ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿಯವರ ಚಿನ್ನದ ಖರೀದಿ ಮಿತಿಗೊಳಿಸುವ ಕರೆ ದೇಶದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮವನ್ನು ಹೂಡಿಕೆ ತಜ್ಞ ಬಿ.ವಿ.ರುದ್ರಮೂರ್ತಿ ವಿಶ್ಲೇಷಿಸಿದ್ದಾರೆ. ಚಿನ್ನದ ಆಮದು, ವಿದೇಶಿ ವಿನಿಮಯ ಮತ್ತು ಪರ್ಯಾಯ ಹೂಡಿಕೆಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ.
ಮುಖಾಮುಖಿ- ಬಿ.ವಿ.ರುದ್ರಮೂರ್ತಿ, ಹೂಡಿಕೆ ತಜ್ಞ

- ಸಿದ್ದು ಚಿಕ್ಕಬಳ್ಳೇಕೆರೆ
ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಅಗತ್ಯವಿದ್ದರೆ ಮಾತ್ರ ಚಿನ್ನವನ್ನು ಖರೀದಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮೋದಿ ಅವರ ಈ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯಗಳೂ ಕೇಳಿಬಂದಿವೆ. ದೇಶದ ವಿದೇಶಿ ವಿನಿಮಯದಲ್ಲಿ ಚಿನ್ನವು ಶೇ.10 ರಷ್ಟು ಪಾಲು ಹೊಂದಿದ್ದು, ಈ ಹಳದಿ ಲೋಹದ ಖರೀದಿ ಮುಂದೂಡದಿದ್ದರೆ ಭವಿಷ್ಯದಲ್ಲಿ ಹಳದಿ ಲೋಹ ತುಟ್ಟಿಯಾಗುವ ಆತಂಕ ಕಾಡುತ್ತಿದೆ. ಕಳೆದ ಎರಡು ವರ್ಷದಲ್ಲಿ ಈಗಾಗಲೇ ಬಂಗಾರದ ಬೆಲೆ ಶೇ.150 ರಿಂದ 200 ರಷ್ಟು ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಖರೀದಿಗೆ ಕಡಿವಾಣ ಬೀಳದಿದ್ದರೆ ಏನಾಗುತ್ತದೆ ? ಚಿನ್ನಕ್ಕೆ ಪರ್ಯಾಯವಾಗಿ ಹೂಡಿಕೆ ಮೂಲಗಳೇನು? ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದರೆ ಉಂಟಾಗುವ ಅನಾಹುತವೇನು ? ಮುಂತಾದ ವಿಷಯಗಳ ಬಗ್ಗೆ ಹೂಡಿಕೆ ತಜ್ಞ ಬಿ.ವಿ.ರುದ್ರಮೂರ್ತಿ ‘ಕನ್ನಡಪ್ರಭ’ ಜತೆ ಮುಖಾಮುಖಿ ಮಾತನಾಡಿದ್ದಾರೆ.
ಅಗತ್ಯವಿದ್ದರೆ ಮಾತ್ರ ಚಿನ್ನ ಖರೀದಿಸಿ ಅಂತಾರೆ ಪ್ರಧಾನಿ. ನೀವೇನಂತೀರಾ?
ನರೇಂದ್ರ ಮೋದಿ ಅವರು ಹೇಳಿರುವುದು ಸರಿ ಇದೆ. ಕಳೆದ ವರ್ಷದ ದೇಶದ ಆಮದು-ರಫ್ತು ಗಮನಿಸಿದರೆ ಭಾರತವು 23 ರಿಂದ 25 ಸಾವಿರ ಕೋಟಿ ರು. ಮೌಲ್ಯ(ಶೇ.30)ದ ಕಚ್ಚಾತೈಲ ಆಮದು ಮಾಡಿಕೊಂಡಿದೆ. ಎರಡನೆಯ ಪ್ರಮುಖ ಆಮದು ಚಿನ್ನ (ಶೇ.10). ಈ ಹಿನ್ನೆಲೆಯಲ್ಲಿಯೇ ಮೋದಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಮಿತವಾಗಿ ಬಳಸಿ, ಅಗತ್ಯವಿದ್ದರೆ ಮಾತ್ರ ಚಿನ್ನ ಖರೀದಿಸಿ ಎಂದು ಕರೆ ನೀಡಿದ್ದಾರೆ. ಮಧ್ಯಪ್ರಾಚ್ಯ ಯುದ್ಧದಿಂದಾಗಿ ಉಂಟಾಗಿರುವ ಬಿಕ್ಕಟ್ಟು ಈಗಾಗಲೇ ದೇಶದ ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡಿದೆ. ಈ ಪರಿಸ್ಥಿತಿಯೇ ಮುಂದುವರೆದರೆ ಭವಿಷ್ಯದಲ್ಲಿ ಸಂಕಷ್ಟದ ದಿನಗಳು ಎದುರಾಗಲಿವೆ. ಇದರ ಅಂದಾಜು ಇದ್ದೇ ಈ ರೀತಿ ಕರೆ ನೀಡಿದ್ದಾರೆ.
