Gold Price Prediction: ಕಳೆದ 6 ವರ್ಷಗಳಲ್ಲಿ ಚಿನ್ನದ ಬೆಲೆ ಶೇ.200ರಷ್ಟು ಏರಿಕೆಯಾಗಿದ್ದು, 10 ಗ್ರಾಂ ಚಿನ್ನ 1 ಲಕ್ಷ ರೂ. ದಾಟಿದೆ. ಜಾಗತಿಕ ಅನಿಶ್ಚಿತತೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತಿವೆ.
ನವದೆಹಲಿ: ಕಳೆದ ಎರಡ್ಮೂರು ವರ್ಷಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬರುತ್ತಿದೆ. 10 ಗ್ರಾಂ 24 ಕ್ಯಾರಟ್ ಚಿನ್ನ 1 ಲಕ್ಷದ ಗಡಿ ದಾಟುವ ಮೂಲಕ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಮಾರುಕಟ್ಟೆ ಅಂಕಿ ಅಂಶಗಳ ಪ್ರಕಾರ, ಕಳೆದ 6 ವರ್ಷದಲ್ಲಿ ಚಿನ್ನದ ಬೆಲೆ ಶೇ.200ರಷ್ಟು ಏರಿಕೆಯಾಗಿದೆ. 2019ರಲ್ಲಿ 10 ಗ್ರಾಂ ಚಿನ್ನದ ಬೆಲೆ 30 ಸಾವಿರ ರೂಪಾಯಿ ಆಗಿತ್ತು. ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ವರದಿ ಪ್ರಕಾರ, ಜನವರಿ-2025ರಲ್ಲಿಯೇ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಗಡಿ ದಾಟಿತ್ತು. ಹೂಡಿಕೆದಾರರು ಚಿನ್ನದ ಮೇಲೆ ಆಕರ್ಷಿತರಾಗುತ್ತಿರುವ ಕಾರಣ ಹಳದಿ ಲೋಹದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ.
ಬರೋಬ್ಬರಿ ಶೇ.200 ರಷ್ಟು ಲಾಭ ನೀಡಿರುವ ಚಿನ್ನ
MCX ನಲ್ಲಿ ಚಿನ್ನದ ಬೆಲೆ ಮೇ 2019 ರಲ್ಲಿ 10 ಗ್ರಾಂಗೆ 32,000 ರೂ.ಗಳಷ್ಟಿತ್ತು. ಅದು ಈಗ 10 ಗ್ರಾಂಗೆ 97,800 ರೂ.ಗಳಿಗೆ ಏರಿಕೆಯಾಗಿದೆ. ಅಂದ್ರೆ ಕಳೆದ 6 ವರ್ಷಗಳಲ್ಲಿ ಹೂಡಿಕೆದಾರರಿಗೆ ಚಿನ್ನ ಬರೋಬ್ಬರಿ ಶೇ.200 ರಷ್ಟು ಲಾಭವನ್ನು ನೀಡಿದೆ. ಆರು ವರ್ಷಗಳಿಂದ ಹೂಡಿಕೆದಾರರು ಹೂಡಿಕೆಗೆ ಚಿನ್ನವನ್ನೇ ಮೊದಲ ಆಯ್ಕೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.
ಈ ವರ್ಷ ಅಂದ್ರೆ ಕೇವಲ 6 ತಿಂಗಳ ಅವಧಿಯಲ್ಲಿ ಚಿನ್ನದ ಹೂಡಿಕೆದಾರರು ಶೇ.30 ರಷ್ಟಯ ಲಾಭ ಪಡೆದುಕೊಂಡಿದ್ದಾರೆ. ಅಂದ್ರೆ ಈ 6 ತಿಂಗಳಲ್ಲಿ ಶೇ.30 ರಷ್ಟು ಚಿನ್ನದ ಬೆಲೆ ಏರಿಕೆಯಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲಿಯೂ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ದರವೂ ಲಕ್ಷದ ಗಡಿ ದಾಟಿದೆ. ಚಿನ್ನದೊಂದಿಗೆ ಬೆಳ್ಳಿ ದರ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯಲ್ಲಿ ಶೇ.35 ರಷ್ಟು ಹೆಚ್ಚಳವಾಗಿದೆ.
