ನಾನಿಲ್ಲಿ ಬಂದು 5 ದಿನವಾಯ್ತು ಕೆಲವೊಮ್ಮೆ ರಾತ್ರಿಯ ವೇಳೆಗೆ 10 ಸಾವಿರ ರೂಪಾಯಿಯೂ ಆಗುತ್ತದೆ. ಎಷ್ಟು ದೂರ ನಾನು ಹೋಗುತ್ತೇನೋ ಅಷ್ಟು ಜಾಸ್ತಿ ದುಡ್ಡು ಆಗುತ್ತದೆ. ಈ ಐಡಿಯಾವನ್ನು ನನಗೆ ನನ್ನ ಗರ್ಲ್‌ಫ್ರೆಂಡ್ ನೀಡಿದಳು ಎಂದು ಆತ ಹೇಳಿಕೊಂಡಿದ್ದಾನೆ. 

ಕುಂಭಮೇಳದ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮೋನಾಲೀಸಾಳಂತಹ ಅನೇಕ ತೆರೆಮರೆಯ ಪ್ರತಿಭೆಗಳು ಕುಂಭಮೇಳದಿಂದಾಗಿ ಪ್ರಸಿದ್ಧಿಗೆ ಬಂದಿದ್ದಾರೆ. ಕುಂಭಮೇಳದಲ್ಲಿ ಮಾಡಬಹುದಾದ ಬ್ಯುಸಿನೆಸ್ ಐಡಿಯಾಗಳ ಬಗ್ಗೆ ಈ ಹಿಂದೆ ವೈರಲ್ ಆಗಿತ್ತು. ಹಾಗೆಯೇ ಕೆಲ ದಿನಗಳ ಹಿಂದೆ ಕುಂಭ ಮೇಳದಲ್ಲಿ ಯುವಕನೋರ್ವ ಅಲ್ಲಿಗೆ ಬಂದ ಭಕ್ತರಿಗೆ ಗಂಧದ ತಿಲಕವಿಟ್ಟೆ ಸಾವಿರಾರು ರೂಪಾಯಿ ದುಡಿದೆ ಎಂದು ಹೇಳುವ ವೀಡಿಯೋವೋಂದು ವೈರಲ್ ಆಗಿತ್ತು. ಈ ನಡುವೆ ಯುವಕನೋರ್ವ ಗೆಳತಿಯ ಮಾತು ಕೇಳಿ ಕುಂಭಮೇಳಕ್ಕೆ ಬಂದು ಉದ್ಯಮಿಯಾಗಿದ್ದಾನೆ. ಈತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬರೋಬ್ಬರಿ 144 ವರ್ಷಗಳ ನಂತರ ನಡೆಯುತ್ತಿರುವ ಮಹಾ ಕುಂಭ ಮೇಳ ಹಲವಾರು ಕಾರಣಗಳಿಂದ ಸುದ್ದಿಯಾಗುತ್ತಿದೆ. ಇಲ್ಲಿ ಬಂದ ಭಕ್ತರಿಗೆ ಹಲ್ಲುಜ್ಜುವಂತಹ ಬೇವಿನ ಕಡ್ಡಿಯನ್ನು ಮಾರಿ ಯುವಕನೋರ್ವ ಸಾವಿರಾರು ರೂಪಾಯಿ ಗಳಿಕೆ ಮಾಡಿದ ಎನ್ನುವ ವಿಚಾರವೊಂದು ಸಾಮಾಜಿಕ ಜಾಲತಾಣದ ಹಲವು ಪೇಜ್‌ಗಳಲ್ಲಿ ಮೀಮ್ಸ್ ಆಗಿ ವೈರಲ್ ಆಗಿತ್ತು. ಈಗ ಅದೇ ಯುವಕನ ವೀಡಿಯೋವೊಂದು ವೈರಲ್ ಆಗಿದ್ದು, ತನಗೆ ಹೇಗೆ ಈ ಉದ್ಯಮದ ಐಡಿಯಾ ಸಿಕ್ತು ಎಂಬ ಬಗ್ಗೆ ಮಾತನಾಡಿದ್ದಾನೆ. 

