2023-24ನೇ  ಸಾಲಿನ ಸಾವರಿನ್ ಗೋಲ್ಡ್ ಬಾಂಡ್ ಎರಡನೇ ಸರಣಿಯ ಚಂದಾದಾರಿಕೆ ಸೆ.11ರಿಂದ ಪ್ರಾರಂಭವಾಗಲಿದ್ದು, ಸೆ.15ರ ತನಕ ನಡೆಯಲಿದೆ. ಸಾವರಿನ್ ಗೋಲ್ಡ್ ಬಾಂಡ್ ಎಲ್ಲಿ ಸಿಗುತ್ತೆ? ಖರೀದಿ ಹೇಗೆ? ಇಲ್ಲಿದೆ ಮಾಹಿತಿ.  

ನವದೆಹಲಿ (ಸೆ.9): 2023-24ನೇ ಸಾಲಿನ ಸಾವರಿನ್ ಗೋಲ್ಡ್ ಬಾಂಡ್ ಎರಡನೇ ಸರಣಿಯ ಚಂದಾದಾರಿಕೆ ಸೋಮವಾರದಿಂದ (ಸೆ.11) ಪ್ರಾರಂಭವಾಗಲಿದ್ದು, ಶುಕ್ರವಾರ (ಸೆ.15) ತನಕ ನಡೆಯಲಿದೆ. ಸಾವರಿನ್ ಗೋಲ್ಡ್ ಬಾಂಡ್ ಅನ್ನು ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ವಿತರಿಸುತ್ತದೆ. ಸಾವರಿನ್ ಗೋಲ್ಡ್ ಬಾಂಡ್ ವಿತರಣೆ ಬೆಲೆಯನ್ನು ಪ್ರತಿ ಗ್ರಾಂಗೆ 5,923 ರೂ. ನಿಗದಿಪಡಿಸಲಾಗಿದೆ. ಇನ್ನು ಸಾವರಿನ್ ಗೋಲ್ಡ್ ಬಾಂಡ್ ಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಾಗೂ ಡಿಜಿಟಲ್ ಪಾವತಿ ಮಾಡುವ ಹೂಡಿಕೆದಾರರಿಗೆ ಪ್ರತಿ ಗ್ರಾಂಗೆ 50ರೂ. ಡಿಸ್ಕೌಂಟ್ ಸಿಗಲಿದೆ. ಅಂದರೆ ನೀವು 10ಗ್ರಾಂ ಚಿನ್ನ ಖರೀದಿಸಿದರೆ 500ರೂ. ಡಿಸ್ಕೌಂಟ್ ಸಿಗಲಿದೆ. ಒಬ್ಬ ವ್ಯಕ್ತಿ ಅಥವಾ ಹಿಂದೂ ಅವಿಭಕ್ತ ಕುಟುಂಬ ವಾರ್ಷಿಕ ಗರಿಷ್ಠ 4ಕೆ.ಜಿ.ಮೌಲ್ಯದ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಬಹುದು. ಟ್ರಸ್ಟ್ ಹಾಗೂ ಅದೇ ಮಾದರಿಯ ಇತರ ಸಂಸ್ಥೆಗಳು ಗರಿಷ್ಠ 20ಕೆ.ಜಿ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ 1ಗ್ರಾಂ ಚಿನ್ನವಾದ್ರೂ ಖರೀದಿಸಬೇಕು. ಅದಕ್ಕೆ ಕಡಿಮೆ ಚಿನ್ನ ಖರೀದಿಸಲು ಅವಕಾಶವಿಲ್ಲ. ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ 2023-24ನೇ ಸಾಲಿನ ಮೊದಲ ಸರಣಿಯ ಚಂದಾದಾರಿಕೆ ಜೂ.19ರಿಂದ ಜೂ.23ರ ತನಕ ನಡೆದಿತ್ತು. 

