ಡಿಮ್ಯಾಟ್ ಖಾತೆದಾರರಿಗೆ ಗುಡ್ ನ್ಯೂಸ್; ನಾಮಿನಿ ಸೇರ್ಪಡೆ ಗಡುವು ಡಿ.31ಕ್ಕೆ ವಿಸ್ತರಣೆ
ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆಗೆ ಸೆ.30 ಅಂತಿಮ ಗಡುವಾಗಿತ್ತು.ಈಗ ಈ ಗಡುವನ್ನು ಸೆಬಿ ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿದ್ದು, ಡಿಸೆಂಬರ್ 31ರ ತನಕ ಕಾಲಾವಕಾಶ ನೀಡಲಾಗಿದೆ.
ನವದೆಹಲಿ (ಸೆ.27): ಡಿಮ್ಯಾಟ್ ಖಾತೆ ಹೊಂದಿರೋರಿಗೆ ಶುಭಸುದ್ದಿ. ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆಗೆ ನೀಡಿದ್ದ ಗಡುವನ್ನು ಸೆಬಿ ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿದ್ದು, ಡಿಸೆಂಬರ್ 31ರ ತನಕ ಕಾಲಾವಕಾಶ ನೀಡಿದೆ. ಈ ಹಿಂದೆ ನಾಮಿನಿ ಸೇರ್ಪಡೆಗೆ ಸೆ.30 ಅಂತಿಮ ಗಡುವಾಗಿತ್ತು. ಅಂತಿಮ ಗಡುವಿನೊಳಗೆ ನಾಮಿನಿ ಸೇರ್ಪಡೆ ಮಾಡದಿದ್ರೆ ಡಿಮ್ಯಾಟ್ ಖ್ಯಾತೆಯನ್ನು ನಿಷ್ಕ್ರಿಯಗೊಳಿಸೋದಾಗಿ ಸೆಬಿ ತಿಳಿಸಿತ್ತು. ಇದಕ್ಕೂ ಮುನ್ನ ನಾಮಿನಿ ಸೇರ್ಪಡೆಗೆ ಮಾ.31ರ ಗಡುವು ನೀಡಲಾಗಿತ್ತು. ಆದರೆ, ಸೆಬಿ ಆ ಬಳಿಕ ಈ ಗಡುವನ್ನು ಸೆಪ್ಟೆಂಬರ್ 30ಕ್ಕೆ ವಿಸ್ತರಿಸಿತ್ತು. ಈಗ ಮತ್ತೊಮ್ಮೆ ಗಡುವು ವಿಸ್ತರಣೆ ಮಾಡಿದೆ. ಕೆಲವು ದಿನಗಳ ಹಿಂದೆ ನ್ಯಾಷನಲ್ ಸೆಕ್ಯುರಿಟೀಸ್ ಡೆಫಾಸಿಟರಿ ಲಿಮಿಟೆಡ್ (ಎನ್ ಎಸ್ ಡಿಎಲ್) ಕೂಡ ನಾಮಿನಿ ಸೇರ್ಪಡೆಗೆ ಸಂಬಂಧಿಸಿ ಎಕ್ಸ್ ಪೋಸ್ಟ್ ಮೂಲಕ ಹೂಡಿಕೆದಾರರಿಗೆ ಅಂತಿಮ ಗಡುವನ್ನು ನೆನಪಿಸಿತ್ತು. ಹೂಡಿಕೆದಾರರಿಗೆ ತಮ್ಮ ಆಸ್ತಿಗಳನ್ನು ಸಂರಕ್ಷಿಸಿಕೊಳ್ಳಲು ನೆರವು ನೀಡಲು ಹಾಗೂ ಅದನ್ನು ಕಾನೂನುಬದ್ಧ ವಾರಸುದಾರರಿಗೆ ವರ್ಗಾಯಿಸಲು ನೆರವು ನೀಡುವ ಉದ್ದೇಶದಿಂದ ಡಿಮ್ಯಾಟ್ ಖಾತೆಗಳಿಗೆ ನಾಮಿನಿ ಸೇರ್ಪಡೆಗೊಳಿಸುವಂತೆ ಸೂಚಿಸಲಾಗಿದೆ.
2021ರ ಜುಲೈನಲ್ಲಿ ಸೆಬಿ ಈಗಾಗಲೇ ಅಸ್ತಿತ್ವದಲ್ಲಿರುವ ಎಲ್ಲ ಅರ್ಹ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆದಾರರಿಗೆ ನಾಮಿನಿ ಸೇರ್ಪಡೆಗೆ ಆಯ್ಕೆ ನೀಡಿತ್ತು. ಈಗಾಗಲೇ ಇರುವ ಹೂಡಿಕೆದಾರರು 2021ರ ಜುಲೈನಲ್ಲಿ ಸುತ್ತೋಲೆ ಹೊರಡಿಸುವ ಮುನ್ನ ನಾಮಿನಿ ಮಾಹಿತಿಗಳನ್ನು ನೀಡಿದ್ರೆ ಅವರು ಅದನ್ನು ಮತ್ತೆ ಸಲ್ಲಿಕೆ ಮಾಡುವ ಅಗತ್ಯವಿಲ್ಲ ಎಂದು ಸೆಬಿ ತಿಳಿಸಿತ್ತು. ಈಗಾಗಲೇ ಇರುವ ಹೂಡಿಕೆದಾರರು ಈ ಹಿಂದೆ ನಾಮಿನಿ ಮಾಹಿತಿ ನೀಡಿದ್ದರೆ ಮತ್ತೆ ಸಲ್ಲಿಕೆ ಮಾಡುವ ಅಗತ್ಯವಿಲ್ಲ.ನಾಮಿನಿ ಸೇರಿಸದ ಹೂಡಿಕೆದಾರರು ತನ್ನ ನಾಮಿನಿ ಸಲ್ಲಿಕೆ ಮಾಡಬಹುದು ಅಥವಾ ಸ್ಟಾಕ್ ಬ್ರೋಕರ್ಸ್ ಟ್ರೇಡಿಂಗ್ ಪ್ಲ್ಯಾಟ್ ಫಾರ್ಮ್ ನಲ್ಲಿ 2-ಫ್ಯಾಕ್ಟರ್ ದೃಢೀಕರಣ ಮೂಲಕ ನಾಮಿನಿ ಸಲ್ಲಿಕೆ ಮಾಡಬಹುದು. ಇಲ್ಲವೆ ಇಂಥ ಸೇವೆ ಒದಗಿಸುವ ಠೇವಣಿ ಪಾಲುದಾರರಡಿ ಕೂಡ ನಾಮಿನಿ ಸಲ್ಲಿಕೆ ಮಾಡಲು ಅವಕಾಶವಿದೆ.
