ಮೈಸೂರು(ಮೇ.21): ಲಾಕ್‌ಡೌನ್‌ ಹೊಡೆತಕ್ಕೆ ರಾಜ್ಯದಲ್ಲಿ ಮತ್ತೊಂದು ಕೈಗಾರಿಕೆ ಬಾಗಿಲು ಮುಚ್ಚಿದೆ. ನಂಜನಗೂಡಿನ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ದೇಶದ ಪ್ರತಿಷ್ಠಿತ ವಸ್ತ್ರ ಕಂಪನಿಯಾದ ರೀಡ್‌ ಆ್ಯಂಡ್‌ ಟೇಲರ್‌ (ಹೊಸ ಹೆಸರು ಆರ್‌ಟಿಐಎಲ್‌ ಲಿಮಿಟೆಡ್‌) ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಈ ಮೂಲಕ 1300ಕ್ಕೂ ಅಧಿಕ ಮಂದಿ ಕಾರ್ಮಿಕರು ಬೀದಿಗೆ ಬಿದ್ದಂತಾಗಿದೆ.

ಮೈಸೂರಿನ ಹೆಸರಾಂತ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದಾದ ಸದರ್ನ್‌ ಸ್ಟಾರ್‌ ಹೋಟೆಲ್‌ ಮಂಗಳವಾರವಷ್ಟೇ ಬಾಗಿಲು ಮುಚ್ಚಿತ್ತು. ಇದಕ್ಕೂ ಮೊದಲು ಬೆಳಗಾವಿಯ ವಾಹನ ಬಿಡಿಭಾಗಗಳ ಕಂಪನಿ ಬಾಲು ಇಂಡಿಯಾ ಬಾಗಿಲು ಮುಚ್ಚಿತ್ತು. ಇದರ ಬೆನ್ನಲ್ಲೇ ಈಗ ಮೈಸೂರಿನ ಹೆಸರಾಂತ ರೀಡ್‌ ಆ್ಯಂಡ್‌ ಟೇಲರ್‌ ಕಂಪನಿ ಕೂಡ ವ್ಯವಹಾರ ಸ್ಥಗಿತಗೊಳಿಸುವ ನಿರ್ಧಾರ ಪ್ರಕಟಿಸಿದೆ. ಕೆಲವರ್ಷಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಈ ಕಂಪನಿಯನ್ನು 14 ತಿಂಗಳಿಂದ ಮಾರಾಟ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇತ್ತು. ಆದರೆ ಮೊದಲೇ ಆರ್ಥಿಕ ಸಂಕಷ್ಟ, ಅದರ ಮಧ್ಯೆ ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ವಹಿವಾಟು ಸಂಪೂರ್ಣ ಬಂದ್‌ ಆಗಿರುವ ಹಿನ್ನೆಲೆಯಲ್ಲಿ ಕೊನೆಗೆ ಕಾರ್ಖಾನೆಗೇ ಬೀಗ ಜಡಿಯುವ ನಿರ್ಧಾರಕ್ಕೆ ಬರಲಾಯಿತು.

ಆರ್ಥಿಕ ಪ್ಯಾಕೇಜ್‌ನ ಕೊನೆಯ ಕಂತಿನಲ್ಲಿ ಏಳು ಪ್ರಮುಖ ಘೋಷಣೆ!

‘ಕಾರ್ಖಾನೆಯಲ್ಲಿ ಉತ್ಪಾದಿಸಿದ ಉತ್ಪನ್ನಗಳಿಗೆ ಯಾವುದೇ ಬೇಡಿಕೆಯೂ ಇಲ್ಲ. ಕಂಪನಿಯ ನಷ್ಟಮುಂದುವರೆದಿದೆ. ಬಾಕಿ ಪಾವತಿಸಿಲ್ಲದ ಕಾರಣ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಗ್ರಾಹಕರು, ಸಾಲಗಾರರಿಂದ ಕಂಪನಿಗೆ ದುಡಿಯುವ ಬಂಡವಾಳ ಲಭ್ಯವಾಗುತ್ತಿಲ್ಲ. ದೈನಂದಿನ ಕಾರ್ಯ ನಿರ್ವಹಣೆಗೆ ಹಣ ಸಿಗುತ್ತಿಲ್ಲ. ಹೀಗಾಗಿ ಸಾಲ ನೀಡುವ ಸಂಸ್ಥೆಗಳೊಂದಿಗೆ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಕಾರ್ಖಾನೆಯನ್ನು ಕಾಯಂ ಆಗಿ ಮುಚ್ಚುವ, ಕಾರ್ಮಿಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಮೇ 14 ರಿಂದ ಜಾರಿಗೆ ಬರುವಂತೆ ಕಾರ್ಮಿಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಬಾಕಿ, ಅಂತಿಮ ಪರಿಹಾರಗಳನ್ನು ಕಾರ್ಮಿಕರಿಗೆ ನೀಡಲಾಗುವುದು’ ಎಂದು ಸಂಸ್ಥೆಯ ಸಮಾಪನಾಧಿಕಾರಿ ರವಿಶಂಕರ್‌ ದೇವರಕೊಂಡ ತಿಳಿಸಿದ್ದಾರೆ.

