ವಿಶ್ವದ ನಂ.1 ಶ್ರೀಮಂತನ ಪಟ್ಟ ಕಳೆದುಕೊಂಡ ಎಲಾನ್ ಮಸ್ಕ್; ಸಿರಿವಂತನ ಬಿರುದು ಅರ್ನಾಲ್ಟ್ ತೆಕ್ಕೆಗೆ
* ಲೂಯಿಸ್ ವೈಟ್ಟನ್ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಈಗ ವಿಶ್ವದ ನಂ.1 ಸಿರಿವಂತ
* ಟೆಸ್ಲಾ ಷೇರುಗಳ ಮೌಲ್ಯದಲ್ಲಿ ಕುಸಿತ
*ಮಸ್ಕ್ ಸಂಪತ್ತಿನ ಇಳಿಕೆಗೆ ಟ್ವಿಟ್ಟರ್ ಖರೀದಿ ಕೂಡ ಕಾರಣ
ನ್ಯೂಯಾರ್ಕ್ (ಡಿ.14): ಟ್ವಿಟ್ಟರ್ ಹೊಸ ಬಾಸ್ ಎಲಾನ್ ಮಸ್ಕ್ ಈಗ ವಿಶ್ವದ ನಂ.1 ಸಿರಿವಂತರಲ್ಲ. ಹೌದು, ಫೋರ್ಬ್ಸ್ ನೀಡಿರುವ ಮಾಹಿತಿ ಪ್ರಕಾರ ಮಸ್ಕ್ ವಿಶ್ವದ ನಂ.1 ಶ್ರೀಮಂತ ವ್ಯಕ್ತಿಯ ಪಟ್ಟ ಕಳೆದುಕೊಂಡಿದ್ದಾರೆ. ಈ ನಂ.1 ಪಟ್ಟ ಈಗ ಲೂಯಿಸ್ ವೈಟ್ಟನ್ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಪಾಲಾಗಿದೆ. ಸೋಮವಾರ ಟೆಸ್ಲಾ ಷೇರುಗಳ ಬೆಲೆಯಲ್ಲಿ ಇಳಿಕೆಯಾಗಿರುವುದು ಹಾಗೆಯೇ ಎಲ್ ವಿಎಂಎಚ್ ಷೇರುಗಳ ಬೆಲೆಯಲ್ಲಿ ಏರಿಕೆಯಾಗಿರುವುದೇ ಈ ಬೆಳವಣಿಗೆಗೆ ಕಾರಣ ಎಂದು ಸಿಎನ್ ಬಿಸಿ ವರದಿ ಮಾಡಿದೆ. ಫೋರ್ಬ್ಸ್ ನೀಡಿರುವ ಮಾಹಿತಿ ಪ್ರಕಾರ ಅರ್ನಾಲ್ಟ್ ಅವರ ನಿವ್ವಳ ಸಂಪತ್ತು 186.2 ಬಿಲಿಯನ್ ಡಾಲರ್ ಆಗಿದೆ. 2021ರ ಸೆಪ್ಟೆಂಬರ್ ನಿಂದ ಎಲಾನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಅಲಂಕರಿಸಿಕೊಂಡು ಬಂದಿದ್ದಾರೆ. ಅಮೆಜಾನ್ ಸಿಇಒ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ನಂ.1ಪಟ್ಟ ಅಲಂಕರಿಸಿದ್ದ ಮಸ್ಕ್ ಒಂದು ವರ್ಷಕ್ಕೂ ಅಧಿಕ ಸಮಯ ಈ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದರು. ಟೆಸ್ಲಾ ಷೇರುಗಳು ಸೋಮವಾರ ಸುಮಾರು ಶೇ.6.3ರಷ್ಟು ಕುಸಿತ ಕಂಡಿದ್ದವು. ಮಸ್ಕ್ ಟ್ವಿಟ್ಟರ್ ಸ್ವಾಧೀನಪಡಿಸಿಕೊಂಡ ಬಳಿಕ ಟೆಸ್ಲಾ ಷೇರುಗಳ ಮಾರಾಟ ಹೆಚ್ಚಿತ್ತು ಕೂಡ. ಒಟ್ಟಾರೆ ಟ್ವಿಟ್ಟರ್ ಖರೀದಿ ಹಾಗೂ ಟೆಸ್ಲಾ ಷೇರುಗಳ ಮೌಲ್ಯ ಕುಸಿತ ಎಲಾನ್ ಮಸ್ಕ್ ವಿಶ್ವದ ನಂ.1 ಶ್ರೀಮಂತನ ಪಟ್ಟವನ್ನು ಕಳೆದುಕೊಳ್ಳುವಂತೆ ಮಾಡಿವೆ.
ಡಿಸೆಂಬರ್ 7ರಂದು ಕೂಡ ಕೆಲವು ಸಮಯ ಎಲಾನ್ ಮಸ್ಕ್ ವಿಶ್ವದ ನಂ.1 ಪಟ್ಟ ಕಳೆದುಕೊಂಡಿದ್ದರು. ಈ ಸಮಯದಲ್ಲಿ ಲೂಯಿಸ್ ವೈಟ್ಟನ್(Louis Vuitton) ಸಿಇಒ ಬರ್ನಾಡ್ ಅರ್ನಾಲ್ಟ್ (Bernard Arnault) ಜಗತ್ತಿನ ನಂ. 1 ಶ್ರೀಮಂತ ಆಗಿದ್ದರು. ಆದರೆ, ಸ್ವಲ್ಪ ಹೊತ್ತಿನ ಬಳಿಕ ಎಲಾನ್ ಮಸ್ಕ್ ಮರಳಿ ಸಂ.1 ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದರು ಎಂದು ಫೋರ್ಬ್ಸ್ ವರದಿ ಮಾಡಿತ್ತು. ಫೋರ್ಬ್ಸ್ ಕ್ಷಣ ಕ್ಷಣಕ್ಕೂ ಜಗತ್ತಿನ ಬಿಲಿಯನೇರ್‌ಗಳ ಸಂಪತ್ತನ್ನು ಲೆಕ್ಕ ಹಾಕುತ್ತ ಪಟ್ಟಿಯನ್ನು ನವೀಕರಿಸುತ್ತಲಿರುತ್ತದೆ.
