ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳಿಗೆ ಇ-ಪಾಸ್ ಬುಕ್; ಮೊಬೈಲ್ ನಲ್ಲೇ ಬ್ಯಾಲೆನ್ಸ್ ಚೆಕ್ ಮಾಡೋ ಅವಕಾಶ
ಅಂಚೆ ಕಚೇರಿಯಲ್ಲಿ ಪಿಪಿಎಫ್, ಸುಕನ್ಯಾ ಸಮೃದ್ಧಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಖಾತೆ ಹೊಂದಿರೋರು ಬ್ಯಾಲೆನ್ಸ್ ಚೆಕ್ ಮಾಡಲು ಅಂಚೆ ಕಚೇರಿಗೆ ಹೋಗಲೇಬೇಕಾದ ಅನಿವಾರ್ಯತೆ ತಪ್ಪಿದೆ. ಈ ಯೋಜನೆಗಳಿಗೆ ಇ-ಪಾಸ್ ಬುಕ್ ಸೌಲಭ್ಯ ಒದಗಿಸಲಾಗಿದೆ. ಹೀಗಾಗಿ ಮೊಬೈಲ್ ನಲ್ಲೇ ಖಾತೆ ಬ್ಯಾಲೆನ್ಸ್ ಚೆಕ್ ಮಾಡಬಹುದು.
ನವದೆಹಲಿ (ಅ.17): ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಯ ಗ್ರಾಹಕರು ದೇಶದ ಯಾವುದೇ ಮೂಲೆಯಿಂದ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವಿಲ್ಲದೆಯೂ ಖಾತೆಯ ಮಾಹಿತಿ ಪಡೆಯಬಹುದು. ಹೌದು, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ) ಸೇರಿದಂತೆ ಅಂಚೆ ಇಲಾಖೆಯ ಇತರ ಅನೇಕ ಸಣ್ಣ ಉಳಿತಾಯ ಯೋಜನೆಗಳಿಗೆ ಇ-ಪಾಸ್ ಬುಕ್ ಸೌಲಭ್ಯವನ್ನು ಅಂಚೆ ಇಲಾಖೆ ಒದಗಿಸಿದೆ. 2022ರ ಅಕ್ಟೋಬರ್ 12ರ ಅಧಿಸೂಚನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅಂಚೆ ಇಲಾಖೆ, ರಾಷ್ಟ್ರೀಯ (ಸಣ್ಣ) ಉಳಿತಾಯ ಯೋಜನೆಗಳ ಖಾತೆದಾರರಿಗೆ ಸರಳೀಕೃತ ಹಾಗೂ ಉತ್ತಮ ಡಿಜಿಟಲ್ ಸೌಲಭ್ಯ ಒದಗಿಸುವ ಉದ್ದೇಶದಿಂದ 12.10.2022ರಿಂದ ಅನ್ವಯವಾಗುವಂತೆ ಇ-ಪಾಸ್ ಬುಕ್ ಸೌಲಭ್ಯ ಒದಗಿಸಲಾಗಿದೆ ಎಂಬ ಮಾಹಿತಿ ನೀಡಿದೆ. ಖಾತೆದಾರರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಇ-ಪಾಸ್ ಬುಕ್ ಸೌಲಭ್ಯ ಬಳಸಿಕೊಳ್ಳಬಹುದು. ಈ ಸೇವೆ ಉಚಿತ ಎಂದು ಅಂಚೆ ಇಲಾಖೆ ತಿಳಿಸಿದೆ. ಹೀಗಾಗಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ಹೊಂದಿರೋರಿಗೆ ಇ-ಪಾಸ್ ಬುಕ್ ಸೌಲಭ್ಯ ಅನೇಕ ವಿಧದಲ್ಲಿ ನೆರವಾಗೋದಂತೂ ಗ್ಯಾರಂಟಿ. ಇ-ಪಾಸ್ ಬುಕ್ ನಲ್ಲಿ ಏನೆಲ್ಲ ಮಾಹಿತಿಗಳನ್ನು ಪಡೆಯಬಹುದು?
ಬ್ಯಾಲೆನ್ಸ್ ಮಾಹಿತಿ: ಪ್ರತಿ ರಾಷ್ಟ್ರೀಯ ಉಳಿತಾಯ ಯೋಜನೆಯ ಖಾತೆ ಬ್ಯಾಲೆನ್ಸ್ ಅನ್ನು ನೋಡಬಹುದು. ಈ ಹಿಂದೆ ಅಂಚೆ ಕಚೇರಿ ಉಳಿತಾಯ ಖಾತೆಗಳಲ್ಲಿನ ಬ್ಯಾಲೆನ್ಸ್ ಚೆಕ್ ಮಾಡಲು ಅಂಚೆ ಕಚೇರಿಗೇ ತೆರಳಬೇಕಾದ ಅಗತ್ಯವಿತ್ತು. ಆದರೆ, ಇ-ಪಾಸ್ ಬುಕ್ ಈ ಕೆಲಸವನ್ನು ಸರಳಗೊಳಿಸಿದೆ.
