ನವದೆಹಲಿ (ಅ.31): ಕಪ್ಪುಹಣದ ಹಾವಳಿ ತಡೆಗಟ್ಟಲು 2016ರಲ್ಲಿ ‘ನೋಟು ರದ್ದತಿ’ ಯೋಜನೆ ಜಾರಿಗೆ ತಂದಿದ್ದ ಮತ್ತು ಅದಕ್ಕೂ ಮೊದಲು ಕಪ್ಪುಹಣ ಘೋಷಣೆ ಮಾಡಿ ಸೂಕ್ತ ತೆರಿಗೆ ಪಾವತಿಸಿ ಸಕ್ರಮ ಮಾಡಿಕೊಳ್ಳುವ ಯೋಜನೆ ಜಾರಿಗೆ ತಂದಿದ್ದ ನರೇಂದ್ರ ಮೋದಿ ಸರ್ಕಾರ, ಈಗ ಇಂತಹ ಇನ್ನೊಂದು ಬೃಹತ್‌ ಯೋಜನೆ ಜಾರಿಗೊಳಿಸುವ ಸಿದ್ಧತೆಯಲ್ಲಿ ತೊಡಗಿದೆ. ಕಪ್ಪುಹಣ ತಡೆವ ಉದ್ದೇಶದಿಂದ ‘ಚಿನ್ನ ಕ್ಷಮಾದಾನ’ ಎಂಬ ಮಹತ್ವದ ಯೋಜನೆಯನ್ನು ಶೀಘ್ರ ಜಾರಿಗೆ ತರುವ ನಿರೀಕ್ಷೆಯಿದೆ. ಇದು ಅಪಾರ ಅಘೋಷಿತ ಚಿನ್ನ ಇಟ್ಟುಕೊಂಡ ಕಾಳಧನಿಕರಿಗೆ ಗುದ್ದು ನೀಡುವ ಯೋಜನೆಯಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕೇಂದ್ರ ವಿತ್ತ ಸಚಿವಾಲಯ ಹಾಗೂ ಕಂದಾಯ ಸಚಿವಾಲಯಗಳು ಜಂಟಿಯಾಗಿ ಈ ಪ್ರಸ್ತಾಪ ಸಿದ್ಧಪಡಿಸಿದ್ದು, ಸಚಿವ ಸಂಪುಟಕ್ಕೆ ಕಳಿಸಿದೆ. ಸಂಪುಟ ಸಭೆಯಲ್ಲಿ ಈ ಯೋಜನೆಯ ಬಗ್ಗೆ ಚರ್ಚೆ ನಡೆದು ಸದ್ಯದಲ್ಲೇ ಅನುಮೋದನೆ ದೊರಕುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಯಾವುದರ ಮೇಲೆ ಹೂಡಿಕೆ ಮಾಡಿದರೆ ಒಳಿತು

ಏನಿದು ಚಿನ್ನ ಕ್ಷಮಾದಾನ ಯೋಜನೆ:

ಜನರು ತಮ್ಮ ಬಳಿ ನಿರ್ದಿಷ್ಟಮಿತಿ ಆಚೆ ಇರುವ ‘ಬಿಲ್‌ ರಹಿತವಾದ ಚಿನ್ನ’ವನ್ನು ಸ್ವಯಂಘೋಷಣೆ ಮಾಡಿಕೊಂಡು ಸರ್ಕಾರಕ್ಕೆ ವಿವರ ಸಲ್ಲಿಸಬೇಕು. ಘೋಷಿತ ಚಿನ್ನದ ಆಧಾರದ ಮೇರೆಗೆ ಅದರ ಮೇಲೆ ತೆರಿಗೆ ರೂಪದ ದಂಡ ವಿಧಿಸಲಾಗುತ್ತದೆ. ಈ ರೀತಿ ಘೋಷಣೆ ಮಾಡಿ ತೆರಿಗೆ ಕಟ್ಟಿದವರಿಗೆ ಕ್ಷಮಾದಾನ ನೀಡಲಾಗುತ್ತದೆ. ಇದೇ ‘ಚಿನ್ನ ಕ್ಷಮಾದಾನ’ ಯೋಜನೆ. ಈ ರೀತಿ ಘೋಷಿಸಿಕೊಳ್ಳಲು ದಿನಾಂಕದ ಮಿತಿಯನ್ನು ಸರ್ಕಾರ ನಿಗದಿಪಡಿಸುತ್ತದೆ.