ಇದು ಬಂಗಾರದ ಬೆಲೆ ಭೀಕರವಾಗಿ ಹೆಚ್ಚಳವಾಗಲಿದೆ ಎಂಬುದರ ಮುನ್ಸೂಚನೆಯೇ?
ಮೋದಿ ಅವರ ಹೇಳಿಕೆಯಿಂದ ಖಡಿಂತವಾಗಿಯೂ ಚಿನ್ನದ ದರ ಹೆಚ್ಚಳವಾಗುವುದಿಲ್ಲ. ಏಕೆಂದರೆ ಬಂಗಾರದ ಬೆಲೆ ನಿರ್ಧಾರವಾಗುವುದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಮತ್ತು ಡಾಲರ್ ಎದುರು ರುಪಾಯಿ ಬೆಲೆ ಕುಸಿದರೆ ಮಾತ್ರ. ಚಿನ್ನದ ಆಮದು ಇದೇ ರೀತಿ ಮುಂದುವರೆದರೆ ಖಂಡಿತವಾಯೂಗಿ ದರ ಅಧಿಕವಾಗಲಿದೆ. ಇದರಲ್ಲಿ ಯಾವುದೇ ಸಂಶಯ ಬೇಡ. ಕಳೆದೆರಡು ವರ್ಷದಲ್ಲಿ ಚಿನ್ನದ ಬೆಲೆ ಶೇ.150 ರಿಂದ 200 ರವರೆಗೂ ಅಧಿಕವಾಗಿದೆ. ಖರೀದಿ ಕಡಿಮೆಯಾದರೆ ಮಾತ್ರ ಚಿನ್ನದ ದರದಲ್ಲಿ ಇಳಿಕೆಯಾಗಲು ಸಾಧ್ಯ. ಆದ್ದರಿಂದಲೇ ಚಿನ್ನ ಖರೀದಿ ಮುಂದೂಡುವಂತೆ ಪ್ರಧಾನಿ ಕರೆ ನೀಡಿದ್ದಾರೆ.
* ಪ್ರಧಾನಿ ಕರೆಗೆ ಓಗೊಟ್ಟು ಖರೀದಿ ಪ್ರಮಾಣ ಇಳಿಕೆಯಾಗಲಿದೆಯೇ?
ಖಂಡಿತವಾಗಿ. ಏಕೆಂದರೆ ಕೊರೋನಾ ಸಂದರ್ಭದಲ್ಲಿ ಮೋದಿಯವರು ದೇಶದ ಜನರಿಗೆ ನೀಡಿದ ಸೂಚನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲನೆಯಾಗಿವೆ ಎಂಬುದನ್ನು ಇಲ್ಲಿ ಗಮನಿಸಬೇಕಿದೆ. ಮೋದಿಯವರ 13 ವರ್ಷದ ಆಳ್ವಿಕೆ ನೋಡಿದರೂ ಇದು ಸ್ಪಷ್ಟ. ದೇಶದ ಜನ ಚಿನ್ನದ ಖರೀದಿ ಕಡಿಮೆ ಮಾಡುವ ಸಾಧ್ಯತೆ ಇದೆ.