marketing.growmatics ಎಂಬ ಇನ್ಸ್ಟಾಗ್ರಾಮ್ ಪೇಜ್ ಈ ವೀಡಿಯೋವನ್ನು ಪೋಸ್ಟ್ ಮಾಡಿದೆ. ವೈರಲ್ ಆದ ವೀಡಿಯೋದಲ್ಲಿ ಯುವಕ ಕೈಯಲ್ಲಿ ಬೇವಿನ ಕಡ್ಡಿಯನ್ನು ಹಿಡಿದುಕೊಂಡು ಖುಷಿ ಖುಷಿಯಾಗಿ ಮಾತನಾಡಿದ್ದಾನೆ. ತಾನು ತನ್ನ ಗೆಳತಿಯ ಮಾತು ಕೇಳಿ ಈ ಕುಂಭಮೇಳಕ್ಕೆ ಬಂದೆ. ಆಕೆ ನನ್ನನ್ನು ಇಲ್ಲಿಗೆ ಹೋಗುವಂತೆ ಹೇಳಿದಳು. ಹಾಗೆಯೇ ಒಂದೇ ಒಂದು ರೂಪಾಯಿ ಹೂಡಿಕೆ ಮಾಡದೇ ಹಣ ಗಳಿಸುವ ಬಗ್ಗೆ ಆಕೆಯೇ ಸಲಹೆ ನೀಡಿದಳು. ಇದರಿಂದ ನಾನು ಒಟ್ಟು 30ರಿಂದ 40 ಸಾವಿರ ರೂಪಾಯಿ ಗಳಿಕೆ ಮಾಡಿದ್ದೇನೆ. ಇಂದು ನಾನಿಲ್ಲಿ ಬಂದು 5 ದಿನವಾಯ್ತು ಕೆಲವೊಮ್ಮೆ ರಾತ್ರಿಯ ವೇಳೆಗೆ 10 ಸಾವಿರ ರೂಪಾಯಿಯೂ ಆಗುತ್ತದೆ. ಎಷ್ಟು ದೂರ ನಾನು ಹೋಗುತ್ತೇನೋ ಅಷ್ಟು ಜಾಸ್ತಿ ದುಡ್ಡು ಆಗುತ್ತದೆ. ಈ ಐಡಿಯಾವನ್ನು ನನಗೆ ನನ್ನ ಗರ್ಲ್‌ಫ್ರೆಂಡ್ ನೀಡಿದಳು ಎಂದು ಆತ ಹೇಳಿಕೊಂಡಿದ್ದಾನೆ. ಆಕೆಯಿಂದಾಗಿ ನಾನು ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ಹಣ ಗಳಿಸಲು ಸಾಧ್ಯವಾಯ್ತು. ಈ ಖುಷಿಯನ್ನು ನಾನು ಆಕೆಯೊಂದಿಗೆ ಹಾಗೂ ಪರಿವಾರದೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಆತ ಹೇಳಿಕೊಂಡಿದ್ದಾನೆ.

ಆತನ ವೀಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದೆ. ಈ ವೀಡಿಯೋವನ್ನು ಪೋಸ್ಟ್ ಮಾಡಿದ marketing.growmatics ಕೆಲವೊಮ್ಮೆ, ಸರಿಯಾದ ವ್ಯಕ್ತಿ ನೀಡುವ ಸಣ್ಣ ಪ್ರೋತ್ಸಾಹವು ದೊಡ್ಡ ಅವಕಾಶಗಳಾಗಿ ಬದಲಾಗಬಹುದು. ಈ ಸರಳ ಉಪಾಯ ಹೇಗೆ ವೈರಲ್ ಯಶಸ್ಸಾಗಿ ಬದಲಾಯಿತು ಎಂದು ಬರೆದುಕೊಂಡಿದ್ದಾರೆ. ಇತ್ತ ವೀಡಿಯೋ ನೋಡಿದ ಜನರು ಕೂಡ ಗೆಳತಿ ಕೊಟ್ಟ ಸಲಹೆಯನ್ನು ಪಾಸಿಟಿವ್ ಆಗಿ ತೆಗೆದುಕೊಂಡ ಯುವಕನನ್ನು ಶ್ಲಾಘಿಸುವುದರ ಜೊತೆಗೆ ತಮಗೂ ಇಂತಹ ಅದ್ಭುತ ಐಡಿಯಾ ನೀಡುವ ಗೆಳತಿ ಸಿಗಬಾರದೇ ಎಂದು ಹಲುಬಿದ್ದಾರೆ. ಮತ್ತೆ ಕೆಲವರು ಇದನ್ನು ನಿರ್ಮಲಾ ಮೇಡಂ ನೋಡಿದ್ರೆ ಜಿಎಸ್‌ಟಿ ಹಾಕ್ತಾರೆ ಎಂದು ಎಲ್ಲದಕ್ಕೂ ತೆರಿಗೆ ವಿಧಿಸುವ ಕೇಂದ್ರ ವಿತ್ತ ಸಚಿವರನ್ನು ಕಿಚಾಯಿಸಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ. 

View post on Instagram