ದೇಶದಲ್ಲಿ ಫೇಸ್ ಬುಕ್ ವಂಚನೆ ಪ್ರಕರಣಗಳಲ್ಲಿ ಹೆಚ್ಚಳ; ನಿಮ್ಮ ಖಾತೆ ಸುರಕ್ಷಿತವಾಗಿರಲು ಈ ಟಿಪ್ಸ್ ಪಾಲಿಸಿ
ಆನ್ ಲೈನ್ ವಂಚಕರು ವಂಚನೆಗೆ ಹೊಸ ವಿಧಾನಗಳನ್ನು ಹುಡುಕಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಫೇಸ್ ಬುಕ್ ಖಾತೆಗಳನ್ನು ಹ್ಯಾಕ್ ಮಾಡುವ ಮೂಲಕ ವಂಚಿಸುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಹೀಗಾಗಿ ಫೇಸ್ ಬುಕ್ ಖಾತೆದಾರರು ಕೆಲವೊಂದು ಎಚ್ಚರಿಕೆ ವಹಿಸುವಂತೆ ಪೊಲೀಸರು ತಿಳಿಸಿದ್ದಾರೆ.

ನವದೆಹಲಿ (ಆ.30): ದೇಶಾದ್ಯಂತ ಆನ್ ಲೈನ್ ವಂಚನೆ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿದೆ. ಅಲ್ಲದೆ, ವಂಚಕರು ಹೊಸ ವಿಧಾನಗಳ ಮೂಲಕ ಅಮಾಯಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ ಕೂಡ. ಈಗ ಫೇಸ್ ಬುಕ್ ಬಳಸಿಕೊಂಡು ವಂಚಿಸುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ವಂಚಕರು ಫೇಸ್ ಬುಕ್ ಬಳಕೆದಾರರ ಖಾತೆಗಳನ್ನು ಹ್ಯಾಕ್ ಮಾಡಿ ಅವರ ಸ್ನೇಹಿತರ ಪಟ್ಟಿಯಲ್ಲಿರುವ ವ್ಯಕ್ತಿಗಳ ಬಳಿ ಹಣ ಕೀಳುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಆತ್ಮೀಯ ಸ್ನೇಹಿತನ ಫೇಸ್ ಬುಕ್ ಖಾತೆಯಿಂದ ತನಗೆ ಇಂಥದೊಂದು ಸಂದೇಶ ಬಂದಿದೆ ಎಂದು ಖಾತೆಗೆ ಹಣ ಹಾಕಿ ಕಳೆದುಕೊಂಡವರ ಸಂಖ್ಯೆ ಕೂಡ ದೊಡ್ಡದಿದೆ. ಈ ರೀತಿ ಫೇಸ್ ಬುಕ್ ಖಾತೆಗಳನ್ನು ಹ್ಯಾಕ್ ಮಾಡುವ ತಂಡದಲ್ಲಿದ್ದ ಇಬ್ಬರನ್ನು ಇತ್ತೀಚೆಗಷ್ಟೇ ಜಮ್ನಗರ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದರು. ಈ ಇಬ್ಬರು ವೀಕ್ ಪಾಸ್ ವರ್ಡ್ ಅಥವಾ ಸುಲಭವಾಗಿ ಕಂಡುಹಿಡಿಯಬಹುದಾದ ಪಾಸ್ ವರ್ಡ್ ಹೊಂದಿರುವ ವ್ಯಕ್ತಿಗಳ ಫೇಸ್ ಬುಕ್ ಖಾತೆಗಳನ್ನು ಹ್ಯಾಕ್ ಮಾಡಿ ಅವರ ಸ್ನೇಹಿತರಿಗೆ ತುರ್ತು ಹಣದ ಅಗತ್ಯವಿರೋದಾಗಿ ಬ್ಯಾಂಕ್ ಖಾತೆಗಳ ಮಾಹಿತಿ ಸಹಿತ ಸಂದೇಶ ಕಳುಹಿಸಿ ಹಣ ಕೀಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಫೇಸ್ ಬುಕ್ ಬಳಕೆದಾರರು ಎಚ್ಚರಿಕೆ ವಹಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.
ಇಂಥ ಫೇಸ್ ಬುಕ್ ಖಾತೆಗಳೇ ಇವರ ಟಾರ್ಗೆಟ್
ಸಾಮಾನ್ಯವಾಗಿ ಸೈಬರ್ ವಂಚಕರು ವೀಕ್ ಪಾಸ್ ವರ್ಡ್ ಹೊಂದಿರುವ ಫೇಸ್ ಬುಕ್ ಖಾತೆಗಳನ್ನು ಹುಡುಕುತ್ತಾರೆ. ಅಂದರೆ ತಮ್ಮ ಮೊಬೈಲ್ ಸಂಖ್ಯೆ ಅಥವಾ ಜನ್ಮದಿನಾಂಕ ಮುಂತಾದವನ್ನೇ ಪಾಸ್ ವರ್ಡ್ ಆಗಿ ಬಳಸುತ್ತಿರುವವರ ಖಾತೆಗಳನ್ನೇ ಇವರು ಹ್ಯಾಕ್ ಮಾಡುತ್ತಾರೆ. ಈ ಖಾತೆಗಳನ್ನು ತೆರೆಯಲು ಇವರಿಗೆ ಸಾಧ್ಯವಾದ ತಕ್ಷಣ ಫ್ರೆಂಡ್ಸ್ ಲಿಸ್ಟ್ ನೋಡುತ್ತಾರೆ. ಸಾಮಾನ್ಯವಾಗಿ ಗೃಹಿಣಿಯರು ಅಥವಾ ವಯಸ್ಸಾದ ಫೇಸ್ ಬುಕ್ ಖಾತೆದಾರರನ್ನು ವಂಚಕರು ಹೆಚ್ಚಾಗಿ ಟಾರ್ಗೆಟ್ ಮಾಡುತ್ತಾರೆ ಎನ್ನುತ್ತಾರೆ ಪೊಲೀಸರು. ಇಂಥವರು ತುಂಬಾ ಸ್ಟ್ರಾಂಗ್ ಆದ ಪಾಸ್ ವರ್ಡ್ ಹೊಂದಿರೋದಿಲ್ಲ. ನೆನಪಿಟ್ಟುಕೊಳ್ಳಲು ಸುಲಭವಾಗುವ ಪಾಸ್ ವರ್ಡ್ ನಮೂದಿಸಿರುತ್ತಾರೆ.
