ಎಲ್ ಐಸಿ ಎಂಡಿಯಾಗಿ ಆರ್. ದೊರೈಸ್ವಾಮಿ ನೇಮಕ;ಸೆಪ್ಟೆಂಬರ್ ನಲ್ಲಿಅಧಿಕಾರ ಸ್ವೀಕಾರ
ಭಾರತೀಯ ಜೀವ ವಿಮಾ ನಿಗಮದ (ಎಲ್ ಐಸಿ) ನೂತನ ಎಂಡಿಯಾಗಿ ಆರ್. ದೊರೈಸ್ವಾಮಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.

ನವದೆಹಲಿ (ಆ.15): ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ (ಎಂಡಿ) ಆರ್. ದೊರೈಸ್ವಾಮಿ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ಪ್ರಸ್ತುತ ದೊರೈಸ್ವಾಮಿ ಮುಂಬೈ ಕೇಂದ್ರೀಯ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಪ್ರಸ್ತುತ ಎಂಡಿ ಆಗಿರುವ ಐಪೆ ಮಿನಿ ಅವರ ಸ್ಥಾನಕ್ಕೆ ದೊರೈಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಅವರು ಸೆಪ್ಟೆಂಬರ್ 1, 2023 ಅಥವಾ ಅದರ ನಂತರದ ದಿನದಲ್ಲಿ ಅಧಿಕಾರ ಸ್ವೀಕರಿಸಲಿದ್ದು, 2026ರ ಆಗಸ್ಟ್ 31 ಅಥವಾ ಮುಂದಿನ ಆದೇಶ ಬರುವ ತನಕ ಈ ಹುದ್ದೆಯನ್ನು ನಿರ್ವಹಿಸಲಿದ್ದಾರೆ ಎಂದು ರೆಗ್ಯುಲೇಟರಿ ಫೈಲ್ಲಿಂಗ್ ನಲ್ಲಿ ಎಲ್ಐಸಿ ಮಾಹಿತಿ ನೀಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳ ನಿರ್ದೇಶಕರ ಮುಖ್ಯಸ್ಥರಾಗಿರುವ ಹಣಕಾಸು ಸೇವಾ ಸಂಸ್ಥೆಗಳ ವಿಭಾಗ (ಎಫ್ ಎಸ್ ಐಬಿ) ಜೂನ್ ನಲ್ಲಿ ಎಲ್ಐಸಿ ಎಂಡಿ ಹುದ್ದೆಗೆ ದೊರೈಸ್ವಾಮಿ ಅವರ ಹೆಸರನ್ನು ಶಿಫಾರಸು ಮಾಡಿತ್ತು.
ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (ಡಿಒಪಿಟಿ) ಮಾಜಿ ಕಾರ್ಯದರ್ಶಿ ಭಾನು ಪ್ರತಾಪ್ ಶರ್ಮಾ ಎಫ್ ಎಸ್ ಐಬಿ ನೇತೃತ್ವ ವಹಿಸಿದ್ದಾರೆ. ಇನ್ನು ಈ ಹಿಂದೆ ಎಲ್ಐಸಿ ಎಂಡಿ ಉಷಾ ಸಂಗ್ವಾನ್, ಐಆರ್ ಡಿಎಐ ಮುಖ್ಯಸ್ಥ ದೇಬಶೀಶ್ ಪಾಂಡೆ, ಒರಿಯೆಂಟಲ್ ವಿಮಾ ಸಂಸ್ಥೆ ಎಂಡಿ ಎ.ವಿ.ಗಿರಿಜಾ ಕುಮಾರ್, ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ, ಸಾರ್ವಜನಿಕ ಉದ್ಯಮಗಳ ಇಲಾಖೆ ಕಾರ್ಯದರ್ಶಿ ಎಫ್ ಎಸ್ ಐಬಿ ಇತರ ಸದಸ್ಯರಾಗಿದ್ದಾರೆ.
ಎಲ್‌ಐಸಿ ನೂತನ ಜೀವನ್ ಕಿರಣ್ ಪಾಲಿಸಿ ಬಿಡುಗಡೆ; ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿದೆ
ಪ್ರಸ್ತುತ ಎಲ್ಐಸಿ ನಾಲ್ವರು ಎಂಡಿಗಳನ್ನು ಹೊಂದಿದೆ. ಮಿನಿ ಐಪೆ, ಎಂ. ಜಗನ್ನಾಥ್, ತಬ್ಲೇಷ್ ಪಾಂಡೆ ಹಾಗೂ ಸತ್ಪಲ್ ಭಾನೂ ಎಲ್ಐಸಿ ಎಂಡಿಗಳಾಗಿದ್ದಾರೆ. ಈಗ ಮಿನಿ ಐಪೆ ಅವರ ಸ್ಥಾನಕ್ಕೆ ಆರ್.ದೊರೈಸ್ವಾಮಿ ಅವರನ್ನು ನೇಮಿಸಲಾಗಿದೆ. ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರ ಸತ್ಪಲ್ ಭಾನೂ ಅವರನ್ನು ಎಲ್ ಐಸಿ ಎಂಡಿಯನ್ನಾಗಿ ನೇಮಕ ಮಾಡಿತ್ತು.