ಪ್ರತಿಷ್ಠೆಯ ಬ್ರ್ಯಾಂಡ್‌: ರೀಡ್‌ ಆ್ಯಂಡ್‌ ಟೇಲರ್‌ ಬ್ರ್ಯಾಂಡ್‌ ದೇಶದ ಪ್ರತಿಷ್ಠೆಯ ಎಸ್‌. ಕುಮಾರ್ಸ್‌ ನೇಷನ್‌ ವೈಡ್‌ ಲಿಮಿಟೆಡ್‌(ಎಸ್‌ಕೆಎನ್‌ಎಲ್‌) ಸಂಸ್ಥೆಯ ಒಂದು ಭಾಗವಾಗಿತ್ತು. ಎಸ್‌ಕೆಎನ್‌ಎಲ್‌ 1998ರಲ್ಲಿ ರೀಡ್‌ ಆ್ಯಂಡ್‌ ಟೇಲರ್‌ ಬ್ರ್ಯಾಂಡ್‌ ಅನ್ನು ದೇಶಕ್ಕೆ ಪರಿಚಯಿಸಿತ್ತು. ಬಾಲಿವುಡ್‌ನ ಖ್ಯಾತ ನಟ ಅಮಿತಾಬ್‌ ಬಚ್ಚನ್‌ ಇದರ ಬ್ರ್ಯಾಂಡ್‌ ರಾಯಭಾರಿ ಆಗಿದ್ದರು. ಈ ಕಂಪನಿಯು ಮೂರು ವರ್ಷಗಳ ಹಿಂದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆಯೇ .4500 ಕೋಟಿಗೆ ಕಂಪನಿಯನ್ನು ಮಾರಾಟ ಮಾಡುವ ಪ್ರಯತ್ನವೂ ನಡೆದಿತ್ತು. ಆದರೆ, ಖರೀದಿಗೆ ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಅಂತಿಮವಾಗಿ ಫೆ.5, 2019ರಲ್ಲಿ ಈ ಸಂಸ್ಥೆಗೆ ಎನ್‌ಸಿಎಲ್‌ಟಿ(ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ)ಯು ಸಮಾಪನಾಧಿಕಾರಿಯನ್ನು ನೇಮಿಸಿತ್ತು.

ಆರ್ಥಿಕ ಪ್ಯಾಕೇಜ್ 4ನೇ ಕಂತು; ಕಲ್ಲಿದಲ್ಲು, ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ನಿರ್ಧಾರ!

1300 ಜನ ಅತಂತ್ರ

- 3 ವರ್ಷಗಳಿಂದ ಆರ್ಥಿಕ ಸಂಕಷ್ಟಎದುರಿಸುತ್ತಿದ್ದ ಕಂಪನಿ

- 14 ತಿಂಗಳಿನಿಂದ ಕಾರ್ಖಾನೆ ಮಾರಾಟಕ್ಕೆ ನಿರಂತರ ಯತ್ನ

- ಕೊರೋನಾದಿಂದಾಗಿ ಸಂಕಷ್ಟತೀವ್ರ, ಕಂಪನಿಯೇ ಬಂದ್‌

- ಅಮಿತಾಭ್‌ ಬಚ್ಚನ್‌ ರಾಯಭಾರಿ ಆಗಿದ್ದ ವಸ್ತ್ರ ಬ್ರ್ಯಾಂಡ್‌ ಇದು