Asianet Suvarna News Asianet Suvarna News

ದೀಪಾವಳಿಗೆ ಚಿನ್ನ ಖರೀದಿಸುತ್ತಿದ್ದೀರಾ? ಹಾಗಾದ್ರೆ ಈ 5 ವಿಷಯಗಳನ್ನು ನೆನಪಿಡಿ

ದೀಪಾವಳಿ ಹಬ್ಬಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಉಳಿದಿವೆ. ಈ ಹಬ್ಬದ ಮೊದಲ ದಿನವಾದ ಧನ ತ್ರಯೋದಶಿಯಂದು ಚಿನ್ನ ಖರೀದಿಸೋದು ವಾಡಿಕೆ. ಈ ದಿನ ಚಿನ್ನ ಖರೀದಿಸಿದ್ರೆ ಶುಭ ಎಂಬ ಭಾವನೆ ಅನೇರಲ್ಲಿದೆ. ಆದ್ರೆ ಈ ದಿನ ಚಿನ್ನ ಖರೀದಿಸುವ ಮುನ್ನ ನೀವು ಕೆಲವೊಂದು ವಿಷಯಗಳ ಬಗ್ಗೆ ಗಮನ ಹರಿಸೋದು ಅಗತ್ಯ. ಹಾಗಾದ್ರೆ ಯಾವೆಲ್ಲ ವಿಷಯಗಳನ್ನು ಪರಿಗಣಿಸಬೇಕು? ಇಲ್ಲಿದೆ ಮಾಹಿತಿ. 
 

How not to be fooled while buying Gold for Dhanteras and Diwali 5point guide
Author
First Published Oct 17, 2022, 10:22 AM IST

Business Desk: ದೀಪಾವಳಿ ಮೊದಲ ದಿನವಾದ ಧನ ತ್ರಯೋದಶಿ ಅಥವಾ ಧಂತೇರಸ್ ದಿನ ಅನೇಕರು ಚಿನ್ನ ಖರೀದಿಸುತ್ತಾರೆ. ಚಿನ್ನ ಸಂಪತ್ತು ಹಾಗೂ ಸಮೃದ್ಧಿಯ ಸಂಕೇತವಾಗಿದ್ದು, ಈ ದಿನ ಚಿನ್ನ ಖರೀದಿಸಿದ್ರೆ ಶುಭ ಎಂಬ ಭಾವನೆ ಅನೇಕರಲ್ಲಿದೆ. ಹೀಗಾಗಿ ಜನರ ಭಾವನೆಗಳನ್ನು ಅರಿತು, ಚಿನ್ನದ ವ್ಯಾಪಾರಿಗಳು ಈ ದಿನ ಗ್ರಾಹಕರನ್ನು ದಿಕ್ಕು ತಪ್ಪಿಸುವ ಸಾಧ್ಯತೆಯೂ ಇದೆ. ಅಂದರೆ, ಕೆಲವು ಚಿನ್ನದ ವ್ಯಾಪಾರಿಗಳು ಮೇಕಿಂಗ್ ಚಾರ್ಜಸ್, ಜಿಎಸ್ ಟಿ ಇತ್ಯಾದಿ ಹೆಸರಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಾರೆ. ಹೀಗಾಗಿ ಹಬ್ಬದ ಖುಷಿ ಹೆಚ್ಚಿಸಿಕೊಳ್ಳಲು ಚಿನ್ನ ಖರೀದಿಗೆ ಮುಂದಾಗುವ ಜನರು ಒಂದಿಷ್ಟು ವಿಚಾರಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಧನ ತ್ರಯೋದಶಿ ಅಥವಾ  ಧಂತೇರಸ್ ದಿನ ಚಿನ್ನ ಖರೀದಿಸಿದ್ರೆ ಶುಭವಾಗುತ್ತದೆ ಎಂದು ಭಾವಿಸಿ ಚಿನ್ನದ ವ್ಯಾಪಾರಿಗಳು ಹೇಳಿದಷ್ಟು ಹಣ ನೀಡೋದು ಅಥವಾ ಚಿನ್ನದ ಬೆಲೆ ಪರಿಶೀಲಿಸದಿರೋದು ಮುಂತಾದ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಜೇಬಿಗೆ ಹೆಚ್ಚುವರಿ ಕತ್ತರಿ ಬೀಳೋದು ಗ್ಯಾರಂಟಿ. ಹಾಗಾದ್ರೆ ಚಿನ್ನ ಖರೀದಿಸುವ ಸಮಯದಲ್ಲಿ ಯಾವೆಲ್ಲ ವಿಚಾರಗಳಿಗೆ ಮಹತ್ವ ನೀಡಬೇಕು? ಏನೆಲ್ಲ ಪರಿಶೀಲಿಸಬೇಕು? ಇಲ್ಲಿದೆ ಮಾಹಿತಿ.