Add Asianetnews Kannada as a Preferred SourcegooglePreferred

ಸಾವರಿನ್ ಗೋಲ್ಡ್ ಬಾಂಡ್ ಅಂದ್ರೇನು?
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದ್ದು, ಇದು ಭೌತಿಕವಲ್ಲದ ಚಿನ್ನದ ಮೇಲೆ ಹೂಡಿಕೆ (Invest) ಮಾಡಲು ಅವಕಾಶ ಕಲ್ಪಿಸುತ್ತದೆ. ಅಂದರೆ ಚಿನ್ನದ ಗಟ್ಟಿ, ನಾಣ್ಯ ಅಥವಾ ಆಭರಣಗಳ ಮೇಲೆ ಹೂಡಿಕೆ ಮಾಡೋ ಬದಲು ಭೌತಿಕ ಸ್ವರೂಪದಲ್ಲಿರದ ಚಿನ್ನದ ಮೇಲೆ ಹೂಡಿಕೆ ಮಾಡೋದು. ಭೌತಿಕ ಚಿನ್ನದ ಬೇಡಿಕೆಯನ್ನು ತಗ್ಗಿಸೋ ಜೊತೆಗೆ ಸ್ವ ಉಳಿತಾಯದ ಒಂದು ಭಾಗವನ್ನು ಆರ್ಥಿಕ ಉಳಿತಾಯವಾಗಿ ಬದಲಾಯಿಸೋ ಉದ್ದೇಶದಿಂದ ಕೇಂದ್ರ ಸರ್ಕಾರ 2015ರ ನವೆಂಬರ್​ನಲ್ಲಿಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತು. ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಬಾಂಡ್ ಗಳನ್ನು ವಿತರಿಸುತ್ತದೆ. 

ಹೂಡಿಕೆದಾರರಿಗೆ ಶುಭಸುದ್ದಿ; ಈ ತಿಂಗಳ ಕೊನೆಯಲ್ಲಿ ಪಿಪಿಎಫ್ ಬಡ್ಡಿದರ ಏರಿಕೆ ಸಾಧ್ಯತೆ

ಯಾರು ಖರೀದಿಸಬಹುದು?
ಭಾರತದಲ್ಲಿ ವಾಸಿಸುವ ವ್ಯಕ್ತಿಗಳು, ಅವಿಭಜಿತ ಹಿಂದೂ ಕುಟುಂಬಗಳು, ಟ್ರಸ್ಟ್‌ಗಳು, ವಿಶ್ವವಿದ್ಯಾಲಯಗಳು ಮತ್ತು ದತ್ತಿ ಸಂಸ್ಥೆಗಳು ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಖರೀದಿಸಬಹುದು ಎಂದು ಆರ್ ಬಿಐ ತಿಳಿಸಿದೆ.

ಅವಧಿ ಎಷ್ಟು?
ಸಾವರಿನ್ ಗೋಲ್ಡ್ ಬಾಂಡ್ ಗಳು ಎಂಟು ವರ್ಷಗಳ ಅವಧಿಯದ್ದಾಗಿವೆ. ಆದರೆ, ಐದು ವರ್ಷಗಳ ಬಳಿ ಅವಧಿಗೂ ಮುನ್ನ ವಿತ್ ಡ್ರಾ ಮಾಡಲು ಅವಕಾಶವಿದೆ. 

ಎಲ್ಲಿ ಸಿಗುತ್ತೆ?
ಆರ್ ಬಿಐ ನೀಡಿರುವ ಮಾಹಿತಿ ಪ್ರಕಾರ ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಸಾರ್ವಜನಿಕ ವಲಯದ ಬ್ಯಾಂಕ್ ಗಳು, ವಾಣಿಜ್ಯ ಬ್ಯಾಂಕ್ ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (SHCIL),ಕ್ಲಿಯರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (CCIL),ಅಂಚೆ ಕಚೇರಿಗಳು ಹಾಗೂ ಸ್ಟಾಕ್ ಎಕ್ಸ್ ಚೇಂಜ್ ಗಳು, ಎನ್ ಎಸ್ ಇ ಹಾಗೂ ಬಿಎಸ್ ಇ ಮೂಲಕ ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಮಾರಾಟ ಮಾಡಲಾಗುತ್ತಿದೆ. 

