ಭಾರತೀಯ ವಿದ್ಯಾರ್ಥಿಗಳಿಗೆ 5 ವರ್ಷದ ಶೆಂಜೆನ್ ವೀಸಾ ನೀಡಲಿದೆ ಫ್ರಾನ್ಸ್ ಸರ್ಕಾರ; ಶೀಘ್ರದಲ್ಲಿಆಯ್ಕೆ ಪ್ರಕ್ರಿಯೆ
ಫ್ರಾನ್ಸ್ ನಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ಅಲ್ಲಿನ ಸರ್ಕಾರ ಐದು ವರ್ಷಗಳ ಶೆಂಜೆನ್ ವೀಸಾ ನೀಡಲು ಹೊಸ ಯೋಜನೆ ರೂಪಿಸಿದೆ. ಇನ್ನು ವಿದ್ಯಾರ್ಥಿಗಳ ಆಯ್ಕೆಗೆ ಫ್ರೆಂಚ್ ಉನ್ನತ ಶಿಕ್ಷಣ ಸಂಸ್ಥೆಗಳು ಭಾರತದ ನಾಲ್ಕು ಪ್ರಮುಖ ನಗರಗಳಲ್ಲಿ ಅಕ್ಟೋಬರ್ ನಲ್ಲಿ ಕಾರ್ಯಕ್ರಮ ಕೂಡ ಆಯೋಜಿಸಿವೆ.
ನವದೆಹಲಿ (ಆ.17): ಭಾರತೀಯ ವಿದ್ಯಾರ್ಥಿಗಳಿಗೆ ಐದು ವರ್ಷಗಳ ಶೆಂಜೆನ್ ಸರ್ಕ್ಯುಲೇಷನ್ ವೀಸಾ ಒದಗಿಸಲು ಫ್ರಾನ್ಸ್ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. 2030ರೊಳಗೆ 30,000 ಭಾರತೀಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶವನ್ನು ಫ್ರಾನ್ಸ್ ಹೊಂದಿದೆ. ಶೈಕ್ಷಣಿಕ ಉತ್ಕೃಷ್ಟತೆ ಹೆಚ್ಚಿಸಲು, ಸಾಂಸ್ಕೃತಿಕ ಒಪ್ಪಂದಗಳನ್ನು ಬಲಪಡಿಸಲು ಹಾಗೂ ಎರಡು ರಾಷ್ಟ್ರಗಳ ನಡುವೆ ಸುದೀರ್ಘ ಸ್ನೇಹ ಸಂಬಂಧ ಬೆಳೆಸುವ ಉದ್ದೇಶದಿಂದ ಫ್ರಾನ್ಸ್ ಈ ನಿರ್ಧಾರ ಕೈಗೊಂಡಿದೆ. ಕಳೆದ ತಿಂಗಳು ಫ್ರಾನ್ಸ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅಧ್ಯಯನದ ನಂತರ (ಪೋಸ್ಟ್ ಸ್ಟಡಿ) ಐದು ವರ್ಷಗಳ ಸುದೀರ್ಘ ಅವಧಿಯ ವೀಸಾ ನೀಡಲಾಗುವುದು ಎಂದು ಘೋಷಿಸಿದ್ದರು. ಈ ಹಿಂದೆ ಭಾರತೀಯ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಉದ್ಯೋಗ ವೀಸಾ ನೀಡಲಾಗುತ್ತಿತ್ತು.
ಈ ಕ್ರಮದ ಬಗ್ಗೆ ಫ್ರೆಂಚ್ ರಾಯಭಾರಿ ಕಚೇರಿ ಮಾಹಿತಿ ನೀಡಿದ್ದು, ಭಾರತೀಯ ವಿದ್ಯಾರ್ಥಿ ಫ್ರಾನ್ಸ್ ನಲ್ಲಿ ಕೇವಲ ಒಂದು ಸೆಮಿಸ್ಟರ್ ಸಮಯ ಕಳೆದರೂ ಅದಕ್ಕೆ ಪ್ರೋತ್ಸಾಹ ಹಾಗೂ ಗೌರವ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಈ ಐದು ವರ್ಷಗಳ ಅವಧಿಯ ವಿಶೇಷ ಶೆಂಜೆನ್ ವೀಸಾ ಪಡೆಯಲು ಫ್ರಾನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಭಾರತೀಯ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ಅಲ್ಲಿ ಅಧ್ಯಯನ ನಡೆಸುತ್ತಿರುವ ಕನಿಷ್ಠ ಒಂದು ಸೆಮಿಸ್ಟರ್ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ ಎಂದು ರಾಯಭಾರಿ ಕಚೇರಿ ಮಾಹಿತಿ ನೀಡಿದೆ.
