ನವದೆಹಲಿ(ಆ.23): ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಜೆಟ್ ಏರ್’ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರಿಗೆ ಇದೀಗ ಇಡಿ ಸಂಕಷ್ಟ ಎದುರಾಗಿದೆ.

ಅತಿಯಾದ ಸಾಲದಿಂದಾಗಿ ಹಾರಾಟ ಸ್ಥಗಿತಗೊಳಿಸಿರುವ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ದೆಹಲಿ ಹಾಗೂ ಮುಂಬೈ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನರೇಶ್ ಗೊಯಲ್ ವಿದೇಶಿ ವಿನಿಮಯದ ಕಾನೂನು ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದು, ಇಡಿ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನರೇಶ್ ಗೊಯಲ್ ಅವರು ಜೆಟ್ ಏರ್’ವೇಸ್’ಗೆ ಸೇರಿದ ದೊಡ್ಡ ಮೊತ್ತದ ಹಣವನ್ನು ವಿದೇಶಗಳಿಗೆ ವರ್ಗಾಯಿಸಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ ಎಂದು ಇಡಿ ಮೂಲಗಳು ತಿಳಿಸಿವೆ.

8 ಸಾವಿರ ಕೋಟಿ ರೂ. ಸಾಲದಲ್ಲಿ ಸಿಲುಕಿರುವ ಜೆಟ್ ಏರ್’ವೇಸ್ ವಿಮಾನಯಾನ ಸಂಸ್ಥೆ, ಕಳೆದ ಏಪ್ರಿಲ್ 17ರಿಂದ ಹಾರಾಟ ಸ್ಥಗಿತಗೊಳಿಸಿರುವುದನ್ನು ಇಲ್ಲಿ ಸ್ಮರಿಸಬಹುದು.