Asianet Suvarna News Asianet Suvarna News

ಮೋದಿ ಹೇಳಿದಂತೆ ಅಂಚೆ ಬ್ಯಾಂಕ್ ತೆರೆಯೋ ಪ್ಲ್ಯಾನಾ: ಇದನ್ನೊಮ್ಮೆ ಓದಿ!

ನಿಮ್ಮೂರಲ್ಲೂ ಬರಲಿದೆ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್! ಎಲ್ಲರ ಮನೆ ಬಾಗಿಲಿಗೇ ಬ್ಯಾಂಕಿಂಗ್ ವ್ಯವಸ್ಥೆ! ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಗೆ ಪ್ರಧಾನಿ ಚಾಲನೆ! ಪ್ರತಿಯೊಬ್ಬರಿಗೂ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಲು ಬದ್ಧ! ಬ್ಯಾಂಕಿಂಗ್ ಸೇವೆಯ ಸಂಪೂರ್ಣ ಲಭ ಪಡೆಯಲು ಮೋದಿ ಕರೆ

Details of Indian Post Payments Bank
Author
Bengaluru, First Published Sep 5, 2018, 1:09 PM IST

ಬೆಂಗಳೂರು(ಸೆ.5): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ್ದಾರೆ. ಸುಮಾರು 3 ಲಕ್ಷ ಪೋಸ್ಟ್‌ಮನ್‌ಗಳು ಹಾಗೂ ಗ್ರಾಮೀಣ ಅಂಚೆ ಸೇವಕರ ಮೂಲಕ ಇನ್ನುಮುಂದೆ ಜನರಿಗೆ ಮನೆಬಾಗಿಲಿಗೇ ಬ್ಯಾಂಕಿಂಗ್‌ ಸೇವೆ ಲಭಿಸಲಿದೆ. ಇದು ದೇಶದ ಅತಿದೊಡ್ಡ ಬ್ಯಾಂಕಿಂಗ್‌ ಸೇವೆಯ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಅಂಚೆ ಪೇಮೆಂಟ್‌ ಬ್ಯಾಂಕ್‌ ಅಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಯಾವ ಸೌಲಭ್ಯವಿದೆ? ಬೇರೆ ದೇಶಗಳಲ್ಲಿ ಹೇಗಿದೆ? ಈ ಕುರಿತ ಸಮಗ್ರ ಚಿತ್ರಣ ಇಲ್ಲಿದೆ.

ಏನಿದು ಅಂಚೆ ಪೇಮೆಂಟ್‌ ಬ್ಯಾಂಕ್‌?:

ವಲಸೆ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರು, ಕಡಿಮೆ ಆದಾಯದ ಕುಟುಂಬಗಳು, ಇತರೆ ಅಸಂಘಟಿತ ವಲಯದವರಿಗೆ ಸಣ್ಣ ಉಳಿತಾಯ ಖಾತೆ, ಹಣ ಪಾವತಿ ಮತ್ತು ವರ್ಗಾವಣೆ ಸೌಲಭ್ಯವನ್ನು ಸುಲಭವಾಗಿ ಒದಗಿಸುವುದೇ ಅಂಚೆ ಪೇಮೆಂಟ್‌ ಬ್ಯಾಂಕ್‌ನ ಧ್ಯೇಯ. ಅದಕ್ಕಾಗಿ ನಗರ, ಪಟ್ಟಣ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ತನ್ನ ಶಾಖೆಗಳನ್ನು ಹೊಂದಿರುವ ಭಾರತೀಯ ಅಂಚೆ ಇಲಾಖೆ ಕುಗ್ರಾಮಗಳಿಗೂ ಬ್ಯಾಂಕಿಂಗ್‌ ಸೇವೆ ಒದಗಿಸಲು ಮುಂದಾಗಿದೆ. ಬ್ಯಾಂಕುಗಳು ಸಾಮಾನ್ಯವಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮಾತ್ರ ಇರುತ್ತವೆ. ಹಳ್ಳಿಗಳ ಜನರು ಬ್ಯಾಂಕಿಂಗ್‌ ಸೌಲಭ್ಯ ಬೇಕೆಂದರೆ 15-20 ಕಿ.ಮೀ. ದೂರ ಹೋಗಬೇಕಿತ್ತು. ಆದರೆ, ಪ್ರತಿ ಊರಲ್ಲೂ ಅಂಚೆ ಕಚೇರಿ ಇರುವುದರಿಂದ ಆ ಅಂಚೆ ಕಚೇರಿಗಳನ್ನೇ ಪ್ರಾಥಮಿಕ ರೂಪದ ಬ್ಯಾಂಕ್‌ ಆಗಿ ಪರಿವರ್ತಿಸಿದರೆ ಜನರಿಗೆ ಅವರ ಊರಿನಲ್ಲೇ ಬ್ಯಾಂಕಿಂಗ್‌ ಸೌಲಭ್ಯ ಒದಗಿಸಿದಂತಾಗುತ್ತದೆ ಎಂಬ ಉದ್ದೇಶದಿಂದ ಅಂಚೆ ಬ್ಯಾಂಕ್‌ ಆರಂಭಿಸಲಾಗಿದೆ.