ಫ್ರಾನ್ಸ್ ನಲ್ಲಿ ಶಿಕ್ಷಣ ಪೂರ್ಣಗೊಳಿಸಿರುವ ಭಾರತೀಯ ವಿದ್ಯಾರ್ಥಿಗಳ ಜೊತೆಗೆ ಆಪ್ತ ಸಂಬಂಧ ಹೊಂದಲು ಹಾಗೂ ಅವರ ಶಿಕ್ಷಣದಿಂದ ದೇಶಕ್ಕೆ ಒಂದಿಷ್ಟು ನೆರವು ಪಡೆಯುವ ಉದ್ದೇಶವನ್ನು ಕೂಡ ಫ್ರಾನ್ಸ್ ಹೊಂದಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರೊನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ಕೈಗೊಂಡ ಈ ನಿರ್ಧಾರವನ್ನು ಅನುಷ್ಠಾನಗೊಳಿಸಲು ಹಾಕಿದ ಶ್ರಮದ ಬಗ್ಗೆ ಕೂಡ ಫ್ರಾನ್ಸ್ ರಾಯಭಾರಿ ಇಮ್ಯಾನ್ಯುಯಲ್ ಲೆನೈನ್ ತಿಳಿಸಿದ್ದಾರೆ.
ವಿಶ್ವದ ಮೊದಲ ಸಮುದ್ರದಾಳದ ಹೊಟೇಲ್ ಇದು: ವೀಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ ಹೇಳಿದ್ದೇನು?
ಫ್ರಾನ್ಸ್ ತನ್ನ ವಿಭಿನ್ನ ಗುಣಗಳಿಗೆ ಹೆಸರುವಾಸಿಯಾಗಿದ್ದು, ತನ್ನ ಶ್ರೀಮಂತ ಸಾಂಸ್ಕೃತಿಕ ಸಂಪತ್ತನ್ನು ಹಂಚಿಕೊಳ್ಳಲು ಹೆಚ್ಚಿನ ಉತ್ಸುಕತೆ ಹೊಂದಿದೆ ಎಂದು ಲೆನೈನ್ ಹೇಳಿದ್ದಾರೆ. ಈ ಕಾರ್ಯಕ್ರಮದಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಫ್ರೆಂಚ್ ಭಾಷೆ ಹಾಗೂ ವಿವಿಧ ಶೈಕ್ಷಣಿಕ ಶಿಸ್ತುಗಳನ್ನು ಕಲಿಸಲಾಗುವುದು. ಆ ಮೂಲಕ ಭಾರತೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಉತ್ತಮ ಸಾಧನೆ ತೋರುವಂತೆ ಮಾಡಲಾಗುವುದು. ಹಾಗೆಯೇ ಫ್ರೆಂಚ್ ಶೈಕ್ಷಣಿಕ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಕಷ್ಟು ನೆರವು ನೀಡಲಾಗುವುದು ಎಂದು ಫ್ರಾನ್ಸ್ ರಾಯಭಾರಿ ಕಚೇರಿ ಮಾಹಿತಿ ನೀಡಿದೆ.
ಇನ್ನು ಈ ಕಾರ್ಯಕ್ರಮದ ಬೆನ್ನಲ್ಲೇ ರಾಯಭಾರಿ ಕಚೇರಿ ಹಾಗೂ ಫ್ರೆಂಚ್ ಸಂಸ್ಥೆಗಳು 'Choose France Tour 2023' ಪ್ರಾರಂಭಿಸಿವೆ. ಅಕ್ಟೋಬರ್ ತಿಂಗಳಲ್ಲಿ ಭಾರತದ ವಿವಿಧ ನಗರಗಳಲ್ಲಿ ಈ ಕಾರ್ಯಕ್ರಮಗಳನ್ನು ಫ್ರೆಂಚ್ ಸರ್ಕಾರ ಹಾಗೂ ಕ್ಯಾಂಪಸ್ ಫ್ರಾನ್ಸ್ ಕೈಗೊಳ್ಳಲಿವೆ. ಈ ಕಾರ್ಯಕ್ರಮವನ್ನು ಮುಖ್ಯವಾಗಿ ಭಾರತದ ನಾಲ್ಕು ನಗರಗಳಾದ ಚೆನ್ನೈ (ಅಕ್ಟೋಬರ್ 8), ಕೋಲ್ಕತ್ತ (ಅಕ್ಟೋಬರ್ 11), ದೆಹಲಿ (ಅಕ್ಟೋಬರ್ 13) ಹಾಗೂ ಮುಂಬೈ ನಲ್ಲಿ (ಅಕ್ಟೋಬರ್ 15) ಆಯೋಜಿಸಲಾಗುವುದು. ಈ ಕಾರ್ಯಕ್ರಮದಲ್ಲಿ 40 ಫ್ರೆಂಚ್ ಉನ್ನತ ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿವೆ. ಹೀಗಾಗಿ ಭಾರತೀಯ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇದು ಅತ್ಯುತ್ತಮ ವೇದಿಕೆಯಾಗಲಿದೆ.
ವಿಶ್ವದ ಅತ್ಯಂತ ಹಿರಿಯ ಬಿಲಿಯನೇರ್ ಉದ್ಯಮಿ, ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ 101 ವರ್ಷದ ಜೋಸೆಫ್!
ಇನ್ನು 570ಕ್ಕೂ ಅಧಿಕ ಫ್ರೆಂಚ್ ಕಂಪನಿಗಳು ಭಾರತದಲ್ಲಿ 4ಲಕ್ಷಕ್ಕೂ ಅಧಿಕ ಜನರನ್ನು ನೇಮಕ ಮಾಡಿಕೊಳ್ಳಲಿವೆ. ಫ್ರೆಂಚ್ ಶೈಕ್ಷಣಿಕ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳಿಗೆ ವಿಫುಲ ಉದ್ಯೋಗಾವಕಾಶಗಳಿವೆ.