ಚಿನ್ನದ ಬೆಲೆ ಏರಿಕೆಗೆ ಅಮೆರಿಕಾದ ಆರ್ಥಿಕ ಅಸ್ಥಿರತೆ ಮತ್ತು ಜಾಗತಿಕ ಯುದ್ಧದಂತಹ ಬೆಳವಣಿಗೆಗಳು ಕಾರಣವಾಗಿವೆ. ಆರ್ಥಿಕ ತಜ್ಞ ವಿಜಯ್ ರಾಜೇಶ್ ಅವರ ಪ್ರಕಾರ, ಜಾಗತಿಕ ಆರ್ಥಿಕತೆ ಸುಧಾರಿಸುವವರೆಗೆ ಚಿನ್ನದ ಬೆಲೆಯಲ್ಲಿ ದೊಡ್ಡ ಪ್ರಮಾಣದ ಕುಸಿತದ ಸಾಧ್ಯತೆ ಕಡಿಮೆ.

ಬೆಂಗಳೂರು (ಅ.14): ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ದಿನೇ ದಿನೇ ಏರುತ್ತಿದ್ದು, ಗ್ರಾಹಕರು ಚಿನ್ನ ಖರೀದಿಗೆ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ಅಸ್ಥಿರತೆಯ ಈ ಸಂದರ್ಭದಲ್ಲಿ ಚಿನ್ನದ ಬೆಲೆ ಕುಸಿತ ಯಾವಾಗ ಆಗಬಹುದು? ಏಕೆ ಏರುತ್ತಿದೆ? ಎಂಬ ಪ್ರಶ್ನೆಗಳಿಗೆ ಆರ್ಥಿಕ ತಜ್ಞ ವಿಜಯ್ ರಾಜೇಶ್ ಅವರು ಸಮಗ್ರ ವಿಶ್ಲೇಷಣೆ ನೀಡಿದ್ದಾರೆ. ಚಿನ್ನದ ಬೆಲೆ ಏರಿಕೆ ಮತ್ತು ಕುಸಿತವು ದೇಶದ ಒಳಗಿನ ಮತ್ತು ಹೊರಗಿನ ಆರ್ಥಿಕ ಬೆಳವಣಿಗೆಗಳನ್ನು ಅವಲಂಬಿಸಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಏರಿಕೆಗೆ ಕಾರಣ: ಅಮೆರಿಕಾದ ಅಸ್ಥಿರತೆ ಮತ್ತು ಜಾಗತಿಕ ಯುದ್ಧ

ಈ ಬಾರಿಯ ಚಿನ್ನದ ಬೆಲೆ ಏರಿಕೆಗೆ ಪ್ರಮುಖವಾಗಿ ದೇಶದ ಹೊರಗೆ ನಡೆಯುತ್ತಿರುವ ಜಾಗತಿಕ ಬೆಳವಣಿಗೆಗಳು ಕಾರಣವಾಗಿವೆ ಎಂದು ವಿಜಯ್ ರಾಜೇಶ್ ಹೇಳಿದ್ದಾರೆ.

1. ಅಮೆರಿಕಾದ ಆರ್ಥಿಕ ಬಿಕ್ಕಟ್ಟು: ಅಮೆರಿಕಾದಲ್ಲಿ ಸರ್ಕಾರಿ ವಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಡಾಲರ್‌ನ ಜಾಗತಿಕ ಮೌಲ್ಯ ಕುಸಿತ ಇದಕ್ಕೆ ಮುಖ್ಯ ಕಾರಣ. ಡಾಲರ್ ಮೌಲ್ಯ ಕುಸಿದಾಗಲೆಲ್ಲಾ ಚಿನ್ನದ ಮೌಲ್ಯವು ಏರಿಕೆಯಾಗುವುದು ಸಹಜ ಪ್ರಕ್ರಿಯೆ.

2. ನಿರುದ್ಯೋಗ ಮತ್ತು ಹೂಡಿಕೆ: ಅಮೆರಿಕಾದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಜೊತೆಗೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆಯು ಕಡಿಮೆಯಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಜಾಗತಿಕವಾಗಿ ಹೆಚ್ಚಾಗಿದೆ. ಆರ್ಥಿಕ ಅಸ್ಥಿರತೆಯ ಸಮಯದಲ್ಲಿ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ.