ಏನೇನು ಸೌಲಭ್ಯ ಸಿಗಲಿದೆ?:

ಸಾಮಾನ್ಯವಾಗಿ ಬ್ಯಾಂಕುಗಳು ನೀಡುವ ಬಹುತೇಕ ಸೌಲಭ್ಯಗಳನ್ನೇ ಈ ಅಂಚೆ ಪೇಮೆಂಟ್‌ ಬ್ಯಾಂಕುಗಳು (ಐಪಿಪಿಬಿ) ನೀಡಲಿವೆ. ಇದರಲ್ಲಿ ನಾಗರಿಕರು ಉಳಿತಾಯ ಖಾತೆ, ಚಾಲ್ತಿ ಖಾತೆ ತೆರೆಯಬಹುದು. ಗರಿಷ್ಠ 1 ಲಕ್ಷ ರು.ವರೆಗೆ ಠೇವಣಿ ಇಡಬಹುದು. ಉಳಿತಾಯ ಖಾತೆಗೆ ಶೇ.4ರಷ್ಟುಬಡ್ಡಿ ನೀಡಲಾಗುತ್ತದೆ. ನೇರ ನಗದು ವರ್ಗಾವಣೆ, ವಿದ್ಯುತ್‌, ನೀರು ಇತ್ಯಾದಿ ಬಿಲ್‌ ಪಾವತಿ, ಮರ್ಚೆಂಟ್‌ ಪೇಮೆಂಟ್‌, ಎಂಟರ್‌ಪ್ರೈಸ್‌ ಪೇಮೆಂಟ್‌, ಎಟಿಎಂ, ಆರ್‌ಟಿಜಿಎಸ್‌, ನೆಫ್ಟ್‌, ಐಎಂಪಿಎಸ್‌ ಮಾದರಿಯ ಸೇವೆಗಳನ್ನು ಪಡೆಯಬಹುದು. ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಇಡಬೇಕಾದ ಅಗತ್ಯ ಇಲ್ಲ. 17 ಕೋಟಿ ಅಂಚೆ ಉಳಿತಾಯ ಖಾತೆಯೊಂದಿಗೆ ಐಪಿಪಿಬಿ ಖಾತೆ ಲಿಂಕ್‌ ಮಾಡಲಾಗುತ್ತದೆ. ಇದರಿಂದ ಐಪಿಪಿಬಿ ಗ್ರಾಹಕರು ಯಾವುದೇ ಖಾತೆಯಿಂದ ಹಣ ವರ್ಗಾಯಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ.

