ಆಧಾರ್ ವಿರುದ್ಧ ಮೂಡೀಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಕೇಂದ್ರ ಸರ್ಕಾರ
ಜಾಗತಿಕ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್ ಇತ್ತೀಚೆಗೆ ಬಿಡುಗಡೆಗೊಳಿಸಿರುವ ವರದಿಯಲ್ಲಿ ಭಾರತದ ಆಧಾರ್ ವ್ಯವಸ್ಥೆಯ ಸುರಕ್ಷತೆ ಹಾಗೂ ಗೌಪ್ಯತೆಯನ್ನು ಪ್ರಶ್ನಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಈ ಆರೋಪಗಳು ನಿರಾಧಾರವಾಗಿವೆ ಎಂದು ತಿಳಿಸಿದೆ.
ನವದೆಹಲಿ (ಸೆ.26): ಭಾರತದಲ್ಲಿ ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿ ಬಳಕೆಯಾಗುತ್ತಿರುವ ಆಧಾರ್ ಕಾರ್ಯದಕ್ಷತೆ ಪ್ರಶ್ನಿಸಿ ಜಾಗತಿಕ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್ ಬಿಡುಗಡೆಗೊಳಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈ ಕುರಿತು ಸ್ಪಷ್ಟನೆ ನೀಡಿ ಹೇಳಿಕೆ ಬಿಡುಗಡೆಗೊಳಿಸಿರುವ ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ, ಈ ವರದಿಗೆ ಯಾವುದೇ ಸಾಕ್ಷಿ ಅಥವಾ ಆಧಾರಗಳಿಲ್ಲ ಎಂದು ಹೇಳಿದೆ. ಮೂಡೀಸ್ ಸಂಸ್ಥೆ ಸೆಪ್ಟೆಂಬರ್ 21ರಂದು ಬಿಡುಗಡೆಗೊಳಿಸಿರುವ ವರದಿಯಲ್ಲಿ ಮಂಡಿಸಿರುವ ಅಭಿಪ್ರಾಯಗಳು ನಿರಾಧಾರವಾಗಿದೆ. ಕೂಲಿ ಕಾರ್ಮಿಕರಿಗೆ ಸಮರ್ಪಕ ಸೇವೆ ನೀಡುವಲ್ಲಿ ಆಧಾರ್ ವಿಫಲವಾಗಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಆಧಾರ್ ಕಾರ್ಡ್ ವಿತರಿಸುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.
'ವಿಶ್ವದ ಅತ್ಯಂತ ವಿಶ್ವಾಸಾರ್ಹ ಡಿಜಿಟಲ್ ಐಡಿ ಎಂದು ಗುರುತಿಸಿಕೊಂಡಿರುವ ಆಧಾರ್ ಬಗ್ಗೆ ಒಂದು ನಿರ್ದಿಷ್ಟ ಹೂಡಿಕೆ ಸೇವಾ ಸಂಸ್ಥೆ ನಿರಾಧಾರ ಆರೋಪಗಳನ್ನು ಮಾಡಿದೆ. ಕಳೆದ ಒಂದು ದಶಕದಲ್ಲಿ ಶತಕೋಟಿಗೂ ಅಧಿಕ ಭಾರತೀಯರು ಸಹಸ್ರಾರು ಕೋಟಿಗಿಂತ ಹೆಚ್ಚು ಬಾರಿ ಆಧಾರ್ ಬಳಸುವ ಮೂಲಕ ಅದರ ಮೇಲಿನ ತಮ್ಮ ವಿಶ್ವಾಸವನ್ನು ತೋರ್ಪಡಿಸಿದ್ದಾರೆ. ಹೀಗಾಗಿ ಇಂಥ ಒಂದು ಗುರುತು ವ್ಯವಸ್ಥೆ ಬಗ್ಗೆ ಅನುಮಾನ ವ್ಯಕ್ತಪಡಿಸೋದು, ಆಧಾರ್ ಬಳಕೆದಾರರಿಗೆ ತಮ್ಮ ಹಿತಾಸಕ್ತಿ ಬಗ್ಗೆ ಅರಿವಿಲ್ಲವೆಂದು ಹೇಳಿದಂತೆ' ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
ಆಧಾರ್ ವ್ಯವಸ್ಥೆ ಬಗ್ಗೆ ವಿಶ್ವ ಬ್ಯಾಂಕ್ ಹಾಗೂ ಐಎಂಎಫ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲದೆ, ಅನೇಕ ರಾಷ್ಟ್ರಗಳು ಈ ವ್ಯವಸ್ಥೆಯನ್ನು ತಾವು ಕೂಡ ಅಳವಡಿಸಿಕೊಳ್ಳಲು ನಮ್ಮನ್ನು ಸಂಪರ್ಕಿಸುತ್ತಿವೆ ಎಂಬ ಬಗ್ಗೆಯೂ ಸರ್ಕಾರ ಮಾಹಿತಿ ನೀಡಿದೆ.
