ಅಕ್ಟೋಬರ್ ತಿಂಗಳಲ್ಲಿ ಈ 5 ಹಣಕಾಸು ನಿಯಮಗಳಲ್ಲಿ ಬದಲಾವಣೆ;ಜನಸಾಮಾನ್ಯರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ!
ಅಕ್ಟೋಬರ್ ತಿಂಗಳಲ್ಲಿ ಪ್ರಮುಖ ಹಣಕಾಸು ಸಂಬಂಧಿ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಹೀಗಾಗಿ ಈ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಏಕೆಂದರೆ ಈ ಬದಲಾವಣೆಗಳು ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲಿವೆ.
Business Desk: ಪ್ರತಿ ಹೊಸ ತಿಂಗಳು ಪ್ರಾರಂಭವಾಗುವಾಗ ಹಣಕಾಸಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗೋದು ಸಹಜ. ಅದರಂತೆ ಅಕ್ಟೋಬರ್ ತಿಂಗಳ ಪ್ರಾರಂಭಕ್ಕೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಉಳಿದಿದ್ದು, ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಹೊಸ ಟಿಸಿಎಸ್ ನಿಯಮ, ಆಧಾರ್ ಹಾಗೂ ಸರ್ಕಾರಿ ಕೆಲಸಗಳಿಗೆ ಜನನ ಪ್ರಮಾಣಪತ್ರ ಏಕೈಕ ದಾಖಲೆ ಸೇರಿದಂತೆ ಹಲವು ಬದಲಾವಣೆಗಳು ಅಕ್ಟೋಬರ್ ತಿಂಗಳಲ್ಲಿ ಜಾರಿಗೆ ಬರಲಿವೆ. ಇನ್ನು ಸೆಪ್ಟೆಂಬರ್ ತಿಂಗಳು ಪ್ರಮುಖ ಹಣಕಾಸಿನ ಕಾರ್ಯಗಳಿಗೆ ಅಂತಿಮ ಗಡುವಾಗಿವೆ. ಹೀಗಾಗಿ ಅಕ್ಟೋಬರ್ ತಿಂಗಳಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಆಧಾರ್ ಲಿಂಕ್ ಮಾಡದ ಸಣ್ಣ ಉಳಿತಾಯ ಖಾತೆಗಳು ಅಕ್ಟೋಬರ್ 1ರಿಂದ ನಿಷ್ಕ್ರಿಯಗೊಳ್ಳಲಿವೆ. ಹಾಗೆಯೇ 2000ರೂ. ನೋಟು ವಿನಿಮಯ ಅಥವಾ ಠೇವಣಿಗೆ ಕೂಡ ಸೆ.30 ಅಂತಿಮ ಗಡುವಾಗಿದೆ. ಹೀಗಾಗಿ ಅಕ್ಟೋಬರ್ 1ರಿಂದ 2000ರೂ. ನೋಟುಗಳು ಚಲಾವಣೆಯಲ್ಲಿರೋದಿಲ್ಲ. ಹಾಗಾದ್ರೆ ಅಕ್ಟೋಬರ್ ತಿಂಗಳಲ್ಲಿ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಗಳಾಗುತ್ತವೆ? ಅವು ಜನಸಾಮಾನ್ಯರ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಇಲ್ಲಿದೆ ಮಾಹಿತಿ.
1.ಹೊಸ ಟಿಸಿಎಸ್ ನಿಯಮ ಜಾರಿ
ಹೊಸ ಟಿಸಿಎಸ್ ನಿಯಮ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ವಿದೇಶಗಳಿಗೆ ಪ್ರವಾಸ ತೆರಳುವವರಿಗೆ ಹಾಗೂ ಅಲ್ಲಿ ಶಿಕ್ಷಣ ಪಡೆಯುತ್ತಿರೋರ ಮೇಲೆ ಈ ನಿಯಮ ಪರಿಣಾಮ ಬೀರಲಿದೆ. ವಿದೇಶಗಳಲ್ಲಿ ವಾರ್ಷಿಕ 7ಲಕ್ಷ ರೂ. ಮೇಲ್ಪಟ್ಟ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲೆ ಶೇ.20ರಷ್ಟು ಟಿಸಿಎಸ್ ವಿಧಿಸಲಾಗುವುದು. ಒಂದು ವೇಳೆ ಇಂಥ ವೆಚ್ಚಗಳನ್ನು ವೈದ್ಯಕೀಯ ಅಥವಾ ಶೈಕ್ಷಣಿಕ ಉದ್ದೇಶಗಳಿಗೆ ಮಾಡಿದ್ದರೆ ಶೇ.5ರಷ್ಟು ಟಿಸಿಎಸ್ ವಿಧಿಸಲಾಗುವುದು. ಇನ್ನು ವಿದೇಶದಲ್ಲಿ ಶಿಕ್ಷಣ ಪಡೆಯಲು ಸಾಲ ಪಡೆದಿದ್ದರೆ 7ಲಕ್ಷ ರೂ. ಮೇಲ್ಪಟ್ಟ ಮೊತ್ತಕ್ಕೆ ಶೇ.0.5ಷ್ಟು ಟಿಸಿಎಸ್ ವಿಧಿಸಲಾಗುವುದು.
