ನಿರೀಕ್ಷೆಗೂ ಮೀರಿ 8 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗುವ ಭರವಸೆ ಸಿಕ್ಕಿದೆ. ಜಿಮ್‌ ಮುಕ್ತಾಯಗೊಳ್ಳುವ ನ.4ರ ವೇಳೆಗೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. 

ಬೆಂಗಳೂರು(ನ.03):  ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 2022ರ ಮೊದಲ ದಿನವೇ ನಿರೀಕ್ಷೆಗೂ ಮೀರಿ 7.6 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಗೆ ಹಲವು ಕೈಗಾರಿಕಾ ಹೂಡಿಕೆದಾರರೊಂದಿಗೆ ಒಪ್ಪಂದಗಳು ಏರ್ಪಟ್ಟಿದ್ದು, ಇದು ಜಿಮ್‌ ಕೊನೆಯ ದಿನದ ವೇಳೆಗೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದ್ದಾರೆ.

ಬುಧವಾರ ಸಮಾವೇಶ ಮುಕ್ತಾಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಜಿಮ್‌ನಲ್ಲಿ 5 ಲಕ್ಷ ಕೋಟಿ ರು. ಬಂಡವಾಳ ನಿರೀಕ್ಷಿಸಿದ್ದೆವು. ಆದರೆ, ನಿರೀಕ್ಷೆಗೂ ಮೀರಿ 7.6 ಲಕ್ಷ ಕೋಟಿ ರು.ನಷ್ಟು ಬಂಡವಾಳ ಹೂಡಿಕೆಗೆ ಒಪ್ಪಂದಗಳು ಮೊದಲ ದಿನವೇ ಏರ್ಪಟ್ಟಿವೆ. ಇದರಿಂದ ನಿರೀಕ್ಷೆಗೂ ಮೀರಿ 8 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗುವ ಭರವಸೆ ಸಿಕ್ಕಿದೆ. ಜಿಮ್‌ ಮುಕ್ತಾಯಗೊಳ್ಳುವ ನ.4ರ ವೇಳೆಗೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಹಿಂದೆ 2010ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ನಾವು ಜಾಗತಿಕ ಹೂಡಿಕೆದಾರರ ಸಮಾವೇಶ ಮಾಡಿದ್ದೆವು. ಆಗ 3.8 ಲಕ್ಷ ಕೋಟಿ ರು.ನಷ್ಟುಬಂಡವಾಳ ಹೂಡಿಕೆಯ ಒಪ್ಪಂದಗಳಿಗೆ ಸಹಿ ಆಗಿತ್ತು. ನಂತರ 2012ರಲ್ಲಿ ಮತ್ತೊಂದು ಜಿಮ್‌ ನಡೆಸಿದಾಗ ವಿವಿಧ ಕೈಗಾರಿಕೆಗಳೊಂದಿಗೆ 7.6 ಲಕ್ಷ ಕೋಟಿ ರು. ಹೂಡಿಕೆಯ ಒಪ್ಪಂದಗಳಿಗೆ ನಾವು ಸಹಿ ಮಾಡಿದ್ದೆವು ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು.

2025ಕ್ಕೆ ಮತ್ತೆ ಹೂಡಿಕೆದಾರರ ಸಮಾವೇಶ: ಸಿಎಂ ಬೊಮ್ಮಾಯಿ

ಹೊಸ ವಿಚಾರ ಅಂದರೆ ಈ ಬಾರಿ ಬಂದಿರುವ ಬಂಡವಾಳ ಹೆಚ್ಚಾಗಿ ಬೆಂಗಳೂರಿನ ಹೊರಭಾಗದಲ್ಲಿಯೇ ಹೂಡಿಕೆಯಾಗಲಿದೆ. 2 ಮತ್ತು 3ನೇ ಹಂತದ ನಗರಗಳಲ್ಲಿ ಉತ್ತಮ ಕಯಗಾರಿಕಾ ಸ್ನೇಹಿ ತಾವಾವರಣ ಸೃಷ್ಟಿಗೆ ಸರ್ಕಾರ ಕ್ರಮ ವಹಿಸುತ್ತಿದೆ. ಬರುವ ಮಾರ್ಚ್‌ಗೂ ಮುನ್ನ ಹಾಸನ, ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮೂರು ಹೊಸ ವಿಮಾನ ನಿಲ್ದಾಣಗಳು ಆರಂಭವಾಗಲಿವೆ. ನಂತರ ದಾವಣಗೆರೆ, ಬಾದಾಮಿ, ಕೊಪ್ಪಳ, ರಾಯಚೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಕ್ಕೆ ಭೂಮಿಯನ್ನು ಗುರುತಿಸುವ ಕೆಲಸ ಆಗುತ್ತಿದೆ ಎಂದರು. ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಆಯುಕ್ತೆ ಗುಂಜನ್‌ ಕೃಷ್ಣ ಉಪಸ್ಥಿತರಿದ್ದರು.