ಗ್ರಾಹಕರಿ ಕೆಲವು ಆರ್ಡರ್‌ಗಳನ್ನು ಕ್ಯಾನ್ಸಲ್‌ ಮಾಡಿದ ಬಳಿಕ ಇದಕ್ಕೆ ಶುಲ್ಕ ವಿಧಿಸಲು ಫ್ಲಿಪ್‌ಕಾರ್ಟ್‌ ಯೋಜನೆ ಮಾಡುತ್ತಿದೆ ಎಂದು ವರದಿಯಾಗಿದೆ.  

ಬೆಂಗಳೂರು (ಡಿ.11): ಆನ್‌ಲೈನ್ ಶಾಪಿಂಗ್ ಇಂದು ತುಂಬಾ ಜನಪ್ರಿಯ. ಕೋವಿಡ್ ನಂತರ ಆನ್‌ಲೈನ್ ಶಾಪಿಂಗ್‌ಗೆ ಹೆಚ್ಚಿನ ಜನಪ್ರಿಯತೆ ದೊರೆತಿದೆ. ಏನನ್ನಾದರೂ ಖರೀದಿಸಬೇಕಾದರೆ ಹೊರಗೆ ಹೋಗಬೇಕಾಗಿಲ್ಲ. ಫೋನ್ ಬಳಸಿ ಎಲ್ಲಿಂದಲಾದರೂ ಬೇಕಾದ ವಸ್ತುಗಳನ್ನು ಖರೀದಿಸಬಹುದು. ಆರ್ಡರ್ ಮಾಡಿದ ವಸ್ತು ಇಷ್ಟವಾಗದಿದ್ದರೆ ಆರ್ಡರ್ ರದ್ದು ಮಾಡುವ ಆಯ್ಕೆಯೂ ಇದೆ. ಪ್ರಸ್ತುತ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಈ ಅವಕಾಶವನ್ನು ಒದಗಿಸುತ್ತವೆ. ಆದರೆ ಭಾರತದ ಅತಿದೊಡ್ಡ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಆದ ಫ್ಲಿಪ್‌ಕಾರ್ಟ್‌ನಲ್ಲಿ ಶೀಘ್ರದಲ್ಲೇ ಈ ಆಯ್ಕೆ ಕೊನೆಗೊಳ್ಳಲಿದೆ ಎಂದು ವರದಿಯಾಗಿದೆ. ಗ್ರಾಹಕರು ಕೆಲವು ಆರ್ಡರ್‌ಗಳನ್ನು ರದ್ದುಗೊಳಿಸಿದಾಗ ಶುಲ್ಕ ವಿಧಿಸಲು ಫ್ಲಿಪ್‌ಕಾರ್ಟ್ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಅಂದರೆ ಭವಿಷ್ಯದಲ್ಲಿ ನಿಮ್ಮ ಆರ್ಡರ್ ರದ್ದುಗೊಳಿಸಬೇಕಾದರೆ, ಶುಲ್ಕ ಪಾವತಿಸಬೇಕಾಗುತ್ತದೆ. ಈ ಶುಲ್ಕವು ನೀವು ಆರ್ಡರ್ ಮಾಡಿದ ವಸ್ತುವಿನ ಬೆಲೆಯನ್ನು ಅವಲಂಬಿಸಿರುತ್ತದೆ.

ಗ್ರಾಹಕರು ಆರ್ಡರ್‌ಗಳನ್ನು ರದ್ದುಗೊಳಿಸಿದಾಗ ಕಂಪನಿಗಳಿಗೆ ಉಂಟಾಗುವ ವೆಚ್ಚ ಮತ್ತು ಸಮಯ ವ್ಯರ್ಥವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೊತೆಗೆ ಮಾರಾಟಗಾರರು ಮತ್ತು ವಿತರಣಾ ಪಾಲುದಾರರಿಗೆ ಸಹಾಯ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸೂಚಿಸಲಾಗಿದೆ. ಇನ್ಮುಂದೆ ಉಚಿತವಾಗಿ ರದ್ದುಗೊಳಿಸಬಹುದಾದ ನಿರ್ದಿಷ್ಟ ಸಮಯದ ನಂತರ ರದ್ದತಿ ಶುಲ್ಕ ಆರಂಭವಾಗುತ್ತದೆ.

ವಿಶ್ವದ ಅತ್ಯಂತ ಚಿಕ್ಕ ಪಟ್ಟಣ 'ಹಮ್‌' ಬಗ್ಗೆ ನಿಮಗೆಷ್ಟು ಗೊತ್ತು? ಅಲ್ಲಿಗೆ ಹೋಗೋದು ಹೇಗೆ?

ಫ್ಲಿಪ್‌ಕಾರ್ಟ್ ಇನ್ನೂ ಈ ನೀತಿಯನ್ನು ಅಧಿಕೃತವಾಗಿ ಘೋಷಿಸಿಲ್ಲವಾದರೂ, ಮಾರಾಟಗಾರರ ನಷ್ಟವನ್ನು ಕಡಿಮೆ ಮಾಡಲು ಮತ್ತು ವಂಚನೆ ತಡೆಯಲು ಹೊಸ ನಿಯಮಗಳನ್ನು ಪರಿಚಯಿಸಲಾಗುತ್ತಿದೆ ಎಂದು ವರದಿಯಾಗಿದೆ. ಫ್ಲಿಪ್‌ಕಾರ್ಟ್‌ನ ಮಾತೃ ಕಂಪನಿಯ ಅಡಿಯಲ್ಲಿ ಬರುವ ಮತ್ತೊಂದು ಶಾಪಿಂಗ್ ಸೈಟ್ ಆದ ಮಿಂತ್ರಾಗೆ ಇದು ಅನ್ವಯವಾಗಬಹುದು. ಅಂದರೆ ಸಂಕ್ಷಿಪ್ತವಾಗಿ ಹೇಳುವುದಾದರೆ, ಇನ್ಮುಂದೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಉತ್ಪನ್ನಗಳನ್ನು ಕಂಪನಿಗಳು ಹೇಳುವ ಸಮಯದ ನಂತರ ರದ್ದುಗೊಳಿಸಿದರೆ, ಉತ್ಪನ್ನದ ಬೆಲೆಗೆ ಅನುಗುಣವಾಗಿ ರದ್ದತಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

1 ಲೀಟರ್‌ ಕೆಮಿಕಲ್‌ ಬಳಸಿ 500 ಲೀಟರ್‌ ನಕಲಿ ಹಾಲು ಮಾಡುತ್ತಿದ್ದ ಉದ್ಯಮಿಯ ಬಂಧನ!