ಚಿನ್ನದ ಬೆಲೆ ಗಗನಕ್ಕೇರುತ್ತಿದ್ದು, ಕಳೆದ ಆರು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಜಾಗತಿಕ ಉದ್ವಿಗ್ನತೆ ಮತ್ತು ರೂಪಾಯಿ ಅಪಮೌಲ್ಯದಿಂದಾಗಿ ಈ ಏರಿಕೆ ಕಂಡುಬಂದಿದ್ದು, 2050ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ ₹40 ಲಕ್ಷ ತಲುಪುವ ಆಘಾತಕಾರಿ ಮುನ್ಸೂಚನೆ ಇದೆ. 

ಚಿನ್ನ ಅಂದರೆ ಭಾರತೀಯರಿಗೆ ಬರೀ ಆಭರಣವಲ್ಲ, ಅದು ಭರವಸೆಯ ಹೂಡಿಕೆ. ಆದರೆ ಇಂದು ಚಿನ್ನದ ಬೆಲೆ ಏರುತ್ತಿರುವ ವೇಗ ನೋಡಿದರೆ, ಭವಿಷ್ಯದಲ್ಲಿ ಸಾಮಾನ್ಯ ಜನರು ಚಿನ್ನದ ಅಂಗಡಿಯತ್ತ ಸುಳಿಯುವುದೂ ಕನಸಿನ ಮಾತು ಎನಿಸುತ್ತಿದೆ. ಸದ್ಯ ದೆಹಲಿ, ಬೆಂಗಳೂರು, ಜೈಪುರ ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಸರಿಸುಮಾರು ₹1.43 ಲಕ್ಷದ ಗಡಿ ದಾಟಿದೆ. ಇದು ಕೇವಲ ಆರಂಭವಷ್ಟೇ ಎಂಬುದು ಆರ್ಥಿಕ ತಜ್ಞರ ಎಚ್ಚರಿಕೆ!

ಆರು ವರ್ಷದಲ್ಲಿ ಮೂರು ಪಟ್ಟು ಹೆಚ್ಚಳ - ಇದೇನು ಮಾಯೆ?

ಕಳೆದ ಕೆಲವು ವರ್ಷಗಳಲ್ಲಿ ಚಿನ್ನ ನೀಡಿದ ಲಾಭವನ್ನು ನೋಡಿ ಹೂಡಿಕೆದಾರರೇ ಬೆರಗಾಗಿದ್ದಾರೆ. 2000ನೇ ಇಸವಿಯಲ್ಲಿ ಕೇವಲ ₹4,400 ಇದ್ದ 10 ಗ್ರಾಂ ಚಿನ್ನದ ಬೆಲೆ, 2020ರಲ್ಲಿ ₹50,000ಕ್ಕೆ ಏರಿತ್ತು. ಆದರೆ ಅಲ್ಲಿಂದ ಕೇವಲ ಆರೇ ವರ್ಷಗಳಲ್ಲಿ ಇಂದು ₹1,40,000 ದಾಟಿದೆ! ಅಂದರೆ ಕಳೆದ ಆರು ವರ್ಷಗಳಲ್ಲಿ ಹೂಡಿಕೆದಾರರ ಹಣ ಮೂರು ಪಟ್ಟು ಹೆಚ್ಚಾಗಿದೆ. ಕಳೆದ 30 ವರ್ಷಗಳ ಲೆಕ್ಕಾಚಾರ ನೋಡಿದರೆ, ಚಿನ್ನವು ವರ್ಷಕ್ಕೆ ಸರಾಸರಿ ಶೇ. 10.83 ರಷ್ಟು ಬೆಳೆಯುತ್ತಾ ಬಂದಿದೆ, ಇದು ಬ್ಯಾಂಕ್ ಎಫ್‌ಡಿಗಳಿಗಿಂತಲೂ ಅತಿ ಹೆಚ್ಚಿನ ಲಾಭವಾಗಿದೆ.

ಚಿನ್ನದ ಬೆಲೆ ಗಗನಕ್ಕೇರಲು ಕಾರಣವೇನು?

