ಅಮೆರಿಕ, ಚೀನಾ ಮತ್ತು ರಷ್ಯಾದಲ್ಲಿನ ರಾಜಕೀಯ ಮತ್ತು ಆರ್ಥಿಕ ಬದಲಾವಣೆಗಳಿಂದಾಗಿ ವಿದೇಶಿ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ. ಈ ಪರಿಸ್ಥಿತಿಯು ಭಾರತಕ್ಕೆ ಹೆಚ್ಚಿನ ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಅವಕಾಶವನ್ನು ಒದಗಿಸುತ್ತದೆ.

ನವದೆಹಲಿ: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ವಿಶ್ವದ ಮಾರುಕಟ್ಟೆ, ರಾಜಕೀಯ ನೀತಿಗಳ ಮೇಲೆ ಪರಿಣಾಮ ಬೀರುತ್ತಿದೆ. ವರದಿಗಳ ಪ್ರಕಾರ, ಯುರೋಪ್ ಮತ್ತು ನಾಟೋ ಅಂತಹ ಸಂಘಟನೆಗಳು ಅಮೆರಿಕದ ಮೇಲಿನ ಭರವಸೆಯನ್ನು ಕಳೆದುಕೊಳ್ಳುತ್ತಿವೆ. ಈ ಕಾರಣದಿಂದ ಕೆನಾಡದ ವಾಸಿಗಳು ಅಮೆರಿಕದಲ್ಲಿರುವ ತಮ್ಮ ಆಸ್ತಿಯನ್ನು ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ಇತ್ತ ಚೀನಾ ಸಹ ಅಮೆರಿಕದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಿದೆ. 

ಅಮೆರಿಕದ ಮೇಲಿನ ಅತಿಯಾದ ನಂಬಿಕೆಯಿಂದ ಸಾವಿರಾರು ಕೋಟಿ ಹೂಡಿಕೆ ಮಾಡಿರುವ ಹೂಡಿಕೆದಾರರು ಟ್ರಂಪ್‌ ನೀತಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಕೇವಲ ಲಾಭದ ಬೆನ್ನಟ್ಟುವಿಕೆ ಸಾಕಾಗುವುದಿಲ್ಲ. ದೇಶಗಳ ರಾಜಕೀಯ ಸ್ಥಿರತೆ ಮತ್ತು ನಿಯಮಗಳಲ್ಲಿ ನಂಬಿಕೆಯೂ ಇರಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

ಪುಟಿನ್ ಆಕ್ರಮಣಕಾರಿ ನೀತಿಗಳಿಂದ ನಷ್ಟ!
ರಷ್ಯಾ ಸಹ BRIC (ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ) ಭಾಗವಾಗಿತ್ತು. ಆದ್ರೆ ರಷ್ಯಾ ಅಧ್ಯಕ್ಷ ಪುಟಿನ್ ಅವರ ಆಕ್ರಮಣಕಾರಿ ನೀತಿಗಳಿಂದ (ಜಾರ್ಜಿಯಾ, ಕ್ರೀಮಿಯಾ ಮತ್ತು ಉಕ್ರೇನ ಮೇಲಿನ ದಾಳಿ) ವಿದೇಶಿ ಹೂಡಿಕೆದಾರರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ.

ಚೀನಾದ ಮೇಲೆ ನಂಬಿಕೆ ಕಳೆದುಕೊಳ್ತಿರೊ ಹೂಡಿಕೆದಾರರು
ಕಳೆದ 30 ವರ್ಷಗಳಿಂದ ವಿದೇಶಿ ಹೂಡಿಕೆದಾರರು ಟ್ರಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ಬೆಳವಣಿಗೆ ಬೆನ್ನಲ್ಲೇ ಇನ್ಮುಂದೆ ಚೀನಾದಲ್ಲಿ ಹೂಡಿಕೆ ಮಾಡೋದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡುತ್ತಿದೆ. ಅನಿರೀಕ್ಷಿತ ನಿಯಮ ಮತ್ತು ಭೌಗೋಳಿಕ ರಾಜಕೀಯ ಅಪಾಯಗಳಿಂದಾಗಿ ಅನೇಕ ಕಂಪನಿಗಳು ಚೀನಾವನ್ನು ತೊರೆಯುತ್ತಿವೆ ಎಂದು ವರದಿಯಾಗಿದೆ. 

