ಕಳೆದ 3 ತಿಂಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರೀ ಇಳಿಕೆ ಕಂಡಿವೆ. ಅಮೆರಿಕದ ಹಣದುಬ್ಬರ ಮತ್ತು ಬಡ್ಡಿದರದ ಬದಲಾವಣೆಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ದರಗಳು ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ.

ನವದೆಹಲಿ: ಕಳೆದ 3 ತಿಂಗಳಲ್ಲಿ 10 ಗ್ರಾಂಗೆ ಭರ್ಜರಿ 30000 ರು.ವರೆಗೆ ಇಳಿಕೆ ಕಂಡಿರುವ ಚಿನ್ನ ಮತ್ತು ಕೆಜಿಗೆ 1.50 ಲಕ್ಷ ರು.ವರೆಗೂ ಇಳಿಕೆ ಕಂಡಿರುವ ಎರಡೂ ಲೋಹಗಳ ದರ ಮುಂದಿನ ವಾರದಲ್ಲಿ ಮತ್ತಷ್ಟು ಇಳಿಯುವ ಸಾಧ್ಯತೆ ಎಂದು ಹೇಳಲಾಗಿದೆ.

ಶೀಘ್ರವೇ ಅಮೆರಿಕದ ಸರ್ಕಾರ ಹಣದುಬ್ಬರದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಿದೆ. ಇದನ್ನು ಆಧರಿಸಿ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ತನ್ನ ಬಡ್ಡಿದರದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಹೂಡಿಕೆದಾರರು ಅಮೆರಿಕದ ಮೇಲೆ ಕಣ್ಣಿಟ್ಟಿದ್ದಾರೆ. ಮೇಲ್ಕಂಡ ಎರಡೂ ಬೆಳವಣಿಗೆ ಆಗುವವರೆಗೂ ಸದ್ಯ ಇಳಿಕೆ ಹಾದಿಯಲ್ಲಿರುವ ಚಿನ್ನ ಮತ್ತು ಬೆಳ್ಳಿಯ ದರ ಮತ್ತಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಜೆಎಂ ಫೈನಾನ್ಷಿಯಲ್ ಸರ್ವಿಸಸ್‌ನ ಉಪಾಧ್ಯಕ್ಷ ಪ್ರಣವ್ ಮೇರ್ ಹೇಳಿದ್ದಾರೆ.

ಕಳೆದ ಆಗಸ್ಟ್‌ನಿಂದ ಇಲ್ಲಿಯವರೆಗೆ ಚಿನ್ನ ಹಾಗೂ ಬೆಳ್ಳಿ ಬೆಲೆ ಹಂತ ಹಂತವಾಗಿ ಇಳಿಯುತ್ತಾ ಬಂದಿದೆ. 3 ತಿಂಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 30000 ರು.ವರೆಗೆ ಮತ್ತು ಬೆಳ್ಳಿ ದರ ಕೆಜಿಗೆ 1.50 ಲಕ್ಷ ರು.ವರೆಗೂ ಇಳಿಕೆ ಕಂಡಿದೆ.

24 ಕ್ಯಾರೆಟ್ ಹಂತ ಹಂತವಾಗಿ ಕುಸಿತ ಹೇಗೆ?

2026ರ ಆಗಸ್ಟ್‌ನಲ್ಲಿ 10 ಗ್ರಾಂಗೆ ಸರಾಸರಿ 1,55,000 ರು.ನಷ್ಟಿದ್ದ 24 ಕ್ಯಾರಟ್ ಚಿನ್ನದ ದರ, ಸೆಪ್ಟೆಂಬರ್‌ನಲ್ಲಿ ಸರಾಸರಿ 1,53,730 ರು.ಗೆ ಇಳಿಯಿತು.

ಅಕ್ಟೋಬರ್ ತಿಂಗಳಲ್ಲಿ ಈ ಇಳಿಕೆಯ ವೇಗ ಹೆಚ್ಚಾಗಿ ಸರಾಸರಿ ದರ 1,46,970 ರು.ಗೆ ಕುಸಿಯಿತು ಮತ್ತು ತಿಂಗಳ ಅಂತ್ಯಕ್ಕೆ 1,38,880 ರು.ಗೆ ತಲುಪಿತು.

ನವೆಂಬರ್‌ನಲ್ಲಿ ಸರಾಸರಿ ದರ 1,38,420 ರು.ನಷ್ಟಿದ್ದು, ನವೆಂಬರ್ 21ರ ಹೊತ್ತಿಗೆ 24 ಕ್ಯಾರಟ್ ಚಿನ್ನದ ದರ 10 ಗ್ರಾಂಗೆ 1,25,570 ರು.ಗೆ ಇಳಿದಿದೆ.

22 ಕ್ಯಾರೆಟ್‌ ಹಂತ ಹಂತ ಕುಸಿತ ಹೇಗೆ?

ಇನ್ನು ಬೆಂಗಳೂರಲ್ಲಿ 22 ಕ್ಯಾರಟ್‌ನ ಆಭರಣ ಚಿನ್ನದ ದರದಲ್ಲೂ ಇದೇ ರೀತಿಯ ಇಳಿಕೆ ದಾಖಲಾಗಿದೆ.

ಆಗಸ್ಟ್‌ನಲ್ಲಿ 10 ಗ್ರಾಂಗೆ ಸರಾಸರಿ 1,42,090 ರು.ನಷ್ಟಿದ್ದ 22 ಕ್ಯಾರಟ್ ಚಿನ್ನವು ಸೆಪ್ಟೆಂಬರ್‌ನಲ್ಲಿ ಸರಾಸರಿ 1,40,910 ರು.ಗೆ ಮತ್ತು ಅಕ್ಟೋಬರ್‌ನಲ್ಲಿ ಸರಾಸರಿ 1,34,720 ರು.ಗೆ ತಗ್ಗಿತು.

ನವೆಂಬರ್ ತಿಂಗಳಲ್ಲಿ ಏರಿಳಿತಗಳ ನಡುವೆಯೇ ದರ ಮತ್ತಷ್ಟು ಇಳಿಕೆಯಾಗಿ, ನವೆಂಬರ್ 21ರ ವೇಳೆಗೆ 10 ಗ್ರಾಂ 22 ಕ್ಯಾರಟ್ ಚಿನ್ನ 1,15,100 ರು.ಗೆ ಬಂದು ನಿಂತಿದೆ. ಈ ಮೂಲಕ 3 ತಿಂಗಳಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಸುಮಾರು 26,990 ರು.ನಷ್ಟು ಇಳಿಕೆಯಾಗಿದೆ.