ಆನ್ ಲೈನ್ ವಂಚನೆಗಿದೆ ಬಹುಮುಖ; ವಂಚಕರು ನಿಮ್ಮನ್ನು ಹೇಗೆಲ್ಲ ವಂಚಿಸ್ಬಹುದು ಗೊತ್ತಾ?
ಇನ್ನು ಈ ವಂಚಕರು ಖಾತೆಯಲ್ಲಿರುವ ಟಾಪ್ ಫ್ರೆಂಡ್ಸ್ ಗೆ ಫೇಸ್ ಬುಕ್ ಖಾತೆಯಲ್ಲಿ ಯಾವುದೋ ಸೆಕ್ಯುರಿಟಿಸಮಸ್ಯೆ ಎದುರಾಗಿದೆ. ಹೀಗಾಗಿ ಖಾತೆಯನ್ನು ತೆರೆಯಲು ಒಟಿಪಿ (OTP) ಅಗತ್ಯವಿದೆ ಎಂಬ ಸಂದೇಶ ಕಳುಹಿಸುತ್ತಾರೆ. ನೀವು ಫೇಸ್ ಉಕ್ ಬಳಕೆದಾರರಾಗಿದ್ದರೆ ಈ ಬಗ್ಗೆ ಮಾಹಿತಿ ಇರಬಹುದು. ಬಳಕೆದಾರರಿಗೆ ಅವರ ಖಾತೆಗಳನ್ನು ರಿಕವರ್ ಮಾಡಲು ಟ್ರಸ್ಟೆಡ್ ಕಾಂಟ್ಯಾಕ್ಟ್ ಎಂಬ ಆಯ್ಕೆ ನೀಡಲಾಗಿದೆ. ಬಳಕೆದಾರರು ಕೆಲವು ಟ್ರಸ್ಟೆಡ್ ಕಾಂಟ್ಯಾಕ್ಟ್ ಆಯ್ಕೆ ಮಾಡೋ ಮೂಲಕ ಖಾತೆಗೆ ಪ್ರವೇಶಿಸಲು ಸಾಧ್ಯವಾಗದಿದ್ರೆ ಇವರ ಮೂಲಕ ರಿಕವರಿ ಕೋಡ್ ಪಡೆದು ಖಾತೆಗೆ ಪ್ರವೇಶ ಪಡೆಯಬಹುದು. ವಂಚಕರು ಈ ಆಯ್ಕೆಯನ್ನೇ ದುರ್ಬಳಕೆ ಮಾಡಿಕಳುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ.
ಆನ್ ಲೈನ್ ವಂಚಕರು ಇಪಿಎಫ್ ಖಾತೆನೂ ಬಿಡ್ತಿಲ್ಲ; ಒಟಿಪಿ ಶೇರ್ ಮಾಡ್ಬೇಡಿ, ಖಾತೆದಾರರಿಗೆ ಇಪಿಎಫ್ಒ ಮನವಿ
ಫೇಸ್ ಬುಕ್ ವಂಚನೆಯಿಂದ ಪಾರಾಗಲು ಹೀಗೆ ಮಾಡಿ:
*ಫೇಸ್ ಬುಕ್ ಖಾತೆಗೆ ಸ್ಟ್ರಾಂಗ್ ಹಾಗೂ ವಿಶಿಷ್ಟ ಪಾಸ್ ವರ್ಡ್ ಬಳಸಿ.
*ನಿಮ್ಮ ಪಾಸ್ ವರ್ಡ್ ಅನ್ನು ಆಗಾಗ ಬದಲಾಯಿಸಿ.
*ಅಪರಿಚಿತರಿಂದ ಬಂದಂತಹ ಸಂದೇಶಗಳಲ್ಲಿರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡ್ಬೇಡಿ.
*ಪಾಸ್ ವರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆ ಸೇರಿದಂತೆ ವೈಯಕ್ತಿಕ ಮಾಹಿತಿ ಕೋರುವ ಅನುಮಾನಾಸ್ಪದ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ.
*ನಿಮ್ಮ ಖಾತೆಗೆ ಟೂ ಫ್ಯಾಕ್ಟರ್ ದೃಢೀಕರಣ ನೀಡಿ.
*ನಿಮ್ಮ ಸಾಫ್ಟ್ ವೇರ್ ಅನ್ನು ಅಪ್ಡೇಟ್ ಮಾಡುತ್ತಲಿರಿ.
*ಇತ್ತೀಚಿನ ವಂಚನೆಗಳ ಬಗ್ಗೆ ಮಾಹಿತಿ ಹೊಂದಿರಿ ಹಾಗೂ ಎಚ್ಚರಿಕೆ ವಹಿಸಿ.