ಇಲ್ಲಿ ಸಾಲ ಸಿಗೋದಿಲ್ಲ:

ಅಂಚೆ ಪೇಮೆಂಟ್‌ ಬ್ಯಾಂಕುಗಳಿಗೆ ನೇರ ಸಾಲ ಹಾಗೂ ಕ್ರೆಡಿಟ್‌ ಕಾರ್ಡ್‌ ನೀಡುವ ಅಧಿಕಾರವಿರುವುದಿಲ್ಲ. ಆದರೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಹಾಗೂ ಬಜಾಜ್‌ ಅಲಯನ್ಸ್‌ ಲೈಫ್‌ ಇನ್ಶೂರೆನ್ಸ್‌ ಜೊತೆಗೆ ಕೈಜೋಡಿಸಿರುವ ಐಪಿಪಿಬಿ ಥರ್ಡ್‌ ಪಾರ್ಟಿ ಸಾಲ ಹಾಗೂ ವಿಮೆ ಸೌಲಭ್ಯ ನೀಡಲಿದೆ. ಖಾತೆಯಲ್ಲಿ ಗರಿಷ್ಠ 1 ಲಕ್ಷ ರು.ವರೆಗೆ ಮಾತ್ರ ಠೇವಣಿ ಇಡಲು ಅವಕಾಶವಿದೆ.

ಬ್ಯಾಂಕಿಂಗ್‌ ಸೇವೆ ಹೇಗಿರಲಿದೆ?:

ಗ್ರಾಹಕರು ಅಥವಾ ನಾಗರಿಕರು ಅಂಚೆ ಮೇಪೆಂಟ್‌ ಬ್ಯಾಂಕಿಂಗ್‌ ಸೌಲಭ್ಯವನ್ನು ಅಂಚೆ ಕಚೇರಿಯ ಕೌಂಟರ್‌ಗಳಲ್ಲಿ, ಮೈಕ್ರೋ ಎಟಿಎಂಗಳಲ್ಲಿ, ಇಂಟರ್‌ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಆ್ಯಪ್‌, ಎಸ್‌ಎಂಎಸ್‌ ಅಥವಾ ಐವಿಆರ್‌ ಸೇವೆಗಳ ಮೂಲಕ ಪಡೆಯಬಹುದಾಗಿದೆ. ಈ ಖಾತೆ ತೆರೆಯಲು ಆಧಾರ್‌ ಕಾರ್ಡ್‌ ಇದ್ದರೆ ಸಾಕು.

ಐಪಿಪಿಬಿಯಲ್ಲಿ 3 ರೀತಿಯ ಖಾತೆಗಳಿವೆ:

1) ಉಳಿತಾಯ ಖಾತೆ

2) ಡಿಜಿಟಲ್‌ ಖಾತೆ

3) ಗ್ರಾಮೀಣ ಉಳಿತಾಯ ಖಾತೆ

ಈ ಎಲ್ಲಾ ಖಾತೆಗಳ ಉಳಿತಾಯಕ್ಕೆ ವಾರ್ಷಿಕ ಬಡ್ಡಿ ಶೇ.4. ಜೊತೆಗೆ ಸಾಮಾನ್ಯ ಬ್ಯಾಂಕ್‌ ಸೇವೆಯಂತೆಯೇ ಬಹುತೇಕ ಎಲ್ಲಾ ಸೇವೆ ಇರಲಿದೆ.

1.55 ಲಕ್ಷ ಅಂಚೆ ಬ್ಯಾಂಕ್‌ ಶಾಖೆ:

