ವಿಶ್ವದ ಮೊದಲ ಸಮುದ್ರದಾಳದ ಹೊಟೇಲ್ ಇದು: ವೀಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ ಹೇಳಿದ್ದೇನು?
ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರಾ, ಅವರು ನೀರೊಳಗಿರುವ ಜಗತ್ತಿನ ಮೊದಲ ಹೊಟೇಲೊಂದರ ವೀಡಿಯೋವನ್ನು ಹಂಚಿಕೊಂಡಿದ್ದು ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನವದೆಹಲಿ: ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿದ್ದು, ಯಾವುದಾದರು ವಿಭಿನ್ನವೆನಿಸಿದ ವಿಚಾರಗಳನ್ನು, ವೀಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಈಗ ಅವರು ನೀರೊಳಗಿರುವ ಜಗತ್ತಿನ ಮೊದಲ ಹೊಟೇಲೊಂದರ ವೀಡಿಯೋವನ್ನು ಹಂಚಿಕೊಂಡಿದ್ದು ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾನವನ ಆವಿಷ್ಕಾರಕ್ಕೆ ಕೊನೆ ಎಂಬುದೇ ಇಲ್ಲ ಬಹುತೇಕ ಅವಿಷ್ಕಾರಗಳು ಅಗತ್ಯಗಳಿಂದಾಗಿ ಸೃಷ್ಟಿಯಾಗಿದ್ದಾಗಿದ್ದರೆ, ಈಗಿನ ಕೆಲ ಅವಿಷ್ಕಾರಗಳು ಹೊಸದನ್ನು ಅನುಭವಿಸುವುದಕ್ಕಾಗಿ, ಮೋಜನ್ನು ಅನುಭವಿಸುವುದಕ್ಕಾಗಿ ಪ್ರಕೃತಿಗೆ ವಿರುದ್ಧವಾಗಿ ಮಾಡಿರುವಂತದ್ದಾಗಿದೆ. ಅದೇ ರೀತಿ ಈ ಸಮುದ್ರದಾಳದಲ್ಲಿರುವ ಹೊಟೇಲ್, ಮಾಲ್ಡೀವ್ಸ್‌ನಲ್ಲಿರುವ ಈ ಹೊಟೇಲ್ ನಿರ್ಮಾಣವಾಗಿರುವುದು ಸಮುದ್ರದಾಳದಲ್ಲಿ.
ಕೋಲ್ಕತ್ತದಲ್ಲಿ ದೇಶದ ಮೊದಲ ನೀರಿನಾಳದ ಮೆಟ್ರೋ ಪ್ರಾಯೋಗಿಕ ಸಂಚಾರ!
ಇದರ ವೀಡಿಯೋವನ್ನು ಆನಂದ್ ಮಹೀಂದ್ರ ಅವರು ಪೋಸ್ಟ್ ಮಾಡಿದ್ದು, ಈ ಹೊಟೇಲ್ ಹೆಸರು ಮುರುಕ (The Muraka), ವಿಶ್ವದ ಮೊದಲ ನೀರಿನಾಳದ ಹೊಟೇಲ್ ಎನಿಸಿರುವ ಇದರಲ್ಲಿ ತಾನು ಒಂದು ರಾತ್ರಿಯನ್ನು ಕಳೆಯಲು ಇಷ್ಟಪಡಲಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಹೊಟೇಲ್ ಮುರಾಕಾ ಮಾಲ್ಡೀವ್ಸ್‌ನ (Maldives) ಹಾಗೂ ವಿಶ್ವದ ಮೊದಲ ನೀರೊಳಗಿನ ಹೋಟೆಲ್ ಆಗಿದೆ. ಇಲ್ಲಿ ಅತ್ಯಂತ ಶಾಂತವಾಗಿ ವಾರಾಂತ್ಯದಲ್ಲಿ ವಿಶ್ರಾಂತಿ ಮಾಡಬಹುದು ಎಂಬ ಸಲಹೆಯೊಂದಿಗೆ ಈ ವೀಡಿಯೋವನ್ನು ನನಗೆ ಕಳುಹಿಸಲಾಗಿದೆ. ಆದರೆ ನಿಜ ಹೇಳಬೇಕೆಂದರೆ ನನಗೆ ಇಲ್ಲಿ ಒಂದು ರಾತ್ರಿಯನ್ನು ಕೂಡ ಕಳೆಯಲಾಗದು ಈ ಗಾಜಿನ ಸೀಲಿಂಗ್ ಮಧ್ಯೆ ಇರುವ ಬಿರುಕುಗಳನ್ನು ನೋಡುತ್ತಾ ನಾನು ಎಚ್ಚರವಾಗಿಯೇ ಕಾಲ ಕಳೆಯಬಹುದು ಎಂದು ಆನಂದ್ ಮಹೀಂದ್ರಾ (Anand Mahindra) ಬರೆದುಕೊಂಡಿದ್ದಾರೆ.