ದೀಪಾವಳಿಗೆ ಚಿನ್ನ ಖರೀದಿಸುತ್ತಿದ್ದೀರಾ? ಹಾಗಾದ್ರೆ ಈ 5 ವಿಷಯಗಳನ್ನು ನೆನಪಿಡಿ
ಮಿನಿ ಹೇಳಿಕೆ: ಅಂಚೆ ಇಲಾಖೆ ಉಳಿತಾಯ ಖಾತೆ (POSA),ಸುಕನ್ಯಾ ಸಮೃದ್ಧಿ ಖಾತೆಗಳು (SSA) ಹಾಗೂ ಸಾರ್ವಜನಿಕ ಭವಿಷ್ಯ ನಿಧಿ ಖಾತೆಗಳಿಗೆ (PPF) ಮಾತ್ರ ಮಿನಿ ಸ್ಟೇಟ್ ಮೆಂಟ್ ಸೌಲಭ್ಯ ಪ್ರಾರಂಭದಲ್ಲಿ ಸಿಗಲಿದೆ. ಇದರಲ್ಲಿ ಇತ್ತೀಚಿನ 10 ವಹಿವಾಟುಗಳ ಮಾಹಿತಿಯನ್ನು ಮಾತ್ರ ತೋರಿಸಲಾಗುತ್ತದೆ. ಅಲ್ಲದೆ, ಇದನ್ನು ಪಿಡಿಎಫ್ (PDF) ಸ್ವರೂಪದಲ್ಲಿ ಡೌನ್ ಲೋಡ್ (Download) ಮಾಡಿಕೊಳ್ಳಲು ಕೂಡ ಅವಕಾಶವಿದೆ.
ಫುಲ್ ಸ್ಟೇಟ್ ಮೆಂಟ್ : ಇನ್ನು ವಹಿವಾಟುಗಳ ಪೂರ್ಣ ಸ್ಟೇಟ್ ಮೆಂಟ್ ಕೂಡ ಲಭಿಸುತ್ತದೆ. ಗ್ರಾಹಕರು ಖಾತೆ ಸ್ಟೇಟ್ ಮೆಂಟ್ ಅನ್ನು ಕೂಡ ನಿರ್ದಿಷ್ಟ ಸಮಯದ ಚೌಕಟ್ಟಿನಲ್ಲಿ ಪಡೆಯಬಹುದು.
ಪಿಪಿಎಫ್ (PPF), ಸುಕನ್ಯಾ ಸಮೃದ್ಧಿ (Sukanya Samridhi) ಖಾತೆ ಬ್ಯಾಲೆನ್ಸ್ ಚೆಕ್ ಹೇಗೆ?
-www.indiapost.gov.in or www.ippbonline.com ಭೇಟಿ ನೀಡಿ. ಅಲ್ಲಿ ಇ-ಪಾಸ್ ಬುಕ್ ಮೇಲೆ ಕ್ಲಿಕ್ ಮಾಡಿ.
-ಮೊಬೈಲ್ ಸಂಖ್ಯೆ ನಮೂದಿಸಿ. ಕ್ಯಾಪ್ಚ-ಲಾಗಿ ಇನ್-ಒಟಿಪಿ ನಮೂದಿಸಿ ಸಲ್ಲಿಕೆ ಮಾಡಿ.
-ಇ-ಪಾಸ್ ಬುಕ್ (e-Passbook) ಆಯ್ಕೆ ಮಾಡಿ.
-ಯೋಜನೆ ವಿಧ ಆಯ್ಕೆ ಮಾಡಿ. ಖಾತೆ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಕಾಪ್ಚ ನಮೂದಿಸಿ. ಆ ಬಳಿಕ Continue ಮಾಡಿ. OTP ನಮೂದಿಸಿ ವೆರಿಫೈ ಮಾಡಿ.
-ಆ ಬಳಿಕ ಈ ಕೆಳಗಿನವುಗಳಲ್ಲಿ ನಿಮಗೆ ಯಾವುದರ ಮಾಹಿತಿ ಬೇಕೋ ಅದನ್ನು ಆಯ್ಕೆ ಮಾಡಿ.
(a)ಬ್ಯಾಲೆನ್ಸ್ ತನಿಖೆ
(b)ಮಿನಿ ಸ್ಟೇಟ್ಮೆಂಟ್
(c)ಫುಲ್ ಸ್ಟೇಟ್ಮೆಂಟ್
2047ರ ವೇಳೆಗೆ Indian Economy 30 ಟ್ರಿಲಿಯನ್ ಡಾಲರ್ ಮೌಲ್ಯ ಆಗಲಿದೆ: Piyush Goyal ವಿಶ್ವಾಸ
ನೀವು ನಮೂದಿಸಿರುವ ಮೊಬೈಲ್ ಸಂಖ್ಯೆ ನಿಮ್ಮ ಅಂಚೆ ಇಲಾಖೆ ಖಾತೆ ಜೊತೆಗೆ ಲಿಂಕ್ ಆಗಿಲ್ಲದಿದ್ರೆ ನಿಮಗೆ ಮಾಹಿತಿ ಪಡೆಯಲು ಸಾಧ್ಯವಾಗೋದಿಲ್ಲ. ಹೀಗಾಗಿ ನಿಮ್ಮ ಅಂಚೆ ಕಚೇರಿ ಖಾತೆ ಜೊತೆಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿಲ್ಲದಿದ್ರೆ ನೀವು ಖಾತೆ ಹೊಂದಿರುವ ಅಂಚೆ ಕಚೇರಿಗೆ (Post Office) ಭೇಟಿ ನೀಡಿ ಲಿಂಕ್ (Link) ಮಾಡಿ. ಈ ಸೌಲಭ್ಯದಿಂದ ಅಂಚೆ ಕಚೇರಿಯಲ್ಲಿನ ಉಳಿತಾಯ ಯೋಜನೆಗಳ ಖಾತೆಯಲ್ಲಿನ ಬ್ಯಾಲೆನ್ಸ್ ಚೆಕ್ ಮಾಡಲು ಗ್ರಾಹಕರು ಅಂಚೆ ಕಚೇರಿಗೆ ಭೇಟಿ ನೀಡಬೇಕಾದ ಅನಿವಾರ್ಯತೆ ತಪ್ಪಿದೆ.