1.ಪ್ರಮಾಣೀಕೃತ ಚಿನ್ನ ಖರೀದಿಸಿ
ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಸ್ (BIS) ಹಾಲ್ ಮಾರ್ಕ್ (Hallmark) ಹೊಂದಿರುವ ಪ್ರಮಾಣೀಕೃತ ಚಿನ್ನವನ್ನೇ ಖರೀದಿಸಿ.ಚಿನ್ನ ಖರೀದಿಸುವ ಮುನ್ನ ಅದರ ಹಾಲ್ ಮಾರ್ಕ್ ಪರಿಶೀಲಿಸಲು ಯಾವುದೇ ಕಾರಣಕ್ಕೂ ಮರೆಯಬೇಡಿ. ಏಕೆಂದ್ರೆ ಹಾಲ್ ಮಾರ್ಕ್ ಚಿನ್ನ ಪರಿಶುದ್ಧತೆ ಹಾಗೂ ಉನ್ನತ ಗುಣಮಟ್ಟದ ಸಂಕೇತವಾಗಿದೆ. ಹಾಗೆಯೇ ನೀವು ಪರಿಶುದ್ಧತೆ ಕೋಡ್, ಪರಿಶೀಲನೆ ಕೇಂದ್ರದ ಮಾರ್ಕ್, ಜ್ಯುವೆಲ್ಲರ್ಸ್ ಮಾರ್ಕ್ ಹಾಗೂ  ಮಾರುಕಟ್ಟೆ ವರ್ಷವನ್ನು ಕೂಡ ಪರಿಗಣಿಸಬೇಕು. ಅಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ಕೂಡ ಚೆಕ್ ಮಾಡಿ. ಹಾಗೆಯೇ ಚಿನ್ನದ ತೂಕ ಪರಿಶೀಲಿಸೋದನ್ನು ಮರೆಯಬೇಡಿ.

ದೀಪಾವಳಿಗೆ ಶೇ.25 ಹೆಚ್ಚು ಚಿನ್ನ ವಹಿವಾಟು?: ಗ್ರಾಹಕರನ್ನು ಆಕರ್ಷಿಸಲು ಭರ್ಜರಿ ಆಫರ್‌..!

2.ನಗದು ಬೇಡ, ಇನ್ ವಾಯ್ಸ್ ಪಡೆಯಿರಿ
ಚಿನ್ನ ಖರೀದಿಸುವಾಗ ನಗದು (Cash) ಬದಲು ನೆಟ್ ಬ್ಯಾಂಕಿಂಗ್, ಯುಪಿಐ (UPI) ಆಧಾರಿತ ಡಿಜಿಟಲ್ ಪಾವತಿ ಅಪ್ಲಿಕೇಷನ್ ಗಳ ಮೂಲಕ ಹಣ ಪಾವತಿಸೋದು ಉತ್ತಮ. ಹಾಗೆಯೇ ನೀವು ಖರೀದಿಸಿರೋದಕ್ಕೆ ಇನ್ ವಾಯ್ಸ್ ಪಡೆಯೋದು ಕೂಡ ಮುಖ್ಯ. ಇನ್ನು ಚಿನ್ನವನ್ನು ಆನ್ ಲೈನ್  ಖರೀದಿಸುವಾಗ ಡೆಲಿವರಿ ಪ್ಯಾಕೇಜ್ ಹರಿದು ಹೋಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಅದನ್ನು ಪಡೆಯಿರಿ. 