ದೇಶದ ಒಟ್ಟು 650 ಅಂಚೆ ಕಚೇರಿಗಳು ಹಾಗೂ 3250 ಸೇವಾ ಉಪ ಶಾಖೆಗಳ ಬೃಹತ್‌ ಜಾಲದ ಮೂಲಕ ಐಪಿಪಿಬಿ ಕಾರ್ಯನಿರ್ವಹಿಸಲಿದೆ. ಇದರಡಿಯಲ್ಲಿ 11 ಸಾವಿರಕ್ಕೂ ಅಧಿಕ ಪೋಸ್ಟ್‌ಮ್ಯಾನ್‌ಗಳು ದೇಶದ ಮೂಲೆಮೂಲೆಗೆ ಬ್ಯಾಂಕಿಂಗ್‌ ಸೌಲಭ್ಯ ತಲುಪಿಸಲಿದ್ದಾರೆ. ಡಿಸೆಂಬರ್‌ ಅಂತ್ಯಕ್ಕೆ ಎಲ್ಲ 1.55 ಲಕ್ಷ ಅಂಚೆ ಕಚೇರಿಗಳಲ್ಲೂ ಬ್ಯಾಂಕಿಂಗ ಸೇವೆ ಆರಂಭವಾಗಲಿದೆ.

ಇದರ ಮಾಲಿಕ ಯಾರು?:

ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌, ಅಂಚೆ ಇಲಾಖೆ ಮತ್ತು ಸಂವಹನ ಸಚಿವಾಲಯದಡಿ ಬರುವ ಭಾರತ ಸರ್ಕಾರದ ಶೇ.100ರಷ್ಟುಶೇರು ಹೊಂದಿರುವ ಸಾರ್ವಜನಿಕ ವಲಯದ ಕಂಪನಿಯಾಗಿದ್ದು, ಭಾರತೀಯ ರಿಸವ್‌ರ್‍ ಬ್ಯಾಂಕ್‌ ಆಫ್‌ ಇಂಡಿಯಾ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ.

ಮೊಬೈಲ್‌ ಆ್ಯಪ್‌ ಕೂಡ ಲಭ್ಯ!:

ಅಂಚೆ ಪೇಮೆಂಟ್‌ ಬ್ಯಾಂಕ್‌ ಹೆಚ್ಚಿನ ಸೇವಾ ಸೌಲಭ್ಯಕ್ಕಾಗಿ ಮೊಬೈಲ್‌ ಆ್ಯಪನ್ನೂ ಕೂಡ ಬಿಡುಗಡೆಗೊಳಿಸಿದ್ದು, ಆನ್‌ಲೈನ್‌ ಬ್ಯಾಂಕಿಂಗ್‌ ಸೇವೆ ಕೂಡ ಲಭ್ಯವಿದೆ. ಇದರಿಂದ 100ಕ್ಕೂ ಹೆಚ್ಚು ಆನ್‌ಲೈನ್‌ ಬಿಲ್‌ ಪಾವತಿ ಮಾಡಬಹುದು. ಉದಾಹರಣೆಗೆ ಫೋನ್‌ ಬಿಲ್‌, ಡಿಟಿಎಚ್‌, ಗ್ಯಾಸ್‌ ಸಂಪರ್ಕ, ವಿದ್ಯುತ್‌ ಬಿಲ್‌ ಇತ್ಯಾದಿ. ಜೊತೆಗೆ ಭಾರತೀಯ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಗ್ರಾಹಕರು ಶೀಘ್ರವೇ ತಮ್ಮ ಖಾತೆ ಕುರಿತ ಮಾಹಿತಿ ಪಡೆಯಲು ಎಸ್‌ಎಂಎಸ್‌ ಬ್ಯಾಂಕಿಂಗ್‌ ವ್ಯವಸ್ಥೆ ಕೂಡ ಲಭ್ಯವಿದೆ.