*ಶುಭ ಸಮಾರಂಭಗಳಿಗೆ ಚಿನ್ನ ಖರೀದಿಸುವುದು ಸಂಪ್ರದಾಯವಾಗಿರುವ ದೇಶದಲ್ಲಿ ಖರೀದಿಗೆ ಬ್ರೇಕ್ ಬೀಳುವುದು ಕಾರ್ಯಸಾಧ್ಯವೇ?
ಶುಭ ಸಮಾರಂಭಗಳಿಗೆ ಅಗತ್ಯವಾದ ಚಿನ್ನ ಖರೀದಿ ಮಾಡಬೇಡಿ ಎಂದು ಮೋದಿ ಹೇಳಿಲ್ಲ. ಹೊಸದಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವುದನ್ನು ಮುಂದೂಡಿ ಎಂದು ಹೇಳಿಕೆ ನೀಡಿದ್ದಾರೆ. ಇದು ಹೇಳಿಕೆಯಷ್ಟೇ, ಆದೇಶವಲ್ಲ. ಮೋದಿಯನ್ನು ಈ ಕಾರಣಕ್ಕಾಗಿ ವಿರೋಧಿಸುವವರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ.
*ವಿದೇಶಿ ವಿನಿಮಯ ಕಡಿಮೆಗೊಳಿಸಲು ಇರುವ ಮಾರ್ಗವೇನು?
ನಾನು ಈ ಮೊದಲೇ ಹೇಳಿದಂತೆ ಶೇ.10ರಷ್ಟು ವಿದೇಶಿ ವಿನಿಮಯ ಚಿನ್ನವೊಂದಕ್ಕೇ ಬೇಕಾಗುತ್ತದೆ. ಕಚ್ಚಾತೈಲವನ್ನು ಖರೀದಿಸಲೇಬೇಕು. ಇನ್ನುಳಿದಂತೆ ಯಂತ್ರೋಪಕರಣ, ಔಷಧಿ ಮತ್ತಿತರ ವಸ್ತುಗಳ ಆಮದು ಅತ್ಯವಶ್ಯಕವಾಗಿದೆ. ಆದರೆ ಚಿನ್ನ ಖರೀದಿ ಮುಂದೂಡಿದರೆ ನಷ್ಟವೇನೂ ಆಗುವುದಿಲ್ಲ. ಆದ್ದರಿಂದ ಚಿನ್ನ ಖರೀದಿ ಮುಂದೂಡಿದರೆ ವಿದೇಶಿ ವಿನಿಮಯದಲ್ಲಿ ಭಾರೀ ಇಳಿಕೆಯಾಗಲಿದೆ. ದೇಶೀಯವಾಗಿಯೂ ಚಿನ್ನದ ಉತ್ಪಾದನೆ ಅಧಿಕವಾದರೆ ವಿದೇಶಿ ವಿನಿಮಯ ಉಳಿಯಲಿದೆ.
* ಭಾರತದ ವಾರ್ಷಿಕ ಚಿನ್ನದ ಆಮದು ಎಷ್ಟಿದೆ?
ಕಳೆದ ವರ್ಷದ ಅಂಕಿ ಅಂಶಗಳನ್ನು ನೋಡಿದರೆ ನಾವು ವಾರ್ಷಿಕ ಒಂದು ಸಾವಿರ ಟನ್ ಚಿನ್ನ ಆಮದು ಮಾಡಿಕೊಂಡಿದ್ದೇವೆ.
* ದೇಶೀಯ ಚಿನ್ನದ ಉತ್ಪಾದನೆ ಎಷ್ಟಿದೆ?
ವಾರ್ಷಿಕವಾಗಿ ನಾವು 100 ಟನ್ ಚಿನ್ನವನ್ನೂ ಸಹ ದೇಶದಲ್ಲಿ ಉತ್ಪಾದಿಸುತ್ತಿಲ್ಲ.
* 2025 ಅಕ್ಟೋಬರ್ ಮತ್ತು 2026 ಮಾರ್ಚ್ ನಡುವೆ ವಿದೇಶಿ ಬ್ಯಾಂಕ್‌ಗಳಲ್ಲಿ ವಿದೇಶಿ ವಿನಿಮಯದ ಮೀಸಲಾಗಿ ಇಟ್ಟಿದ್ದ 104 ಟನ್ ಚಿನ್ನವನ್ನು ಆರ್‌ಬಿಐ ವಾಪಸ್ ತಂದಿದ್ದು ಏಕೆ ?
