ಪ್ರಸ್ತುತ ಚಿನ್ನದ ಬೆಲೆ ಗಗನಕ್ಕೇರಿದ್ದು, ಬಿಲ್ ಇಲ್ಲದೆ ನಗದು ನೀಡಿ ಖರೀದಿಸಿದರೆ ಭಾರಿ ರಿಯಾಯಿತಿ ಸಿಗುತ್ತಿದೆ. ತೆರಿಗೆ ಉಳಿಸುವ ಉದ್ದೇಶದಿಂದ ವ್ಯಾಪಾರಿಗಳು ಈ ರಿಯಾಯಿತಿ ನೀಡುತ್ತಿದ್ದಾರೆ. ಆದರೆ, ಹೀಗೆ ಬಿಲ್ ಇಲ್ಲದೆ ಚಿನ್ನ ಖರೀದಿಸಿದರೆ ಏನಾಗುತ್ತದೆ? ಏನೆಲ್ಲ ತೊಂದರೆಗಳು ಎದುರಾಗಬಹುದು ತಿಳಿಯಿರಿ.
ಚಿನ್ನದ ಬೆಲೆ ಇತ್ತೀಚೆಗೆ ಸ್ವಲ್ಪ ಇಳಿಕೆಯಾಗಿದ್ದರೂ ಅದಿನ್ನೂ ಸಾಮಾನ್ಯ ಜನರ ಪಾಲಿಗೆ ಹುಳಿ ದ್ರಾಕ್ಷಿಯಂತಾಗಿದೆ. ಸದ್ಯ 10 ಗ್ರಾಂ ಚಿನ್ನದ ಬೆಲೆ ಸುಮಾರು ₹1,48,600 ಇದೆ. ಇದು ಬಡಜನರಿಗೆ ದುಬಾರಿಯೇ ಸರಿ. ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಬೆಲೆ ಹೆಚ್ಚಿದ್ದರೂ ಜನರು ಚಿನ್ನ ಖರೀದಿಸಲು ಮುಂದಾಗುತ್ತಾರೆ. ಇಂತಹ ಸಮಯದಲ್ಲಿ ಚಿನ್ನದ ಮೇಲೆ ರಿಯಾಯಿತಿ ಸಿಕ್ಕರೆ ಖರೀದಿದಾರರಿಗೆ ಸ್ವಲ್ಪ ಅನುಕೂಲವಾಗುತ್ತದೆ. ಹಾಗಾದರೆ ಈ ರಿಯಾಯಿತಿ ಎಲ್ಲಿ ಸಿಗುತ್ತದೆ ಮತ್ತು ಹೇಗೆ ಸಿಗುತ್ತದೆ? ಎಂಬುದನ್ನು ಇಲ್ಲಿ ನೋಡೋಣ.
10 ಗ್ರಾಂ ಚಿನ್ನದ ಮೇಲೆ ₹5,000 ಡಿಸ್ಕೌಂಟ್ ಎಲ್ಲಿ ಸಿಗುತ್ತೆ?
ಚಿನ್ನದ ಬೆಲೆ ಹೆಚ್ಚಾಗಿರುವುದರ ಜೊತೆಗೆ ಅದರ ಮೇಲಿನ ತೆರಿಗೆ ಕೂಡ ಇದೆ. ಕಳೆದ ವರ್ಷ ಚಿನ್ನದ ಬೆಲೆ ಸುಮಾರು 28% ಹೆಚ್ಚಾಗಿದೆ. ಇದೇ ಕಾರಣಕ್ಕೆ ಕೆಲವರು ಅಧಿಕೃತ ಬಿಲ್ ಇಲ್ಲದೆ ನಗದು ನೀಡಿ ಚಿನ್ನ ಖರೀದಿಸಲು ಮುಂದಾಗುತ್ತಿದ್ದಾರೆ. ಬ್ಲೂಮ್‌ಬರ್ಗ್ ವರದಿ ಪ್ರಕಾರ, ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿಸುವವರಿಗೆ ಬಿಲ್ ಇಲ್ಲದೆ ನಗದು ಪಾವತಿ ಮಾಡಿದರೆ ಮಾರುಕಟ್ಟೆ ಬೆಲೆಯಲ್ಲಿ ಶೇ.6ರವರೆಗೆ ರಿಯಾಯಿತಿ ಸಿಗಬಹುದು. ಚಿಲ್ಲರೆ ಖರೀದಿಯಲ್ಲಿ ಚೌಕಾಸಿ ಮಾಡಿದರೆ 10 ಗ್ರಾಂ ಚಿನ್ನದ ಮೇಲೆ ₹10,000ವರೆಗೆ ಉಳಿತಾಯವಾಗುವ ಸಾಧ್ಯತೆಯೂ ಇದೆ.
ಚಿನ್ನದ ಮೇಲೆ ₹5,000 ಡಿಸ್ಕೌಂಟ್ ಏಕೆ ಸಿಗುತ್ತೆ?