ಸಾವರಿನ್ ಗೋಲ್ಡ್ ಬಾಂಡ್ ಅವಧಿಪೂರ್ವ ವಿತ್ ಡ್ರಾಗೆ ಅವಕಾಶ; ವೇಳಾಪಟ್ಟಿ ಬಿಡುಗಡೆ ಮಾಡಿದ ಆರ್ ಬಿಐ

ಬಡ್ಡಿ ಎಷ್ಟಿದೆ? 
ಸಾವರಿನ್ ಗೋಲ್ಡ್ ಬಾಂಡ್ ಮೇಲೆ ಹೂಡಿಕೆದಾರರು ವಾರ್ಷಿಕ ಶೇ.2.5 ರಷ್ಟು ಬಡ್ಡಿ (Interest) ಗಳಿಸಲಿದ್ದಾರೆ. 6 ತಿಂಗಳಿಗೊಮ್ಮೆ ಬಡ್ಡಿ ಪಾವತಿಸಲಾಗುತ್ತದೆ. ಈ ಯೋಜನೆಯಲ್ಲಿ ಕ್ಯಾಪಿಟಲ್ ಗೇನ್ಸ್ (Capital gains) ತೆರಿಗೆ ವಿನಾಯಿತಿಯೂ ಲಭ್ಯವಿದೆ. ಈ ಯೋಜನೆಯಡಿ ಚಿನ್ನವನ್ನು ಖರೀದಿಸಲು ಯಾವುದೇ ಜಿಎಸ್‌ಟಿ (GST) ಮತ್ತು ಮೇಕಿಂಗ್ ಶುಲ್ಕಗಳನ್ನು (Making Charges) ವಿಧಿಸಲಾಗೋದಿಲ್ಲ.

ಪಾವತಿ ಹೇಗೆ?
ಸಾವರಿನ್ ಗೋಲ್ಡ್ ಬಾಂಡ್ ಗಳಿಗೆ ನಗದು ಪಾವತಿ ಮೂಲಕ ಅಥವಾ ಡಿಮ್ಯಾಂಡ್ ಡ್ರಾಫ್ಟ್, ಚೆಕ್ ಅಥವಾ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.

ಎಸ್ ಜಿಬಿ ಏಕೆ ಖರೀದಿಸಬೇಕು?
1.ದೀರ್ಘಾವಧಿ ಹೂಡಿಕೆಗಳಲ್ಲಿ ಇದು ಉತ್ತಮ. 8 ವರ್ಷಗಳ ಕಾಲ ಇದನ್ನು ಹೊಂದಿದ್ದರೆ ಉತ್ತಮ ಬಡ್ಡಿ ಗಳಿಸಬಹುದು.
2. ಚಿನ್ನದ ಮೇಲಿನ ಹೂಡಿಕೆಯಂತೆ ಇದರಲ್ಲಿ ಪರಿಶುದ್ಧತೆಯ ಅಪಾಯ ಇಲ್ಲ.
3.ಇದರಲ್ಲಿ ಹೂಡಿಕೆ ಮಾಡಿದ ಹಣ ಕಳೆದುಕೊಳ್ಳುವ ಭಯವಿಲ್ಲ.
4.ಎಂಟು ವರ್ಷಗಳ ಕಾಲ ಈ ಬಾಂಡ್ ಇಟ್ಟುಕೊಂಡರೆ ಗಳಿಕೆ ಮೇಲೆ ಯಾವುದೇ ತೆರಿಗೆ ಇಲ್ಲ.
5.ಭೌತಿಕ ಚಿನ್ನಕ್ಕಿಂತ ಎಸ್ ಜಿಬಿಗಳು ಅಧಿಕ ಲಿಕ್ವಿಡಿಟಿ ಹೊಂದಿವೆ. ಅಂದರೆ ಇವುಗಳ ಮಾರಾಟ ಸುಲಭ.
6.ಹೂಡಿಕೆದಾರರಿಗೆ ಹೂಡಿಕೆ ಮೇಲೆ ಶೇ.2.5ರಷ್ಟು ಬಡ್ಡಿ ಸಿಗುತ್ತದೆ.
7.ಸಾವರಿನ್ ಗೋಲ್ಡ್ ಬಾಂಡ್ ಆಧಾರವಾಗಿರಿಸಿ ಸಾಲ ಪಡೆಯಬಹುದು.
8.ರಿಟೇಲ್ ಹೂಡಿಕೆದಾರರು ಆನ್ ಲೈನ್ ನಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಿದ್ರೆ ಡಿಸ್ಕೌಂಟ್ ಕೂಡ ಸಿಗಲಿದೆ.