3. ಷೇರು ಮಾರುಕಟ್ಟೆಯಲ್ಲಿ ಅಸ್ಥಿರತೆ: ಅಮೆರಿಕಾ ಸೇರಿದಂತೆ ಪ್ರಮುಖ ಷೇರು ಮಾರುಕಟ್ಟೆಗಳಲ್ಲಿನ ಅಸ್ಥಿರತೆಯು ಹೂಡಿಕೆದಾರರನ್ನು ಮತ್ತಷ್ಟು ಚಿನ್ನದ ಕಡೆಗೆ ಆಕರ್ಷಿಸುತ್ತಿದೆ.

4. ಜಾಗತಿಕ ಅನಿಶ್ಚಿತತೆ: ಜಾಗತಿಕ ಯುದ್ಧ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿರುವ ಆರ್ಥಿಕ ಅನಿಶ್ಚಿತತೆ, ಅಮೆರಿಕಾದ ಸುಂಕ ನೀತಿ ಮುಂತಾದ ಕಾರಣಗಳಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು, ಇದು ಬೆಲೆ ಏರಿಕೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ.

ಭಾರತ, ಟರ್ಕಿ, ಚೀನಾದಿಂದ ಬೇಡಿಕೆ ಹೆಚ್ಚಳ:

ಇನ್ನು, ಭಾರತ, ಚೀನಾ ಮತ್ತು ಟರ್ಕಿಯಂತಹ ರಾಷ್ಟ್ರಗಳ ಜನರು ಅತೀ ಹೆಚ್ಚಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವುದು ಜಾಗತಿಕ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ. ಚಿನ್ನದ ಉತ್ಪಾದನೆಯು ಸಾಮಾನ್ಯವಾಗಿ ಸ್ಥಿರವಾಗಿರುತ್ತದೆ. ಆದರೆ ಬೇಡಿಕೆ ಹೆಚ್ಚಿದಾಗ ಬೆಲೆ ಏರಿಕೆಯಾಗುವುದು ಅನಿವಾರ್ಯವಾಗುತ್ತದೆ ಎಂದು ರಾಜೇಶ್ ವಿವರಿಸಿದರು.

ಯಾವಾಗ ಚಿನ್ನದ ಬೆಲೆ ಕುಸಿತವಾಗಲಿದೆ?

ಚಿನ್ನದ ಬೆಲೆಯ ಕುಸಿತದ ಬಗ್ಗೆ ಮಾತನಾಡಿದ ಅವರು, 'ಭಾರತದಲ್ಲಿ ಕಸ್ಟಮ್ಸ್ ಡ್ಯೂಟಿ ಶೇಕಡ 10 ರಷ್ಟಿದ್ದು, ಇದರ ಜೊತೆಗೆ ಜಿಎಸ್‌ಟಿ ಶೇಕಡ 3 ರಷ್ಟಿದೆ. ಸರ್ಕಾರ ಈ ಸುಂಕ ಮತ್ತು ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜಾಗತಿಕ ಆರ್ಥಿಕತೆ ಸುಧಾರಿಸಿದಾಗ ಮತ್ತು ಡಾಲರ್ ಮೌಲ್ಯ ಸ್ಥಿರವಾದಾಗ ಚಿನ್ನದ ಬೆಲೆ ಕಡಿಮೆಯಾಗಬಹುದು. ಆದರೆ, ದೇಶೀಯ ಸುಂಕದ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಬಹುದು. ಆದರೆ, 'ದೊಡ್ಡ ಪ್ರಮಾಣದಲ್ಲಿ ಬೆಲೆ ಕಡಿಮೆಯಾಗುವ ಸಾಧ್ಯತೆ ಕಡಿಮೆ' ಎಂದು ಆರ್ಥಿಕ ತಜ್ಞ ವಿಜಯ್ ರಾಜೇಶ್ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ, ಜಾಗತಿಕ ಆರ್ಥಿಕ ಪರಿಸ್ಥಿತಿ ಸ್ಥಿರಗೊಂಡರೆ ಮಾತ್ರ ಚಿನ್ನದ ಬೆಲೆ ಕಡಿಮೆಯಾಗುವ ನಿರೀಕ್ಷೆ ಇದೆ.