Asianet Suvarna News Asianet Suvarna News

e-SHRAM Portalನಲ್ಲಿ 4 ಕೋಟಿಗೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರ ನೋಂದಣಿ

-e-SHRAM Portalನಲ್ಲಿ 4 ಕೋಟಿಗೂ ಅಧಿಕ ಕಾರ್ಮಿಕರ ನೋಂದಣಿ
-ಕಾರ್ಮಿಕ ಸಚಿವಾಲಯದ ವರದಿಯಲ್ಲಿ ಬಹಿರಂಗ
-ನೋಂದಾಯಿಸಿಕೊಂಡ ಕಾರ್ಮಿಕರಲ್ಲಿ ಶೇ. 50.02 ರಷ್ಟು ಮಹಿಳೆಯರು 
-ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಒಂದೇ ಕಾರ್ಡ್ 

e shram Portal receives over 4 crore registrations from workers
Author
Bengaluru, First Published Oct 17, 2021, 5:59 PM IST

ನವದೆಹಲಿ(ಅ. 17):  ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕರನ್ನು ಒಂದೇ ವೇದಿಕೆ ಮೇಲೆ ಒಗ್ಗೂಡಿಸಲು  ಇ-ಶ್ರಮ್‌ ಪೊರ್ಟಲ್‌ (e-SHRAM) ಆರಂಭಿಸಿತ್ತು. ಇ-ಶ್ರಮ ಪೋರ್ಟಲ್‌ ಆರಂಭವಾದ ಕೇವಲ ಎರಡು ತಿಂಗಳಿನಲ್ಲಿ 4 ಕೋಟಿಗೂ ಅಧಿಕ ಅಸಂಘಟಿತ   ವಲಯದ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ ಎಂದು ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವ (Labour and Employment Minister)  ಭೂಪೇಂದ್ರ ಯಾದವ್‌ (Bhupendra Yadav) ಹೇಳಿದ್ದಾರೆ. ಈ ಬಗ್ಗ ಟ್ವೀಟ್‌ (Tweet) ಮಾಡಿರುವ ಸಚಿವರು ʼಈ ಪೋರ್ಟಲ್‌ನಲ್ಲಿ ನೊಂದಾಯಿಸಿಕೊಂಡ ಕಾರ್ಮಿಕರ ಸರ್ಕಾರದ ಎಲ್ಲ ಯೋಜನೆಗಳನ್ನು ಸುಲಭವಾಗಿ ಪಡೆಯಬಹುದುʼಎಂದಿದ್ದಾರೆ.

 

 

4 ಕೋಟಿಗೂ ಅಧಿಕ ಅಸಂಘಟಿತ  ವಲಯದ ಕಾರ್ಮಿಕರ ನೋಂದಣಿ

ಸಚಿವಾಲಯದ ಮಾಹಿತಿ ಪ್ರಕಾರ ಒಟ್ಟು 40.9 ಮಿಲಿಯನ್‌ ಕಾರ್ಮಿಕರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡವರಲ್ಲಿ ಶೇ. 50.02 ರಷ್ಟು ಮಹಿಳೆಯರು ಮತ್ತು ಶೇ. 49.98 ರಷ್ಟು ಪುರುಷರಿದ್ದಾರೆ. ಒಟ್ಟು ನೊಂದಾಯಿತರಲ್ಲಿ  43% ಓಬಿಸಿ,  27%  ಸಾಮಾನ್ಯ, 23% ಪರಿಶಿಷ್ಟ ಜಾತಿ ಮತ್ತು 7% ಪರಿಶಿಷ್ಟ ಪಂಗಡದವರಾಗಿದ್ದಾರೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ. 
ಇತ್ತೀಚೆಗಿನ ವರದಿ ಪ್ರಕಾರ ಒರಿಸ್ಸಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳಿಂದ ಅತಿ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. 

ಕೃಷಿ ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿದ್ದಾರೆ ಎಂದು ವರದಿ ತಿಳಿಸಿದೆ. ವಲಸೆ ಕಾರ್ಮಿಕರು, ಗಾರ್ಮೆಂಟ್‌ ಕಾರ್ಖಾನೆ ಕಾರ್ಮಿಕರು, ಸಾರಿಗೆ ನೌಕರರು, ಇಲೆಕ್ಟ್ರಾನಿಕ್‌ ಮತ್ತು ಹಾರ್ಡ್‌ವೇರ್ ಕಾರ್ಖಾನೆ ನೌಕರರು, ಪ್ರವಾಸೋದ್ಯಮ ನೌಕರರು ಸೇರಿದಂತೆ ಇನ್ನಿತರ ವಲಯಗಳಿಂದ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ . ಇವರಲ್ಲಿ ಸುಮಾರು 67% ಕಾರ್ಮಿಕರು 16 ರಿಂದ 40 ವರ್ಷದ ವಯಸ್ಸಿನವರಾಗಿದ್ದಾರೆ. ಉಳಿದ 33% ಕಾರ್ಮಿಕರು 40 ವರ್ಷಕ್ಕಿಂತ ಹೆಚ್ಚಿನವರಾಗಿದ್ದಾರೆ. 

e-Shram portal: ಹೆಸರು ನೋಂದಾಯಿಸಿದ್ರೆ ಕಾರ್ಮಿಕರಿಗೇನು ಲಾಭ?
  