ಚಿನ್ನದ ಬೆಲೆ ಗಗನಕ್ಕೇರಲು ಪ್ರಮುಖ ಕಾರಣ ರೂಪಾಯಿಯ ಅಪಮೌಲ್ಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಉದ್ವಿಗ್ನತೆ. ಯುದ್ಧಗಳು, ದೇಶಗಳ ನಡುವಿನ ಆರ್ಥಿಕ ಸಮರ ಮತ್ತು ಅಮೆರಿಕನ್ ಡಾಲರ್‌ನ ಅನಿಶ್ಚಿತತೆಯಿಂದಾಗಿ ಜಗತ್ತಿನ ಕೇಂದ್ರ ಬ್ಯಾಂಕ್‌ಗಳು ಚಿನ್ನವನ್ನು ದೊಡ್ಡ ಮಟ್ಟದಲ್ಲಿ ಖರೀದಿಸಿ ಸಂಗ್ರಹಿಸಿಡುತ್ತಿವೆ. ಪರಿಣಾಮವಾಗಿ ಸುರಕ್ಷಿತ ಹೂಡಿಕೆಯ ತಾಣವಾಗಿ ಚಿನ್ನದ ಬೇಡಿಕೆ ಕುದುರಿದ್ದು, ಬೆಲೆ ಪ್ರತಿ ವರ್ಷ ಶೇ. 5 ರಿಂದ 7 ರಷ್ಟು ಜಾಗತಿಕವಾಗಿ ಹೆಚ್ಚುತ್ತಿದೆ.

2050ರಲ್ಲಿ ಮದುವೆ 10 ಗ್ರಾಂ ಬಂಗಾರ ಖರೀದಿಗೆ 1 ಕೋಟಿ ಸಾಲಲ್ಲ!

ಚಿನ್ನವು ಈಗಿನ ಶೇ. 14.6 ರ ದರದಲ್ಲಿ ಬೆಳೆಯುತ್ತಾ ಹೋದರೆ, 2050ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ ₹40 ಲಕ್ಷಕ್ಕೆ ತಲುಪುವ ಸಾಧ್ಯತೆಯಿದೆ. ಅಂದರೆ, ಇಂದಿನ ₹1 ಕೋಟಿ ರೂಪಾಯಿ ಅಂದು ಕೇವಲ 25 ಗ್ರಾಂ (ಸುಮಾರು 3 ತೊಲ) ಚಿನ್ನವನ್ನು ಖರೀದಿಸಲು ಮಾತ್ರ ಸಾಕಾಗಬಹುದು! ಅಂದು ನಿಮ್ಮ ಮನೆಯ ಮದುವೆಗೆ ಸರಳವಾಗಿ ಚಿನ್ನ ಖರೀದಿಸಬೇಕೆಂದರೂ ಕೋಟಿ ಕೋಟಿ ಹಣ ಬೇಕಾಗುತ್ತದೆ. ಹಣದುಬ್ಬರವು ಹಣದ ಮೌಲ್ಯವನ್ನು ನುಂಗಿ ಹಾಕುವ ಮುನ್ನ ಸ್ಮಾರ್ಟ್ ಹೂಡಿಕೆಯತ್ತ ಗಮನ ಹರಿಸುವುದು ಈಗ ಅನಿವಾರ್ಯವಾಗಿದೆ.

ಹಣ ಉಳಿಸಿದರೆ ಸಾಲದು, ಚಿನ್ನದ ಮೇಲೆ ಕಣ್ಣಿರಲಿ!

ಬರಿ ಹಣವನ್ನು ಉಳಿತಾಯ ಖಾತೆಯಲ್ಲಿ ಇಡುವುದರಿಂದ ಭವಿಷ್ಯದ ಹಣದುಬ್ಬರವನ್ನು ಎದುರಿಸಲು ಸಾಧ್ಯವಿಲ್ಲ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಚಿನ್ನದ ಬೆಲೆಯು ಬಡ್ಡಿದರಗಳು ಮತ್ತು ಜಾಗತಿಕ ಆರ್ಥಿಕ ನೀತಿಗಳ ಮೇಲೆ ಅವಲಂಬಿತವಾಗಿದ್ದರೂ, ಇತಿಹಾಸದ ದಾಖಲೆಗಳು ಚಿನ್ನವೇ ಅತ್ಯುತ್ತಮ ಆಸ್ತಿ ಎಂಬುದನ್ನು ಸಾಬೀತುಪಡಿಸಿವೆ. ಹೀಗಾಗಿ, 2050ರ ವೇಳೆಗೆ ನಿಮ್ಮ ಆರ್ಥಿಕ ಸ್ಥಿತಿ ಭದ್ರವಾಗಿರಬೇಕಾದರೆ ಈಗಿನಿಂದಲೇ ಯೋಜಿತ ಹೂಡಿಕೆ ಅಗತ್ಯ.