ಜಾಗತಿಕ ವಿದ್ಯಮಾನದ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಅರ್ಥ ಮಾಡಿಕೊಂಡೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ವಿದೇಶಿ ಬ್ಯಾಂಕ್‌ಗಳಲ್ಲಿ ವಿದೇಶಿ ವಿನಿಮಯದ ಮೀಸಲಾಗಿ ಇಟ್ಟಿದ್ದ ಭಾರೀ ಪ್ರಮಾಣದ ಚಿನ್ನವನ್ನು ವಾಪಸ್ ತಂದಿದೆ.
* ಭಾರತದ ಖಜಾನೆಯಲ್ಲಿ ಭಾರೀ ಪ್ರಮಾಣದಲ್ಲಿ ಚಿನ್ನ ಶೇಖರಿಸುತ್ತಿರುವುದರ ಹಿಂದಿನ ಗುಟ್ಟೇನು ?
ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂಬ ಮುನ್ಸೂಚನೆ ದೊರೆತಿದ್ದರಿಂದಲೇ ಕೇಂದ್ರ ಸರ್ಕಾರ ಚಿನ್ನದ ಶೇಖರಣೆಗೆ ಆದ್ಯತೆ ನೀಡಿತು. ನಮ್ಮಲ್ಲಿ ಪ್ರಸ್ತುತ 690 ಬಿಲಿಯನ್ ಡಾಲರ್ ವಿದೇಶಿ ವಿನಿಮಯವಿದೆ. ಒಂದು ಡಾಲರ್‌ಗೆ 95 ರು. ಮೌಲ್ಯವಿದೆ. ನಾವು ಆಮದು ಪ್ರಮಾಣ ಹೆಚ್ಚಿಸುತ್ತಾ ಹೋದರೆ ರುಪಾಯಿ ಮೌಲ್ಯ ಡಾಲರ್ ಎದುರು 105 ರಿಂದ 110 ರು. ಆಗುತ್ತದೆ. ಈ ಕುಸಿತ ವಿದೇಶಿ ವಿನಿಮಯದ ಮೇಲೆ ಭಾರೀ ಹೊಡೆತ ನೀಡಲಿದ್ದು, ಔಷಧಿ ಸೇರಿ ಅಗತ್ಯ ವಸ್ತುಗಳಿಗೂ ಅಧಿಕ ಬೆಲೆ ತೆತ್ತು ಆಮದು ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದಲೇ ಕೇಂದ್ರ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.
* ಚಿನ್ನದ ಮೇಲಿನ ಹೂಡಿಕೆ ಸುಭದ್ರ ಎಂಬ ವಾತಾವರಣ ನಿರ್ಮಾಣವಾಗಿರುವುದು ಹೂಡಿಕೆಗೆ ಪ್ರೋತ್ಸಾಹ ನೀಡುತ್ತಿದೆಯೇ?
ಜನ ಯಾವಾಗಲೂ ಬೆಲೆ ಅಧಿಕವಾಗಿರುವುದನ್ನೇ ಖರೀದಿ ಮಾಡಲು ಬಯಸುತ್ತಾರೆ. ಇದರಿಂದ ದರ ಇನ್ನೂ ಹೆಚ್ಚಳವಾಗುತ್ತದೆ. ಚಿನ್ನದ ವಿಷಯದಲ್ಲಿ ಆಗುತ್ತಿರುವುದೂ ಇದೇ. ಚಿನ್ನದ ಬೆಲೆ ಅಧಿಕವಾಗುತ್ತಿದ್ದರೂ ಇದರಲ್ಲಿ ಹೂಡಿಕೆ ಮಾಡುವುದು ಜಾಣತನವಲ್ಲ. ಬೇಡಿಕೆ ಕಡಿಮೆಯಾದರೆ ಚಿನ್ನದ ಬೆಲೆ ಕುಸಿತವಾಗಲಿದೆ. ಈಗ ಷೇರು ಮಾರುಕಟ್ಟೆ ಕುಸಿದಿದೆ. ಆದ್ದರಿಂದ ಯಾರೂ ಹೂಡಿಕೆ ಮಾಡಲು ಮುಂದಾಗುತ್ತಿಲ್ಲ. ಆದರೆ ಭವಿಷ್ಯದಲ್ಲಿ ಷೇರುಪೇಟೆ ಚೇತರಿಕೆ ಕಾಣಲಿದ್ದು ಹೂಡಿಕೆದಾರರು ಲಾಭ ಗಳಿಸಲಿದ್ದಾರೆ.