ಒಂದು ವೇಳೆ ‘ಬಿಲ್‌ ರಹಿತ ಚಿನ್ನ’ದ ವಿವರವನ್ನು ನಿಗದಿತ ದಿನಾಂಕ ಅಂತ್ಯಗೊಂಡ ಬಳಿಕವೂ ಬಹಿರಂಗಪಡಿಸದೇ ಹೋದರೆ, ದಾಳಿ ವೇಳೆ ಸಿಕ್ಕಿಬಿದ್ದಾಗ ಅಂಥವರ ಮೇಲೆ ಭಾರೀ ದಂಡ ವಿಧಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಇದೇ ವೇಳೆ ದೇಗುಲಗಳು ಹಾಗೂ ದತ್ತಿ ಸಂಸ್ಥೆಗಳಲ್ಲಿ (ಟ್ರಸ್ಟ್‌ಗಳಲ್ಲಿ) ಭಾರೀ ಪ್ರಮಾಣದ ಚಿನ್ನ ಇದ್ದು, ಅದನ್ನು ‘ಉತ್ಪಾದಕ ಬಂಡವಾಳ’ ಎಂದೂ ಸರ್ಕಾರ ಘೋಷಿಸುವ ಸಾಧ್ಯತೆ ಇದೆ.

ಈ ಹಿಂದೆ ಅಘೋಷಿತ ಆದಾಯ ಪತ್ತೆ ಮಾಡಲು ‘ಆದಾಯ ತೆರಿಗೆ ಕ್ಷಮಾದಾನ’ ಯೋಜನೆಯನ್ನೂ ಅಪನಗದೀಕರಣದ ಸಂದರ್ಭದಲ್ಲಿ ಸರ್ಕಾರ ಜಾರಿಗೆ ತಂದಿತ್ತು. ಅಘೋಷಿತ ಆದಾಯವನ್ನು ಆ ಸಂದರ್ಭದಲ್ಲಿ ಘೋಷಿಸಿಕೊಂಡವರಿಗೆ ‘ದಂಡ ರೂಪದ ತೆರಿಗೆ’ ವಿಧಿಸಿ ಕ್ಷಮಾದಾನ ನೀಡಲಾಗುತ್ತಿತ್ತು.

ಚಿನ್ನದ ಬಿಸ್ಕತ್: ಮಾಜಿ ಸಚಿವನಿಗೇ ಟೋಪಿ ಹಾಕಿದ ಮನ್ಸೂರ್

ಎಷ್ಟುಬಂಗಾರ ಇಟ್ಕೊಳ್ಳಬಹುದು?

ಭಾರತದ ಸರ್ಕಾರದ ನಿಯಮಗಳ ಅನ್ವಯ ಯಾವುದೇ ವ್ಯಕ್ತಿ ಇಂತಿಷ್ಟೇ ಚಿನ್ನ ಸಂಗ್ರಹಿಸಬೇಕು ಎಂಬ ನಿಯಮವೇನೂ ಇಲ್ಲ. ಆದರೆ ತಾವು ಸಂಗ್ರಹಿಸಿದ ಅಥವಾ ಖರೀದಿಸಿದ ಚಿನ್ನಕ್ಕೆ ದಾಖಲೆ ಇಟ್ಟುಕೊಳ್ಳುವುದು ಕಡ್ಡಾಯ. ಐಟಿ ದಾಳಿ ನಡೆದರೆ, ಅದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಬೇಕಾಗುತ್ತದೆ. ಬಹುತೇಕ ದಾಳಿ ವೇಳೆ ಆದಾಯದ ಮೂಲಕ್ಕಿಂತ ಹೆಚ್ಚಿನ ಚಿನ್ನ ಪತ್ತೆಯಾದರೆ ಅದನ್ನು ವಶಪಡಿಸಿಕೊಳ್ಳುವುದಿಲ್ಲ. ಅದಕ್ಕೆ ಅವರು ರೂಪಿಸಿಕೊಂಡಿರುವ ಸ್ವಯಂ ಮಾನದಂಡ ಕಾರಣ. ಉದಾಹರಣೆಗೆ ವಿವಾಹಿತ ಮಹಿಳೆಯೊಬ್ಬರು 500 ಗ್ರಾಂವರೆಗೆ, ಅವಿವಾಹಿತ ಮಹಿಳೆ 250 ಗ್ರಾಂವರೆಗೆ, ಪುರುಷನೊಬ್ಬ 100 ಗ್ರಾಂವರೆಗೆ ಚಿನ್ನ ಹೊಂದಿದ್ದರೆ ಅದನ್ನು ವಶಪಡಿಸಿಕೊಳ್ಳಲು ಹೋಗುವುದಿಲ್ಲ. ಜೊತೆಗೆ ವಂಶಪಾರಂಪರ್ಯವಾಗಿ ಹಿಂದಿನವರಿಂದ ಬಂದ ಚಿನ್ನಾಭರಣಗಳು ಇದ್ದರೆ ಅದನ್ನೂ ವಶಪಡಿಸಿಕೊಳ್ಳಲು ಹೋಗುವುದಿಲ್ಲ.