ಭಾರತಕ್ಕೆ ಆಮದು ಮಾಡಿಕೊಳ್ಳುವ ಚಿನ್ನದ ಮೇಲೆ 15% ಕಸ್ಟಮ್ಸ್ ಸುಂಕವಿದೆ. ಚಿನ್ನದ ಚಿಲ್ಲರೆ ಮಾರಾಟದ ಮೇಲೆ ಶೇ.3 ಜಿಎಸ್‌ಟಿ ಕೂಡ ಅನ್ವಯಿಸುತ್ತದೆ. ಅಂದರೆ ಒಟ್ಟಾರೆ ತೆರಿಗೆ ಹೊರೆ ಹೆಚ್ಚಾಗಿದೆ. ಬಿಲ್ ಅಥವಾ ರಶೀದಿ ಇಲ್ಲದೆ ನಗದು ವ್ಯವಹಾರ ನಡೆದಾಗ ಈ ವಹಿವಾಟು ಅಧಿಕೃತ ದಾಖಲೆಗಳಲ್ಲಿ ಬರುವುದಿಲ್ಲ. ಹೀಗಾಗಿ ಕೆಲವು ವ್ಯಾಪಾರಿಗಳು ತೆರಿಗೆ ಮತ್ತು ದಾಖಲೆಗಳ ವೆಚ್ಚವನ್ನು ತಪ್ಪಿಸಿಕೊಳ್ಳುತ್ತಾರೆ. ಇದರಿಂದ ಅವರಿಗೆ ಆಗುವ ಉಳಿತಾಯದ ಒಂದು ಭಾಗವನ್ನು ಗ್ರಾಹಕರಿಗೆ ರಿಯಾಯಿತಿಯಾಗಿ ನೀಡಲಾಗುತ್ತದೆ.
ಬಿಲ್ ಇಲ್ಲದೆ ಚಿನ್ನ ಖರೀದಿಸಿದರೆ ಏನು ಸಮಸ್ಯೆ?
ರಿಯಾಯಿತಿ ಸಿಗುತ್ತದೆ ಎಂದು ಬಿಲ್ ಇಲ್ಲದೆ ಚಿನ್ನ ಖರೀದಿಸುವುದು ಅಪಾಯಕಾರಿಯಾಗಬಹುದು. ಬಿಲ್ ಇಲ್ಲದಿದ್ದರೆ ಚಿನ್ನದ ಶುದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಕಷ್ಟ. ಚಿನ್ನದ ಗುಣಮಟ್ಟ ಅಥವಾ ಕ್ಯಾರೆಟ್ ವಿಚಾರಕ್ಕೆ ತೊಂದರೆ ಆಗಬಹುದು ಅಂದರೆ ನೀವು ಮುಂದೆ ಅದೇ ಚಿನ್ನವನ್ನು ಮಾರಾಟ ಮಾಡಲು ಅಥವಾ ಬದಲಾಯಿಸಲು ಹೋದಾಗ ತೊಂದರೆಗೆ ಸಿಲುಕಿಕೊಳ್ಳುತ್ತೀರಿ. ಸರಿಯಾದ ದಾಖಲೆ ಇಲ್ಲದ ಚಿನ್ನಕ್ಕೆ ಬೆಲೆಯೂ ಸಿಗುವುದಿಲ್ಲ. ಇದೊಂದು ಕಳ್ಳತನದಿಂದ ಬಂದಿರಬಹುದು ಎಂಬ ಅನುಮಾನವೂ ನಿಮ್ಮ ಮೇಲೆ ಬರಬಹುದು. ಏಕೆಂದರೆ ಖರೀದಿ ಮಾಡಿದ್ದಕ್ಕೆ ಯಾವುದೇ ಅಧಿಕೃತ ಬಿಲ್ ಅಥವಾ ದಾಖಲೆಗಳು ಇರುವುದಿಲ್ಲ.
ಅಷ್ಟೇ ಅಲ್ಲ, ಇನ್‌ವಾಯ್ಸ್ ಅಥವಾ ರಶೀದಿ ಇಲ್ಲದೆ ದೊಡ್ಡ ಮೊತ್ತದ ನಗದು ವಹಿವಾಟು ನಡೆಸಿದರೆ ಮುಂದೆ ತೆರಿಗೆ ಅಥವಾ ಇತರ ಸರ್ಕಾರಿ ಸಂಸ್ಥೆಗಳ ಪರಿಶೀಲನೆ ಎದುರಾಗುವ ಸಾಧ್ಯತೆಯೂ ಇದೆ. ಹೀಗಾಗಿ ರಿಯಾಯಿತಿ ಸಿಗುತ್ತದೆ ಎಂಬ ಕಾರಣಕ್ಕೆ ಮಾತ್ರ ಬಿಲ್ ಇಲ್ಲದೆ ಚಿನ್ನ ಖರೀದಿಸುವ ಬದಲು, ಚಿನ್ನದ ಶುದ್ಧತೆ, ಹಾಲ್‌ಮಾರ್ಕ್ ಮತ್ತು ಖರೀದಿ ಬಿಲ್‌ಗಳನ್ನು ಖಚಿತಪಡಿಸಿಕೊಂಡು ವ್ಯವಹಾರ ಮಾಡುವುದು ಮುಖ್ಯ.


