₹60 ಲಕ್ಷಕ್ಕಿಂತ ಕಡಿಮೆ ಸಂಬಳವಿದ್ದವರು ಬಡವರು, ಶೇ.70 ರಷ್ಟು ಟ್ಯಾಕ್ಸ್ ಕತೆ ಬಿಚ್ಚಿಟ್ಟ ಟೆಕ್ಕಿ!
ಬಜೆಟ್‌ನಲ್ಲಿ ಆದಾಯ ತೆರಿಗೆ ಘೋಷಣೆ ಹಲವರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದರೆ ಇಲ್ಲೊಬ್ಬರು ಟೆಕ್ಕಿ ಹೊಸ ವಿಚಾರ ಮುಂದಿಟ್ಟಿದ್ದಾರೆ. ಭಾರತದಲ್ಲಿ ಯಾರೆಲ್ಲಾ 60 ಲಕ್ಷ ರೂಪಾಯಿಗಿಂತ ಕಡಿಮೆ ಸಂಬಳ ಪಡೆಯುತ್ತಿದ್ದಾರೋ, ಅವೆರೆಲ್ಲಾ ಬಡವರು ಎಂದಿದ್ದಾರೆ. ಇದಕ್ಕೆ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ.

ನವದೆಹಲಿ(ಫೆ.04) ಕೇಂದ್ರ ಹಣಕಾಸು ಸಚಿವೆ ಇತ್ತೀಚೆಗೆ ಮಂಡಿಸಿದ ಕೇಂದ್ರ ಬಜೆಟ್ ಈಗಾಗಲೇ ಹಲವು ಬಾರಿ ಚರ್ಚೆಯಾಗಿದೆ. ಈ ಪೈಕಿ 12 ಲಕ್ಷ ರೂಪಾಯಿ ವರೆಗೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ ಅನ್ನೋ ಘೋಷಣೆ ಮಧ್ಯಮ ವರ್ಗ ಕುಟುಂಬದ ಸಂಭ್ರಮಕ್ಕೆ ಕಾರಣವಾಗಿದೆ. ಆದರೆ ಟೆಕ್ಕಿಗಳಿಗೆ 12.75 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಖುಷಿ ಕೊಟ್ಟಿಲ್ಲ. ಕಾರಣ ಟೆಕ್ಕಿಗಳ ಸರಾಸರಿ ವೇತನ 15 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಮೇಲೆ. ಈ ಚರ್ಚೆ ನಡುವೆ ಫಿನ್‌ಟೆಕ್ ಶಾರ್ಕ್ ಟೆಕ್ಕಿಯೊಬ್ಬರು ಮುಂದಿಟ್ಟ ಬಡವರು ವಿಚಾರ ಇದೀಗ ಭಾರಿ ಚರ್ಚೆಯಾಗುತ್ತಿದೆ. ಈ ಟೆಕ್ಕಿ ಪ್ರಕಾರ ಯಾರೆಲ್ಲಾ 60 ಲಕ್ಷ ರೂಪಾಯಿಗಿಂತ ಕಡಿಮೆ ಸಂಬಂಳ ಪಡೆಯುತ್ತಾರೋ ಅವರೆಲ್ಲಲೂ ಬಡವರು ಎಂದಿದ್ದಾರೆ. ಕಾರಣ ಇವೆಲ್ಲಾ ಶೇಕಡಾ 70 ರಷ್ಟು ತೆರಿಗೆ ಪಾವತಿ ಮಾಡಬೇಕು ಎಂದಿದ್ದಾರೆ.
ಫಿನ್‌ಟೆಕ್ ಶಾರ್ಕ್ ಎಕ್ಸ್ ಖಾತೆ ಮೂಲಕ ಬಜೆಟ್ ಹಾಗೂ ತೆರಿಗೆ ಕುರಿತು ಹೊಸ ಆಯಾಮದಲ್ಲಿ ಚರ್ಚೆ ಆರಂಭಿಸಿದ್ದಾರೆ. ಟೆಕ್ಕಿ ಪ್ರಕಾರ ವರ್ಷಕ್ಕೆ 60 ಲಕ್ಷ ರೂಪಾಯಿ ವೇತನ ಪಡೆಯುವ ವ್ಯಕ್ತಿಗಳು ಆದಾಯ ತೆರಿಗೆ, ವ್ಯಾಟ್, ಜಿಎಸ್‌ಟಿ ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷ ರೂಪದಲ್ಲಿ ಶೇಕಡಾ 70 ರಷ್ಟು ತೆರಿಗೆ ಪಾವತಿಸಬೇಕು. ಇನ್ನು ಪ್ರತಿ ತಿಂಗಳು 2 ಲಕ್ಷ ರೂಪಾಯಿ ಕೈಗೆ ಸಂಬಳ ಪಡೆಯುವ ಮಂದಿ ಭಾರತದಲ್ಲಿ ಮಧ್ಯಮ ವರ್ಗ ಎಂದಿದ್ದಾರೆ. ಅಂದರೆ ವರ್ಷಕ್ಕೆ 60 ಲಕ್ಷ ರೂಪಾಯಿಯಿಂದ 1 ಲಕ್ಷ ರೂಪಾಯಿ ವರೆಗೆ ಸಂಬಳ ಇರುವ ಮಂದಿ ಮಿಡ್ಲ್ ಕ್ಲಾಸ್. ಇನ್ನು ವರ್ಷಕ್ಕೆ 1 ಕೋಟಿ ರೂಪಾಯಿಗಿಂತ ಹೆಚ್ಚು ವೇತನ ಪಡೆಯುವ ಮಂದಿ ಅಪ್ಪರ್ ಮಿಡ್ಲ್ ಕ್ಲಾಸ್ ಎಂದು ಟೆಕ್ಕಿ ವರ್ಗೀಕರಿಸಿದ್ದಾರೆ. ಇನ್ನು ಶ್ರೀಮಂತರು ಎಂದು ಹೇಳಬೇಕು ಎಂದರೆ ನಿಮಗೆ ತಲೆಮಾರಿನಿಂದ ಬಂದ ಆಸ್ತಿ, ಅಪ್ಪ ಮಾಡಿದ ಆಸ್ತಿ ಇರಬೇಕು ಎಂದು ಟೆಕ್ಕಿ ಹೇಳಿದ್ದಾರೆ.