ಈಗ ಆಗಿದ್ರೆ ನಾನು ಖಂಡಿತಾ ಭಾರತ ಬಿಟ್ಟು ಅಮೆರಿಕಕ್ಕೆ ತೆರಳುತ್ತಿರಲಿಲ್ಲ: ಅಡೋಬ್ ಸಿಇಒ
200 ಬಿಲಿಯನ್ ಡಾಲರ್‌ಗೂ ಹೆಚ್ಚು ಅಸ್ತಿ ಮೌಲ್ಯ ಹೊಂದಿದ್ದ ಎಲಾನ್ ಮಸ್ಕ್ ಆಸ್ತಿ 2022 ರಲ್ಲಿ ಸಾಕಷ್ಟು ಇಳಿಕೆಯಾಗಿದೆ. ಇದಕ್ಕೆ 44 ಬಿಲಿಯನ್ ಡಾಲರ್ ವ್ಯಯಿಸಿ ಟ್ವಿಟ್ಟರ್ ಖರೀದಿಸಿರುವ ಜೊತೆಗೆ ಟೆಸ್ಲಾ ಷೇರುಗಳ ಬೆಲೆಯಲ್ಲಿ ಇಳಿಕೆಯಾಗಿರುವುದು ಕೂಡ ಕಾರಣವಾಗಿದೆ. ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ಕಂಪನಿಯಾಗಿದ್ದು, ಅಮೆರಿಕ ಬಿಟ್ಟರೆ ಚೀನಾದಲ್ಲೇ ದೊಡ್ಡ ಮಾರುಕಟ್ಟೆ ಹೊಂದಿದೆ. ಆದರೆ, ಕೋವಿಡ್ ನಿರ್ಬಂಧಗಳ ಪರಿಣಾಮ ಚೀನಾದಲ್ಲಿ ಟೆಸ್ಲಾ ಮಾರುಕಟ್ಟೆ ಕುಸಿತ ಕಂಡಿದ್ದು, ಷೇರುಗಳ ಮೌಲ್ಯದಲ್ಲಿ ಕೂಡ ಇಳಿಕೆಯಾಗಿದೆ. ಇನ್ನು ಟ್ವಿಟ್ಟರ್ ಕೂಡ ನಷ್ಟದ ಹಾದಿಯಲ್ಲಿದೆ ಎಂದು ಹೇಳಲಾಗಿದೆ. ಶೇ.60ಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ಮಸ್ಕ್ ಕಳೆದುಕೊಂಡಿದ್ದಾರೆ ಕೂಡ.
ಟೆಸ್ಲಾ ಹಾಗೂ ಟ್ವಿಟ್ಟರ್ ಮಾತ್ರವಲ್ಲದೆ ರಾಕೆಟ್ ಕಂಪನಿ ಸ್ಪೇಸ್ ಎಕ್ಸ್ ಹಾಗೂ ನ್ಯೂರಾಲಿಂಕ್ (Neuralink) ಎಂಬ ಸ್ಟಾರ್ಟಪ್‌ನ ಒಡೆಯರೂ ಆಗಿದ್ದಾರೆ. ಬ್ಲೂಮ್‌ಬರ್ಗ್ ವೆಲ್ತ್ ಇಂಡೆಕ್ಸ್ ಪ್ರಕಾರ ಕಳೆದ ವರ್ಷ ಎಲನ್ ಮಸ್ಕ್ ನಿವ್ವಳ ಆದಾಯ 340 ಬಿಲಿಯನ್ ಅಮೆರಿಕನ್ ಡಾಲರ್. ಆದರೆ ಈ ವರ್ಷ ಮಸ್ಕ್ ನಿವ್ವಳ ಆದಾಯ ಸರಿಸುುಮಾರು 100 ಬಿಲಿಯನ್‌ಗೂ ಹೆಚ್ಚು ಅಮೆರಿಕನ್ ಡಾಲರ್ ಕಡಿಮೆಯಾಗಿದೆ.
Retail Inflation:ಆರ್‌ಬಿಐ ಗುರಿಯ ಮಿತಿಯೊಳಗೆ ಚಿಲ್ಲರೆ ಹಣದುಬ್ಬರ; ನವೆಂಬರ್‌ನಲ್ಲಿ ಶೇ.5.88ಕ್ಕೆ ಇಳಿಕೆ
ಟ್ವಿಟ್ಟರ್ ಖರೀದಿಗೆ ಸಾಕಷ್ಟು ಜಟಾಪಟಿ ನಡೆಸಿದ್ದ ಎಲಾನ್ ಮಸ್ಕ್ ಈ ಸಂಬಂಧ ಸದಾ ಒಂದಿಲ್ಲೊಂದು ಟ್ವೀಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಟ್ವಿಟ್ಟರ್ ಖರೀದಿ ಬಳಿಕ ಸಿಇಒ ಪರಾಗ್ ಅರ್ಗವಾಲ್ ಸೇರಿದಂತೆ ಅನೇಕ ಉದ್ಯೋಗಿಗಳನ್ನು ವಜಾಗೊಳಿಸಿದ್ದರು ಕೂಡ.