ಆಧಾರ್ ವಿರುದ್ಧ ಮೂಡೀಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಕೇಂದ್ರ ಸರ್ಕಾರ
ಹೊಸ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆಗಳನ್ನು ತೆರೆಯುತ್ತಿರುವ ಹೂಡಿಕೆದಾರರು ಕಡ್ಡಾಯವಾಗಿ ನಾಮಿನಿ ಮಾಹಿತಿ ನೀಡಬೇಕು. ಘೋಷಣೆ ಅರ್ಜಿ ಮೂಲಕ ನಾಮಿನಿ ಮಾಹಿತಿ ನೀಡಬಹುದು ಎಂದು ಸೆಬಿ ತಿಳಿಸಿತ್ತು. ನಾಮಿನಿ ಅಥವಾ ಅಪ್ರಾಪ್ತ ವಯಸ್ಸಿನ ನಾಮಿನಿಯ ಪಾಲಕರ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಹಾಗೂ ಗುರುತಿನ ಮಾಹಿತಿಗಳನ್ನು ನೀಡುವುದು ಅವರ ಆಯ್ಕೆಗೆ ಬಿಟ್ಟಿದ್ದು ಎಂದು ಸೆಬಿ ಹೇಳಿತ್ತು.
ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆ ಹೇಗೆ?
ಹಂತ: 1: ನಿಮ್ಮ ಡಿಮ್ಯಾಟ್ ಖಾತೆಗೆ ಲಾಗಿನ್ ಆಗಿ
ಹಂತ 2:ಪ್ರೊಫೈಲ್ ವರ್ಗದಲ್ಲಿ 'My nominees'ಆಯ್ಕೆ ಮಾಡಿ. ಈಗ ನಾಮಿನಿ ಮಾಹಿತಿ ಪುಟ ತೆರೆದುಕೊಳ್ಳುತ್ತದೆ.
ಹಂತ 3: Ig 'add nominee' ಅಥವಾ 'opt-out'ಆಯ್ಕೆ ಮಾಡಿ.
ಹಂತ 4: ನಾಮಿನಿ ಮಾಹಿತಿ ಭರ್ತಿ ಮಾಡಿ ಹಾಗೂ ನಾಮಿನಿ ಐಡಿ ಪ್ರೂಫ್ ಅಪ್ಲೋಡ್ ಮಾಡಿ. ಆ ಬಳಿಕ ನಾಮಿನಿಗೆ ನೀವು ನೀಡಬಯಸುವ ಷೇರಿನ ಪ್ರಮಾಣವನ್ನು 'percentage' ಫೀಲ್ಡ್ ನಲ್ಲಿ ನಮೂದಿಸಿ.
ಹಂತ 5: ಆಧಾರ್ ಒಟಿಪಿ (OTP) ಬಳಸಿಕೊಂಡು ದಾಖಲೆಗೆ ಇ-ಸಹಿ ಮಾಡಿ.
ಹಂತ 6: ನಾಮಿನಿ ಮಾಹಿತಿಯನ್ನು ಪರಿಶೀಲಿಸಿ ಡಿಮ್ಯಾಟ್ ಖಾತೆಗೆ 24-48 ಗಂಟೆಗಳಲ್ಲಿ ಸೇರ್ಪಡೆ ಮಾಡಲಾಗುತ್ತದೆ.
ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲು ಸೆ.30 ಅಂತಿಮ ಗಡುವು, ತಪ್ಪಿದ್ರೆ ಖಾತೆ ನಿಷ್ಕ್ರಿಯ
ಪ್ಯಾನ್ ಸಲ್ಲಿಕೆ
ಇನ್ನು ಭೌತಿಕ ಸೆಕ್ಯುರಿಟಿ ಹೊಂದಿರೋರಿಗೆ ಪ್ಯಾನ್, ನಾಮನಿರ್ದೇಶನ, ಸಂಪರ್ಕ ಮಾಹಿತಿ, ಬ್ಯಾಂಕ್ ಖಾತೆ ಮಾಹಿತಿಗಳು ಹಾಗೂ ಮಾದರಿ ಸಹಿ ಸಲ್ಲಿಕೆಗೆ ಸೆಬಿ ಡಿಸೆಂಬರ್ 31ರ ತನಕ ಕಾಲಾವಕಾಶ ನೀಡಿದೆ.