ಜನಸಾಮಾನ್ಯರಿಗೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ 10 ಪ್ರಮುಖ ಯೋಜನೆ
ಈ ಟ್ವೀಟ್ ಇದೀಗ ಹೊಸ ಚರ್ಚೆಗೆ ಗ್ರಾಸವಾಗಿದೆ. ಹೊಸ ಬಜೆಟ್ ಮಂಡನೆ ಬೆನ್ನಲ್ಲೇ ಟ್ಯಾಕ್ಸ್ ಕುರಿತು ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಈ ವೇಳೆ, ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಬಳಿಕ ಕೇವಲ ಐಟಿ ಮಂದಿ ಮಾತ್ರ ಅಳುತ್ತಿದ್ದಾರೆ. ಇನ್ನುಳಿದವರು ಖುಷಿಯಾಗಿದ್ದಾರೆ ಎಂದು ಟ್ವೀಟ್ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಫಿನ್‌ಟೆಕ್ ಶಾರ್ಕ್ ಎಕ್ಸ್ ಖಾತೆಯಲ್ಲಿ ಐಟಿ ಮಂದಿ ಬಡವರು ಶ್ರೀಮಂತರು ವರ್ಗೀಕರಣ ಮಾಡಿ ಟ್ವೀಟ್ ಮಾಡಲಾಗಿದೆ.
ಐಟಿ ಮಂದಿಯನ್ನು ಹೊರತುಪಡಿಸಿದರೆ 12 ಲಕ್ಷ ರೂಪಾಯಿ ವೇತನ ಹಲವರು ಕನಸು. 7 ರಿಂದ 10 ವರ್ಷ ಅನುಭವ ಪಡೆದ ಬಳಿಕ ಈ ಸಂಬಂಳಕ್ಕೆ ಹಲವರು ಬಂದಿರುತ್ತಾರೆ. ಹೀಗಾಗಿ 12 ಲಕ್ಷ ರೂಪಾಯಿ ವರೆಗೆ ತೆರಿಗೆ ವಿನಾಯಿತಿ ಭಾರತೀಯರಿಗೆ ಖುಷಿ ತಂದಿದೆ. ಮಧ್ಯಮ ವರ್ಗದ ಅಸಂಖ್ಯಾತ ಕುಟುಂಬಗಳಿಗೆ ನೆಮ್ಮದಿ ತಂದಿದೆ. ಆದರೆ ಐಟಿ ಮಂದಿ ಲಕ್ಷ ಲಕ್ಷ ರೂಪಾಯಿ ವೇತನ ಪಡೆದರೂ ತಾವು ಬಡವರು ಎಂದು ಬಿಂಬಿಸಿಕೊಳ್ಳುತ್ತಾರೆ ಎಂದು ಟ್ವೀಟ್ ಮಾಡಲಾಗಿತ್ತು.
ಆದರೆ ಫಿನ್‌ಟೆಕ್ ಶಾರ್ಕ್ ಟ್ವೀಟ್‌ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಐಟಿ ಮಂದಿಗೆ ಎಷ್ಟು ಲಕ್ಷ ಕೊಟ್ಟರೂ ಬಡವರು ಎಂದೇ ಹೇಳುತ್ತಾರೆ. ಅದೆಷ್ಟೋ ಮಂದಿ 20 ಸಾವಿರ ರೂ, 30,000 ರೂಪಾಯಿ ತಿಂಗಳ ಸಂಬಂಳ ಪಡೆದು, ಮನೆ ಖರ್ಚು, ಮಕ್ಕಳ ವಿದ್ಯಾಭ್ಯಾಸ, ಇತರ ಖರ್ಚುಗಳನ್ನು ನೋಡಿಕೊಳ್ಳುತ್ತಾರೆ. ಅವರು ಇನ್ನೊಂದು 10,000 ರೂ ಹೆಚ್ಚಿದ್ದರೆ ಎಂದು ಆಲೋಚಿಸುತ್ತಾರೆ. ಐಟಿ ಮಂದಿಗೆ ತಮ್ಮ ಐಟಿ ಸಹೋದ್ಯೋಗಿಗಳು, ಆ ಮಟ್ಟದ ಖರ್ಚು ವೆಚ್ಚ ಬಿಟ್ಟರೆ ನಿಜವಾದ ಭಾರತ ಹೇಗಿದೆ ಅನ್ನೋದು ಹಲವರಿಗೆ ಗೊತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಈ ಟ್ವೀಟ್ ಕುರಿತು ಪರ ವಿರೋಧಗಳ ಚರ್ಚೆ ನಡೆಯುತ್ತಿದೆ.
ಈ ಬಾರಿಯ ಕೇಂದ್ರ ಬಜೆಟ್‌ನಿಂದ ಆಗಲಿರುವ 3 ಮಹತ್ವದ ಬದಲಾವಣೆ ಏನು?