ನವದೆಹಲಿ(ಡಿ.01): ಭಾರತೀಯ ರೈಲ್ವೇಯ ಅತಿ ದೊಡ್ಡ ತಲೆನೋವು ಅಂದ್ರೆ ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ಟಿಕೆಟ್ ಕನ್ಫರ್ಮ್ ಮಾಡುವುದು. ಭಾರತೀಯ ರೈಲು ಪ್ರಯಾಣಿಕರ ದೊಡ್ಡ ತಲೆನೋವು ಅಂದ್ರೆ ವೇಟಿಂಗ್ ಲಿಸ್ಟ್ ಟಿಕೆಟ್ ನ್ನು ಕನ್ಫರ್ಮ್ ಟಿಕೆಟ್ ಆಗಿ ಪರಿವರ್ತಿಸಿಕೊಳ್ಳುವುದು.

ಈ ಎರಡೂ ತಲೆನೋವುಗಳಿಗೆ ಭಾರತೀಯ ರೈಲ್ವೇ ಇಲಾಖೆ ಇತಿಶ್ರೀ ಹಾಡಲು ಭರ್ಜರಿ ಪ್ಲ್ಯಾನ್ ಮಾಡಿದೆ. ಹೌದು, ವೇಟಿಂಗ್ ಲಿಸ್ಟ್ ತಲೆನೋವನ್ನು ಕೊನೆಗಾಣಿಸಲು ನಿರ್ಧರಿಸಿರುವ ರೈಲ್ವೇ ಇಲಾಖೆ, ಇದಕ್ಕಾಗಿ ಹೊಸ ಯೋಜನೆ ಸಿದ್ಧಪಡಿಸಿದೆ.

ಅದರಂತೆ ಇನ್ನು ಮುಂದೆ ನಿಗದಿತ ಸಮಯದ ಬಳಿಕ ರೈಲು ಹೊರಟ ನಂತರ ಪ್ರಯಾಣಿಕರು ಟಿಕೆಟ್ ಕ್ಯಾನ್ಸಲ್ ಮಾಡಿದರೆ, ಕ್ಯಾನ್ಸಲ್ ಆದ ಟಿಕೆಟ್ ಕುರಿತು ನೇರವಾಗಿ ಟಿಕೆಟ್ ಪರೀಕ್ಷಕರಿಗೆ ಮಾಹಿತಿ ರವಾನೆಯಾಗಲಿದೆ.

ಇದರಿಂದ ರೈಲು ಹೊರಟ ಬಳಿಕವೂ ಯಾವ ಟಿಕೆಟ್ ಕ್ಯಾನ್ಸಲ್ ಆಗಿದೆ ಎಂಬುದರ ಮಾಹಿತಿ ಪಡೆಯುವ ಟಿಕೆಟ್ ಪರೀಕ್ಷಕರು, ಆ ಸೀಟನ್ನು ವೇಟಿಂಗ್ ಲಿಸ್ಟ್ ನಲ್ಲಿರುವ ಪ್ರಯಾಣಿಕರಿಗೆ ತುರ್ತಾಗಿ ವರ್ಗಾಯಿಸಬಹುದಾಗಿದೆ.

ಇದಕ್ಕಾಗಿ ಟಿಕೆಟ್ ಪರೀಕ್ಷಕರಿಗೆ ವಿಶೇಷ ಟರ್ಮಿನಲ್ ಸಾಧನಗಳನ್ನು ರೈಲ್ವೇ ಇಲಾಖೆ ಕೊಡಮಾಡಲಿದ್ದು, ಈ ಯಂತ್ರದ ಸಹಾಯದಿಂದ ರದ್ದಾದ ಟಿಕೆಟ್ ಮಾಹಿತಿ ಮತ್ತು ಅದನ್ನು ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ವರ್ಗಾಯಿಸುವ ಪ್ರಕ್ರಿಯೆ ಸುಲಭವಾಗಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.