ಅಮೆರಿಕದಿಂದ ಹೂಡಿಕೆದಾರರ ವಲಸೆ
ಸದ್ಯದ ವರದಿಗಳ ಪ್ರಕಾರ, ವಿದೇಶಿ ಹೂಡಿಕೆದಾರರು ಅಮೆರಿಕದಲ್ಲಿ $31 ಟ್ರಿಲಿಯನ್ ಮೌಲ್ಯದ (ಷೇರುಗಳು, ಬಾಂಡ್‌ಗಳು, ಆಸ್ತಿ) ಹೂಡಿಕೆಗಳನ್ನು ಹೊಂದಿದ್ದಾರೆ. ಆದ್ರೆ ಡೊನಾಲ್ಡ್ ಟ್ರಂಪ್ ಅವರ "America First" ನೀತಿ ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ. 'ಅಮೆರಿಕ ಮೊದಲು' ಎಂಬ ನೀತಿ ಜಾಗತೀಕಮಟ್ಟದಲ್ಲಿ ಅನಿಶ್ಚಿತತೆ ಉಂಟಾಗಿದೆ. ದಿಢೀರ್ ಟ್ಯಾರಿಫ್ ಹೆಚ್ಚಳ ಮಾಡಿದ್ದರಿಂದ ಷೇರು ಮಾರುಕಟ್ಟೆಯಲ್ಲಿ ಸಂಚಲನವೇ ಸೃಷ್ಟಿಯಾಗಿತ್ತು. ಹಾಗಾಗಿ ವಿದೇಶಿ ಹೂಡಿಕೆ ಅಮೆರಿಕದಿಂದ ಹಣವನ್ನು ಹಿಂಪಡೆಯಲು ಪ್ರಾರಂಭಿಸಿದ್ದಾರೆ. ಕೇವಲ ಶೇ. 10 ರಷ್ಟು ಹೂಡಿಕೆ ಅಮೆರಿಕದ ಹೊರಗಿನಿಂದ ಬಂದರೆ, ಅದು 4 ಟ್ರಿಲಿಯನ್ ಡಾಲರ್‌ಗಳಿಗೆ ($400 ಬಿಲಿಯನ್) ಸಮನಾಗಿರುತ್ತದೆ ಎಂದು ಅಂದಾಜಿಸಲಾಗುತ್ತಿದೆ. 

ಭಾರತಕ್ಕಿದೆ ತಿಜೋರಿ ತುಂಬಿಕೊಳ್ಳೋ ಅವಕಾಶ
ಅಮೆರಿಕ, ಚೀನಾ ಮತ್ತು ರಷ್ಯಾದಿಂದ ಹೊರಗೆ ಬರುತ್ತಿರುವ ಹಣದ ಒಂದು ಭಾಗ ಭಾರತಕ್ಕೆ ಬರಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸುತ್ತಿದ್ದಾರೆ. ಈ ಹಣದ ಕೇವಲ 5 ಪ್ರತಿಶತ ($200 ಬಿಲಿಯನ್) ಭಾರತಕ್ಕೆ ಬಂದರೆ, ಅದು ನಮ್ಮ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ. ಇಂದು ಭಾರತದಲ್ಲಿ ವಿದೇಶಿ ಹೂಡಿಕೆ (ಎಫ್‌ಡಿಐ, ಬಂಡವಾಳ, ಸಾಲ) ಜಿಡಿಪಿಯ ಕೇವಲ 2.5 ಪ್ರತಿಶತದಷ್ಟಿದೆ. ಆದರೆ ಅದು 5 ಪ್ರತಿಶತ (ವಾರ್ಷಿಕವಾಗಿ $200 ಬಿಲಿಯನ್) ಆಗಿರಬೇಕು.

ಭಾರತದ ಷೇರು ಮಾರುಕಟ್ಟೆ ($4 ಟ್ರಿಲಿಯನ್) ಮತ್ತು ಬಾಂಡ್ ಮಾರುಕಟ್ಟೆ ($2.5 ಟ್ರಿಲಿಯನ್) ಇಷ್ಟು ದೊಡ್ಡ ಹೂಡಿಕೆಯನ್ನು ಸುಲಭವಾಗಿ ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆಪಲ್ ನಂತಹ ಕಂಪನಿಗಳು ಈಗಾಗಲೇ ಚೀನಾದ ಬದಲು ಭಾರತದಲ್ಲಿ ಐಫೋನ್ ಉತ್ಪಾದನೆಯನ್ನು ಪ್ರಾರಂಭಿಸಿವೆ. ಭವಿಷ್ಯದಲ್ಲಿ ಇನ್ನಷ್ಟು ಕಂಪನಿಗಳು ಭಾರತದಲ್ಲಿಯೇ ತಮ್ಮ ಉತ್ಪನ್ನಗಳ ಉತ್ಪಾದನೆಗೆ ಮುಂದಾಗುವ ಸಾಧ್ಯತೆಗಳಿವೆ.