ್ರಾಧಿಕಾರ ರಚನೆ ಮಾಡಲಾಗುವುದು. ಕೆಐಎಡಿಬಿ ಇದರ ಮೇಲುಸ್ತುವಾರಿ ನೋಡಿಕೊಳ್ಳಲಿದೆ. ಭೂಸ್ವಾಧೀನದಿಂದ ಹಿಡಿದು, ಕಂದಾಯ ನಿಗದಿ ಸೇರಿದಂತೆ ಇತರೆ ವಿಚಾರಗಳನ್ನು ಪ್ರಾಧಿಕಾರವು ಗಮನಿಸಲಿದೆ ಎಂದು ಮಾಹಿತಿ ನೀಡಿದರು.
2500 ಎಕರೆಗಿಂತ ಹೆಚ್ಚಿನ ಪ್ರದೇಶವನ್ನು ಹೊಂದಿರುವ ಹೂಡಿಕೆ ಪ್ರದೇಶ ಅಥವಾ 1250 ಎಕರೆಗಿಂತ ಕಡಿಮೆ ಇಲ್ಲದ ವಿಸ್ತೀರ್ಣ ಹೊಂದಿರುವ ಪ್ರದೇಶಗಳನ್ನು ವಿಶೇಷ ಹೂಡಿಕೆ ಪ್ರದೇಶವೆಂದು ಪರಿಗಣಿಸಲಾಗುವುದು. ವಿಶೇಷ ಹೂಡಿಕೆ ಪ್ರದೇಶಗಳನ್ನು ಸ್ಥಾಪಿಸಲು, ಅಭಿವೃದ್ಧಿಪಡಿಸಲು, ನಿರ್ವಹಿಸಲು ಮತ್ತು ನಿಯಂತ್ರಿಸಲು ಸರ್ಕಾರಕ್ಕೆ ಮಾತ್ರ ಅಧಿಕಾರ ಇದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ ಮತ್ತು ಪ್ರಾಜೆಕ್ಟ್ ಡೆವಲಪ್‌ಮೆಂಟ್ ಏಜೆನ್ಸಿಗಳು ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಲಿವೆ ಎಂದು ಹೇಳಿದರು.
ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳು ಹೂಡಿಕೆ ಪ್ರದೇಶಗಳಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯದೊಂದಿಗೆ ಬೃಹತ್ ಗಾತ್ರದ ಹೂಡಿಕೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮಗಳನ್ನು ರಚಿಸಿವೆ. ಅಂತೆಯೇ ರಾಜ್ಯವು ಮಾಡಲಿದೆ. ಕೈಗಾರಿಕಾ ಪ್ರದೇಶವನ್ನು ವಿಶ್ವ ದರ್ಜೆಯ ಮೂಲಸೌಕರ್ಯ, ಉತ್ಕೃಷ್ಟ ನಾಗರಿಕ ಸೌಕರ್ಯಗಳು, ಜಾಗತಿಕ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸಲು ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮಗಳನ್ನು ರಚಿಸಲು ಅಗತ್ಯ ಇದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
Global Investors Meet: ಮೊದಲ ದಿನವೇ 7 ಲಕ್ಷ ಕೋಟಿ ಹೂಡಿಕೆ, ನಿರಾಣಿ ಸಂತಸ
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಸಹಿ ಮಾಡಿರುವ 7.60 ಲಕ್ಷ ಕೋಟಿ ರು.ಗಿಂತ ಹೆಚ್ಚು ಮೊತ್ತದ ಹೂಡಿಕೆ ಪ್ರಸ್ತಾವನೆಗಳಿಗೆ ಮುಂದಿನ ಮೂರು ತಿಂಗಳಲ್ಲೇ ಒಪ್ಪಿಗೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ಈಗಾಗಲೇ 2.80 ಲಕ್ಷ ಕೋಟಿ ರು. ಮೊತ್ತದ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ ಎಂದಿದ್ದಾರೆ.
ಸಂಪುಟ ಸಭೆ ನಿರ್ಧಾರ
- ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆಡೆ ಕೈಗಾರಿಕೆ ಸ್ಥಾಪನೆಗೆ ಉತ್ತೇಜನ
- ವಿಶ್ವದರ್ಜೆಯ ಮೂಲಸೌಕರ‍್ಯದೊಂದಿಗೆ ಬೃಹತ್ ಗಾತ್ರದ ಹೂಡಿಕೆ ಪ್ರದೇಶ ಸೃಷ್ಟಿ
- ವಿಶೇಷ ಅಧಿನಿಯಮ ರೂಪಿಸಿ, ವಿಶೇಷ ಹೂಡಿಕೆ ಪ್ರದೇಶಗಳ ರಚನೆಗೆ ನಿರ್ಧಾರ
- ಇದಕ್ಕಾಗಿ ರಾಜ್ಯ ಹೂಡಿಕೆ ಪ್ರಾಧಿಕಾರ ಸ್ಥಾಪನೆ. ಕೆಐಎಡಿಬಿ ಮೇಲುಸ್ತುವಾರಿ