ಕಾರ್ಮಿಕ ಸಚಿವಾಲಯದ ಹಿರಿಯ ಅಧಿಕಾರಿಗಳು ಅಸಂಘಟಿತ ವಲಯದ ಕಾರ್ಮಿಕರ ಜತೆ ಮತ್ತು ಟ್ರೇಡ್‌ ಯೂನಿಯನ್‌ಗಳ (Tarde Unions) ನಾಯಕರ ಜತೆ ನಿರಂತರ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಅಲ್ಲದೇ ಇ-ಶ್ರಮ ಪೋರ್ಟಲ್‌ನಲ್ಲಿ  ನೋಂದಾಯಿಸುವುದರಿಂದ ಅಗುವ ಲಾಭಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಹೆಚ್ಚೆಚ್ಚು ಕಾರ್ಮಿಕರು ಪೋರ್ಟಲ್‌ನಲ್ಲಿ ನೋಂದಾಯಿಸಿ ಸರ್ಕಾರದ ಯೋಜನೆಗಳನ್ನು ನೇರವಾಗಿ ಪಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಏನಿದು e-Shram ಪೋರ್ಟಲ್?

ಈ-ಶ್ರಮ ಪೊರ್ಟಲ್‌ ಆಗಸ್ಟ 24 ರಂದು ಆರಂಭಗೊಂಡಿದ್ದು ದೇಶದಲ್ಲಿರುವ ಅಸಂಘಟಿತ ಕಾರ್ಮಿಕರ ಮಾಹಿತಿಯನ್ನು ಒಂದೇ ವೇದಿಕೆ ಮೇಲೆ ಒಗ್ಗೂಡಿಸುವುದಾಗಿದೆ.  ಕಟ್ಟಡ ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಮನೆಗೆಲಸದವರು, ರಸ್ತೆಬದಿ ವ್ಯಾಪಾರಿಗಳು ಸೇರಿದಂತೆ ಅಸಂಘಟಿತ ವಲಯದ 38 ಕೋಟಿ ಕಾರ್ಮಿಕರ ನೋಂದಣಿ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದೇ ಕಾರಣಕ್ಕೆ ಇ-ಶ್ರಮ ಪೋರ್ಟಲ್ ಪ್ರಾರಂಭಿಸಿದ್ದು, ಇದರಲ್ಲಿ ಕಾರ್ಮಿಕರು ತಮ್ಮ ಹೆಸರು ಮತ್ತು ಮಾಹಿತಿ ನೋಂದಾಯಿಸಬಹುದು. ಹೀಗೆ ಹೆಸರು ನೋಂದಾಯಿಸಿದ ಕಾರ್ಮಿಕರಿಗೆ ವಿಶಿಷ್ಟ ಗುರುತು ಸಂಖ್ಯೆ ಹೊಂದಿರೋ ಇ-ಶ್ರಮ ಕಾರ್ಡ್ ನೀಡಲಾಗುತ್ತದೆ.

ಆದಾಯ ತೆರಿಗೆ ಹೊಸ ಪೋರ್ಟಲ್ ಮೂಲಕ 2 ಕೋಟಿಗೂ ಅಧಿಕ ITR ಸಲ್ಲಿಕೆ!

ಇ-ಶ್ರಮ ಕಾರ್ಡ್

ಇ-ಶ್ರಮ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿದ ಕಾರ್ಮಿಕರಿಗೆ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ 12 ಅಂಕಿಗಳ ವಿಶಿಷ್ಟ ಗುರುತಿನ ಇ-ಶ್ರಮ ಕಾರ್ಡ್ ನೀಡಲಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯಲು ಕಾರ್ಮಿಕರಿಗೆ ಈ ಕಾರ್ಡ್ ನೆರವು ನೀಡಲಿದೆ. ಇದು ಜೀವಿತಾವಧಿ ವ್ಯಾಲಿಡಿಟಿ ಹೊಂದಿದೆ. ಎಲ್ಲ ಯೋಜನೆಗಳ ಪ್ರಯೋಜನ ಪಡೆಯಲು ಇದೊಂದೇ ಕಾರ್ಡ್ ಸಾಕು. 

Follow Us:
Download App:
  • android
  • ios