ಮೂಡೀಸ್ ತನ್ನ ವರದಿಯಲ್ಲಿ ಆಧಾರ್ ಸುರಕ್ಷತೆ ಹಾಗೂ ಗೌಪ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಅಲ್ಲದೆ, ಆಧಾರ್ ಅನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಹಾಗೆಯೇ ಭಾರತ ಸರ್ಕಾರ ಕೂಡ ಆಧಾರ್ ಬಳಕೆದಾರರ ಮಾಹಿತಿಗಳನ್ನು ಸಂರಕ್ಷಿಸಲು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ವರದಿ ತಿಳಿಸಿತ್ತು. ಆಧಾರ್ ಬಯೋಮೆಟ್ರಿಕ್ ಮೇಲಿನ ವಿಶ್ವಾಸಾರ್ಹತೆ ಬಗ್ಗೆ ಅನುಮಾನವಿದೆ. ಅಲ್ಲದೆ, ಇದರ ಹಲವು ಪ್ರಕ್ರಿಯೆಗಳಲ್ಲಿ ಲೋಪಗಳಿವೆ ಎಂದು ಮೂಡೀಸ್ ತನ್ನ ವರದಿಯಲ್ಲಿ ತಿಳಿಸಿತ್ತು.
ಆಧಾರ್ ಏಕೆ ಸುರಕ್ಷಿತ?
ಆಧಾರ್ ವಿಶಿಷ್ಟ ಗುರುತು ಸಂಖ್ಯೆಯಾಗಿದ್ದು, ಇದನ್ನು ಎಲ್ಲ ಭಾರತೀಯ ನಾಗರಿಕರಿಗೂ ನೀಡಲಾಗಿದೆ. ಆಧಾರ್ 12 ಅಂಕೆಗಳನ್ನು ಹೊಂದಿದ್ದು, ವ್ಯಕ್ತಿಯ ಬಯೋಮೆಟ್ರಿಕ್ ಮಾಹಿತಿಗಳಾದ ಬೆರಳಚ್ಚು, ಕಣ್ರೆಪ್ಪೆ ಇತ್ಯಾದಿಗೆ ಜೋಡಣೆಯಾಗಿರುತ್ತದೆ. ಸರ್ಕಾರಿ ಸೇವೆಗಳು, ಬ್ಯಾಂಕಿಂಗ್ ಹಾಗೂ ಟೆಲಿಕಮ್ಯೂನಿಕೇಷನ್ ಸೇರಿದಂತೆ ಅನೇಕ ಉದ್ದೇಶಗಳಿಗೆ ಆಧಾರ್ ಬಳಸಲಾಗುತ್ತದೆ.