* ಚಿನ್ನದ ಮೇಲೆ ಹೂಡಿಕೆ ಮಾಡಬಾರದು ಎಂದಾದರೆ ಬೇರೆ ಯಾವ ವಲಯ ಹೂಡಿಕೆಗೆ ಈಗ ಕಾಲ ಪ್ರಶಸ್ತವಾಗಿದೆ?
ನಮ್ಮಲ್ಲಿ ಹಿಂದಿನ ಕಾಲದಲ್ಲಿ ಹಣಕಾಸು ಸಾಕ್ಷರತೆ ಅಷ್ಟೊಂದು ಇರಲಿಲ್ಲ. ಆದ್ದರಿಂದ ಚಿನ್ನದ ಮೇಲೆ ಹೂಡಿಕೆ ಮಾಡುವುದು ಅಧಿಕವಾಗಿತ್ತು. ಆದರೆ ಈಗ ಹೂಡಿಕೆ ವಲಯ ವಿಶಾಲವಾಗಿದೆ. ಬ್ಯಾಂಕ್, ಅಂಚೆ ಕಚೇರಿ, ಷೇರುಪೇಟೆ, ರಿಯಲ್ ಎಸ್ಟೇಟ್ ಸೇರಿ ಬೇರೆ ವಲಯಗಳಲ್ಲಿ ಹೂಡಿಕೆ ಮಾಡಬಹುದು. ಇವುಗಳೂ ಹೂಡಿಕೆಗೆ ಸೂಕ್ತ.
* ಭಾರತವನ್ನು ಹೊರತುಪಡಿಸಿ ಬೇರೆ ಯಾವ ದೇಶ ಹೆಚ್ಚಾಗಿ ಚಿನ್ನ ಆಮದು ಮಾಡಿಕೊಳ್ಳುತ್ತಿದೆ ?
ಚೀನಾ ದೇಶವು ಅಧಿಕ ಪ್ರಮಾಣದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದಲೇ ಅಲ್ಲಿನ ಆರ್ಥಿಕತೆಗೆ ಹೊಡೆತ ಬೀಳಲಿದೆ ಎಂದು ಮಧ್ಯಪ್ರಾಚ್ಯ ಯುದ್ಧಕ್ಕೆ ಚೀನಾ ಪ್ರತ್ಯಕ್ಷವಾಗಿ ಬೆಂಬಲ ನೀಡುತ್ತಿಲ್ಲ.
* ಚಿನ್ನದ ಬೆಲೆ ಅಧಿಕವಾದರೆ ಚಿನ್ನಾಭರಣ ತಯಾರಕರು, ಮಾರಾಟಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲವೇ ?
ಚಿನ್ನಾಭರಣಗಳ ತಯಾರಿಕೆ ಮತ್ತು ಮಾರಾಟ ಕಳೆದ ಒಂದೂವರೆ ವರ್ಷದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರಿಂದ ತಯಾರಕರು ಮತ್ತು ಮಾರಾಟಗಾರರು ಒಳ್ಳೆಯ ಸಂಪಾದನೆ ಮಾಡಿದ್ದು, ದೇಶದ ಜನಸಂಖ್ಯೆಗೆ ಹೋಲಿಸಿದರೆ ನಷ್ಟಕ್ಕೆ ಒಳಗಾಗುವವರ ಸಂಖ್ಯೆ ಬಹಳ ಕಡಿಮೆ. ದೇಶ ಮುಖ್ಯವೋ-ಉದ್ಯಮ ಮುಖ್ಯವೋ ಎಂಬ ವಿಷಯ ಬಂದಾಗ ದೇಶವೇ ನಮಗೆ ಮುಖ್ಯವಾಗುತ್ತದೆ.