3.ನಂಬಿಕಾರ್ಹ ವ್ಯಾಪಾರಿಗಳಿಂದ ಖರೀದಿಸಿ
ಚಿನ್ನ ಖರೀದಿಸುವ ಮುನ್ನ ವ್ಯಾಪಾರಿಯ ನಂಬಿಕಾರ್ಹತೆ ಪರಿಶೀಲಿಸೋದು ಅಗತ್ಯ. ನಂಬಿಕಾರ್ಹ ವ್ಯಾಪಾರಿಗಳಿಂದ ಮಾತ್ರ ಖರೀದಿಸಿ. ಅತ್ಯಾಕರ್ಷಕ ಆಫರ್ ಅಥವಾ ಕೊಡುಗೆಗಳಿಗೆ ಮಾರು ಹೋಗಿ ಗುರುತು ಪರಿಚಯವಿಲ್ಲದವರ ಬಳಿ ಖರೀದಿಸಬೇಡಿ.

4.ಮರುಮಾರಾಟದ ಬೆಲೆ ಪರಿಶೀಲಿಸಿ
ಚಿನ್ನ ಖರೀದಿಸುವಾಗ ಅದರ ಮರುಮಾರಾಟದ ಮೌಲ್ಯ ಪರಿಶೀಲಿಸೋದು ಅಗತ್ಯ. ಕೆಲವು ವ್ಯಾಪಾರಿಗಳು ಚಿನ್ನವನ್ನು ಮರಳಿ ಖರೀದಿಸುವಾಗ ಚಿನ್ನದ ಮೌಲ್ಯದಿಂದ ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸುತ್ತಾರೆ. ಇನ್ನೂ ಕೆಲವು ವ್ಯಾಪಾರಿಗಳು ಪ್ರಸ್ತುತವಿರುವ ದರದಲ್ಲೇ ಚಿನ್ನವನ್ನು ಖರೀದಿಸುತ್ತಾರೆ.

ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ; ಡಾಲರ್ ಬಲವಾಗುತ್ತಿದೆ: Nirmala Sitharaman

5.ಚಿನ್ನದ ಬಾಂಡ್ ಖರೀದಿ ಬಗ್ಗೆ ಯೋಚಿಸಿ
ಕೊನೆಯದಾಗಿ ನೀವು ಹೂಡಿಕೆ ಉದ್ದೇಶಕ್ಕೆ ಚಿನ್ನ ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ರೆ ಆರ್ ಬಿಐಯ (RBI) ಸಾವರಿನ್ ಗೋಲ್ಡ್ ಬಾಂಡ್ಸ್  (SGBs) ಖರೀದಿಸೋದು ಉತ್ತಮ. ಇವು ಹೆಚ್ಚು ಸುರಕ್ಷಿತವಾಗಿರುವ ಜೊತೆಗೆ ವಾರ್ಷಿಕ ಬಡ್ಡಿಯನ್ನು (Interest) ಕೂಡ ಒದಗಿಸುತ್ತವೆ. ಅಲ್ಲದೆ, ಭೌತಿಕ ರೂಪದಲ್ಲಿ ಚಿನ್ನವನ್ನು ಸಂಗ್ರಹಿಸಿಡುವ ಕಷ್ಟವೂ ಇರೋದಿಲ್ಲ. 
 

Follow Us:
Download App:
  • android
  • ios