ಭಾರತಕ್ಕೇನು ಉಪಯೋಗ?:

ಗ್ರಾಮೀಣ ಭಾಗದಲ್ಲಿ ಬ್ಯಾಂಕಿಂಗ್‌ ಜಾಲ: ಭಾರತೀಯ ಪೇಮೆಂಟ್‌ ಬ್ಯಾಂಕ್‌ನ ಶೇ.90ರಷ್ಟುಶಾಖೆಗಳು ಗ್ರಾಮೀಣ ಪ್ರದೇಶದಲ್ಲಿರಲಿವೆ. ಭಾರತದ ಅಂಚೆ ಇಲಾಖೆಯ ಗ್ರಾಮೀಣ ಸೇವೆಯು ಭಾರತದ ಎಲ್ಲಾ ವಾಣಿಜ್ಯ ಬ್ಯಾಂಕ್‌ ಸೇವೆಗಿಂತ ಹೆಚ್ಚು ವಿಸ್ತೃತವಾಗಲಿದೆ. ಇದರಿಂದ ಅತಿದೊಡ್ಡ ಬ್ಯಾಂಕಿಂಗ್‌ ಜಾಲ ಸೃಷ್ಟಿಯಾಗಲಿದೆ. ಅಂಚೆ ಸೇವೆಯು ಗ್ರಾಮೀಣ ಹಾಗೂ ಅರೆ ನಗರ ಪ್ರದೇಶಗಳಿಗೂ ಲಭ್ಯವಾಗಲಿದೆ.

ಅಂಚೆ ಇಲಾಖೆ ಬಲವರ್ಧನೆ: ಭಾರತೀಯ ಪೇಮೆಂಟ್‌ ಬ್ಯಾಂಕ್‌ ಶೇ.100ರಷ್ಟುಷೇರು ಭಾರತ ಸರ್ಕಾರದ್ದಾಗಿದೆ. ಇದು ಸರ್ಕಾರಕ್ಕೂ ನೆರವಾಗಲಿದೆ ಹಾಗೂ ಅಂಚೆ ಇಲಾಖೆ ಬಲವರ್ಧನೆ ಸಾಧ್ಯವಾಗಲಿದೆ.

ದೇಶಾದ್ಯಂತ ಸೇವೆ: ಐಪಿಪಿಬಿಯು ಸುಮಾರು 650 ಶಾಖೆಗಳ ಮೂಲಕ 1.55 ಲಕ್ಷ ಅಂಚೆ ಕಚೇರಿಗಳಲ್ಲಿ ಈ ಬ್ಯಾಂಕ್‌ ಕಾರ್ಯನಿರ್ವಹಿಸಲಿದೆ. ಇದರಿಂದ ದೇಶದ ಮೂಲೆ ಮೂಲೆಗಳಲ್ಲಿ ಬ್ಯಾಂಕಿಂಗ್‌ ಸೌಲಭ್ಯ ಲಭ್ಯವಾಗಲಿದೆ.

ವಿದೇಶಗಳಲ್ಲಿ ಹೇಗಿದೆ?:

ಉತ್ತರ ಕೊರಿಯಾ ಪೋಸ್ಟ್‌ ಬ್ಯಾಂಕ್‌:

ಉತ್ತರ ಕೊರಿಯಾ ಅಂಚೆಯು ಠೇವಣಿ, ವಿತ್‌ಡ್ರಾ, ಬ್ಯಾಂಕ್‌ ವರ್ಗಾವಣೆ ಇತ್ಯಾದಿ ಹಣಕಾಸು ಸೇವೆ ನೀಡುತ್ತಿದೆ. ಜೊತೆಗೆ ಇನ್ಶೂರೆನ್ಸ್‌ ಕಾರ್ಡ್‌, ಯುಟಿಲಿಟಿ ಬಿಲ್‌ ಪೇಮೆಂಟ್‌, ಮರ್ಚೆಂಟ್‌ ಚೆಕ್‌ ಮತ್ತು ಮ್ಯಾನೇಜ್‌್ಮಂಟ್‌ ಫೀ ಪೇಮೆಂಟ್‌ ಸೇವೆಯೂ ಲಭ್ಯವಿದೆ.