ಆಧಾರ್ ಸುರಕ್ಷತೆಗೆ ಯುಐಡಿಎಐ ಕ್ರಮ
ಆಧಾರ್ ಕಾರ್ಡ್ ಸುರಕ್ಷತೆಯ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಗಾಗ ಜನರನ್ನು ಎಚ್ಚರಿಸುತ್ತಲೇ ಇರುತ್ತದೆ. ಅಲ್ಲದೆ, ಯುಐಡಿಎಐಅಧಿಕೃತ ವೆಬ್ ಸೈಟ್ ನಲ್ಲಿ ಆಧಾರ್ ಅಥೆಂಟಿಕೇಷನ್ ಹಿಸ್ಟರಿ ಎಂಬ ಟೂಲ್ ನೀಡಲಾಗಿದೆ. ಇದರ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆ ಆಗಿದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಬಹುದು.
ನಿಮ್ಮಆಧಾರ್ ಕಾರ್ಡ್ ಎಲ್ಲೆಲ್ಲ ಬಳಕೆಯಾಗಿದೆ? ದುರ್ಬಳಕೆ ಆಗಿದೆಯಾ? ತಿಳಿಯಲು ಹೀಗೆ ಮಾಡಿ
ಆಧಾರ್ ಹಿಸ್ಟರಿ ಚೆಕ್ ಮಾಡೋದು ಹೇಗೆ?
ಹಂತ 1: ಯುಐಡಿಎಐ ಅಧಿಕೃತ ವೆಬ್ ಸೈಟ್ uidai.gov.in.ಭೇಟಿ ನೀಡಿ.
ಹಂತ 2: ‘My Aadhaar’ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದು ವೆಬ್ ಸೈಟ್ ತೆರೆದುಕೊಂಡ ತಕ್ಷಣ ಎಡ ಬದಿಯಲ್ಲಿ ಮೇಲ್ಭಾಗದಲ್ಲಿದೆ. ಈ ಆಯ್ಕೆ ಕ್ಲಿಕ್ ಮಾಡಿದ ತಕ್ಷಣ ಡ್ರಾಪ್ ಡೌನ್ ಮೆನು ಕಾಣಿಸುತ್ತದೆ.
ಹಂತ 3: ಆಧಾರ್ ಸೇವಾ ವಿಭಾಗದಲ್ಲಿ ಈಗ ‘Aadhaar Authentication History’ ಭೇಟಿ ನೀಡಿ. ಈಗ ಹೊಸ ವೆಬ್ ಪುಟ ತೆರೆದುಕೊಳ್ಳುತ್ತದೆ.
ಹಂತ 4: ನಿಮ್ಮ ಆಧಾರ್ ಸಂಖ್ಯೆ ಹಾಗೂ ಸೆಕ್ಯುರಿಟಿ ಕೋಡ್ ಬಳಸಿಕೊಂಡು ಲಾಗಿನ್ ಆಗಿ. ಆ ಬಳಿಕ send OTP ಮೇಲೆ ಕ್ಲಿಕ್ ಮಾಡಿ.
ಹಂತ 5: ಪರಿಶೀಲನೆಗೆ ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ ನಮೂದಿಸಿ. ಆ ಬಳಿಕ ‘Proceed’ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 6: ನಿಮ್ಮ ಆಧಾರ್ ಕಾರ್ಡ್ ಎಲ್ಲ ಮಾಹಿತಿಗಳು ಹಾಗೂ ಈ ಹಿಂದಿನ ದೃಢೀಕರಣ ಮನವಿಗಳು ಪರದೆ ಮೇಲೆ ಕಾಣಿಸುತ್ತವೆ.
ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಅನ್ನು ಬೇರೆ ಯಾರಾದರೂ ಬಳಸಿದ್ದರೆ ನೀವು ಆ ಬಗ್ಗೆ ಯುಐಡಿಎಐಗೆ ಮಾಹಿತಿ ನೀಡಬಹುದು. ಯುಐಡಿಎಐ ಟೋಲ್ ಫ್ರೀ ನಂಬರ್ 1947 ಅಥವಾ help@uidai.gov.in ಮೂಲಕ ಯುಎಐಡಿಎ ಸಂಪರ್ಕಿಸಿ ಮಾಹಿತಿ ಪಡೆಯಬಹುದು.