ಷೇರು ಮಾರುಕಟ್ಟೆಯಲ್ಲಿಯೂ ಹೆಚ್ಚು ಲಾಭ
ಈ ವರ್ಷ ನಿಫ್ಟಿ 50 ಸೂಚ್ಯಂಕವು ಶೇ.4.65 ರಷ್ಟು ಲಾಭವನ್ನು ನೀಡಿದ್ದರೆ, ಬಿಎಸ್‌ಇ ಸೆನ್ಸೆಕ್ಸ್ ಶೇ.3.75 ರಷ್ಟು ಲಾಭವನ್ನು ನೀಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಶೇ.12.50 ರಷ್ಟು ಮತ್ತು ರಿಲಯನ್ಸ್ ಷೇರುಗಳು ಶೇ.14 ಕ್ಕಿಂತ ಹೆಚ್ಚು ಲಾಭವನ್ನು ನೀಡಿವೆ.
ಮುಂದಿನ 5 ವರ್ಷದಲ್ಲಿ ಚಿನ್ನದ ಬೆಲೆ ಏರಿಕೆನಾ? ಇಳಿಕೆನಾ?
ಕೊರೊನಾ ವೈರಸ್, ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಹಣಕಾಸು ನೀತಿಗಳಲ್ಲಿ ಸಡಿಲತೆ, ಜಾಗತೀಕ ಮರುಕಟ್ಟೆಯ ಅನಿಶ್ಚಿತತೆಯ ಕಾರಣಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಇತ್ತೀಚೆಗೆ ಭಾರತ-ಪಾಕಿಸ್ತಾನ, ಇರಾನ್-ಇಸ್ರೇಲ್, ರಷ್ಯಾ-ಉಕ್ರೇನ್ ಮತ್ತು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ದೇಶಗಳ ನಡುವೆ ಸಂಘರ್ಷ ಉಂಟಾಗುತ್ತಿದೆ. ಈ ಸಂಘರ್ಷಗಳು ಆರ್ಥಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ. ಜಾಗತೀಕ ಹಣಕಾಸು ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯೇ ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಎಸ್.ಎಸ್. ವೆಲ್ತ್ ಸ್ಟ್ರೀಟ್‌ನ ಸಂಸ್ಥಾಪಕಿ ಸುಗಂಧ ಸಚ್‌ದೇವ್ ಹೇಳಿಕೆ
ಮುಂದಿನ 5 ವರ್ಷಗಳಲ್ಲಿ, ಪ್ರತಿ 10 ಗ್ರಾಂಗೆ ಚಿನ್ನದ ಬೆಲೆ ಒಂದು ಲಕ್ಷ ಮೂವತ್ತೈದು ಸಾವಿರದಿಂದ ಒಂದು ಲಕ್ಷ ನಲವತ್ತು ಸಾವಿರದವರೆಗೆ (1,35,000 ರೂ.ಗಳಿಂದ 1,40,000 ರೂ.ಗಳವರೆಗೆ) ಹೋಗಬಹುದು ಎಂದು ಎಸ್.ಎಸ್. ವೆಲ್ತ್ ಸ್ಟ್ರೀಟ್‌ನ ಸಂಸ್ಥಾಪಕಿ ಸುಗಂಧ ಸಚ್‌ದೇವ್ ಹೇಳುತ್ತಾರೆ. ಲೈವ್ ಮಿಂಟ್ ವರದಿಯ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಬಹುದು ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 2,25,000 ರೂ. ತಲುಪಬಹುದು ಎಂದು ಲೈವ್ ಮಿಂಟ್ ತನ್ನ ವರದಿಯಲ್ಲಿ ಹೇಳಿದೆ.
