ನವದೆಹಲಿ(ಪೆ.27): ಕೊರೋನಾ ವೈರಸ್‌ ಕಾರಣದಿಂದಾಗಿ ಮೊದಲ ಎರಡು ತ್ರೈಮಾಸಿಕದಲ್ಲಿ ನಕಾರಾತ್ಮಕ ಬೆಳವಣಿಗೆಯನ್ನು ಕಂಡಿದ್ದ ದೇಶದ ಆರ್ಥಿಕ ಪ್ರಗತಿ ದರ ಅಕ್ಟೋಬರ್‌- ಡಿಸೆಂಬರ್‌ ತ್ರೈಮಾಸಿಕದ ಅವಧಿಯಲ್ಲಿ ಶೇ.0.4ರ ದರದಲ್ಲಿ ಪ್ರಗತಿ ದಾಖಲಿಸಿದೆ ಎಂದು ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿ ತಿಳಿಸಿದೆ. ಮೂಲಕ ಹಿಂಜರಿತ ಅಂತ್ಯಗೊಂಡು ದೇಶದ ಆರ್ಥಿಕತೆ ಪುಟಿದೇಳುವ ಸೂಚನೆ ದೊರೆತಿದೆ.

‘ಇದು ಕೊರೋನಾ ಪೂರ್ವ ಯುಗಕ್ಕೆ ಆರ್ಥಿಕತೆ ಮರಳುವ ಸಂಕೇತ’ ಎಂದು ಹಣಕಾಸು ಸಚಿವಾಲಯ ಹರ್ಷ ವ್ಯಕ್ತಪಡಿಸಿದೆ.

ಕೊರೋನಾ ಲಾಕ್‌ಡೌನ್‌ ಕಾರಣದಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಎಪ್ರಿಲ್‌ನಿಂದ ಜೂನ್‌ ಅವಧಿಯ ಮೊದಲ ತ್ರೈಮಾಸಿಕದ ಅವಧಿಯಲ್ಲಿ ಜಿಡಿಪಿ ದಾಖಲೆಯ ಶೇ.-24.4ಕ್ಕೆ ಕುಸಿತ ಕಂಡಿತ್ತು. ಬಳಿಕ ಜುಲೈನಿಂದ ಸೆಪ್ಟೆಂಬರ್‌ ಅವಧಿಯ 2ನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ. -7.7ಕ್ಕೆ ಇಳಿಕೆ ಕಂಡಿತ್ತು. ಆದರೆ, ಕೊರೋನಾ ಲಾಕ್‌ಡೌನ್‌ ನಿಯಮ ಸಡಿಲಿಕೆ ಹಾಗೂ ಜನಜೀವನ ಸಹಯ ಸ್ಥಿತಿಗೆ ಬಂದಿದ್ದರಿಂದ ಜಿಡಿಪಿ ಧನಾತ್ಮಕ ಪ್ರಗತಿ ದಾಖಲಿಸಿದೆ. 2019​-20ನೇ ಹಣಕಾಸು ವರ್ಷದಲ್ಲಿ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ.3.3ರಷ್ಟುಪ್ರಗತಿ ದಾಖಲಿಸಿತ್ತು.

ಇದೇ ವೇಳೆ ಫೆ.5ರಂದು ನಡೆದ ಆರ್‌ಬಿಐನ ವಿತ್ತೀಯ ನೀತಿ ಪರಿಶೀಲನಾ ಸಭೆಯಲ್ಲಿ 2021-22ರ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ.10.5ರ ದರದಲ್ಲಿ ಪ್ರಗತಿ ದಾಖಲಿಸಲಿದೆ ಎಂದು ವರದಿ ನೀಡಲಾಗಿದೆ. ಅದೇ ರೀತಿ ಈ ಅವಧಿಯಲ್ಲಿ ಐಎಂಎಫ್‌ ಭಾರತದ ಆರ್ಥಿಕತೆ ಶೇ. 11.5ರ ದರದಲ್ಲಿ ಪ್ರಗತಿ ದಾಖಲಿಸಲಿದೆ ಎಂದು ಭವಿಷ್ಯ ನುಡಿದಿದೆ.