ಜಪಾನ್‌ ಪೋಸ್ಟ್‌ ಬ್ಯಾಂಕ್‌:

ಜಪಾನ್‌ ಪೋಸ್ಟ್‌ ಬ್ಯಾಂಕ್‌ ಹಣಕಾಸು ಸಂಸ್ಥೆಯಂತೆ ಕಾರ್ಯ ನಿರ್ವಹಿಸುತ್ತದೆ. ಸ್ಥಳೀಯ ಅಂಚೆ ಇಲಾಖೆಗಳ ಮೂಲಕ ಮತ್ತು ಎಟಿಎಂಗಳ ಮೂಲಕ ಸೇವೆ ಸಲ್ಲಿಸುತ್ತಿದೆ. ಬ್ಯಾಂಕಿಂಗ್‌ ಸೌಲಭ್ಯಗಳ ಜೊತೆಗೆ ಇನ್ಶೂರೆನ್ಸ್‌ ಸೇವೆ ಕೂಡ ಒದಗಿಸುತ್ತಿದೆ.

ಬ್ರೆಜಿಲ್‌ ಪೋಸ್ಟ್‌ ಬ್ಯಾಂಕ್‌:

ಬ್ರೆಜಿಲ್‌ ಪೋಸ್ಟ್‌ ಬ್ಯಾಂಕ್‌ ಉಳಿತಾಯ ಖಾತೆ, ಲೋನ್‌, ಕ್ರೆಡಿಟ್‌ ಕಾರ್ಡ್‌ ಸೇವೆ, ಸೋಷಿಯಲ್‌ ಸೆಕ್ಯುರಿಟಿ ಬೆನಿಫಿಟ್‌ಗಳನ್ನೂ ಒದಗಿಸುತ್ತಿದೆ.

ಭಾರತದಲ್ಲಿ ಶೇ.20 ಜನರಿಗೆ ಬ್ಯಾಂಕ್‌ ಖಾತೆ ಇಲ್ಲ:

2016-17ರಲ್ಲಿ ಅಂಚೆ ಇಲಾಖೆ 18 ಕೋಟಿ ಉಳಿತಾಯ ಖಾತೆ ಹೊಂದಿದ್ದು, ಒಟ್ಟು 85,000 ಕೋಟಿ ಠೇವಣಿ ಇರಿಸಿಕೊಂಡಿತ್ತು. ಈಗ ಐಪಿಪಿಬಿಯೊಂದಿಗೆ ಈ ಅಂಚೆ ಉಳಿತಾಯ ಖಾತೆಗಳು ಸಂಪರ್ಕ ಹೊಂದುವುದರಿಂದ ದೇಶದ ಆರ್ಥಿಕತೆ ಮೇಲೆ ಮಹತ್ವದ ಪರಿಣಾಮ ಉಂಟುಮಾಡಲಿದೆ. ವರದಿಯೊಂದರ ಪ್ರಕಾರ ದೇಶದ ಶೇ.80ರಷ್ಟುಜನ ಬ್ಯಾಂಕ್‌ ಉಳಿತಾಯ ಖಾತೆಯನ್ನು ಹೊಂದಿದ್ದಾರೆ. ಆದರೆ ಶೇ.20ರಷ್ಟುಭಾರತೀಯರು ಯಾವುದೇ ಬ್ಯಾಂಕ್‌ ಖಾತೆಯನ್ನು ಹೊಂದಿಲ್ಲ. ವಿಶ್ವ ಬ್ಯಾಂಕ್‌ ವರದಿಯೊಂದರ ಪ್ರಕಾರ, ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿನ ಸುಮಾರು 28 ಕೋಟಿ ಬ್ಯಾಂಕ್‌ ಖಾತೆದಾರರು ಹಣ ಸ್ವೀಕರಿಸಲು ಮತ್ತು ವರ್ಗಾಯಿಸಲು ಕ್ಯಾಶ್‌ ಅಥವಾ ಕೌಂಟರ್‌ ಸೇವೆಯನ್ನೇ ಅವಲಂಬಿಸಿದ್ದಾರೆ.

Follow Us:
Download App:
  • android
  • ios