ಐಟಿ ಷೇರುಗಳಲ್ಲಿ 8 ಸಾವಿರ ಕೋಟಿ ಹೂಡಿಕೆ
ಕಳೆದ ತ್ರೈಮಾಸಿಕದಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಸಂಬಂಧಿಸಿ ಎಲ್ಐಸಿ ದಿಟ್ಟ ನಿರ್ಧಾರ ಕೈಗೊಂಡಿತ್ತು. ಬಹುತೇಕರು ಹೂಡಿಕೆ ಮಾಡಲು ಹೆದರುವ ವಲಯದಲ್ಲೇ ಎಲ್ಐಸಿ ದೊಡ್ಡ ಮೊತ್ತದಲ್ಲಿ ಹೂಡಿಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿತ್ತು. ಕಳೆದ ಜೂನ್ ತ್ರೈಮಾಸಿಕದಲ್ಲಿ ಎಲ್ಐಸಿ ಐಟಿ ಷೇರುಗಳಲ್ಲಿ 8,000 ಕೋಟಿ ರೂ. ಹೂಡಿಕೆ ಮಾಡಿತ್ತು. ಈ ವಲಯದಲ್ಲಿ ದೊಡ್ಡ ಪ್ರಮಾನದ ಹೂಡಿಕೆ ಅಪಾಯದ ಬಗ್ಗೆ ತಜ್ಞರು ಸಾಕಷ್ಟು ಎಚ್ಚರಿಕೆ ನೀಡಿದ್ದರೂ ದೇಶದ ಅತೀದೊಡ್ಡ ಜೀವ ವಿಮಾ ಸಂಸ್ಥೆ ಈ ವಲಯದಲ್ಲಿ ಹೂಡಿಕೆ ಮಾಡಲು ದೊಡ್ಡ ಮಟ್ಟದಲ್ಲಿ ಧೈರ್ಯ ತೋರಿತ್ತು. ಭಾರತದ ಅತೀದೊಡ್ಡ ಐಟಿ ಕಂಪನಿಗಳಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡಿತ್ತು. ಎಲ್ಐಸಿ ಇನ್ಫೋಸಿಸ್ ಸಂಸ್ಥೆಯ 3,636 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದೆ. ಹಾಗೆಯೇ ಟಾಟಾ ಕನ್ಸಲ್ಟೆನ್ಸಿಯ (ಟಿಸಿಎಸ್) 1,973 ಕೋಟಿ ರೂ. ಮೌಲ್ಯದ ಷೇರುಗಳು, ಟೆಕ್ ಮಹೀಂದ್ರಾದ 1,468 ಕೋಟಿ ರೂ. ಹಾಗೂ ಎಚ್ ಸಿಎಲ್ ಟೆಕ್ನಾಲಜೀಸ್ ಕಂಪನಿಯ 979 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದೆ.
ಹೊಸ ಪಾಲಿಸಿ ಪರಿಚಯಿಸಿದ ಎಲ್ಐಸಿ; ಧನ್ ವೃದ್ಧಿ ಯೋಜನೆ ಖರೀದಿ, ವಯೋಮಿತಿ, ಪ್ರೀಮಿಯಂ ಮಾಹಿತಿ ಇಲ್ಲಿದೆ
ಇನ್ಫೋಸಿಸ್ ಸಂಸ್ಥೆಯಲ್ಲಿ ಮ್ಯೂಚವಲ್ ಫಂಡ್ಸ್ ಹಾಗೂ ವಿಮಾ ಕಂಪನಿಗಳು ಒಟ್ಟು ಶೇ.31.33 ಷೇರುಗಳನ್ನು ಹೊಂದಿವೆ. ಇವುಗಳಲ್ಲಿ ಎಲ್ಐಸಿ ಇನ್ಫೋಸಿಸ್ ನ ಅತೀದೊಡ್ಡ ಷೇರುದಾರ ಸಂಸ್ಥೆಯಾಗಿದೆ. ಅಲ್ಲದೆ, ವಿಮಾ ಕಂಪನಿಗಳ ಪೈಕಿ ಅತೀಹೆಚ್ಚು ಷೇರುಗಳನ್ನು ಹೊಂದಿರುವ ಸಂಸ್ಥೆ ಕೂಡ ಆಗಿದೆ.