ಪಾಕ್‌ನಿಂದ ಸಮುಂದರಿ ಜಿಹಾದ್?: ಯಾವುದೇ ದಾಳಿ ಎದುರಿಸಲು ನೌಕಾ ಪಡೆ ಸಜ್ಜು
ಆನಂದ್ ಮಹೀಂದ್ರಾ (Businessmen) ಅವರು ಶೇರ್ ಮಾಡಿರುವ ಈ ವೀಡಿಯೋವನ್ನು 2 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. 30 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಹೊಟೇಲ್ ಒಳಾಂಗಣವನ್ನು ತೋರಿಸಲಾಗಿದೆ. ಹೊಟೇಲ್ ಒಳಗಿನಿಂದ ನಿಂತು ಹೊರಗೆ ನೀರಿನಲ್ಲಿ ಮೀನುಗಳ, ಇತರ ಜಲಚರಗಳ ಓಡಾಟವನ್ನು ಗಮನಿಸಬಹುದು. ಹೊಟೇಲ್ ಒಳಗೆ ಕುಳಿತುಕೊಳ್ಳುವುದಕ್ಕೆ ಲಾಂಜ್ ರೀತಿ ಇದ್ದು ಜೊತೆಗೆ ಕುಳಿತು ಆಹಾರ ಸೇವಿಸುವುದಕ್ಕೆ ಹರಟುವುದಕ್ಕೆ ಬೇಕಾದ ವ್ಯವಸ್ಥೆ ಇದೆ. ಜೊತೆಗೆ ಮಲಗುವುದಕ್ಕೆ ಬೆಡ್ ಕೂಡ ಇಲ್ಲಿದೆ. ಆದರೆ ಇಲ್ಲಿ ಉಳಿಯುವುದಕ್ಕೆ ಬರೀ ಒಂದು ರಾತ್ರಿ ಕಳೆಯುವುದಕ್ಕೆ ನೀವು 50 ಸಾವಿರ ಡಾಲರ್ ಅಂದರೆ ಸುಮಾರು 41 ಲಕ್ಷ ರೂಪಾಯಿಗಳನ್ನು ವ್ಯಯಿಸಬೇಕಾಗುತ್ತದೆ.
ಈ ಮುರಾಕಾ ಹೊಟೇಲ್ 2018ರ ನವಂಬರ್‌ನಲ್ಲಿ ಆರಂಭವಾಗಿದ್ದು, ಸಮುದ್ರ ಮಟ್ಟಕ್ಕಿಂತ 16 ಅಡಿ ಆಳದಲ್ಲಿದೆ. ಈ ಹೊಟೇಲ್ ಇರುವ ಜಾಗ ಹಿಲ್ಟನ್‌ನ ಕಾನ್ರಾಡ್ ಮಾಲ್ಡೀವ್ಸ್ ರಂಗಾಲಿ ಐಲ್ಯಾಂಡ್ ರೆಸಾರ್ಟ್‌ನ ಒಂದು ಭಾಗವಾಗಿದೆ ಎಂದು ವರದಿ ಇದೆ.
ಆದೇನೆ ಇರಲಿ ಈ ಹೊಟೇಲ್ ವೀಡಿಯೋ ನೋಡಿದ ಜನರು ಮಾತ್ರ ಓಷನ್ ಗೇಟ್ ಅನಾಹುತವನ್ನು ನೆನೆಪು ಮಾಡಿಕೊಂಡಿದ್ದು, ದುಡ್ಡು ಕೊಟ್ಟು ಸಾಯುವ ಕೆಲಸವಂತೂ ಬೇಡವೇ ಬೇಡ ಎಂದಿದ್ದಾರೆ. 1912 ರಲ್ಲಿ ಮುಳುಗಡೆಯಾಗಿ 1500ಕ್ಕೂ ಹೆಚ್ಚು ಜನರ ಬಲಿ ಪಡೆದ ಟೈಟಾನಿಕ್ ಹಡಗಿನ (Titanic Ship) ಅವಶೇಷ ನೋಡಲು ಓಷನ್‌ಗೇಟ್ ಸಂಸ್ಥೆ ಟೈಟಾನ್ ಎಂಬ ಸಬ್‌ಮೆರಿನ್ ನಿರ್ಮಾಣ ಮಾಡಿ ಐವರು ಪ್ರವಾಸಿಗರನ್ನು ಕರೆದೊಯ್ದಿತ್ತು. ಆದರೆ ಈ ಸಬ್‌ಮೆರಿನ್ ನಂತರ ನಾಪತ್ತೆಯಾಗಿ ಅದರಲ್ಲಿದ್ದ ಐವರು ಕೂಡ ಸಾವನ್ನಪ್ಪಿದ್ದರು, ನಾಪತ್ತೆ ಆದ ಕೆಲ ದಿನಗಳ ನಂತರ ಈ ಸಬ್‌ಮೆರಿನ್‌ನ ಅವಶೇಷಗಳು ಪತ್ತೆಯಾಗಿದ್ದವು.