ಡಿಮ್ಯಾಟ್ ಖಾತೆದಾರರಿಗೆ ಗುಡ್ ನ್ಯೂಸ್; ನಾಮಿನಿ ಸೇರ್ಪಡೆ ಗಡುವು ಡಿ.31ಕ್ಕೆ ವಿಸ್ತರಣೆ
2.ಆಧಾರ್, ಸರ್ಕಾರಿ ಉದ್ಯೋಗಗಳಿಗೆ ಜನನ ಪ್ರಮಾಣಪತ್ರ ಕಡ್ಡಾಯ
ಅಕ್ಟೋಬರ್ 1ರಿಂದ ಆಧಾರ್ ಹಾಗೂ ಸರ್ಕಾರಿ ಉದ್ಯೋಗಗಳಿಗೆ ಜನನ ಪ್ರಮಾಣಪತ್ರ ಏಕೈಕ ದಾಖಲೆಯಾಗಲಿದೆ. ಅಕ್ಟೋಬರ್ 1, 2023ರಿಂದ ಜನನ ಹಾಗೂ ಮರಣ (ನೋಂದಣಿ) ಕಾಯ್ದೆ 2023ರ ನೋಂದಣಿ ದೇಶಾದ್ಯಂತ ಜಾರಿಗೆ ಬರಲಿದೆ. ಶಾಲೆಗೆ ಮಗುವಿನ ಸೇರ್ಪಡೆ, ಡ್ರೈವಿಂಗ್ ಲೈಸೆನ್ಸ್, ಮತದಾರರ ಪಟ್ಟಿ ತಯಾರಿ, ಆಧಾರ್ ಸಂಖ್ಯೆ, ವಿವಾಹ ನೋಂದಣಿ ಅಥವಾ ಸರ್ಕಾರಿ ಉದ್ಯೋಗ ನೇಮಕಾತಿಗೆ ಜನನ ಪ್ರಮಾಣಪತ್ರ ಏಕೈಕ ದಾಖಲೆಯಾಗಿರಲಿದೆ.
3.2000ರೂ. ನೋಟು ಚಲಾವಣೆಯಲ್ಲಿರದು
ಬ್ಯಾಂಕ್ ಗಳಲ್ಲಿ 2000ರೂ. ನೋಟು ವಿನಿಮಯ ಅಥವಾ ಠೇವಣಿಗೆ ಸೆ.30 ಅಂತಿಮ ಗಡುವಾಗಿದೆ. ಹೀಗಾಗಿ ಅಕ್ಟೋಬರ್ 1ರಿಂದ 2000ರೂ. ನೋಟು ಚಲಾವಣೆಯಲ್ಲಿರುವ ಸಾಧ್ಯತೆ ಕಡಿಮೆ. ಹಾಗೆಯೇ ಬ್ಯಾಂಕುಗಳು ಕೂಡ ಅ.1ರಿಂದ 2000ರೂ. ನೋಟುಗಳನ್ನು ಸ್ವೀಕರಿಸಲು ನಿರಾಕರಿಸುವ ಸಾಧ್ಯತೆಯಿದೆ. ಅಲ್ಲದೆ, ಈ ಬಗ್ಗೆ ಆರ್ ಬಿಐ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ. ಬ್ಯಾಂಕುಗಳಿಗೆ ಹಿಂತಿರುಗುವ 2000ರೂ. ನೋಟುಗಳ ಪ್ರಮಾಣ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಆರ್ ಬಿಐ ವಿತ್ ಡ್ರಾ ನಿರ್ಧಾರ ಪ್ರಕಟಿಸುವ ಸಂದರ್ಭದಲ್ಲಿ ಸ್ಪಷ್ಟಪಡಿಸಿತ್ತು.
4.ಸಣ್ಣ ಉಳಿತಾಯ ಖಾತೆಗಳಿಗೆ ಆಧಾರ್ ಲಿಂಕ್
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ, ಅಂಚೆ ಕಚೇರಿ ಠೇವಣಿಗಳು ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಖಾತೆಗೆ ಹೂಡಿಕೆದಾರರು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡೋದು ಕಡ್ಡಾಯ. ಸೆ.30ರೊಳಗೆ ಸಣ್ಣ ಉಳಿತಾಯ ಖಾತೆಗಳಿಗೆ ಆಧಾರ್ ಲಿಂಕ್ ಮಾಡದಿದ್ದರೆ ಅ.1ರಿಂದ ಆ ಖಾತೆಗಳು ನಿಷ್ಕ್ರಿಯಗೊಳ್ಳಲಿವೆ.
ಆಧಾರ್ ವಿರುದ್ಧ ಮೂಡೀಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಕೇಂದ್ರ ಸರ್ಕಾರ
5.ಎಲ್ ಪಿಜಿ ದರ ಬದಲಾವಣೆ
ಎಲ್ ಪಿಜಿ ದರವನ್ನು ಪ್ರತಿ ತಿಂಗಳು ಬದಲಾವಣೆ ಮಾಡಲಾಗುತ್ತದೆ. ಪ್ರತಿ ತಿಂಗಳ ಮೊದಲ ದಿನ ಸಾಮಾನ್ಯವಾಗಿ ಈ ಪರಿಷ್ಕರಣೆ ನಡೆಯುತ್ತದೆ. ಅದರಂತೆ ಅಕ್ಟೋಬರ್ 1ರಿಂದ ಕೂಡ ಎಲ್ ಪಿಜಿ ದರದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.