Russia-Ukraine War: ಭಾರತದ ಆರ್ಥಿಕತೆ ಮೇಲೆ ಉಕ್ರೇನ್‌ ಪರಿಣಾಮ: ಕೇಂದ್ರ ಸಚಿವೆ ನಿರ್ಮಲಾ

*  ಎಲ್ಲ ದೇಶಗಳಂತೆ ನಮಗೂ ಸಮಸ್ಯೆ
*  ಅಭಿವೃದ್ಧಿಯಲ್ಲಿ ಮೋದಿ ಪ್ರಶ್ನಾತೀತ ವ್ಯಕ್ತಿ
*  ಆರ್ಥಿಕತೆ ಸದೃಢವಾಗಿದ್ದಕ್ಕೆ ಅವರೇ ಕಾರಣ
 

Impact of Russia Ukraine War on India's Economy Says Union Minister Nirmala Sitharaman grg

ಬೆಂಗಳೂರು(ಮಾ.09): ಕೋವಿಡ್‌(Covid-19) ಸೋಂಕಿನಂತಹ ತುರ್ತು ಪರಿಸ್ಥಿತಿ ನಡುವೆಯೂ ದೇಶದ ಅರ್ಥ ವ್ಯವಸ್ಥೆ ಸದೃಢವಾಗಿ ನಿಲ್ಲಲು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಆತ್ಮನಿರ್ಭರ ತತ್ವದಡಿ ಕೈಗೊಂಡ ಕ್ರಮಗಳೇ ಪ್ರಮುಖ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman) ಪ್ರತಿಪಾದಿಸಿದ್ದಾರೆ. ಆದರೆ, ಪ್ರಸಕ್ತ ನಡೆಯುತ್ತಿರುವ ಉಕ್ರೇನ್‌-ರಷ್ಯಾ ಯುದ್ಧದಿಂದ(Russia-Ukraine War) ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದೂ ಅವರು ಹೇಳಿದ್ದಾರೆ.

ರಾಜ್ಯ ಬಿಜೆಪಿಯಿಂದ(BJP) ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ‘ಆತ್ಮನಿರ್ಭರ ಅರ್ಥ ವ್ಯವಸ್ಥೆ ಭಾರತ’ ವಿಷಯ ಕುರಿತ ಸಂವಾದವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ರಧಾನಿ ಮೋದಿ ಅವರು ಪ್ರತಿ ವಿಚಾರದಲ್ಲೂ ಬದ್ಧತೆ ಹೊಂದಿದ್ದಾರೆ. ಯಾವುದೇ ಯೋಜನೆ ಘೋಷಣೆಗೆ ಮಾತ್ರ ಸೀಮಿತಗೊಳಿಸದೆ ಅನುಷ್ಠಾನಗೊಳಿಸಿದ್ದಾರೆ. ಮೋದಿ ಅವರ ನಾಯಕತ್ವದಲ್ಲಿ ದೇಶ(India) ಅಭಿವೃದ್ಧಿ ಪಥದಲ್ಲಿ ಮುನ್ನುಗುತ್ತಿದೆ. ಆಡಳಿತದಲ್ಲಿ ಪಾರದರ್ಶಕತೆ ಬಂದಿದೆ. ಭ್ರಷ್ಟಾಚಾರಕ್ಕೆ(Corruption) ಕಡಿವಾಣ ಬಿದ್ದಿದೆ. ಸಮಾಜದ ಕಟ್ಟಡ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪುತ್ತಿವೆ. ಅಡುಗೆ ಅನಿಲ, ಮನೆ ಮನೆಗೂ ಶುದ್ಧ ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ಕಲ್ಪಿಸುವಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಸಾಧ್ಯವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಯಾರೊಬ್ಬರೂ ಮೋದಿ ಅವರ ಬದ್ಧತೆ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ’ ಎಂದರು.

Digital Currency: ಮುಂದಿನ ವರ್ಷಾರಂಭದಲ್ಲಿ ಬರಲಿದೆ ಡಿಜಿಟಲ್‌ ಕರೆನ್ಸಿ

‘ಕೊರೋನಾ(Coronavirus) ಸೋಂಕಿನಿಂದ ಇಡೀ ಜಗತ್ತು ತತ್ತರಿಸಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ತತ್ವದಡಿ ಜಗತ್ತಿನ ಗಮನ ಸೆಳೆದರು. ಕಡಿಮೆ ಅವಧಿಯಲ್ಲಿ ಸ್ವದೇಶಿ ಪಿಪಿಇ ಕಿಟ್‌, ಮಾಸ್ಕ್‌, ವೈದ್ಯಕೀಯ ಉಪಕರಣಗಳು, ಔಷಧಿಗಳ ತಯಾರಿಕೆಗೆ ಉತ್ತೇಜನ ನೀಡಿದರು. ಮುಂದುವರಿದ ದೇಶಗಳೇ ಕೊರೋನಾ ಲಸಿಕೆಗಾಗಿ ಪರದಾಡುವ ಸಂದರ್ಭದಲ್ಲಿ ಭಾರತದಲ್ಲಿ ಎರಡು ಲಸಿಕೆಗಳು ಕಂಡು ಹಿಡಿದು, ದೇಶದ ಜನಕ್ಕೆ ಯಶಸ್ವಿಯಾಗಿ ನೀಡಲಾಯಿತು. ಅಷ್ಟೇ ಅಲ್ಲದೆ, ಜಗತ್ತಿನ ಹಲವು ದೇಶಗಳಿಗೆ ಲಸಿಕೆ ಪೂರೈಸಲಾಯಿತು. ಈ ಹಿಂದೆ ಪೊಲಿಯೋ ಲಸಿಕೆ ಕಂಡು ಹಿಡಿದಾಗ ಆರು ವರ್ಷಗಳ ಬಳಿಕ ಭಾರತಕ್ಕೆ ಬಂದಿತ್ತು. ಮೋದಿ ಅವರ ನಾಯಕತ್ವದಲ್ಲಿ ಭಾರತ ಸ್ವಸಾಮರ್ಥ್ಯದಿಂದ ಕಠಿಣ ಸವಾಲುಗಳನ್ನು ಎದುರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ’ ಎಂದು ಹೆಮ್ಮೆಯಿಂದ ಹೇಳಿದರು.

ಪರ್ಯಾಯ ಮೂಲಗಳಿಂದ ತೈಲ ಆಮದು ಚಿಂತನೆ

ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ‘ಉಕ್ರೇನ್‌-ರಷ್ಯಾ ನಡುವಿನ ಯುದ್ಧ ಭಾರತದ ಮೇಲೂ ಪರಿಣಾಮ ಬೀರಿದೆ. ಕಚ್ಚಾ ತೈಲಗಳ ದರ ಹೆಚ್ಚಳ ಆಗಿದೆ. ಭಾರತ ಶೇ.80 ರಷ್ಟು ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದೆ. ತೈಲ ದರವನ್ನು(Fuel Price) ಪೆಟ್ರೋಲಿಯಂ ಕಂಪನಿಗಳು ನಿರ್ಧರಿಸಲಿವೆ. ಹಾಗಾಗಿ ಈಗ ಪರ್ಯಾಯ ಮೂಲಗಳಿಂದ ತೈಲ ಆಮದು ಬಗ್ಗೆ ಚಿಂತನೆ ನಡೆಯುತ್ತಿದೆ’ ಎಂದು ತಿಳಿಸಿದರು.

Russia Ukraine War ಎಲ್ಲ 694 ಭಾರತೀಯರ ರಕ್ಷಣೆ

‘ಬಜೆಟ್‌ನಲ್ಲಿ(Budget) ತೈಲ ಬೆಲೆಯ ಏರುಪೇರು ತಡೆಯಲು ಕೆಲ ಅಂಶಗಳನ್ನು ಸೇರಿಸಲಾಗಿದೆ. ಆದರೆ ಈಗ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಈ ಬಗ್ಗೆ ನಾವು ಗಮನ ಹರಿಸಿದ್ದೇವೆ. ಯುದ್ಧದ ವ್ಯತಿರಿಕ್ತ ಪರಿಣಾಮ ಖಂಡಿತವಾಗಿಯೂ ಆಗಲಿದೆ. ಇದು ಎಲ್ಲಾ ದೇಶಗಳಿಗೆ ಅನ್ವಯವಾಗಲಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ(CN Ashwath Narayan), ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ, ಆರ್ಥಿಕ ಪ್ರಕೋಷ್ಠದ ಅಧ್ಯಕ್ಷ ಸಮೀರ್‌ ಸೇರಿದಂತೆ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios